ಸಾಮಾನ್ಯವಾಗಿ ಸಮಾಜದಲ್ಲಿ ಒಂದು ರೂಢಿ ಇದೆ. ಯಾವ ಊಟವನ್ನಾದರೂ ಬಿಡಬಹುದು,(miss ಮಾಡಬಹುದು) ಅದರೆ ವೈಕುಂಠ ಸಮಾರಾಧನೆಯ ಊಟ ಅಥವಾ ಉತ್ತರ ಕ್ರಿಯೆಯ ಊಟ ಬಿಡಬಾರದು ಅಂತ. ನನಗೂ ಈ ರೂಢಿಯಲ್ಲಿ ವಿಶೇಷ ನಂಬಿಕೆಯಿದೆ. ಕಾರಣ ಮತ್ತೇನೂ ಅಲ್ಲ. ಸತ್ತವರ ಹೆಸರಿನಲ್ಲಿ ಕೊಡಿಸುವ ಕೊನೆಯ ಊಟವಾದುದರಿಂದ ಆ ಆತ್ಮಕ್ಕೂ ತೃಪ್ತಿಯಾಗುತ್ತದಾದರೆ ಅಗಲಿ ಎಂಬ ದಯಾಭಾವದ ಔದಾರ್ಯವೇ ಈ ನನ್ನ ಅಭಿಪ್ರಾಯಕ್ಕೆ ಕಾರಣ. ಆದುದರಿಂದ ನಾನು ಇಂತಹ ಉತ್ತರಕ್ರಿಯೆ, ವೈಕುಂಠ ಸಮಾರಾಧನೆ, ಮಿತ್ರಭೋಜನ ಕೂಟ ಇತ್ಯಾದಿ ಇತ್ಯಾದಿಯಾಗಿ ಕರೆಯಲ್ಪಡುವ ಅಪರ ಕೆಲಸಗಳಿಗೆ ಮತ್ತು ಸತ್ತವರ ಪರವಾಗಿ ಕೊಡುವ ಕೊನೆಯ ಊಟಕ್ಕೆ ಆಹ್ವಾನವಿದ್ದಲ್ಲಿ ಸಾಮಾನ್ಯವಾಗಿ ತಪ್ಪಿಸಿಕೊಳ್ಳದೆ ಹಾಜರಿರುತ್ತೇನೆ. ಇದೊಂದು ರೂಢಿಯಾಗಿರುವುದರಿಂದ ನನ್ನಂತೆ ಹೆಚ್ಚಿನವರು ಇದನ್ನು ಪಾಲಿಸುತ್ತಾರೆಂಬುದನ್ನು ನಾನು ತಿಳಿದಿದ್ದೇನೆ. ಆದರೆ ನಾನು ಇಲ್ಲಿ ಪ್ರಸ್ತಾಪಿಸಿ ವಿವರಿಸಲು ಹೊರಟಿರುವ ಸಂಗತಿ ಬೇರೆಯೇ ಇದೆ.
ಮೊನ್ನೆ ಒಂದು ಘಟನೆ ನಡೆಯಿತು. ಅದೇನೂ ಮೊದಲ ಬಾರಿ ನನಗೆ ಅನುಭವಕ್ಕೆ ಬಂದ ಘಟನೆಯಲ್ಲ. ಒಂದು ನಿದರ್ಶನವಾಗಿ ತೆಗೆದುಕೊಳ್ಳುತ್ತೇನೆ. ನನ್ನ ಆತ್ಮೀಯರೊಬ್ಬರ "ವೈಕುಂಠ ಸಮಾರಾಧನೆ"ಯ ಕಾರ್ಯಕ್ರಮಕ್ಕೆ ಹೋಗಿದ್ದೆ. ಆಹ್ವಾನ ಪತ್ರಿಕೆಯಲ್ಲಿ ಅಪರಾಹ್ನ 12.30ಕ್ಕೆ ಅಂತ ನಮೂದಿಸಿದ್ದರಿಂದ ಸಮಯಕ್ಕೆ ಸರಿಯಾಗಿ ನಾನು ಸಭಾಂಗಣ ಪ್ರವೇಶ ಮಾಡಿದ್ದೆ. ಆದರೆ ಆ ಹೊತ್ತಿಗೆ ಅಷ್ಟೇನೂ ಜನ ಜಮಾವಣೆ ಆಗಿರಲಿಲ್ಲ. ಅಲ್ಲಿ ಕುಳಿತವರನ್ನು ಕೇಳಲಾಗಿ ಸಂಬಂಧಿಕರೆಲ್ಲಾ ಪಕ್ಕದ ದೇವಸ್ಥಾನದಲ್ಲಿದ್ದಾರೆಂತಲೂ, ಅಲ್ಲಿ ದೇವರಿಗೆ ಪೂಜೆ ನಡೆಯುತ್ತಿದೆಯೆಂತಲೂ ತಿಳಿಸಿದರು. ಕಾರ್ಯಕ್ರಮ ಆರಂಭವಾಗುವುದಕ್ಕೆ ಇನ್ನಷ್ಟು ಸಮಯವಿದೆ ಎಂಬುದು ನಿಚ್ಚಳವಾದುದರಿಂದ ನಾನೂ ಕೂಡಾ ದೇವಸ್ಥಾನದೊಳಗೆ ಭಕ್ತಿ ಪೂರ್ವಕ ಪ್ರವೇಶ ಮಾಡಿದೆ. ಅಲ್ಲಿ ಸತ್ತವರ ಸಂಬಂಧಿಕರೆಲ್ಲಾ ದೇವರಿಗೆ ಕೈಮುಗಿದು ನಿಂತ ದೃಶ್ಯ ಕಾಣ ಸಿಕ್ಕಿತು. ನಾನು ದೇವರ ದರ್ಶನ ಪಡೆದು ಮೃತರ ಮಗನನ್ನು ದೂರದಿಂದ ನೋಡಿ ಮುಗುಳ್ನಗೆ ಬೀರಿ ಮತ್ತೆ ಸಭಾಂಗಣಕ್ಕೆ ವಾಪಾಸಾಗಿ ಮುಂಭಾಗದ ಆಸನದಲ್ಲಿ ಕುಳಿತುಕೊಂಡೆ. ಸ್ವಲ್ಪ ಹೊತ್ತಿನಲ್ಲಿ ಮೃತರ ಸಂಬಂಧಿಕರೋರ್ವರು ನನ್ನ ಬಳಿ ಬಂದು ಕುಳಿತರು. ಅವರು ನನ್ನನ್ನು ಉದ್ದೇಶಿಸಿ “ಬೇಗ ಬಂದ್ರಾ? ಅಂದ್ರು. “ಇಲ್ಲ ಈಗಷ್ಟೇ ಬಂದೆ ಅಂದೆ. ಅವರೇ ಮಾತು ಮುಂದುವರೆಸಿ “ಮೃತರ ಬಗ್ಗೆ ನಾಲ್ಕು ಮಾತಾಡುವವರು ಬೇಕಿತ್ತು. ನಿಮ್ಗೆ ಆಗುತ್ತಾ? ನೀವು ಹೇಗೂ ವಕೀಲ್ರಿದ್ದೀರಲ್ಲಾ?!” ಅಂದ್ರು. ನನಗೆ ಏನು ಹೇಳಬೇಕೆಂದೇ ತಿಳಿಯಲಿಲ್ಲ. ನಾಲ್ಕುನೂರರಿಂದ ಐದುನೂರರಷ್ಟು ಮಂದಿ ಸೇರಬಹುದಾದ ಸಭಾಂಗಣದಲ್ಲಿ ಭಾಷಣಕ್ಕೆ ನಿಲ್ಲಬೇಕಾದರೆ ಪೂರ್ವ ತಯಾರಿ ಮಾಡಿಕೊಳ್ಳಬೇಡವೇ?
