ಕೇಡುಗಾಲದಲ್ಲಿ ನಾಯಿ ಮೊಟ್ಟೆ ಇಡ್ತಂತೆ ಎಂಬುದೊಂದು ಮಾತು ನಮ್ಮ ಜನರ ನಡುವೆ ಚಾಲ್ತಿಯಲ್ಲಿದೆ. ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಒಂದಷ್ಟು ವರಸೆಗಳನ್ನು ನೋಡಿದಾಗ ಈ ಮಾತು ಯಾರಿಗಾದರೂ ನೆನಪಾದರೆ ಅದೇನೂ ಅಚ್ಚರಿಯಲ್ಲ. ತನ್ನನ್ನು ಚುನಾಯಿಸಿದ ಜನರ ಹಿತಾಸಕ್ತಿಯನ್ನು ಕಾಪಾಡಬೇಕಾದ್ದು ಪ್ರತಿಯೊಬ್ಬ ಜನನಾಯಕನ ಆದ್ಯ ಕರ್ತವ್ಯ ಆಗಬೇಕು ಎಂಬುದೇನೋ ನಿಜ. ಆದರೆ ಜನ ಕಲ್ಯಾಣದ ಹುಸಿ ಹಣೆಪಟ್ಟಿಯನ್ನು ಲಗತ್ತಿಸಿಕೊಂಡು, ಕುತ್ಸಿಕ ಚಿಂತನೆಗಳ ನೆರವೇರಿಕೆಗೆ ಆತ ಇಳಿದಿದ್ದೇ ಆದಲ್ಲಿ, ಅದನ್ನು ಸರ್ವಥಾ ಸ್ವೀಕರಿಸಲಾಗದು. ಪ್ರಸ್ತುತ ಟ್ರಂಪ್ ಮಹಾಶಯರು ತೊಡಗಿಸಿಕೊಂಡಿರುವುದು ಇಂಥ ‘ಸ್ವೀಕಾರ್ಹವಲ್ಲದ’ ಕಾರ್ಯಗಳಲ್ಲೇ. ಅಮೇರಿಕಕ್ಕೆ ತೆರಳುವವರು ಪಡೆಯಬೇಕಾಗುವ ವೀಸಾದ ವಾರ್ಷಿಕ ಶುಲ್ಕವನ್ನು ಅತಿರೇಕದ ಮಟ್ಟಕ್ಕೆ ಏರಿಸಿ ಹಲವರ ಹುಬ್ಬೇರಿಸಿದ್ದ ಟ್ರಂಪ್, ಕೆಲ ತಿಂಗಳ ಹಿಂದೆ ‘ಸುಂಕ ಸಮರ’ಕ್ಕೂ ಮುಂದಾಗಿದ್ದನ್ನು ಜಗತ್ತೇ ಕಂಡಿದೆ. ಅಮೇರಿಕಕ್ಕೆ ಆಮದಾಗುವ ಚೀನಾ ಮುಂತಾದ ಅನ್ಯದೇಶಗಳ ಸರಕುಗಳ ಮೇಲೆ ಅತಿರೇಕದ ಸುಂಕ ಹೇರಿ ಕೇಕೆ ಹಾಕಿದ ಟ್ರಂಪ್, ‘ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿದೆ’ ಎಂಬ ಕಾರಣವನ್ನು ಮುಂದು ಮಾಡಿ ಭಾರತದ ಉತ್ಪನ್ನಗಳಿಗೂ ಇದೇ ಕ್ರಮವನ್ನು ಅನ್ವಯಿಸಿದ್ದರು. ಇದಕ್ಕೆ ಭಾರತ ಸೊಪ್ಪು ಹಾಕಲಿಲ್ಲ. ಈಗ ಸರದಿ ಸುಂಕವನ್ನು ಬರೋಬರಿ ಶೇ. ೫೦೦ರ ಮಟ್ಟಕ್ಕೆ ಏರಿಸುವ, ತನ್ಮೂಲಕ ಭಾರತದ ಮೇಲೆ ವಾಣಿಜ್ಯಿಕ ನಿರ್ಬಂಧ ಹೇರುವ ದುಸ್ಸಾಹಸಕ್ಕೆ ಟ್ರಂಪ್ ಕೈಹಾಕಿದ್ದಾರೆ. ಈ ಸಂಬಂಧದ ವಿಧೇಯಕಕ್ಕೆ ಸಹಿ ಹಾಕಿರುವ ಅವರು ಸದ್ಯದಲ್ಲೇ ಅಮೇರಿಕದ ಸಂಸತ್ತಿನಲ್ಲಿ ಅದನ್ನು ಮಂಡಿಸಲಿದ್ದಾರೆ. ಅದು ಅಂಗೀಕಾರಗೊಳ್ಳುತ್ತೋ ಬಿಡುತ್ತದೋ ಎಂಬುದನ್ನು ಕಾಲಕ್ಕೆ ಬಿಡೋಣ. ಆದರೆ ಇಂಥ ಐಲುದೊರೆಗಳು ಸಿಂಹಾಸನದಲ್ಲಿ ಕೂತಿದ್ದರೆ ಮಿಕ್ಕವರು ಎಷ್ಟೊಂದು ಮುಜುಗರ ಅನುಭವಿಸಬೇಕಾಗುತ್ತದೆಯಲ್ಲಾ? ಎಂಬುದು ಸದ್ಯದ ಪ್ರಶ್ನೆ. ಇದಕ್ಕೆ ಅಮೇರಿಕನ್ನರ ಬಳಿಯೂ ಉತ್ತರವಿದ್ದಂತಿಲ್ಲ!
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೦-೦೧-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!