ಹತ್ತು ನಿಮಿಷಗಳಲ್ಲಿ ಗ್ರಾಹಕರಿಗೆ ವಸ್ತುಗಳನ್ನು ತಲುಪಿಸುವ ತ್ವರಿತ ಸೇವೆಯ ಹೆಸರಿನಲ್ಲಿ ಆಗುತ್ತಿರುವ ರಸ್ತೆ ಅವಘಡಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಇಂತಹ ೧೦ ನಿಮಿಷಗಳ ಗಡುವನ್ನು ಕೈ ಬಿಡುವಂತೆ ಸೂಚಿಸಿರುವುದು ಹಾಗೂ ಅದಕ್ಕೆ ಕ್ವಿಕ್ ಕಾಮರ್ಸ್ ವಲಯದ ಕಂಪೆನಿಗಳು ಸ್ಪಂದಿಸಿರುವುದು ಆರೋಗ್ಯಪೂರ್ಣ ಬೆಳವಣಿಗೆ. ಕ್ವಿಕ್ ಕಾಮರ್ಸ್ ವಲಯದ ಕಂಪೆನಿಗಳ ಪರವಾಗಿ ಕೆಲಸ ಮಾಡುವ ಹಾಗೂ ತ್ವರಿತ ಗತಿಯಲ್ಲಿ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಲು ಹೆಣಗಾಡುವ ಗಿಗ್ ಕಾರ್ಮಿಕರಿಗೆ ಇದು ಸ್ವಲ್ಪ ಮಟ್ಟಿನ ನಿರಾಳತೆ ನೀಡಬಹುದು.
ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ವಸ್ತುಗಳನ್ನು ತಲುಪಿಸಲಾಗುವುದು ಎಂಬ ಕಂಪೆನಿಗಳ ಬದ್ಧತೆಗೆ ಕಟ್ಟುಬಿದ್ದು ಈ ಕಾರ್ಮಿಕರು ಕಾರ್ಯ ನಿರ್ವಹಿಸಬೇಕಾಗಿದ್ದುದರಿಂದ ನಗರಗಳಲ್ಲಿ ಸಂಚಾರ ದಟ್ಟಣೆಯ ಸಂದರ್ಭದಲ್ಲಿ ಸಂಚಾರ ನಿಯಮ ಉಲ್ಲಂಘಿಸುವ, ಅತಿವೇಗದಲ್ಲಿ ವಾಹನ ಚಲಾಯಿಸುವ ಅನಿವಾರ್ಯತೆಗೆ ಗುರಿಯಾಗುತ್ತಿದ್ದರು. ಇದರಿಂದಾಗಿ ಗಿಗ್ ಕಾರ್ಮಿಕರಿಂದ ಅವಘಡಗಳಾಗುವುದು, ಅವರೇ ರಸ್ತೆ ದುರಂತಗಳಿಗೆ ಈಡಾಗುತ್ತಿರುವುದು ಹೆಚ್ಚಿತ್ತು. ತಮ್ಮ ಕೆಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗಿಗ್ ಕಾರ್ಮಿಕರು ಇತ್ತೀಚೆಗೆ ಮುಷ್ಕರ ನಡೆಸಿದಾಗಲೂ ತ್ವರಿತ ಸೇವೆಯ ಒತ್ತಡ ಕೈಬಿಡಬೇಕೆಂದು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ `ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ಅವರು ಕಂಪೆನಿಯ ಜತೆ ಮಾತುಕತೆ ನಡೆಸಿ ಮನವೊಲಿಸಿದ್ದರಿಂದ 'ಹತ್ತು ನಿಮಷಗಳಲ್ಲಿ ಡೆಲಿವರಿ' ಎಂಬ ನಿಯಮವನ್ನು ಕೈ ಬಿಡಲು ಕ್ಲಿಕ್ ಕಾಮರ್ಸ್ ಕಂಪೆನಿಗಳು ಸಮ್ಮತಿಸಿವೆ. ಇದು ಗಿಗ್ ಕಾರ್ಮಿಕರ ಮೇಲಿನ ಒತ್ತಡವನ್ನು ತುಸು ಕಡಿಮೆ ಮಾಡುವುದು ನಿಜ.
ಹಾಗೆಂದು ರಸ್ತೆಯಲ್ಲಿ ಗಿಗ್ ಕಾರ್ಮಿಕರ ಧಾವಂತದ ಓಟಕ್ಕೆ ಪೂರ್ಣ ವಿರಾಮ ಬೀಳಬಹುದೆಂದು ನಿರೀಕ್ಷಿಸುವುದೂ ತಪ್ಪಾದೀತು. ಏಕೆಂದರೆ ದಿನವೊಂದರಲ್ಲಿ ಅತ್ಯಧಿಕ ಸಂಖ್ಯೆಯ ಡೆಲಿವರಿ ಈಡೇರಿಸಿ ಅಧಿಕ ವೇತನ ಗಳಿಸುವ ಆಸೆಯಿಂದ ಕೆಲವರಾದರೂ ಗಿಗ್ ಕಾರ್ಮಿಕರು ಹಿಂದಿನಂತೆಯೇ ವೇಗದ, ನಿರ್ಲಕ್ಷ, ಚಾಲನೆ ನಡೆಸುವ, ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಸಾಧ್ಯತೆಗಳು ಇದ್ದೇ ಇವೆ. ಅವರಿಗೆ ಉದ್ಯೋಗ ಭದ್ರತೆ ಇಲ್ಲದಿರುವುದು, ನಿಶ್ಚಿತ ವರಮಾನ ಇಲ್ಲದಿರುವುದು, ದಿನವಿಡೀ ವಿರಾಮವಿಲ್ಲದೆ ದುಡಿಯಬೇಕಾಗಿರುವದು ಅವರ ಮೇಲೆ ಅತಿಯಾದ ಒತ್ತಡ ಹೇರುತ್ತಿರುವುದರಿಂದ ಅಧಿಕ ಡೆಲಿವರಿ ನಿರ್ವಹಿಸುವ ತುಡಿತವನ್ನು ನಿಯಂತ್ರಿಸಲಾಗದು. ಗಿಗ್ ಕಾರ್ಮಿಕರು ಕೂಡಾ ಈಗ ಆರ್ಥಿಕ ವ್ಯವಸ್ಥೆಯ ಒಂದು ಭಾಗವಾಗಿದ್ದಾರೆ. ಹಾಗಾಗಿ ಅವರಿಗೆ ಉದ್ಯೋಗ ಭದ್ರತೆ ಓದಗಿಸುವ, ಇತರ ಕಾರ್ಮಿಕರಿಗೆ ಸಿಗುವಂತಹ ಕೆಲವು ಸೌಲಭ್ಯಗಳನ್ನು ಅವರಿಗೂ ಒದಗಿಸುವಂತಹ ಅಗತ್ಯವಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಕೇಂದ್ರ ಸರಕಾರವು ಕೆಲವಾರು ಕ್ರಮಗಳನ್ನು ತೆಗೆದುಕೊಂಡಿರುವುದು ಉಲ್ಲೇಖನೀಯ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೫-೦೧-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!