೧೯೮೩ರ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗಳ ಫೈನಲ್ ಅನ್ನು ನೋಡಿದವರಿಗೆ ಅಥವಾ ಕೇಳಿದವರಿಗೆ ಅಂದು ಜಯದ ಸಂಭವದಲ್ಲಿದ್ದ ಮತ್ತು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ವೆಸ್ಟ್ ಇಂಡೀಸ್ ನ ಬ್ಯಾಟಿಂಗ್ ದೈತ್ಯ ವಿವಿಯನ್ ರಿಚರ್ಡ್ಸ್ ಗಗನಕ್ಕೆ ಚಿಮ್ಮಿದ ಹೊಡೆತ ಮತ್ತು ಆ ಗಗನಮುಖಿ ಚೆಂಡನ್ನು ಹಿಡಿಯಲು ಓಡಿದ ಕಪಿಲ್ ದೇವ್ ರ ಸಾಹಸ ನೆನಪಿರಬಹುದು. ಅಂದು ತಂಡದ ನಾಯಕರಾಗಿದ್ದ ಕಪಿಲ್ ದೇವ್ ನಿಜಕ್ಕೂ ನಾಯಕರಂತೆಯೇ ಭಾರತ ತಂಡವನ್ನು ರಕ್ಷಣೆ ಮಾಡಿ ವಿಶ್ವ ಕಪ್ ಗೆಲ್ಲುವಂತೆ ಮಾಡಿದರು. 

ಇದೆಲ್ಲಾ ಏಕೆ ನೆನಪಾಯಿತು ಅಂದರೆ ಮೊನ್ನೆ ಜನವರಿ ೬ ಕಪಿಲ್ ದೇವ್ ಅವರ ಜನ್ಮದಿನ. ಆ ಸಂದರ್ಭದಲ್ಲೇ ನಾನು ಸಾಮಾಜಿಕ ಜಾಲತಾಣವೊಂದರಲ್ಲಿ ಕಪಿಲ್ ಬಗ್ಗೆ ಹರಿದಾಡುತ್ತಿದ್ದ ಬರಹವೊಂದನ್ನು ಕಂಡೆ. ಅದು ಕಪಿಲ್ ದೇವ್ ಅವರನ್ನು ಈಗಲೂ ದೇಶ ಏಕೆ ಅತ್ಯುತ್ತಮ ಆಲ್ ರೌಂಡರ್ ಎಂದು ಪರಿಗಣಿಸುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿತ್ತು. ದುರಂತವೆಂದರೆ ಅಷ್ಟೊಂದು ಉತ್ತಮ ಬರಹವನ್ನು ಬರೆದು ಪ್ರಕಟ ಮಾಡಿದ ಆ ಲೇಖಕರ ಹೆಸರೇ ಇರಲಿಲ್ಲ. ಆದರೂ ಆ ಅಜ್ಞಾತ ಲೇಖಕರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಆ ಬರಹವನ್ನು ಯಥಾವತ್ತಾಗಿ ಮುದ್ರಿಸುತ್ತಿರುವೆ.

***

ಮೂವತ್ತಾರು ವರ್ಷಗಳ ಹಿಂದಿನ ಮಾತು. ಭಾರತ ಇಂಗ್ಲೆಂಡ್ ನಡುವೆ ಲಾರ್ಡ್ಸ್ ನಲ್ಲಿ ನಡೆದ ಟೆಸ್ಟ್ ಪಂದ್ಯ ಅದು. ಎಡ್ಡಿ ಹೆಮ್ಮಿಂಗ್ಸ್ ಅನ್ನೋ ಅನುಭವಿ ಸ್ಪಿನ್ನರ್ ಬೌಲಿಂಗ್ ಮಾಡ್ತಾ ಇದಾನೆ. ಅವನ ಬಗ್ಗೆ ಆಗೊಂದು ಮಾತು ಹರಿದಾಡ್ತಾ ಇತ್ತು. ಅವ್ನು ಮಹಾನ್ ಚಾಣಾಕ್ಷ ಸ್ಪಿನ್ನರ್.  ಫೀಲ್ಡರ್ ಎಲ್ಲಿ ನಿಲ್ಲಿಸುತ್ತಾನೋ ಅಲ್ಲೇ ಕ್ಯಾಚ್ ಕೊಡೋ ಹಾಗೆ ಬ್ಯಾಟರ್ ನಿಂದ ಹೊಡೆಸ್ತಾನೆ. ಆ ರೀತಿ ಬೌಲಿಂಗ್ ಹಾಕ್ತಾನೆ ಅಂತ.

