ಬಿಕ್ಕಳಿಕೆಗೆ ಆಂಗ್ಲ ಭಾಷೆಯಲ್ಲಿ 'ಹಿಕಪ್ಸ್’ ಎಂದು ಹೆಸರು. ಈ ಎರಡೂ ಪದಗಳು ಬಿಕ್ಕಳಿಕೆ ಬರುವಾಗ ಉಂಟಾಗುವ ವಿಚಿತ್ರವಾದ ಶಬ್ಧದಿಂದ ಬಂದಿವೆ. ಬಿಕ್ಕಳಿಕೆಯು ವಪೆ ಸ್ನಾಯುವಿನ ಅನೈಚ್ಛಿಕ ಸಂಕುಚನದಿಂದ ಉಂಟಾಗುತ್ತದೆ. ವಪೆಯೆಂಬುದು ಎದೆಯ ಒಳಗಿನ ರಚನೆಗಳಾದ ಶ್ವಾಸಕೋಶ, ಹೃದಯ ಮುಂತಾದವುಗಳನ್ನು ಹೊಟ್ಟೆಯ ಒಳಗಿನ ಅಂಗಗಳಾದ ಲಿವರ್, ಜಠರ-ಪ್ಲೀಹ, ಕರುಳು ಮುಂತಾದವುಗಳಿಂದ ಬೇರ್ಪಡಿಸುವ ಛತ್ರಿಯಾಕಾರದ ಸ್ನಾಯು. ಒಂದೆರಡು ನಿಮಿಷಗಳಿಂದ ಐದು ನಿಮಿಷಗಳವರೆಗಿನ ಸಣ್ಣ ಅವಧಿಯ ಬಿಕ್ಕಳಿಕೆಗಳು ಆಗಾಗ ಬಂದು ಹೋಗುವುದುಂಟು. ಅವು ತಮ್ಮಷ್ಟಕ್ಕೆ ತಾವೇ ನಿಲ್ಲುತ್ತವೆ. ಮನೆ ಮದ್ದು, ಆಸ್ಪತ್ರೆ ಮದ್ದು ಬೇಕಿಲ್ಲ.

ಆದರೆ ದೀರ್ಘಕಾಲಿಕ ಬಿಕ್ಕಳಿಕೆ ಪ್ರಕರಣಗಳು ಸಾಕಷ್ಟು ತೊಂದರೆಯನ್ನು ನೀಡುತ್ತವೆ. ಅವು ದೇಹದ ಒಳಗಿನ ಯಾವುದೋ ವ್ಯಾಧಿಯ ಸಂಕೇತವಿರಬಹುದು. ೪೮ ಗಂಟೆಗಳಿಗೂ ಮಿಕ್ಕಿ ಬರುವ ಪ್ರಕರಣಗಳನ್ನು ದೀರ್ಘಕಾಲಿಕ ಎಂದೂ, ಒಂದು ತಿಂಗಳಿಗೂ ಮಿಕ್ಕಿ ಬರುತ್ತಿರುವ ಬಿಕ್ಕಳಿಕೆಯನ್ನು ವಾಸಿ ಮಾಡಲಾಗದ ಬಿಕ್ಕಳಿಕೆಯೆಂದೂ ವರ್ಗೀಕರಿಸಲಾಗಿದೆ. ವೈದ್ಯಕೀಯವಾಗಿ ಬಿಕ್ಕಳಿಕೆಯನ್ನು 'ಸಿಂಗಲ್ಸಸ್' ಎಂದು ಕರೆಯುತ್ತಾರೆ. 'ಸಿಂಗಲ್ಸ್' ಎಂಬುದು ಲ್ಯಾಟಿನ್ ಭಾಷೆಯ ಪದ; ಅಳುವಾಗ ಉಸಿರುಗಟ್ಟುವ ಪರಿಯನ್ನು ಅದು ವಿವರಿಸುತ್ತದೆ.

