ಮೊನ್ನೆ ಉಡುಪಿಯಲ್ಲಿ ನನ್ನ ಕಕ್ಷಿಗಾರ ಸ್ನೇಹಿತರೋರ್ವರ ಮಗಳ ಮದುವೆ ಇತ್ತು. ಆಹ್ವಾನ ಪತ್ರಿಕೆ ಕೊಟ್ಟು ನನ್ನನ್ನು ಆಹ್ವಾನಿಸಲು ಮದುಮಗಳ ಅಪ್ಪನೇ ನನ್ನ ಕಚೇರಿಗೆ ಬಂದಿದ್ದರು! ಆ ದಿನ ನಾವು ಸರಳ ವಿವಾಹದ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೆವು! ನೂರು ಮಂದಿಯ ಒಳಗೆ ಕುಟುಂಬಿಕರಷ್ಟೇ ಜಮಾಯಿಸಿ ನಡೆಸಲ್ಪಡುವ ವಿವಾಹೋತ್ಸವ ನಿಜವಾಗ್ಲೂ ಚೆನ್ನಾಗಿರುತ್ತದೆ. ಯಾರಿಗೂ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಜನ ಹೆಚ್ಚಾದರೆ ಮದುವೆ ಮಂಟಪದಲ್ಲಿ ಆಗುವ ಅಸ್ತವ್ಯಸ್ತಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದೆವು!
ಎಲ್ಲಾ ಮುಗಿದ ಮೇಲೆ ನಾನು ಅವರಲ್ಲಿ ಪ್ರಶ್ನೆ ಮಾಡಿದೆ. "ಈಗ ನಿಮ್ಮ ಮಗಳ ಮದುವೆಗೆ ಎಷ್ಟು ಮಂದಿಗೆ ಆಹ್ವಾನಿಸ್ತೀರಿ?! ಎಷ್ಟು ಮಂದಿಗೆ ಭೋಜನದ ವ್ಯವಸ್ಥೆ ಮಾಡಿಸುತ್ತೀರಿ?".
"ನಮ್ದು ಎರಡೂ ಕಡೆಯದ್ದೂ ಒಟ್ಟಿಗೆ ಎರಡೂವರೆ ಸಾವಿರ ಜನ ಅಂತ ಅಂದಾಜು ಮಾಡಿದ್ದೇವೆ!!" ಎಂದರು.
ಅಪರಾಹ್ನ 12.40ಕ್ಕೆ ಮದುವೆಗೆ ಹೋದೆ. ಅಷ್ಟರಲ್ಲೇ ಸ್ವಾಗತ ಪಾನೀಯ ಖಾಲಿಯಾಗಿತ್ತು. ಪಾನೀಯ ಕುಡಿದು ಎಸೆದಿದ್ದ ಪಾನೀಯದ ಪ್ಪಾಸ್ಟಿಕ್ ಕಪ್ ಗಳು ಅಲ್ಲಲ್ಲಿ ಚದುರಿಕೊಂಡು ಬಿದ್ದಿದ್ದವು. ಸಭಾಂಗಣ ಒಂದು ಮೂಲೆಯಿಂದ ಇನ್ನೊಂದು ಮೂಲೆಯವರೆಗೆ ಉದ್ದನೆಯ ಕ್ಯೂ ಇತ್ತು. ಮಂಟಪದಲ್ಲಿ ಮದುಮಕ್ಕಳು ಇರಲಿಲ್ಲ. ಮದು ಮಕ್ಕಳು ಎಲ್ಲಿ ಎಂದು