ನಂಗೆ  ಎಂಬತ್ತೇಳರ ವಿಶ್ವಕಪ್ ಸೆಮಿಫೈನಲ್ ಪಂದ್ಯ ನೋಡಿದಾಗ ಆ ನಂಬಿಕೆ ಬಹಳ ಗಟ್ಟಿ ಆಗಿಬಿಟ್ಟಿತ್ತು. ಆ ಸೆಮಿಫೈನಲ್ ನಲ್ಲಿ ಭಾರತದ ಪರ ಕೊನೆಯ ಆಶಾಕಿರಣ ಅಂದ್ರೆ ಅದು ಕಪಿಲ್ ದೇವ್. ಕಪಿಲ್ ಆಟ ನೋಡೋಕೋಸ್ಕರಾನೇ ನಾನು ಇಂಡಿಯನ್ ಬ್ಯಾಟಿಂಗ್ ನೋಡ್ತಿದ್ದೆ. ಕಪಿಲ್ ಬೌಲಿಂಗಿಗೋಸ್ಕರಾನೇ ಇಂಡಿಯನ್ ಬೌಲಿಂಗ್ ನೋಡ್ತಿದ್ದೆ. ಅವತ್ತು ಸೆಮಿಫೈನಲ್ ನಲ್ಲಿ ಅಜರುದ್ದೀನ್ ಅರವತ್ತಾಲ್ಕು ಹೊಡೆದು ಗರಿಷ್ಟ ಸ್ಕೋರರ್ ಆಗಿದ್ದರೂ.. ಪಂದ್ಯ ಗೆಲ್ಲೋಕೆ ಇನ್ನೂ ಬಹಳ ರನ್ ಬೇಕಿತ್ತು.

ಇವತ್ತಿನ ಥರದ ಹೊಡಿಬಡಿ ಸ್ಟೈಲಿನ ಕ್ರಿಕೆಟ್ ಅಲ್ಲ ಅದು. ಅವತ್ತು ಒನ್ ಡೇ ಮ್ಯಾಚಲ್ಲಿ ಇನ್ನೂರ ಐವತ್ತು ಟಾರ್ಗೆಟ್ ಅಂದ್ರೆ ಮೌಂಟ್ ಎವರೆಸ್ಟ್ ಥರ ಅನಿಸ್ತಿತ್ತು. ಅಂಥ ಸ್ಕೋರನ್ನ ಬೆನ್ನಟ್ಟೋಕೆ ಹೋಗಿ ಶುರೂಲೇ ಗಾವಸ್ಕರ್ ಔಟ್ ಆಗಿದ್ದ. ಮಿಕ್ಕವರಿಂದಾನೂ ಆಟ ಬರಲಿಲ್ಲ. ಅಜರುದ್ದೀನ್ ಒಂದು ಕಡೆ ನಿಂತು ಆಡಿದ್ದ ಆದ್ರೂ ಮ್ಯಾಚ್ ಗೆಲ್ಲಿಸಬಲ್ಲ ಅಂತ ಅನಿಸ್ತಾ ಇರ್ಲಿಲ್ಲ.

ಇದ್ದದ್ದು ಒಂದೇ ನಂಬಿಕೆ. ಕಪಿಲ್ ಆಡಿ ಗೆಲ್ಲಿಸಿಬಿಡ್ತಾನೆ ಅಂತ. ಯಾಕಂದ್ರೆ ಅದು ಎಂಬತ್ಮೂರರ ವಿಶ್ವಕಪ್ ಪಂದ್ಯದಲ್ಲಿ ಆತನೇ ಹುಟ್ಟಿಸಿದ್ದ ನಂಬಿಕೆ. ಆ ನೂರಾ ಎಪ್ಪತ್ತೈದು ನಾಟೌಟ್ ಅನ್ನೋ ಸ್ಕೋರ್. ಹದಿನೇಳಕ್ಕೆ ಐದು ಅನ್ನೋ ಹಂತದಿಂದ ಆಡಿದ ರೀತಿ ಕಪಿಲ್ ದೇವ್ ಇಡೀ ದೇಶದ ಅಭಿಮಾನಿಗಳ ಪಾಲಿಗೆ ಆಪದ್ಭಾಂದವ ಅನಿಸಿಬಿಟ್ಟಿದ್ದ.

