ನಿಮಗೆ ಆಂಗ್ಲ ಭಾಷೆಯ ಚಿತ್ರಗಳನ್ನು ನೋಡುವ ಹವ್ಯಾಸವಿದ್ದಲ್ಲಿ ನೀವು ‘ಡ್ರಾಕುಲಾ’ ಅಥವಾ ‘ಡ್ರ್ಯಾಕ್ಯುಲಾ’ ಎಂಬ ಹೆಸರನ್ನು ಖಂಡಿತಾ ಕೇಳಿರುತೀರಿ. ಚಿತ್ರಗಳಲ್ಲಿ ‘ಡ್ರಾಕುಲಾ’ ಎನ್ನುವ ವ್ಯಕ್ತಿ ನೋಡಲು ಅತ್ಯಂತ ಭಯಾನಕವಾಗಿದ್ದು ಆತ ಮನುಷ್ಯದ ರಕ್ತವನ್ನು ಹೀರಿ ಕೊಂದು ಬಿಡುತ್ತಾನೆ. ಈ ಹೆಸರಿನಲ್ಲೇ ಹಲವಾರು ಸರಣಿ ಚಿತ್ರಗಳು ಹೊರಬಂದಿವೆ. ಇದೇ ಡ್ರ್ಯಾಕ್ಯುಲಾ ಹೆಸರನ್ನು ಬಳಸಿಕೊಂಡು ಬಾಲಿವುಡ್ ಮತ್ತು ಕನ್ನಡದಲ್ಲೂ ಕೆಲವು ಚಿತ್ರಗಳು ಬೆಳಕು ಕಂಡಿವೆ. ಆದರೆ ಗಿಳಿಯೊಂದಕ್ಕೆ ಯಾಕೆ ಡ್ರ್ಯಾಕ್ಯುಲಾ ಗಿಳಿ ಎಂದು ಹೆಸರು ಬಂತು? 

ಡ್ರಾಕ್ಯುಲಾ ಪ್ಯಾರಟ್ ಅಥವಾ ಗಿಳಿ ನಿಜಕ್ಕೂ ಅಷ್ಟೊಂದು ಭಯಾನಕವಾಗಿದೆಯೇ? ಡ್ರಾಕ್ಯುಲಾ ಪ್ಯಾರಟ್ (ಇದನ್ನು ಪೆಸ್ಕ್ವೆಟ್‌ನ ಪ್ಯಾರಟ್ ಅಥವಾ ವಲ್ಚರೈನ್ ಪ್ಯಾರಟ್ ಎಂದೂ ಕರೆಯುತ್ತಾರೆ) ಒಂದು ಅತ್ಯಂತ ವಿಶಿಷ್ಟ ಮತ್ತು ಆಕರ್ಷಕವಾದ ಪಕ್ಷಿ. ಇದರ ಹೆಸರು ಡ್ರಾಕ್ಯುಲಾ ಎಂದು ಬಂದಿರುವುದು ಇದರ ಮೈಮಾಟದಿಂದ. ಅದರ ಕಪ್ಪು-ಕೆಂಪು ರೆಕ್ಕೆಗಳು, ಬೋಳಾದ (ಕೂದಲು ಇಲ್ಲದ) ಕಪ್ಪು ಮುಖ ಮತ್ತು ಭಯಾನಕವಾಗಿ ಕಾಣುವ ರೂಪದಿಂದಾಗಿ.

ಆದರೆ ನಿಜವಾಗಿ ಹೇಳುವುದಾದರೆ ಇದು ಯಾವುದೇ ವಿಧದ ಅಪಾಯವನ್ನು ಮಾಡುವುದಿಲ್ಲ. ಇದು ಸಿನೆಮಾಗಳಲ್ಲಿ ತೋರಿಸುವಂತೆ ರಕ್ತ ಕುಡಿಯುವ ಡ್ರಾಕ್ಯುಲಾ ಅಲ್ಲ, ಬದಲಿಗೆ ಹಣ್ಣುಗಳನ್ನು (ಮುಖ್ಯವಾಗಿ ಅಂಜೂರ ಹಣ್ಣು) ತಿನ್ನುವ ಶಾಕಾಹಾರಿ ಪಕ್ಷಿ.  ಡ್ರಾಕ್ಯುಲಾ ಪ್ಯಾರಟ್ ಅಥವಾ ಪೆಸ್ಕ್ವೆಟ್‌ನ ಪ್ಯಾರಟ್ ಒಂದು ಅದ್ಭುತವಾದ ಪಕ್ಷಿ ಆಗಿದ್ದು, ಇದನ್ನು ಅದರ ಕಪ್ಪು-ಕೆಂಪು ರೂಪದಿಂದಾಗಿ ವಿಚಿತ್ರ ನೋಟದ ಪಕ್ಷಿ ಎಂದು ಕರೆಯುತ್ತಾರೆ. ಇದು ಪಪುವಾ ನ್ಯೂಗನಿಯ ಕಾಡುಗಳಲ್ಲಿ (cloud forests) ವಾಸಿಸುತ್ತದೆ ಮತ್ತು ಮುಖ್ಯವಾಗಿ ಅಂಜೂರ ಹಣ್ಣುಗಳನ್ನು ತಿನ್ನುತ್ತದೆ.