ಅಲ್ಲಿದ್ದವರೊಬ್ಬರಲ್ಲಿ ಕೇಳಲಾಗಿ ಅವರು ದಿರಿಸು ಬದಲಾಯಿಸಲು ಹೋಗಿದ್ದಾರೆಂದು ಇನ್ನೊಂದೈದು ನಿಮಿಷದಲ್ಲಿ ಬರಬಹುದೆಂತಲೂ ತಿಳಿಸಿದರು. ನಾನೂ ಸರತಿ ಸಾಲಿನಲ್ಲಿ ಕೊನೆಯಲ್ಲಿ ನಿಂತೆ. ಇಪ್ಪತ್ತೈದು ನಿಮಿಷಗಳು ಕಳೆಯಿತು. ಫೋಟೋ ಗ್ರಾಫರ್ ಗಳು, ಸಂಬಂಧಿಕರು, ಒಂದಷ್ಟು ಮಕ್ಕಳು ಸಜ್ಜಾಗಿ ಬೇಟೆಗೆ ಹೊರಡುವ ಬೇಟೆಗಾರರಂತೆ ಮದುಮಕ್ಕಳೊಂದಿಗೆ ಬಂದರು! ಅಷ್ಟರಲ್ಲಿ ಯಾರೋ ಶಾಸಕರು ಹಾಗೂ ಅವರೊಂದಿಗೆ ಅವರ ಒಂದಷ್ಟು ಮಂದಿ ಕುರಿಮಂದೆಯಂತೆ ಹಿಂಡು ಕಟ್ಟಿಕೊಂಡು ನಿರ್ಗಮನದ ದಾರಿಯಲ್ಲಿಯೇ ಪ್ರವೇಶಿಸಿ ಮದುವೆ ಮಂಟಪಕ್ಕೆ ಲಗ್ಗೆಯಿಡುವವರಂತೆ ಬಂದರು. ಒಂದು ಹತ್ತು ನಿಮಿಷಗಳ ಕಾಲ ಮಂಟಪ ಎಂಬುದು ಜನಗಳಿಂದ ತುಂಬಿ ಹೋಯ್ತು.
ಸ್ವಲ್ಪ ಹೊತ್ತಿನಲ್ಲಿ ನಾನು ನಿಂತಿದ್ದ ಸರತಿ ಸಾಲು ಮಳೆಗಾಲದಲ್ಲಿ ನೆರೆ ನೀರು ಕೊನೆಗೆ ನದಿ ಮುಖವಾಗಿ ಕೆಳಗಿಳಿಯುವಂತೆ ನಿಧಾನಕ್ಕೆ ಚಲಿಸತೊಡಗಿತು. ಫೋಟೋ ತೆಗೆಯುವ ಭರಾಟೆ ತುಸು ಜೋರೇ ಇತ್ತು. ನಡುನಡುವೆ ಗಣ್ಯರು & ಅವರ ಪಟ್ಲಾಮುಗಳು ವಾಮ ಮಾರ್ಗದಲ್ಲಿ ಮಂಟಪಕ್ಕೆ ಬಂದು ತೊಂದರೆ ಕೊಡುತ್ತಿದ್ದವು.
ಅಂತೂ ಒಂದೂವರೆ ಗಂಟೆಯ ನಂತರ ಮದುಮಕ್ಕಳಿಗೆ ಶುಭಕೋರುವ ಸೌಭಾಗ್ಯ ನನ್ನ ಪಾಲಿಗೆ ದೊರಕಿತು! ಎಲ್ಲಿಂದಲೋ ನನ್ನ ತಲೆ ನೋಡಿ ಓಡಿ ಬಂದ ನನ್ನ ಸ್ನೇಹಿತ ಮದುಮಕ್ಕಳಿಗೆ ಹಾಗೂ ತನ್ನ ಹೆಂಡತಿಗೂ "ಇವರೇ ನಮ್ಮ ವಕೀಲ್ರು" ಅಂತ ಪರಿಚಯ ಮಾಡಿಸಿದರು. ಫೋಟೋಗೆ ನಿಲ್ಲುವಂತೆ ಒತ್ತಾಯಿಸಿ ಫೋಟೋ ಕ್ಲಿಕ್ಕಿಸಿಕೊಂಡರು.