ಆ ನಂತರ ಹಲವಾರು  ಬಾರಿ ಕಪಿಲ್ ತನ್ನ ಬಿಡುಬೀಸು ಆಟದಿಂದ ಪಂದ್ಯಗಳ ಗತಿ ಬದಲಿಸಿದ್ದ. ಅವತ್ತು ಸೆಮಿಫೈನಲ್ ಪಂದ್ಯದಲ್ಲಿ ಕಪಿಲ್ ಆಡೋಕೆ ಬಂದಾಗ ಇನ್ನೂ ನೂರಾ ಮೂವತ್ತು ರನ್ ಬೇಕು ಗೆಲ್ಲೋದಕ್ಕೆ. ಒಂದು ಕಡೆ ಅಜರ್ ಇದ್ದ. ಕಪಿಲ್ ಬಂದವ್ನೇ ಬಿರುಗಾಳಿಯ ಬ್ಯಾಟಿಂಗ್ ಶುರು ಮಾಡಿಬಿಟ್ಟ. ಭಾರತಕ್ಕೆ ಗೆಲ್ಲೋ ಭರವಸೆ. ಇಪ್ಪತ್ತೆರಡು ಬಾಲ್ ಗಳಲ್ಲಿ ಮೂವತ್ತು ರನ್. ಮೂರು ಫೋರ್..!

ಅವತ್ತಿಗೆ ಅದು ಚಂಡಮಾರುತದ ಬ್ಯಾಟಿಂಗ್ ಅನಿಸ್ತಿತ್ತು.ಇಂಥ ಸಂದರ್ಭದಲ್ಲಿ ಕ್ಯಾಪ್ಟನ್ ಮೈಕ್ ಗ್ಯಾಟಿಂಗ್  ಚೆಂಡನ್ನ ಎಡ್ಡೀ ಹೆಮ್ಮಿಂಗ್ಸ್ ಕೈಗೆ ಕೊಡ್ತಾನೆ. ಎಡ್ಡೀ ಹೆಮ್ಮಿಂಗ್ಸ್ ಅದೇ ಕ್ಯಾಪ್ಟನ್ ಮೈಕ್ ಗ್ಯಾಟಿಂಗನ್ನ.. ಹೋಗಿ ಮಿಡ್ ವಿಕೆಟ್ ಬೌಂಡರಿಯಲ್ಲಿ ನಿಂತ್ಕೋ ಅಂತ ಕಳಿಸ್ತಾನೆ. 

ಎಡ್ಡಿ ಹೆಮ್ಮಿಂಗ್ಸ್ ಎಸೆದ ಚೆಂಡು ... ಕಪಿಲ್ ದೇವ್ ಮಿಡ್ ವಿಕೆಟ್ ಬೌಂಡರಿಯತ್ತ ಗಾಳಿಯಲ್ಲಿ ಹೊಡೀತಾನೆ. ಚೆಂಡಿಗೆ ಕಾಯ್ತಾ ಇದ್ದ ಮೈಕ್ ಗ್ಯಾಟಿಂಗ್ ನ ಕೈ ಸೇರತ್ತೆ. ಆ ಕ್ಷಣ ಎಂಬತ್ತೇಳರ ವಿಶ್ವಕಪ್ ಕನಸು ಭಗ್ನಗೊಂಡಿತ್ತು. ಮೂವತ್ತೋ ಮೂವತ್ತೈದೋ ರನ್ ಗಳಿಂದ ಭಾರತ ಸೋತಿತ್ತು. ಆಗಿಂದ ನಂಗೆ ಈ ಎಡ್ಡೀ ಹೆಮ್ಮಿಂಗ್ಸ್ ಅಂದ್ರೆ ಏನೋ ಸಿಟ್ಟು ಜೊತೆಗೊಂದು ಭಯ. ಇವ್ನಿಗೆ ಕಪಿಲ್ ದೇವ್ ಒಂದ್ಸಲನಾದ್ರೂ ಚಚ್ಚಿ ಬುದ್ಧಿ ಕಲಿಸ್ಲೇಬೇಕು. ಸೇಡು ತೀರಿಸ್ಕೊಳ್ಲೇಬೇಕು ಅಂತ  ತುಂಬ ಅನಿಸ್ತಾನೇ ಇತ್ತು.

