ಬಾಹ್ಯಾಕಾಶ ಸಂಶೋಧನೆ ಎಂಬುದು ಕೇವಲ ವಿಜ್ಞಾನವಲ್ಲ, ಅದು ಅಸಂಖ್ಯಾತ ಕನಸುಗಳ ಹಾರಾಟ, ಸೋಮವಾರ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಉಡಾವಣೆಗೊಂಡ ಪಿ ಎಸ್ ಎಲ್ ವಿ -ಸಿ೬೨ ರಾಕೆಟ್ ಮಿಷನ್ ವೈಫಲ್ಯ ಕಂಡಿರುವುದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ದೇಶದ ವಿಜ್ಞಾನಾಸಕ್ತರಿಗೆ ತೀವ್ರ ನಿರಾಸೆ ಮೂಡಿಸಿದೆ. ಉಡಾವಣೆಯ ಮೂರನೇ ಹಂತದಲ್ಲಿ ಕಂಡುಬಂದ ತಾಂತ್ರಿಕ ವ್ಯತ್ಯಯದಿಂದಾಗಿ ವಿದೇಶಿ ಉಪಗ್ರಹ ಸೇರಿದಂತೆ ಒಟ್ಟು ೧೬ ಉಪಗ್ರಹಗಳು ಕಕ್ಷೆ ಸೇರಲು ವಿಫಲವಾಗಿ ಬಾಹ್ಯಾಕಾಶದಲ್ಲಿ ಲೀನವಾಗಿವೆ. ಇಂಥ ಹಲವು ಸೋಲುಗಳ ಕಂಡು ದಿಗ್ವಿಜಯದತ್ತ ಹೆಜ್ಜೆ ಇಟ್ಟಿರುವ ಇಸ್ರೋ ಜತೆ ದೇಶ ನಿಲ್ಲಬೇಕಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ನಿಧಾನವಾಗಿ ಖಾಸಗಿ ಪ್ರದೇಶ ವಾಗುತ್ತಿರುವ ಬೆನ್ನಲ್ಲೇ ಇಂಥ ಘಟನೆಗಳು ದೊಡ್ಡಪಾಠವೂ ಆಗಿದೆ.
ಈ ೧೬ ಉಪಗ್ರಹಗಳ ಪೈಕಿ ಹಲವು ಪ್ರಮುಖ ಉಪಗ್ರಹಗಳೂ ಇದ್ದವು. ಡಿಆರ್ಡಿಒ ಅಭಿವೃದ್ಧಿಪಡಿಸಿದ್ದ ಭೂಮಿಯಲ್ಲಿ ಮಾನವನ ಕಣ್ಣಿಗೆ ಕಾಣದಂಥ ಸೂಕ್ಷ್ಮ ಸಂಗತಿಗಳನ್ನು ಸೆರೆಹಿಡಿಯಬಲ್ಲ ಅನ್ವೇಷಾ ಎಂಬ ಉಪಗ್ರಹವೂ ಸೇರಿದೆ. ಅಲ್ಲದೆ, ಬಾಹ್ಯಾಕಾಶದಲ್ಲಿ ಇಂಧನ ತುಂಬಿಸಬಲ್ಲ ವ್ಯವಸ್ಥೆ ಕೃತಕ ಬುದ್ದಿಮತ್ತೆ ಪ್ರಯೋಗಾಲಯ ಸೇರಿದಂತೆ ಪ್ರಮುಖ ಉಪಗ್ರಹಗಳು ಈಗ ನಾಶವಾಗಿದೆ. ಇದರಲ್ಲಿ ಬೆಂಗಳೂರಿನ ದಯಾನಂದ ಸಾಗರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಿರ್ಮಿಸಿದ್ದ 'ಡಿಎಸ್ಎಟಿ-1' ಎಂಬ ಕಿರು ಉಪಗ್ರಹವೂ ಇತ್ತು ಎಂಬುದು ಹೆಚ್ಚು ನೋವಿನ ಸಂಗತಿ. ಇದು ಕೇವಲ ಒಂದು ಉಪಗ್ರಹವಾಗಿರದೆ, ಯುವ ಎಂಜಿನಿಯರ್ ಗಳ ವರ್ಷಗಳ ಪರಿಶ್ರಮ ಮತ್ತು ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ಅವರಿಗಿದ್ದ ಅದಮ್ಯ ಉತ್ಸಾಹದ ಪ್ರತೀಕವಾಗಿತ್ತು. ಆದರೆ, ವಿಜ್ಞಾನದಲ್ಲಿ ಪ್ರಯೋಗಗಳೇ ಯಶಸ್ಸಿನ ಮೆಟ್ಟಿಲುಗಳು. ಈ ವೈಫಲ್ಯವನ್ನು ಸೋಲು ಎಂದು ಭಾವಿಸಿ ಹತಾಶರಾಗದೆ, ವಿದ್ಯಾರ್ಥಿಗಳು