ಸಂಭಾವ್ಯತೆ: ಸಂಭಾವ್ಯತೆಯು ಪುರುಷ, ಮಹಿಳೆಯರಿಬ್ಬರಲ್ಲೂ ಸಮ ಸಮ. ಆದರೆ ದೀರ್ಘಕಾಲಿಕ ಪ್ರಕರಣಗಳು ಪುರುಷರಲ್ಲೇ ಹೆಚ್ಚು. ಬಿಕ್ಕಳಿಕೆ ಎಲ್ಲ ವಯಸ್ಸಿನವರಲ್ಲಿಯೂ ಬರಬಹುದು. ನವಜಾತ ಶಿಶುಗಳಲ್ಲಿಯೂ ಗರ್ಭಸ್ಥ ಕೂಸುಗಳಲ್ಲಿಯೂ ಬರಬಹುದು. ಹೊಟ್ಟೆಯ ಸೋನೋಗ್ರಫಿ ಸ್ಕ್ಯಾನಿಂಗ್ ತಂತ್ರವು ಅನ್ವೇಷಣೆಗೊಂಡ ಅನಂತರ ಗರ್ಭಸ್ಥ ಕೂಸು ಬಿಕ್ಕಳಿಸುತ್ತದೆಂಬುದು ತಿಳಿಯಿತು.

ಅಲ್ಪಕಾಲಿಕ ಬಿಕ್ಕಳಿಕೆಗೆ ಕಾರಣಗಳು: ಆಹಾರದಿಂದ, ಮದಿರೆಯಿಂದ, ಗಾಳಿಯಿಂದ ಉಂಟಾದ ಜಠರದ ಉಬ್ಬರದಿಂದ, ಕಾರ್ಬೋನೇಟಡ್ ಪಾನೀಯಗಳ ಅತಿಯಾದ ಬಳಕೆ, ಜಠರದ ಒಳಗಿನ ಉಷ್ಣತೆ, ಬಿಸಿಬಿಸಿ ಕಾಫಿ ಅಥವಾ ಕೊರೆಯುವ ಐಸ್ ಕ್ರೀಮ್‌ ಗಳಿಂದ ಬೇಗನೆ ಬದಲಾಗುವುದು. ಅತಿಯಾದ ಆತಂಕ, ಆವೇಗ, ಉದ್ವೇಗ-ಇತ್ಯಾದಿ ಕಾರಣಗಳಿಂದ ಉಂಟಾಗಬಹುದು.

ದೀರ್ಘಕಾಲಿಕ ಬಿಕ್ಕಳಿಕೆಗೆ ಕಾರಣಗಳು: ಮನೋವೈಜ್ಞಾನಿಕ ಕಾರಣಗಳು, ವ್ಯಕ್ತಿತ್ತ ಬದಲಾವಣೆಗಳು., ಆಘಾತ, ಹೆದರಿಕೆ. ಕೇಂದ್ರ ನರ ವ್ಯವಸ್ಥೆಯಲ್ಲಿನ ತೊಂದರೆಗಳು. ಜನ್ಮದತ್ತ ದೋಷಗಳು, ಕ್ಯಾನ್ಸರ್‌ಗಳು, ಮಿದುಳಿನ ಮಲ್ಟಿಪಲ್ ಸ್ಕ್ಲಿರೋಸಿಸ್, ಮಿದುಳು ಪೊರೆಗಳ ಉರಿಯೂತ, ಮಿದುಳಿನ ಸೋಂಕು, ಇತರ ಸೋಂಕುಗಳು, ನರಗಳಿಗೆ ಹಾನಿ, ನರಗಳ ಕೆರಳಿಕೆ, ವಪೆಗೆ ಶಕ್ತಿ ನೀಡುವ ಫೋನಿಕ್ ನರಕ್ಕೆ ಉಂಟಾಗುವ ಹಾನಿ. ಫ್ರೆನಿಕ್ ನರ ಮತ್ತು ೧೨ ಶಿರೋನರಗಳ ಪೈಕಿ ಅತಿ ಉದ್ದ ನರವಾದ ವೇಗಸ್‌ ನರ ಇವುಗಳ ಏರುಪೇರೂ ಬಿಕ್ಕಳಿಕೆಗೆ ಕಾರಣವಾಗುತ್ತದೆ, ವಪೆಯ ಮೂಲಕ ಉಂಟಾಗುವ ಹಯೇಟಸ್ ಹರ್ನಿಯಾ, ಹೃದಯಾಘಾತ, ಹೃದಯದ ಕವಚ-ಪೆರಿಕಾರ್ಡಿಯಮ್ ನ ಉರಿಯೂತ. ವಪೆ ಹಾಗೂ ಲಿವರ್, ಸ್ಪೀನ್‌ ಗಳ ನಡುವೆ ಕೆಟ್ಟ ನೀರು. ಕೀವು ಸೇರುವುದು,  ಶ್ವಾಸಕೋಶದ ಪೊರೆಯ ಸೋಂಕು, ನ್ಯುಮೋನಿಯಾ, ಗ್ಲಾಕೋಮ, ಕಿವಿಯೊಳಗೆ ಪರಕೀಯ ವಸ್ತು ಸೇರುವುದು, ಗಂಟಲು, ಅನ್ನನಾಳಗಳ ಉರಿಯೂತ.