ಮೂರು ವರ್ಷದ ನಂತರ ಅಂಥದ್ದೊಂದು ಸಂದರ್ಭ ಬಂತು. ೧೯೯೦ ರಲ್ಲಿ ಭಾರತ ಇಂಗ್ಲೆಂಡ್ ಪ್ರವಾಸಕ್ಕೆ ಹೋಯ್ತು. ಆದರೆ ಭಾರತದ ಪರ್ಫಾರ್ಮೆನ್ಸ್ ಅದ್ಭುತವಾಗೇನೂ ಇರ್ಲಿಲ್ಲ. ಭಾರತ ಆಗೆಲ್ಲ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ವೆಸ್ಟಿಂಡೀಸ್ ಈ ನಾಲ್ಕು ದೇಶಗಳಲ್ಲಿ ಎಲ್ಲೇ ಹೋದ್ರೂ ಹೊಡೆಸ್ಕೊಂಡ್ ಬಂದ್ರು ಅಂತಾನೇ ಕ್ರಿಕೆಟ್ ಪ್ರೇಮಿಗಳು ಫಿಕ್ಸಾಗಿಬಿಡ್ತಿದ್ರು. ಈ ಟೆಸ್ಟ್ ನಲ್ಲೂ ಹಾಗೆಯೇ ಇತ್ತು ಭಾರತದ ಪರಿಸ್ಥಿತಿ.

ಇಂಗ್ಲೆಂಡ್ ಆರ್ನೂರಾ ಐವತ್ಮೂರು ಹೊಡೆದಿದೆ. ಪ್ರತಿಯಾಗಿ ಅವತ್ತೂ ಅಷ್ಟೇ ಅಜರ್ ಒಬ್ಬನೇ ಒಳ್ಳೇ ಆಟ ಆಡಿದ್ದು. ಶತಕ ಹೊಡೆದು ಔಟಾಗಿದಾನೆ. ಐದೋ ಆರೋ ವಿಕೆಟ್ ಹೋದಮೇಲೆ ಬಂದ ಕಪಿಲ್ ಒನ್ ಡೇ ಮಾದರಿಯಲ್ಲಿ ಬ್ಯಾಟ್ ಬೀಸಲು ಶುರು ಮಾಡೇಬಿಟ್ಟ. ಒಂದು ಕಡೆ ವಿಕೆಟ್ ಬೀಳ್ತಾ ಇದೆ. ಕಪಿಲ್ ಅಬ್ಬರ ನಿಲ್ತಾ ಇಲ್ಲ. ಆದರೂ ಫಾಲೋ ಆನ್ ಗುರಿ ಕೂಡ ದೂರ ದೂರ..! ನಾನೂರಾ ಐವತ್ನಾಲ್ಕಕ್ಕೆ ಫಾಲೋ ಆನ್ ತಪ್ಪುತ್ತೆ. ಭಾರತದ ಸ್ಕೋರ್ ೩೯೩/೬. ಕಪಿಲ್ ಇದಾನೆ. ಅರವತ್ತೊಂದು ಹೊಡೀಬಹುದಾ ಅಂತ ಅನ್ಕೊಳೋ ಹೊತ್ತಿಗೆ. ಏಳನೇ ವಿಕೆಟ್ ಬಿತ್ತು.೩೯೩/೭