ನಾನು ಈ ಮೊದಲೇ ಹೇಳಿಕೊಂಡಂತೆ ವೈಕುಂಠ ಸಮಾರಾಧನೆಯೆಂಬುದು ಮೃತರ ಕೊನೆಯ ಅಪರ ಕಾರ್ಯವಾಗಿರುವುದರಿಂದ ಇಂತಹ ಶೃದ್ಧಾಂಜಲಿ ಸಭೆ, ಸಹಭೋಜನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವವರು ಸತ್ತವರ ಹತ್ತಿರದ ಸಂಬಂಧಿಗಳು ಹಾಗೂ ಆಪ್ತರು. ಅಂದರೆ ಸತ್ತವರ ಅಗಲಿಕೆಯಿಂದ ದುಃಖ ಅನುಭವಿಸುತ್ತಿರುವವರು. ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವವರು ಸಮಚಿತ್ತದಿಂದಿದ್ದು ಸಾವಕಾಶದಿಂದ ನಾಲ್ಕು ಮಂದಿಯೊಂದಿಗೆ ಕುಳಿತು ಚಿಂತಿಸಿ ಯೋಚಿಸಿ ಅದರ ರೂಪುರೇಷೆಯ ಬಗ್ಗೆ ಚರ್ಚಿಸಿ ನಿರ್ಧರಿಸಬೇಕು ಮತ್ತು ಅದನ್ನು ಅಚ್ಚುಕಟ್ಟಾಗಿ ಕಾರ್ಯಗತಗೊಳಿಸಬೇಕು. ಆದರೆ ಇಲ್ಲಿ ಹಾಗಾಗುವುದಕ್ಕೆ ಸಾಧ್ಯವಿಲ್ಲ. ಕಾರಣ ಆಪ್ತರ ಅಗಲಿಕೆಯ ದುಃಖದಿಂದ ಹೊರಗೆ ಬರುವುದಕ್ಕೆ ಕೆಲವೊಮ್ಮೆ ಕೆಲವರಿಗೆ ಎಷ್ಟೋ ತಿಂಗಳುಗಳೇ ಹಿಡಿಯುತ್ತವೆ. ಹಾಗಿರುವಾಗ 11ನೇ ದಿವಸಕ್ಕೋ 13ನೇ ದಿವಸಕ್ಕೊ, 16ನೇ ದಿವಸಕ್ಕೊ ಹಮ್ಮಿಕೊಳ್ಳುವ ಈ ಅಪರ ಕಾರ್ಯಕ್ರಮದಲ್ಲಿ ಹೇಗೆ ತನ್ನ ಪರಿಪೂರ್ಣ ಗಮನವನ್ನು ಹರಿಸುವುದಕ್ಕೆ ಸಾಧ್ಯ? ಹಾಗಾಗಿ ಸಭಾಂಗಣದಲ್ಲಿ ಜನ ಜಮಾಯಿಸಿದ ನಂತರ ಮೈಕ್ ಹುಡುಕುವುದು, ಯಾರಾದರೂ ಮಾತನಾಡುವವರು ಇದ್ದರೆ ಒಳ್ಳೆಯದಿತ್ತು ಅಂತ ದಡಬಡಿಸುವುದು, ಹೂವಿನ ಹಾರ ಎಲ್ಲಿ? ದೀಪ ಹಚ್ಚುವುದಕ್ಕೆ ಎಣ್ಣೆ, ಬತ್ತಿ, ಅಗರಬತ್ತಿ, ಬೆಂಕಿ ಪೊಟ್ಟಣ, ಸತ್ತವರ ಫೋಟೋ ಇಡುವುದಕ್ಕೊಂದು ಕುರ್ಚಿ, ಅದಕ್ಕೊಂದು ಮಡಿಬಟ್ಟೆ ಇತ್ಯಾದಿ ಇತ್ಯಾದಿಗಳನ್ನು ಹುಡುಕುವುದು ಎಲ್ಲಾ ನಡೆಯುತ್ತದೆ. ಇಂತಹ ಅದೆಷ್ಟೋ ಕಾರ್ಯಕ್ರಮಗಳಿಗೆ ನಾನು ಹೋಗಿ ಕುಳಿತಿರಬೇಕಾದರೆ ಸತ್ತವರ ಸಂಬಂಧಿಕರು ನನ್ನ ಬಳಿ ಬಂದು “ನಮ್ಮಲ್ಲಿ ಮಾತನಾಡುವವರು ಯಾರೂ ಇಲ್ಲ, ತಾವು ದಯವಿಟ್ಟು ಸತ್ತವರ ಬಗ್ಗೆ ಎರಡು ಮಾತಾಡಿದರೆ ಒಳ್ಳೆಯದಿತ್ತು!" ಅಂತ ಕೋರಿಕೊಂಡ ಸನ್ನಿವೇಶ ಹಲವಾರು ಬಾರಿ ನನ್ನ ಜೀವನದಲ್ಲಿ ಎದುರಾಗಿವೆ. ಆಗ ನಾನು ಕೇಳುವುದು ಇಷ್ಟೇ “ಮೈಕ್ ಇದೆಯಾ?! ಅಂತ. ನಾನು ಆ ರೀತಿ ಕೇಳಿದ ನಂತರವೇ ಕೆಲವರಿಗೆ ಮಾತನಾಡಬೇಕಾದರೆ ಮೈಕ್ ಬೇಕಲ್ಲಾ ಅಂತ ಜ್ಞಾನೋದಯವಾಗುವುದು. ಒಂದೈನೂರು ಜನರನ್ನ ಕರೆದಿರುತ್ತಾರೆ, ಒಂದು ಮೂಲೆಯಿಂದ ಬೊಬ್ಬೆ ಹೊಡೆದರೂ ಮತ್ತೊಂದು ಮೂಲೆಗೆ ಕೇಳಿಸದ ಪರಿಸ್ಥಿತಿ. ಈ ಮಧ್ಯೆ ಕೆಲವರು ಏನೇನೋ ಮಾತಾಡಿಕೊಂಡು, ಮೊಬೈಲ್ ಬಳಸಿಕೊಂಡು ನಿಶ್ಯಬ್ಧ ವಾತಾವರಣವನ್ನು ತಿಳಿಯಾಗಿರಲು ಬಿಡದೆ ಅದನ್ನು ಕಲಕಿ ಮಾತಿನ ಶಬ್ದ ಹತ್ತು ಅಡಿಗಿಂತ ಹೆಚ್ಚು ದೂರ ಕೇಳಿಸದಂತೆ ಮಾಡಿಬಿಡುತ್ತಾರೆ. ಕೆಲವೊಂದು ಕಡೆ ಮೈಕ್ ಇಲ್ಲದೆ ಮಾತಿಗಿಳಿದು ಅರಚಿ ಅರಚಿ ಸೋತು ಹೋಗಿದ್ದೂ ಕೂಡಾ ಇದೆ. ಕೊನೆಗೆ ಮೈಕ್ ಇಲ್ಲವೇ ಇಲ್ಲ ಎಂದು ಗೊತ್ತಾದ ಮೇಲೆ ಕೊನೆ ಪಕ್ಷ ಸಭಿಕರನ್ನು ಸುಮ್ಮನಿರಲು ಹೇಳಿ ಅಂತ ನಾನು ಕೇಳಿಕೊಳ್ಳುತ್ತೇನೆ. ಆಗ ಅಲ್ಲಿ ನಾಲ್ಕು ಮಂದಿ ಸಭೆಯ ಆಕಡೆ ಈಕಡೆ ಓಡಾಡಿ ಸಭೆಯನ್ನು ಹಿಡಿತಕ್ಕೆ ತರುವ ಪ್ರಯತ್ನಮಾಡಿ “ನೋಡಿ, ನಿಮಗೋಸ್ಕರ ನಾವಿಷ್ಟು ಮಾಡಿದೆವು” ಎಂಬ ರೀತಿಯಲ್ಲಿ ನನ್ನನ್ನು ನೋಡಿ ನಾನು ಸಂತುಷ್ಟನಾಗಿದ್ದೇನೋ ಇಲ್ಲವೋ ಎಂಬುದನ್ನು ಖಾತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ನನಗೆ ಅನ್ನಿಸುವುದು ಇದೆಲ್ಲಾ ಈ ಸಂಬಂಧಿಕರಿಗೆ ಮೊದಲೇ ತಿಳಿದಿರುವುದಿಲ್ಲವೆ?!
ಅಂತೂ ಇಂತು ಸಭೆಯು ಒಂದು ಹಂತಕ್ಕೆ ಹಿಡಿತಕ್ಕೆ ಬಂತು ಅಂತ ಇಟ್ಟುಕೊಳ್ಳಿ ಇನ್ನು ಮಾತನಾಡಬೇಕಲ್ಲಾ. ಸತ್ತವರಿಗೆ ಎಷ್ಟು ಮಂದಿ ಮಕ್ಕಳು? ಎಷ್ಟು ಮೊಮ್ಮಕ್ಕಳು? ಅವರೆಲ್ಲಾ ಎನು ಮಾಡುತ್ತಾರೆ? ಎಂಬಿತ್ಯಾದಿ ಪ್ರಶ್ನೆ ಕೇಳಿದರೆ ನನ್ನಲ್ಲಿ ಮಾತನಾಡಲು ಹೇಳಿದವರಿಗೆ ಅರ್ಧಂಬರ್ಧ ತಿಳಿದಿದ್ದರೆ ಗೋವಿಂದ. ಕೊನೆಗೆ ನಾನೆ ಒಂದು ತಾರ್ಕಿಕ ಅಂತ್ಯ ಕಂಡುಕೊಂಡು ಮಾತು ಆರಂಭಿಸಿ ಅದಕ್ಕೊಂದು ಸುಂದರ ರೂಪ ಕೊಡುವುದಕ್ಕೆ ಪ್ರಯತ್ನ ಮಾಡುತ್ತೇನೆ.
