ಒಂದೆಡೆ ಸ್ನೇಹದ ನಾಟಕ, ಮತ್ತೊಂದೆಡೆ ವಿಸ್ತರಣಾವಾದದ ಚಾಳಿ. ಭಾರತದೊಂದಿಗಿನ ಗಡಿಸಂಬಂಧದಲ್ಲಿ ಚೀನಾದ ದ್ವಿಮುಖ ನೀತಿ ಮತ್ತೊಮ್ಮೆ ಬೆತ್ತಲಾಗಿದೆ. ಪೂರ್ವ ಲಡಾಖ್‌ ನ ಗಡಿಬಿಕ್ಕಟ್ಟಿಗೆ ಸಂಬಂಧಿಸಿದಂತೆ ನಾಲೈದು ವರ್ಷಗಳ ನಿರಂತರ ಮಾತುಕತೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬೀಜಿಂಗ್ ಭೇಟಿ ವೇಳೆ ಗಡಿಪ್ರದೇಶದಲ್ಲಿ ಶಾಂತಿ ಸ್ಥಾಪನೆಯ ಮಾತುಕತೆಗಳ ಬಳಿಕವೂ ಚೀನಾ ನಡೆದುಕೊಳ್ಳುತ್ತಿರುವ ರೀತಿ ವಿಶ್ವಾಸಘಾತಕತನದಂತಿದೆ. ಪ್ಯಾಂಗಾಂಗ್ ಸರೋವರದ ಬಳಿ ಸೇನಾ ನೆಲೆ ನಿರ್ಮಿಸುತ್ತಿರುವ ಚೀನಾ ಸೇನೆಯ ನಿಲುವು ಬೀಜಿಂಗ್‌ನ ಅತಿಕ್ರಮಣದಾಹಕ್ಕೆ ಸಾಕ್ಷಿ.

ಪ್ಯಾಂಗಾಂಗ್ ಸರೋವರದ ಬಳಿ ಚೀನಾ ಹೊಸ ಕಟ್ಟಡಗಳನ್ನು ನಿರ್ಮಿಸುತ್ತಿದೆ. ಈ ಕಟ್ಟಡಗಳು ಭಾರತ- ಚೀನಾ ಮಿಲಿಟರಿ ಬಫರ್ ವಲಯಕ್ಕೆ ಸಮೀಪದಲ್ಲಿದ್ದು, ಚೀನಾ ಆಕ್ರಮಿತ ಪ್ರದೇಶದಲ್ಲಿ ತಲೆ ಎತ್ತುತ್ತಿವೆ. ಸುದೀರ್ಘ ಮಾತುಕತೆಗಳ ಬಳಿಕವೂ ಚೀನಾವು ಈ ಪ್ರದೇಶದಲ್ಲಿ ನಿರಂತರವಾಗಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ಬಲಪಡಿಸುತ್ತಿರುವುದು ಖಂಡನೀಯ. ಪ್ಯಾಂಗಾಂಗ್ ಸರೋವರದ ಸುತ್ತಲಿನ ದುರ್ಗಮ ಹವಾಮಾನ ಚೀನಾ ಸೈನಿಕರಿಗೆ ದೊಡ್ಡ ಸವಾಲು. ಈ ನೈಸರ್ಗಿಕ ಕಠಿಣ ಪರಿಸ್ಥಿತಿಗಳನ್ನು ತಡೆದುಕೊಳ್ಳಲು ಚೀನಾ ನಡೆಸುತ್ತಿರುವ ಗುಣಮಟ್ಟದ ನಿರ್ಮಾಣಗಳು, ಪೂರ್ವ ಲಡಾಖ್‌ನಲ್ಲಿ ಮತ್ತೊಮ್ಮೆ ಬಿಕ್ಕಟ್ಟಿಗೆ ಕಾರಣವಾಗಲಿದೆಯೇ ಎಂಬ ಪ್ರಶ್ನೆಯೂ ಕಾಡುತ್ತಿದೆ.