ಕಿರಣ್ ಮೋರೆ ಎಂಬ ಜೋಕರ್ ಕೀಪರ್ ಬಂದು ಕಪಿಲ್ ಗೆ ಸಾಥ್ ಕೊಟ್ಟ. ಮೂವತ್ತು ಎಸೆತ ನಿಂತ. ಆಗೆಲ್ಲ ಕಪಿಲ್ ಗೆ ಒಳ್ಳೇ ಪಾರ್ಟ್ನರ್ ಅಂದ್ರೆ ಕಿರಣ್ ಮೋರೆನೇ.! ಅಷ್ಟರಲ್ಲಿ ಮತ್ತೆ ವಿಕೆಟ್ ಬಿತ್ತು. ನಾನೂರಾ ಮೂವತ್ತಕ್ಕೆ ಎಂಟು! ನಾನೂರಾ ಮೂವತ್ತಕ್ಕೆ ಇನ್ನೊಂದು. ೪೩೦/೯. ಈಗ ಇರೋದು ಕೊನೆಯ ವಿಕೆಟ್. ಒಂದು ಬದೀಲಿ ನರೇಂದ್ರ ಹಿರ್ವಾನಿ. ಆತನಿಗೆ ಒಂದೇ ಒಂದು ಎಸೆತ ಕೂಡ ಎದುರಿಸೋಕೆ ಬರಲ್ಲ.  ಇನ್ನೊಂದು ಬದೀಲಿ ಕಪಿಲ್ ದೇವ್. ಫಾಲೋ ಆನ್ ತಪ್ಪಿಸಲು ಬೇಕಾಗಿರೋದು ಇಪ್ಪತ್ನಾಲ್ಕು ರನ್. ಎಡ್ಡೀ ಹೆಮ್ಮಿಂಗ್ಸ್ ಬೌಲಿಂಗ್.

ನಂಗೆ ಒಂದು ಕಡೆ ಭಯ.  ಈಗ ವಿಕೆಟ್ ತೆಗೆದೇಬಿಡ್ತಾನೇನೋ. ಕಪಿಲ್ ದೇವ್ ಕ್ಯಾಚ್ ಕೊಟ್ಟು ಬಿಡ್ತಾನೋ ಏನೋ ಅಂತ. ಮೊದಲ ಎರಡು ಎಸೆತ ಡಾಟ್ ಮಾಡ್ತಾನೆ ಕಪಿಲ್. ಇನ್ನು ನಾಲ್ಕು ಎಸೆತ ಇದೆ. ಮೂರನೇ ಬಾಲ್..  ಸಿಕ್ಸ್.. ಲಾಂಗ್ ಆನ್ ಮೇಲೆ. ನಾಲ್ಕನೇ ಬಾಲ್....  ಮತ್ತೊಂದು ಸಿಕ್ಸ್. ಅದೇ ಲಾಂಗ್ ಆನ್ ಮೇಲೆ. ಐದನೇ ಬಾಲ್..  ಅದೇ ಥರದ ಬಾಲ್ .. ಅದೇ ಥರದ ರಿಸಲ್ಟ್... ಲಾಂಗ್ ಆನ್ ಸಿಕ್ಸ್...! ಕಪಿಲ್ ದೊಂದು ಸ್ಟೈಲ್ ಇತ್ತು. ಬೌಲರ್ ಬೌಲ್ ಮಾಡೋಕ್  ಮೊದ್ಲು ಒಂದ್ಸಲ ಫೀಲ್ಡರ್ ಗಳು ಎಲ್ಲೆಲ್ಲಿ ಇದಾರೆ ಅಂತ ಕೈ ಮತ್ತು ಕಣ್ಗಳಲ್ಲಿ ಲೆಕ್ಕ ಹಾಕೋದು.

ಹಾಗೊಂದ್ಸಲ ನೋಡ್ಕೊಳ್ತಾನೆ. ಆರನೇ ಬಾಲ್ ಗೆ ರೆಡಿ ಆಗ್ತಾನೆ. ಆರನೇ ಎಸೆತ.. ಅದೇ ರೀತಿಯ ಆಫ್ ಸ್ಪಿನ್ ಬಾಲಿಗೆ ... ಲಾಂಗ್ ಆನ್ ಮೇಲೆ ಇನ್ನೊಂದು ಭರ್ಜರಿ ಸಿಕ್ಸರ್..! ನಂಗೇ ಇಷ್ಟು ಕೋಪ ಇತ್ತು,  ಎಂಬತ್ತೇಳರಲ್ಲಿ ತಂಡದ ನಾಯಕ ಆಗಿದ್ದ ಕಪಿಲ್ ಗೆ  ಇನ್ನೆಷ್ಟು ಕೋಪ ಇದ್ದಿರಬೇಡ. ಅವತ್ತು ಔಟ್ ಆದ ರೀತಿಯ ಬಗ್ಗೆ.   ಕಪಿಲ್ ಅಕ್ಷರಶಃ ಎಂಬತ್ತೇಳರ ಸೇಡು ತೀರಿಸಿಕೊಂಡಿದ್ದ. ಕೇವಲ ನಾಲ್ಕೇ ನಾಲ್ಕು ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮೂಲಕ ಫಾಲೋ ಆನ್ ತೀರಿಸಿದ್ದ.