ಹುಳಿ ತೇಗು, ಜಠರದ ಹುಣ್ಣು, ಚಯಾಪಚಯದ (ಮೆಟಬೋಲಿಸಮ್) ಏರು-ಪೇರು - ಸೋಡಿಯಮ್, ಪೊಟ್ಯಾಷಿಯಮ್, ಕ್ಯಾಲ್ಸಿಯಮ್, ಗ್ಲುಕೋಸ್ ಮುಂತಾದವುಗಳ ರಕ್ತದ ಮಟ್ಟದಲ್ಲಿ ಇಳಿತ, ಶಮನಕಾರಕಗಳು, ಅಪಸ್ಮಾರದಲ್ಲಿ ಬಳಸುವ ಔಷಧೀಯ ಹಲವು ಅಂಶಗಳಲ್ಲಿ ಕೆಲವು ಬಿಕ್ಕಳಿಕೆಯನ್ನುಂಟು ಮಾಡುತ್ತವೆ. ಚಾರ್ಲ್ ಓಸ್‌ ಬೋರ್ನ್ ಎಂಬ ಅಮೆರಿಕದ ಪ್ರಜೆ, ಅತೀ ದೀರ್ಘಕಾಲ ಬಿಕ್ಕಳಿಸಿದ ದಾಖಲೆ ಹೊಂದಿದ್ದಾನೆ. ಆತ ೧೯೨೨ರಿಂದ ೧೯೯೦ರವರೆಗೆ ಸತತ ೬೮ ವರ್ಷಗಳ ಕಾಲ ಬಿಕ್ಕಳಿಸಿದ್ದ. ಗರ್ಭಸ್ಥ ಶಿಶುವಿನಲ್ಲೂ ಬಿಕ್ಕಳಿಕೆ ಬೆಳಕಿಗೆ ಬಂದಿದೆ. ೧೮೯೯ರಲ್ಲಿ ಆಗಷ್ಟೇ ಅಲ್ಟ್ರಾ ಸೌಂಡ್ ಮೆಷೀನ್ ಸಂಶೋಧಿಸಲ್ಪಟ್ಟಿದ್ದು, ಅದರ ಮೂಲಕ ಶಿಶುವಿನ ಬಿಕ್ಕಳಿಕೆ ಪತ್ತೆಯಾಗಿತ್ತು, ಬಿಕ್ಕಳಿಕೆಯು ಸಂಜೆ ವೇಳೆ ಬರುವುದು ಜಾಸ್ತಿ.

ಚಿಕಿತ್ಸೆ ಹೀಗೆ… ಗಂಟಲನ್ನು ರಬ್ಬರ್ ನಳಿಕೆ ಮೂಲಕ ಪ್ರಚೋದಿಸುವುದು,  ಕಿರುನಾಲಗೆಯನ್ನು (ಯುವ್ಯುಲಾ) ಚಮಚದಿಂದ ಪ್ರಚೋದಿಸುವುದು, ಹೊಟ್ಟೆಯಲ್ಲಿ ತುಂಬಿರುವ ಆಹಾರ, ಹುಳಿ ದ್ರವಗಳನ್ನೂ 'ನೇಸೋಗ್ಯಾಸ್ಟ್ರಿಕ್ ನಳಿಗೆ'ಯಿಂದ (ರೈಲ್ಡ್ ಟ್ಯೂಬ್-ಜನರ ಬಾಯಲ್ಲಿ ರೈಸ್ ಟ್ಯೂಬ್ ಆಗಿದೆ; ಅದರ ಮೂಲಕ ಗಂಜಿ ಕುಡಿಸುತ್ತೇವಲ್ಲ ಆದ್ದರಿಂದ) ಹೀರಿ ತೆಗೆಯುವುದು, ವಾಂತಿ ಮಾಡಿಸುವುದು. ಹಿಪ್ಲೋಸಿಸ್-ವಶೀಕರಣದ ಮೂಲಕ ಗಮನವನ್ನು ಬದಲಾಯಿಸುವುದು.

