ತವರಿಗೆ ಬಂದೀನಿ ಸಂಕ್ರಾಂತಿ ಹಬ್ಬಕೆ/
ಗೆಳತಿಯರ ಜೊತೆಸೇರಿ ಜೋಕಾಲಿ/
ಜೀಕುತ ಖುಷಿಯನ್ನು ಹೊಂದೋಣ ಬನ್ನಿರೇ--/
ಆಲದ ಮರಕೆ ತೂಗು ಹಾಕೋಣ/
ಸರದಿಯಲಿ ಉಯ್ಯಾಲೆ ಆಡೋಣ/
ಸಂಭ್ರಮದಿ ಹಾಡೋಣ ಬನ್ನಿರೇ--//
ಲಂಗ ದಾವಣಿಯ ಧರಿಸಿಹೆವು ನಾವಿಂದು/
ಮಾರುದ್ದ ಜಡೆಯ ಹೆಣೆದಿಹೆವು/
ಮುಡಿಗೆ ಕಾಕಡವ ಮುಡಿಯೋಣ ಬನ್ನಿರೇ-/
ಊರ ತೋಪಿನಲಿ ಪ್ರಕೃತಿಯ ಚೆಲುವಿನಲಿ/
ಒಟ್ಟಾಗಿ ಸೇರಿ ಸಂತಸವ ಹಂಚೋಣ/
ಬಾಲ್ಯ ಕಾಲವ ನೆನಪು ಮಾಡೋಣ ಬನ್ನಿರೇ--//
ಜೋಕಾಲಿಯಲಿ ಗೆಳತಿ ನೀ ಮೊದಲು ಜೀಕುತ/
ಆನಂದ ಹೊಂದಿ ನಲಿಯುತ/
ಜೀವನದ ಕಹಿಗಳ ಮರೆಯೋಣ ಬನ್ನಿರೇ--//
ಎಳ್ಳು ಬೆಲ್ಲ ಹುರಿಗಡಲೆ ಸೇರಿಸಿ/
ಹಂಚುತ ಕುಣಿಯುತ ಸಂಭ್ರಮಿಸಿ/
ನೃತ್ಯವ ಗೈಯುತ ಎಲ್ಲರೂ ಸೇರೋಣ ಬನ್ನಿರೇ--//
ರಾಸುಗಳ ಕೋಡಿಗೆ ಬಣ್ಣವ ಬಳಿಯೋಣ/
ತಿಂಡಿಯ ಮಾಡಿ ಕಾಯಿಯ ತಿನಿಸೋಣ/
ಕೊರಳಿಗೆ ಢಣಢಣ ಗಂಟೆಯ ಕಟ್ಟೋಣ--ಬನ್ನಿರೇ//
ಎಂಟು ವಿಧದ ಕಾಯಿಪಲ್ಲೆ ಬೇಯಿಸಿ/
ನೈವೇದ್ಯ ಮಾಡುತ ವಂದಿಸಿ ಬೇಡುತ/
ಭಕ್ತಿಯಿಂದ ಮನೆ ದೇವಂಗೆ ಪೂಜಿಸೋಣ ಬನ್ನಿರೇ--//
ಉಯ್ಯಾಲೆಯ ಏರಿಳಿತ ಬದುಕಿನ ಆಟ/
ತವರು ಮನೆಯು ಸುಖವಾಗಿರಲಿ/
ನೆನೆಯೋಣ ದ್ಯಾವರ ಒಂದಾಗಿ ಬನ್ನಿರೇ--//
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!