ಮತ್ತು ಸಂಶೋಧಕರು ಇದನ್ನು ಒಂದು ಕಲಿಕೆಯ ಪಾಠವಾಗಿ ಸ್ವೀಕರಿಸಿ ಮತ್ತಷ್ಟು ದೃಢವಾಗಿ ಗೆಲುವಿನತ್ತ ಹೆಜ್ಜೆ ಇಡಬೇಕಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳ ಪ್ರವೇಶ ಹೆಚ್ಚುತ್ತಿರುವ ಈ. ಕಾಲಘಟ್ಟದಲ್ಲಿ ಇಂತಹ ತಾಂತ್ರಿಕ ಅಡೆತಡೆಗಳು ಆಘಾತ ನೀಡುವುದು ಸಹಜ. ಇಸ್ರೋ ೧೯೭೯ರ ಆಗಸ್ಟ್ನಲ್ಲಿ ತನ್ನ ಮೊದಲ ಎಸ್ಎಲ್ವಿ-೩ ಉಡಾವಣೆಯಲ್ಲಿ ವೈಫಲ್ಯ ಕಂಡಿತ್ತು. ಆದರೆ, ಅದೇ ಇಸ್ರೋ ನಂತರದ ಪ್ರಯತ್ನಗಳಲ್ಲಿ ವಿಶ್ವವೇ ಬೆರಗಾಗುವಂತಹ ಸಾಧನೆಗಳನ್ನು ಮಾಡಿದೆ. ಕೇವಲ ಭಾರತದ ಉಪಗ್ರಹಗಳನ್ನಷ್ಟೇ ಅಲ್ಲದೆ, ಇಂದು ಅಮೆರಿಕದಂತಹ ರಾಷ್ಟ್ರಗಳ ಉಪಗ್ರಹಗಳನ್ನೂ ಭಾರತ ಉಡಾವಣೆ ಮಾಡುವ ಸಾಮರ್ಥವನ್ನು ಹೊಂದಿದೆ. ಕಳೆದ ವರ್ಷದ ಮೇ ತಿಂಗಳಿನಲ್ಲೂ (ಪಿಎಸ್ಎಲ್ವಿ-ಸಿ೬೧) ಇಂತಹದ್ದೇ ವೈಫಲ್ಯ ಎದುರಾಗಿತ್ತು.
ಈಗ ಖಾಸಗಿ ಸಂಸ್ಥೆಗಳ ಸಂಸ್ಥೆಗಳ ಪೈಪೋಟಿ ಆರಂಭವಾಗಿದೆ. ಸೈರೂಟ್ ಏರೋಸ್ಪೇಸ್, ಧ್ರುವ ಸ್ಪೇಸ್ ಮತ್ತು ಅಗ್ನಿಕುಲ್ನಂತಹ ಸ್ಟಾರ್ಟ್ ಅಪ್ ಗಳು ಸ್ವಂತ ರಾಕೆಟ್ ಹಾಗೂ ಉಪಗ್ರಹ ತಂತ್ರಜ್ಞಾನದೊಂದಿಗೆ ಜಾಗತಿಕ ಮಾರುಕಟ್ಟೆ ಪಾರುಪತ್ಯಕ್ಕೆ ಸಜ್ಜಾಗಿವೆ. ಈ ಮೊದಲು ಸರಕಾರಿ ಸ್ವಾಮ್ಯಕ್ಕೆ ಸೀಮಿತವಾಗಿದ್ದ ಈ ಕ್ಷೇತ್ರ, ಈಗ ಖಾಸಗಿ ಹೂಡಿಕೆಯಿಂದಾಗಿ ವಾಣಿಜ್ಯಕವಾಗಿ ಬಲಗೊಳ್ಳುತ್ತಿದ್ದು ಅಗ್ಗದ ದರದಲ್ಲಿ ವಿದೇಶಿ ಉಪಗ್ರಹ ಉಡಾವಣೆ ಮಾಡುವ ಸ್ಪರ್ಧೆ ತೀವ್ರಗೊಂಡಿದೆ. ಯಶಸ್ಸು ಲಭಿಸಿದಾಗ ಸಂಭ್ರಮಿಸುವ ನಾವು, ಇಂತಹ ಸಂಕಷ್ಟದ ಸಮಯದಲ್ಲಿ ಇಸ್ರೋ ಮತ್ತು ನಮ್ಮ ವಿದ್ಯಾರ್ಥಿಗಳ ಬೆನ್ನಿಗೆ ಬಂಡೆಯಂತೆ ನಿಲ್ಲಬೇಕಿದೆ. ತಾಂತ್ರಿಕ ಕಾರಣಗಳ ಕೂಲಂಕಷ ವಿಶ್ಲೇಷಣೆಯಿಂದ ಮುಂದಿನ ಮಿಷನ್ ಗಳನ್ನು ಯಶಸ್ವಿಗೊಳಿಸಲು ಸಾಧ್ಯವಿದೆ. ಇಸ್ರೋ ಶೀಘ್ರದಲ್ಲೇ ಈ ಹಿನ್ನಡೆಯಿಂದ ಹೊರಬಂದು ಮತ್ತೆ ದಿಗ್ವಿಜಯ ಸಾಧಿಸಲಿ ಎಂಬುದು ನಮ್ಮ ಆಶಯ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೩-೦೧-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!