ಕುರುಕ್ಷೇತ್ರ ಯುದ್ದಾರಂಭದ ಮೊದಲ ದಿನ ಧೃತರಾಷ್ಟ್ರ ಉವಾಚ|
ಧರ್ಮಕ್ಷೇತ್ರೆ ಕುರುಕ್ಷೇತ್ರೆ ಸಮವೇತಾ ಯುಯುತ್ಸವಃ
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ||1||
ಭಗವದ್ಗೀತೆಯ ಮೊದಲ ಅಧ್ಯಾಯದ ಮೊದಲ ಚರಣ ಆರಂಭವಾಗುವುದು ಅಂಧರಾಜ ಧೃತರಾಷ್ಟ್ರನ ಈ ಅತಿಯಾದ ಆಸಕ್ತಿಯ ಪ್ರಶ್ನೆಯಿಂದಲೇ ಅಲ್ಲವೇ?
ಅರ್ಜುನನ ವಿಷಾದಯೋಗವೂ ಮುಗಿದು ಭಗವಂತ ತನ್ನ ಭಕ್ತನ ಜುಟ್ಟು ಹಿಡಿದು ಬಗ್ಗಿಸಿ ಮತ್ತೆ ಗಾಂಢೀವ ಹಿಡಿಯುವಂತೆ ಮಾಡಿದ್ದೂ ಆಯ್ತು. ಎರಡೂ ಕಡೆಯ ಯೋಧರು ಒಮ್ಮೆ ನಿಟ್ಟುಸಿರು ಬಿಟ್ಟು ಯುದ್ದದ ನಿರೀಕ್ಷೆಯಲ್ಲಿದ್ದರೆ ಯುಧಿಷ್ಠಿರ ಮಾತ್ರ ತನ್ನ ಕೈಯ್ಯಲ್ಲಿದ್ದ ಬಿಲ್ಲು, ಬಾಣ, ಬತ್ತಳಿಕೆ, ಕವಚಗಳನ್ನೆಲ್ಲಾ ಕಳಚಿ ಕೆಳಗಿಟ್ಟು ನಿರಾಯುಧನಾಗಿ ರಥದಿಂದ ಮೌನವಾಗಿ ಕೆಳಗಿಳಿದು ಪೂರ್ವಾಭಿಮುಖವಾಗಿ ಆಚಾರ್ಯ ಭೀಷ್ಮರೆಡೆಗೆ ಹೆಜ್ಜೆ ಹಾಕಿದ.
ಆತನ ತಮ್ಮಂದಿರು ಅಣ್ಣನ ನಡೆ ನೋಡಿ ಮೊದಲಿಗೆ ಆಶ್ಚರ್ಯಗೊಂಡು ಪ್ರಶ್ನೆ ಮಾಡುವ ಪ್ರಯತ್ನ ಮಾಡಿದರೂ ಯುಧಿಷ್ಠಿರ ಮೌನಮುರಿಯಲಿಲ್ಲ. ಗಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದ. ಆತನ ಮನಸಿನಲ್ಲಿ ಇನ್ನೇನೇನೋ ಅಲೋಚನೆಗಳ ತೆರೆಗಳು ಏಳುತಿದ್ದಿರಬೇಕು. ಮುಖದಲ್ಲಿ ನಗುವಿನ ಛಾಯೆ ಇರಲೇ ಇಲ್ಲ. ಆರಂಭದಲ್ಲಿ ಭೀಮಾರ್ಜುನರು ಅಣ್ಣನನ್ನು ಪ್ರಶ್ನಿಸುವ ಪ್ರಯತ್ನ ಮಾಡಿದರಾದರೂ ಪ್ರಯೋಜನವಾಗಲೇ ಇಲ್ಲ. ಯುಧಿಷ್ಠಿರ ಮೌನದ ಮಹಾ ಕರ್ಬಂಡೆಯಾಗಿದ್ದ. ತಮ್ಮಂದಿರು ಮತ್ತೆ ಚಕಾರೆತ್ತದೆ ಅಣ್ಣನೊಡನೆ ಹೆಜ್ಜೆ ಹಾಕಿದರು. ಶ್ರೀ ಕೃಷ್ಣ ಮುಗುಳ್ನಗುತ್ತಾ ಹೆಜ್ಜೆ ಹಾಕಿದರೆ ಇತರ ಹಲವು ಅರಸರೂ ಕುತೂಹಲದಿಂದ ಆತನನ್ನು ಹಿಂಬಾಲಿಸಿದರು. ಕಾರಣ ಯುಧಿಷ್ಠಿರ ಹಾಗೆಲ್ಲಾ ಸುಖಾಸುಮ್ಮನೆ ಏನೇನೋ ಮಾಡುವವನಲ್ಲ. ಆತನ ನಡೆಯ ಹಿಂದೆ ಪ್ರಬಲವಾದ ಕಾರಣ ಇದ್ದೇ ಇರುತ್ತದೆ ಮತ್ತು ಅದು ನ್ಯಾಯ, ಧರ್ಮ ಹಾಗೂ ಸತ್ಯದ ಪರವಾಗಿರುತ್ತದೆ ಎಂಬ ನಂಬಿಕೆ ಅವರಲ್ಲಿ ಗಾಢವಾಗಿತ್ತು.