ನಂಗಿನ್ನೂ ನೆನಪಿದೆ. if u need 24 to save follow on.. why wouldnt u get it in four deliveries..! only kapil dev can do it... only kapil dev..! ಕಪಿಲ್ ದೇವ್ ಮಾತ್ರ ಇಂಥ ಆಟ ಆಡಬಲ್ಲ.. ಓನ್ಲಿ ಕಪಿಲ್ ದೇವ್..!

ಲಾರ್ಡ್ ಪೆವಿಲಿಯನ್ ಬಾಲ್ಕನಿಯಲ್ಲಿ ನಿಂತಿದ್ದ ಅಸಹಾಯಕ ಭಾರತ ತಂಡ ಕಪಿಲ್ ವೀರಾವೇಶ ಕಂಡು ಚಪ್ಪಾಳೆ ತಟ್ಟುತ್ತಾ ಇತ್ತು. ಮರು ಓವರ್ ನ ಮೊದಲ ಎಸೆತದಲ್ಲೇ ನರೇಂದ್ರ ಹಿರ್ವಾನಿ ಬೌಲ್ಡ್ ಆಗಿದ್ದ. ಇನ್ನಿಂಗ್ಸ್ ಮುಗಿದಿತ್ತು.

ಆದರೆ ಕಪಿಲ್ ದೇವ್ ಮತ್ತೆ ಭಾರತ ಬ್ಯಾಟಿಂಗ್ ಗೆ ಇಳಿಯೋ ಅಪಾಯದಿಂದ ಪಾರುಮಾಡಿದ್ದ. ಇನ್ನಿಂಗ್ಸ್ ಸೋಲು ತಪ್ಪಿಸಿದ್ದ. ಅವತ್ತು ಎಡ್ಡೀ ಹೆಮ್ಮಿಂಗ್ಸ್ ಮೇಲಿನ ಕೋಪ ಇಳಿದಿತ್ತು. ಕಪಿಲ್ ಮೇಲಿನ ಅಭಿಮಾನ ಮತ್ತಷ್ಟು ಪಟ್ಟು ಹೆಚ್ಚಿತ್ತು. ಹೆಮ್ಮಿಂಗ್ಸ್ ಅಂಥಾ ಬೌಲರ್ ಏನಲ್ಲ ಅನ್ನೋದೂ ಆಗ ಅರ್ಥ ಆಗಿತ್ತು.  ಅವನ ದಾಖಲೆಗಳೂ ಅಷ್ಟೇನೂ ಇರಲಿಲ್ಲ ಅಂತ ಅಷ್ಟೊತ್ತಿಗೆ ಓದಲು ಸಿಕ್ತಾ ಇದ್ದ ರಾಜುಪತ್ರಿಕೆಯಿಂದ ತಿಳಿದಿತ್ತು.