ಲಡಾಖ್ ಪ್ರದೇಶದಲ್ಲಿನ ಯಾವುದೇ ಬೆಳವಣಿಗೆಗಳು ಭಾರತಕ್ಕೆ ಸಣ್ಣ ವಿಚಾರವಾಗಿ ಉಳಿದಿಲ್ಲ. ಅಲ್ಲಿನ ಇಂಚಿಂಚು ಪ್ರದೇಶಗಳೂ ಸಾರ್ವಭೌಮತ್ವದ ಪ್ರತೀಕ ಎಂದೇ ಭಾರತ ಭಾವಿಸುತ್ತಿದೆ. ೨೦೨೦ರಲ್ಲಿ ಗಾಲ್ವಾನ್ ಘರ್ಷಣೆಯ ಬಳಿಕ ಉಭಯ ರಾಷ್ಟ್ರಗಳೂ ಇಲ್ಲಿ ಗಸ್ತು ಚಟುವಟಿಕೆಯನ್ನು ತೀವ್ರಗೊಳಿಸಿದ್ದವು. ಕೆಲವು ತಿಂಗಳ ಹಿಂದಷ್ಟೇ ಇಲ್ಲಿನ ಸಹಜಸ್ಥಿತಿಗೆ ಎರಡೂ ರಾಷ್ಟ್ರಗಳೂ ಒಪ್ಪಿಕೊಂಡು ಶಾಂತಿ ಸ್ಥಾಪನೆಗೆ ಮುಂದಾಗಿದ್ದವು. ಇಂಥ ಸಂದರ್ಭದಲ್ಲಿಯೇ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್‌ಎ) ನಡವಳಿಕೆ ವಿಚಿತ್ರವಾಗಿ ತೋರುತ್ತಿದೆ.

ಭಾರತ ಮತ್ತು ಅಮೆರಿಕ ನಡುವಿನ ತೆರಿಗೆ ಮುನಿಸಿನ ಲಾಭ ಪಡೆಯಲು ಮುಂದಾಗಿದ್ದ ಬೀಜಿಂಗ್, ದ್ವಿಪಕ್ಷೀಯವಾಗಿ ಹೊಸದಿಲ್ಲಿ ಜತೆ ಸಾಕಷ್ಟು ವಾಣಿಜ್ಯಕ ಒಪ್ಪಂದಗಳನ್ನೂ ಮಾಡಿಕೊಂಡಿದೆ. ಚೀನಾ ನಂಬಿಕೆಗೆ ಯೋಗ್ಯವಲ್ಲದ ರಾಷ್ಟ್ರ ಎಂಬುದು ಲೋಕವಿದಿತ. ಚೀನಾದ ಜತೆಗಿನ ಯಾವುದೇ ರಾಜತಾಂತ್ರಿಕ, ವಾಣಿಜ್ಯಕ ಹಾಗೂ ರಕ್ಷಣಾತ್ಮಕ ಸಂಬಂಧಗಳ ವಿಚಾರದಲ್ಲಿ ಭಾರತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ.

`ಶಾಂತಿಯ ಮಾತುಕತೆಗಳು ಕಾರ್ಯರೂಪಕ್ಕೆ ಬರಲು ಉಭಯ ರಾಷ್ಟ್ರಗಳ ನಡುವೆ ಪರಸ್ಪರ ಗೌರವ, ವಿಶ್ವಾಸ ಅತ್ಯಗತ್ಯ. ಈ ಮೌಲ್ಯಗಳಿಗೆ ತಾನು ಅರ್ಹ ಅಲ್ಲ ಎಂದು ಚೀನಾ ತನ್ನ ವರ್ತನೆಯಿಂದ ಹೇಳಲು ಪ್ರಯತ್ನಿಸುತ್ತಿದೆ ಎಂದಾದರೆ, ಭಾರತ ಕೂಡ ಪೂರ್ವ ಲಡಾಖ್‌ನಲ್ಲಿ ತನ್ನ ಸೇನಾ ಉಪಸ್ಥಿತಿಯನ್ನು ಹೆಚ್ಚಿಸಿ, ಇನ್ನಷ್ಟು ಭದ್ರತೆಗೆ ಒತ್ತು ಕೊಡಬೇಕಿದೆ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೮-೦೧-೨೦೨೬

ಚಿತ್ರ ಕೃಪೆ: ಅಂತರ್ಜಾಲ ತಾಣ