ಆಕ್ಯುಪ್ರೆಷರ್ ಇತ್ಯಾದಿಗಳನ್ನು ಔಷಧಗಳಿಗಿಂತ ಮುಂಚಿತವಾಗಿ ಪ್ರಯತ್ನಿಸಬಹುದು. ಮಿದುಳಿನಲ್ಲಿ ಕೆಲಸ ಮಾಡುವ, ಸ್ನಾಯು ಸೆಳೆತ ನಿವಾರಕಗಳು, ಅರಿವಳಿಕೆ ಔಷಧಗಳು ಬಳಕೆಯಲ್ಲಿವೆ. ಬಿಕ್ಕಳಿಕೆಯ ಪರಾಕಾಷ್ಟೆಯಲ್ಲಿ ಫ್ರೆನಿಕ್ ನರವನ್ನು ತಾತ್ಕಾಲಿಕವಾಗಿ ಸ್ತಬ್ಧಗೊಳಿಸುವುದು. ವೇಗಸ್ ನರಕ್ಕೆ ಅಲ್ಪ ಪ್ರಮಾಣದ ವಿದ್ಯುತ್ ನೀಡುವ ಉಪಕರಣವನ್ನು ದೇಹದೊಳಕ್ಕೆ ಅಳವಡಿಸುವುದು ಮುಂತಾದ ಪ್ರಕ್ರಿಯೆಗಳು ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಬಳಕೆಯಲ್ಲಿವೆ.

ತಡೆಯುವುದು ಹೇಗೆ?: ಹೊಟ್ಟೆ ಬಿರಿಯುವಂಥ ಊಟ ಬೇಡ, ತುಂಬಾ ಬಿಸಿ, ತುಂಬಾ ಖಾರದ ಆಹಾರ ಬೇಡ. ಮದಿರೆ ಮತ್ತು ಸಿದ್ದ ಪಾನೀಯಗಳು ನಿಯಂತ್ರಣದಲ್ಲಿರಲಿ, ವಾತಾವರಣದ ಉಷ್ಣತೆ ಏರಿಳಿಕೆ ತೀವ್ರವಾದಾಗ ಜಾಗರೂಕರಾಗಿರಿ,

ಮನೆ ಮದ್ದು: ಆಜ್ಜಿ ಹೇಳುತ್ತಿದ್ದ ಏಳು ಗುಟುಕು ತಣ್ಣೀರನ್ನು ಒಂದೊಂದಾಗಿ ಏಣಿಸಿ ಕುಡಿಯುವುದು, ಗುಟುಕರಿಸುವುದು. ಸಕ್ಕರೆ, ಬೆಲ್ಲವನ್ನು ತಿನ್ನುವುದು. ಫ್ರಿಜ್‌ನಲ್ಲಿಟ್ಟಿದ್ದ ತಣ್ಣನೆಯ ನೀರನ್ನು ಗುಟುಕರಿಸುವುದು. ಒಂದು ಪೇಪರ್‌ಬ್ಯಾಗ್‌ನಲ್ಲಿ ಮತ್ತೆ ಮತ್ತೆ ಉಸಿರಾಡುವುದು. ನಾಲಗೆಯನ್ನು ಬಲವಂತವಾಗಿ ಮುಂದಕ್ಕೆ ಎಳೆಯುವುದು. ಮೊಣಕಾಲುಗಳನ್ನು ಎದೆಗೆ ತಾಗುವಂತೆ ಮಡಚಿ ಕುಳಿತು, ಮುಂದಕ್ಕೆ ಬಗ್ಗುವುದು. 20-30 ಸೆಕೆಂಡುಗಳ ಕಾಲ ಉಸಿರು ಕಟ್ಟುವುದು

ಮಾಹಿತಿ ಸಹಕಾರ: ಡಾ. ಸಿ. ಜಿ. ಕೇಶವಮೂರ್ತಿ

ಚಿತ್ರ ಕೃಪೆ: ಅಂತರ್ಜಾಲ ತಾಣ