ನಡೆದು ಬಂದ ಯುಧಿಷ್ಠರ ಮೊದಲಿಗೆ ಭೀಷ್ಮರಿಗೆ ನಮಸ್ಕರಿಸಿದ. ಯುದ್ಧಕ್ಕೆ ಅಪ್ಪಣೆಯನ್ನು ಕೋರಿದ. ನಂತರ ದ್ರೋಣ, ಕೃಪಾ ಹಾಗೂ ಶಲ್ಯರಿಗೂ ನಮಸ್ಕರಿಸಿದ. ಅವರೆಲ್ಲಾ ಯುಧಿಷ್ಟಿರನಲ್ಲಿ ಹೇಳಿದ್ದು ಒಂದೇ ಮಾತು : “ನೀನು ಬರುತ್ತೀಯಂತ ನಿರೀಕ್ಷೆಯಿತ್ತು. ಈಗ ನೀನು ಬಾರದೇ ಇರುತ್ತಿದ್ದರೆ ನಾವು ನಿನ್ನನ್ನು ಶಪಿಸುತ್ತಿದ್ದೆವೇನೋ!” ಅಂತ. ಆದರೆ ಅವರ್ಯಾರೂ ಕೂಡಾ ಪಾಂಡವರನ್ನು ಶಪಿಸಲಿಲ್ಲ. ಎಲ್ಲರೂ ಕೂಡಾ ಧರ್ಮರಾಯನ ಧರ್ಮನಿಷ್ಠೆಯ ಮುಂದೆ ಕರಗಿ ಹೋದರು. ಎಲ್ಲರೂ ಅವರನ್ನು ಹೃದಯಂತರಾಳದಿಂದ ಹರಸಿದರು.
ನಾನು ಹೇಳ ಹೊರಟದ್ದು ನಮ್ಮ ಹಿರಿಯರನ್ನು ನಾವು ಹೇಗೆ ನಡೆಸಿಕೊಳ್ಳಬೇಕು ಎಂಬ ಬಗ್ಗೆ ಇಲ್ಲೊಂದು ಪಾಠ ಇದೆ. ಕಿರಿಯರಾದವರು ಹಿರಿಯರಾದವರ ಮುಂದೆ ತಾವಾಗಿ ಬಂದು ಮಂಡಿಯೂರಿದರೆ ಮಾತ್ರ ಆ ಹಿರಿಯರ ಹೃದಯ ಕರಗಿ ಸಲಹೆ, ಸೂಚನೆ ಕೊಡುತ್ತಾರೆ. ಹರಸುತ್ತಾರೆ ಕೂಡಾ. ಕಿರಿಯರು ತಮ್ಮ ಹತ್ತಿರಕ್ಕೆ ಬಂದು ಕೇಳಬೇಕು ಎಂಬ ನಿರೀಕ್ಷೆ ಪ್ರತಿಯೊಬ್ಬ ಹಿರಿಯನಲ್ಲೂ ಯಥೇಚ್ಚವಾಗಿ ಇದ್ದೇ ಇರುತ್ತದೆ. ಇದನ್ನು ತಿಳಿದು ನಾವೂ ಕ್ರಮಿಸಿದರೆ ನಮ್ಮ ಜೀವನ ನೌಕೆಯೂ ಯಾವುದೇ ದ್ವಂದ್ವಗಳಿಲ್ಲದೇ ನಿರಾಯಾಸವಾಗಿ ಯಶಸ್ಸಿನ ದಡ ಸೇರುವುದರಲ್ಲಿ ಸಂಶಯವಿಲ್ಲ ಅಲ್ಲವೇ? ಜೀವನಾರಣ್ಯದಲ್ಲಿ ಮಾನವೀಯ ಗುಣಗಳನ್ನು ಅರಸುವವರಿಗೆ ಸಂಸ್ಕಾರದ ಶಿಕಾರಿ ನಿರಂತರ ಅಲ್ಲವೇ?!
- ಮೌನಮುಖಿ (ಆತ್ರಾಡಿ ಪೃಥ್ವಿರಾಜ್ ಹೆಗ್ಡೆ ನ್ಯಾಯವಾದಿ & ನೋಟರಿ - ಉಡುಪಿ)
ಚಿತ್ರ ಕೃಪೆ: ಗೂಗಲ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!