ಅಂದು ಹೆಮ್ಮಿಂಗ್ಸ್ ಹಾಕಿದ ಎಸೆತಗಳು ಸಿಕ್ಸ್ ಹೊಡೆಯೋಕೆ ಹೇಳಿ ಮಾಡಿಸಿದಂಥ ಎಸೆತಗಳಾಗಿದ್ವು. ಆ ಪರಿಸ್ಥಿತಿಯಲ್ಲಿ ಯಾವುದೇ ಬ್ಯಾಟರ್ ಆಗಿದ್ದರೂ ರಿಸ್ಕ್ ತಗೊಬೇಕಾಗ್ತಿತ್ತೊ ಏನೋ. ಆದರೆ ಬೇರೊಬ್ಬ ಬ್ಯಾಟರ್ ಇದ್ದಿದ್ರೆ ಐದು ಬಾಲ್ ಕುಟುಕಿ ಆರನೇ ಬಾಲ್ ಸಿಂಗಲ್ ತಗೊಂಡು ಇನ್ನೊಂದು ಹತ್ತು ಓವರ್ ಆಡೋ ಪ್ರಯತ್ನ ಮಾಡ್ತಿದ್ದ. ಕೊನೆಗೂ ಫಾಲೋ ಆನ್ ತಪ್ಪಿಸ್ಕೊಳೋದಕ್ಕೆ ಆಗ್ತಾ ಇರ್ಲಿಲ್ಲ. ಆದರೆ ಧೈರ್ಯಂ ಸರ್ವತ್ರ ಸಾಧನಂ ಅನ್ನೋ ಹಾಗೆ ಕಪಿಲ್ ಅವತ್ತು ನಾಲ್ಕೇ ಎಸೆತದಲ್ಲಿ ಫಾಲೋ ಆನ್ ತಪ್ಪಿಸುವ ನಾಲ್ಕು ಸಿಕ್ಸರ್ ಸಿಡಿಸಿದ್ದ.

ಕಪಿಲ್ ದೇವ್ ಹ್ಯಾಶ್ ಟ್ಯಾಗ್ ಜತೆ ಈಗ ಸೋಷಿಯಲ್ ಮೀಡಿಯಾ ರೀಲ್ ಗಳಲ್ಲಿ ಪದೇಪದೆ ಕಪಿಲ್ ದೇವ್ ನ ಆ ನಾಲ್ಕು ಸಿಕ್ಸರ್ ವಿಡಿಯೋಗಳು ಸಿಕ್ತಾನೇ ಇರ್ತವೆ. ಈಗಿನ ಕಾಲದವರಿಗೆ ಅದು ರೋಮಾಂಚನ ಮೂಡಿಸೋದು ಡೌಟ್. ಆದರೆ ಅಂದು ಟಿವಿ ಅಪರೂಪ.. ಕ್ರಿಕೆಟ್ ಇಂದಿನಷ್ಟಿರಲಿಲ್ಲ. ಸಿಕ್ಸು ಫೋರುಗಳು ಆಗೊಂದು ಈಗೊಂದು ಎಂಬಂತೆ ಹೊಡೆಯುವ ಏಟುಗಳಾಗಿದ್ದವು.  

ಆಗ ಇದ್ದವ ಕಪಿಲ್ ದೇವ್. ಭಾರತದಲ್ಲಿ ಕಪಿಲ್ ನಂಥ ಶ್ರೇಷ್ಠ ಕ್ರಿಕೆಟಿಗ ಇಲ್ಲಿಯತನಕ ಬರಲೇ ಇಲ್ಲ. ಅರ್ಧ ಶತಮಾನವೇ ಕಳೆದುಹೋಯ್ತು. ಮುಂದೆಯೂ ಬರಲಿಕ್ಕಿಲ್ಲ. ಜನವರಿ ಆರನೇ ತಾರೀಖು ಹುಟ್ಟಿದ್ದ ಕಪಿಲ್, ತನ್ನ ಮೊದಲ ರನ್ ಗಳನ್ನೂ ಸಿಕ್ಸ್ ಮೂಲಕವೇ ಗಳಿಸಿದ್ದನಂತೆ. ಚಿಕ್ಕವನಿದ್ದಾಗ ಕಪಿಲ್ ಮತ್ತು  ನಂಬರ್ ಆರರ ನಂಟಿನ ಬಗ್ಗೆ ಸ್ಪೋರ್ಟ್ಸ್ ಸ್ಟಾರ್ ಪತ್ರಿಕೆಯಲ್ಲೇನೋ ಓದಿದ್ದ ನೆನಪು. 

(ಅಜ್ಞಾನ ಬರಹಗಾರರ ಜಾಲತಾಣದಿಂದ ಸಂಗ್ರಹಿತ)

ಚಿತ್ರ ಕೃಪೆ: ಅಂತರ್ಜಾಲ