ಇದರ ಮುಖದ ಸುತ್ತಲೂ ಗರಿಗಳಿಲ್ಲದಿರುವುದು (semi-bald head) ಹಣ್ಣಿನ ರಸದಿಂದ ಕೊಳಕಾಗದಂತೆ ರಕ್ಷಣೆಗಾಗಿ ಇದೆ. ಇದು ಸುಮಾರು ೪೫-೪೬ ಸೆಂ. ಮೀ. ಉದ್ದವಿದ್ದು, ೭೦೦ ಗ್ರಾಂ ತೂಗುತ್ತದೆ. ಗಂಡು ಪಕ್ಷಿಗಳ ಕಣ್ಣಿನ ಹಿಂದೆ ಚಿಕ್ಕ ಕೆಂಪು ಕಲೆ ಇರುತ್ತದೆ. ಇದರಿಂದ ಗಂಡು ಪಕ್ಷಿಗಳನ್ನು ವಿಂಗಡಿಸಬಹುದು. ಇದರ ಧ್ವನಿ ತುಂಬಾ ಕರ್ಕಶವಾಗಿ ಮತ್ತು ಕಿರಿಕಿರಿ(harsh & rasping) ಆಗಿರುತ್ತದೆ. ಇದು ಸ್ವಲ್ಪ ಭಯಾನಕವೆನಿಸಬಹುದು. ಆದರೆ ಇದು ಯಾವುದೇ ರೀತಿಯಲ್ಲಿ ಮನುಷ್ಯರಿಗೆ ಅಪಾಯಕಾರಿಯಲ್ಲ.

ಈ ಪಕ್ಷಿ ನಶಿಸುತ್ತಿರುವ ದುರ್ಬಲ ವರ್ಗದ (vulnerable) ಪಟ್ಟಿಯಲ್ಲಿರುವುದರಿಂದ ಅಪಾಯದಲ್ಲಿದೆ. ಇದರ ಸುಂದರವಾದ ಕಪ್ಪು-ಕೆಂಪು ಗರಿಗಳಿಗಾಗಿ ಅವ್ಯಾಹತವಾಗಿ ಬೇಟೆ ನಡೆಯುತ್ತಿದೆ. ಇದರ ಜೊತೆಗೇ ಮಾನವನ ದುರಾಶೆಗೆ ಅರಣ್ಯದ ಭಾಗವೂ ದಿನದಿಂದ ದಿನಕ್ಕೆ ನಾಶವಾಗುತ್ತಾ ಹೋಗುತ್ತಿರುವುದರಿಂದ ಡ್ರ್ಯಾಕ್ಯುಲಾ ಗಿಳಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೌದು, ಡ್ರ್ಯಾಕ್ಯುಲಾ ಗಿಳಿ ನೋಡಲು ಸ್ವಲ್ಪ ಭಯಾನಕ ಮತ್ತು ರಹಸ್ಯಮಯವಾಗಿ ಕಾಣುತ್ತದೆ (ಡ್ರ್ಯಾಕ್ಯುಲಾ ಲುಕ್). ಆದರೆ ನಿಜವಾಗಿ ಭಯಪಡುವ ಅಥವಾ ಅಪಾಯಕಾರಿ ಪಕ್ಷಿಯಲ್ಲ, ಇದು ಕೇವಲ ಪ್ರಕೃತಿಯ ಅದ್ಭುತವಾದ ಸೃಷ್ಟಿಯಾಗಿದೆ!

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