ಕಾರ್ಯಕ್ರಮ ಮುಗಿದು ಮನೆಗೆ ಬಂದು ಸಂಜೆ ಮೊಬೈಲ್ ನೋಡಿದರೆ ಸತ್ತವರ ಮಗನದ್ದೋ ಮಗಳದ್ದೋ ವಾಟ್ಸಾಪ್ ಮೆಸೇಜ್ ಇರುತ್ತದೆ. “ನೀವು ಬಂದು, ಮಾತನಾಡಿ ಕಾರ್ಯಕ್ರಮ ಚೆನ್ನಾಗಿ ಸಂಪನ್ನಗೊಳ್ಳುವಂತೆ ಮಾಡಿದಿರಿ. ನೀವಲ್ಲದಿದ್ದರೆ ಕಾರ್ಯಕ್ರಮ ಸಪ್ಪೆಯಾಗುತ್ತಿತ್ತು. ನಿಮಗೆ ತುಂಬಾ ಕೃತಜ್ಞತೆಗಳು ಸರ್.”
ಇಂತಹ ಎಡವಟ್ಟುಗಳನ್ನು ನೀವು ಕೂಡಾ ನೋಡಿರಬಹುದು, ಅನುಭವಿಸಿರಬಹದು. ದುಃಖದಲ್ಲಿಯೂ ಸಂಯಮ ಕಳೆದುಕೊಳ್ಳದೆ ಕಾರ್ಯಕ್ರಮವನ್ನು ಅಯೋಜಿಸುವುದಕ್ಕೆ ಎಲ್ಲರಿಗೂ ತಿಳಿದಿರುವುದಿಲ್ಲ. ಅದಕ್ಕೊಂದು ಧೀಶಕ್ತಿಯ ಅಗತ್ಯವಿರುತ್ತದೆ. ಅದನ್ನು ಹತ್ತಿರದ ಸಂಬಂಧಿಗಳು ತಿಳಿದು ಅವರಲ್ಲಿ ತುಂಬುವ ಕೆಲಸಮಾಡಬೇಕು. ಸಂಬಂಧಿಕರಾಗಿ ಹಣ ಖರ್ಚು ಮಾಡುವುದಕ್ಕೆ ಸಾಮರ್ಥ್ಯ ಇಲ್ಲದಿದ್ದರೂ ಚಿಂತೆಯಿಲ್ಲ, ಇಂತಹ ಕರ್ಯಕ್ರಮಗಳಿಗೂ ಎರಡು ದಿವಸ ಮೊದಲು ಸಂಬಂಧಪಟ್ಟವರನ್ನು ಪ್ರಶ್ನಿಸಿ ಕೇಳಿ ಬೇಕಾಗಿರುವ ಎಲ್ಲಾ ವ್ಯವಸ್ಥೆ ಮಾಡುವಲ್ಲಿ ಕೈಜೋಡಿಸಬೇಕು. ಅಷ್ಟರಮಟ್ಟಿಗೆ ಜವಾಬ್ಧಾರಿ ವಹಿಸಿಕೊಳ್ಳಬೇಕು. ಐನೂರು ಮಂದಿಯೋ ಸಾವಿರ ಮಂದಿಯೋ ಸಭೆಯಲ್ಲಿ ಮಂಡಿಸಿರುವಾಗ ಮೈಕ್ ಎಲ್ಲಿ? ಹೂ ಎಲ್ಲಿ? ದೀಪ ಎಲ್ಲಿ? ಹೂವಿನ ಹಾರ ಎಲ್ಲಿ? ಅಗರಬತ್ತಿ ಎಲ್ಲಿ? ಮಾತನಾಡುವವರು ಯಾರು? ಅಂತ ಮೃತರ ಮಗನನ್ನೋ ಮಗಳನ್ನೋ ಪ್ರಶ್ನಿಸಿ ಅವರ ದುಃಖಾಗ್ನಿಯನ್ನು ಕೆದಕಿ ಮತ್ತಷ್ಟು ಪೇಚಿಗೀಡು ಮಾಡಬಾರದು. ಸಂಬಂಧಿಕರಾದವರು ಕೊನೆ ಪಕ್ಷ ಅಷ್ಟನ್ನಾದರೂ ಮಾಡುವ ದಯಾಭಾವವನ್ನು ಮೈಗೂಡಿಸಿಕೊಳ್ಳುವ ಅಗತ್ಯವಿದೆ.
ಜೀವನಾರಣ್ಯದಲ್ಲಿ ಮಾನವೀಯ ಗುಣಗಳನ್ನು ಅರಸುವವರಿಗೆ ಸಂಸ್ಕೃತಿಯ ಶಿಕಾರಿ ನಿರಂತರ ಅಲ್ಲವೇ?!
-ಮೌನಮುಖಿ(ಆತ್ರಾಡಿ ಪೃಥ್ವಿರಾಜ ಹೆಗ್ಡೆ), ನ್ಯಾಯವಾದಿ & ನೋಟರಿ – ಉಡುಪಿ
AI ಚಿತ್ರ ಕೃಪೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!