"ನಾನು ಒಂದೂವರೆ ಗಂಟೆ ಕಾಲ ಸರತಿ ಸಾಲಿನಲ್ಲಿ ನಿಂತು ಬಂದೆ" ಅಂದೆ. ಮದುಮಗಳ ಅಪ್ಪ ನನ್ನ ಮಾತನ್ನು ನಿರ್ಲಕ್ಷಿಸಿ ಯಾವುದೇ ಬೇಸರವಿಲ್ಲದೆ ಸ್ವಾಭಿಮಾನದ ನಗು ಬೀರಿದರು! ಕಳೆದೆರಡು ಮೂರು ತಿಂಗಳುಗಳ ತನ್ನ ಸಾಧನೆ ಸಾರ್ಥಕವಾಯಿತು ಅಂತ ಅನ್ನಿಸಿರಬೇಕು ಅವರಿಗೆ! ಅಲ್ಲಿಂದ ಊಟದ ಹಾಲ್ ಕಡೆ ಬಂದರೆ ಬಾಗಿಲು ಮುಚ್ಚಲಾಗಿತ್ತು. ಹೊರಗಡೆ ಸುಮಾರು ಮುನ್ನೂರು ಮಂದಿ ಬಗಿಲು ತೆರೆದರೆ ಒಳಗೆ ನುಗ್ಗುವುದಕ್ಕೆ ಹುಮ್ಮಸ್ಸಿನಿಂದ ತಯಾರಾಗಿದ್ದು, ಒಳಗಡೆ ಊಟ ಸರಾಗ ನಡೆಯುತ್ತಿದ್ದು ಇನ್ನೂ ಪಾಯಸ ಬಂದಿಲ್ಲ ಎಂಬುದು ಕಿಟಕಿಯಲ್ಲಿ ಕಣ್ಣು ಹಾಯಿಸಿದಾಗ ಖಾತ್ರಿಯಾಯ್ತು. ಅಂದರೆ ಬಾಗಿಲು ತೆರೆಯುವುದಕ್ಕೆ ಇನ್ನೂ ಹದಿನೈದು ನಿಮಿಷ ಬೇಕು ಅಂತ ಅರ್ಥ ಮಾಡಿಕೊಂಡೆ.
ಆ ಜನ ಸಮೂಹದೊಳಗೊಂದು ದಾರಿ ಮಾಡಿಕೊಂಡು ಬಫೆಯಿರುವೆಡೆಗೆ ಬಂದರೆ ಚಪ್ಪರವೆಲ್ಲಾ ಜನ ಮುತ್ತಿಗೆ ಹಾಕಿ ತುಂಬಿ ತುಳುಕುತ್ತಿತ್ತು. ಊಟದ ಸರದಿ ಮತ್ತೆ ಮದುವೆ ಮಂಟಪದ ಮುಂದಿರುವಷ್ಟೇ ಇತ್ತು. ಅಲ್ಲೇ ಪಾನ್ ಬೀಡಾಗಳನ್ನು ಟೇಬಲ್ಲಿನ ಮೇಲೆ ಬಿಡಿಸಿಟ್ಟು ಪಕ್ಕದಲ್ಲಿಯೇ ಇಬ್ಬರು ಟೋಪಿ ಧರಿಸಿದವರು ನಿಂತಿರುವುದನ್ನು ಗಮನಿಸಿದೆ. ಅವರಲ್ಲಿ ಒಂದು ಪಾನ್ ಬೀಡಾವನ್ನು ಬೇಡಿ ಪಡೆದು ಬಾಯೊಳಗಿಟ್ಟುಕೊಂಡು ಜಗಿಯುತ್ತಾ ಜನ ಜಂಗುಳಿಯ ನಡುವೆ ದಾರಿ ಮಾಡಿಕೊಂಡು ಮನೆಯ ದಾರಿ ಹಿಡಿದೆ! ಜೀವನಾರಣ್ಯದಲ್ಲಿ ಮಾನವೀಯ ಗುಣಗಳನ್ನು ಅರಸುವವರಿಗೆ ಸಂಸ್ಕಾರದ ಶಿಕಾರಿ ನಿರಂತರ ಅಲ್ಲವೇ?!
-ಮೌನಮುಖಿ (ಆತ್ರಾಡಿ ಪೃಥ್ವಿರಾಜ್ ಹೆಗ್ಡೆ, ನ್ಯಾಯವಾದಿ - ಉಡುಪಿ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!