ಭಾರತೀಯ ನೌಕಾದಳದ ನೌಕೆ ಐಎನ್-ಎಸ್-ವಿ ಕೌಂಡಿನ್ಯ 17 ದಿನಗಳ ಸಮುದ್ರಯಾನ ಮುಗಿಸಿ 14 ಜನವರಿ 2026ರಂದು ಒಮಾನಿನ ಮಸ್ಕತ್ ತಲಪಿದಾಗ ಸಂಭ್ರಮದ ಸ್ವಾಗತ ನೀಡಲಾಯಿತು.
ಇದರಲ್ಲೇನು ವಿಶೇಷ ಎಂದು ಕೇಳುತ್ತೀರಾ? ಇದು ಎಂಜಿನ್ ಇಲ್ಲದ ನೌಕೆ! ಹಾಯಿಪಟಗಳು ಮತ್ತು ಸಮುದ್ರದ ಬೀಸುಗಾಳಿಯ ಬಲದಿಂದಲೇ ಇದು 17 ದಿನಗಳ ಯಾನ ಪೂರೈಸಿತು. 29 ಡಿಸೆಂಬರ್ 2025ರಂದು ಭಾರತದ ಪಶ್ಚಿಮ ತೀರದ ಪೋರ್-ಬಂದರಿನಿಂದ ಹೊರಟ ನೌಕೆ, ಭಾರತವನ್ನು ಪಶ್ಚಿಮದ ದೇಶಗಳಿಗೆ ಸಂಪರ್ಕಿಸಿದ್ದ ಪ್ರಾಚೀನ ಸಮುದ್ರಪಥದಲ್ಲೇ ಸಾಗಿ ಬಂತು.
ಪ್ರಾಚೀನ ಭಾರತದ ಸುಪ್ರಸಿದ್ಧ ಸಮುದ್ರಯಾನಿ ಕೌಂಡಿನ್ಯನ ಹೆಸರು ಹೊತ್ತ ಈ ನೌಕೆಯನ್ನು ನೌಕಾ ನಿರ್ಮಾಣದ ಪಾರಂಪರಿಕ ತಂತ್ರಗಳನ್ನು ಅನುಸರಿಸಿ ನಿರ್ಮಿಸಲಾಗಿದೆ ಎಂಬುದೇ ಇದರ ವಿಶೇಷ. ಮರದ ಹಲಗೆಗಳನ್ನು ತೆಂಗಿನ ನಾರಿನ ಹಗ್ಗದಿಂದ ಬಿಗಿದು ಕಟ್ಟಿ, ಸಂದುಗಳಿಗೆಲ್ಲ ನೈಸರ್ಗಿಕ ರೆಸಿನ್ ಲೇಪಿಸಿ ಇದನ್ನು ನಿರ್ಮಿಸಲಾಗಿದೆ. ಮರದ ನೌಕೆಗಳ ನಿರ್ಮಾಣದಲ್ಲಿ ಸಾಮಾನ್ಯವಾಗಿ ಬಳಸುವ ಮೊಳೆಗಳು ಅಥವಾ ಲೋಹದ ಕೊಕ್ಕೆಗಳನ್ನು ಇದರ ನಿರ್ಮಾಣದಲ್ಲಿ ಬಳಸಿಲ್ಲ.
ಜಗತ್ ಪ್ರಸಿದ್ಧ ಅಜಂತಾ ಗುಹೆಗಳಲ್ಲಿ ಕಂಡು ಬಂದ ಐದನೆಯ ಶತಮಾನದ ಒಂದು ನೌಕೆಯ ಭಿತ್ತಿ ಚಿತ್ರ ಇದಕ್ಕೆ ಪ್ರೇರಣೆ. ಪ್ರಾಚೀನ ಭಾರತದ ನೌಕೆಗಳ ಯಾವುದೇ ರೇಖಾಚಿತ್ರ ಈಗ ಲಭ್ಯವಿಲ್ಲ. ಆದ್ದರಿಂದ, ನೌಕಾ ನಿರ್ಮಾಣಕಾರರು, ಪ್ರಾಚೀನ ಗ್ರಂಥಗಳಲ್ಲಿ ಲಭ್ಯವಿರುವ ನೌಕೆಗಳ ವರ್ಣನೆಗಳ ಆಧಾರದಿಂದ ಈ ನೌಕೆಯ ವಿನ್ಯಾಸವನ್ನು ಅಂತಿಮಗೊಳಿಸಿದರು. ಗೋವಾದಲ್ಲಿ ಸಪ್ಟಂಬರ್ 2023ರಲ್ಲಿ ಶುರುವಾದ ಇದರ ನಿರ್ಮಾಣ ಮುಕ್ತಾಯವಾದದ್ದು ಫೆಬ್ರವರಿ 2025ರಲ್ಲಿ.
ಐಎನ್-ಎಸ್-ವಿ ಕೌಂಡಿನ್ಯ ನೌಕೆಯಲ್ಲಿನ ಹಲವು ಸಾಂಸ್ಕೃತಿಕ ವಿಶೇಷತೆಗಳನ್ನು ಭಾರತೀಯ ನೌಕಾದಳದ ವೆಬ್-ಸೈಟ್ ಹೀಗೆ ವಿವರಿಸಿದೆ: “ನೌಕೆಯ ಹಾಯಿಪಟಗಳಲ್ಲಿ ಶ್ರೀ ವಿಷ್ಣು ದೇವರನ್ನು ಪ್ರತಿನಿಧಿಸುವ ಗಂಡಭೇರುಂಡದ ಮತ್ತು ಸೂರ್ಯನ ಚಿತ್ರಗಳಿವೆ. ನೌಕೆಯ ಮುಖ (ಮುಂಭಾಗ)ದಲ್ಲಿ ಮರದಲ್ಲಿ ಕೆತ್ತಿದ ಸಿಂಹಾಕೃತಿ ಇದೆ. ನೌಕೆಯ ಮೇಲಂತಸ್ತಿನಲ್ಲಿ (ಡೆಕ್) ಇರುವುದು ಹರಪ್ಪಾ ನಾಗರಿಕತೆ ಕಾಲದ ವಿನ್ಯಾಸದ ಕಲ್ಲಿನ ಲಂಗರು.”
ಒಮಾನಿನಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ, ತಮ್ಮ 17 ದಿನಗಳ ಸಮುದ್ರಯಾನ “ಉಲ್ಲಾಸಮಯ ಹಾಗೂ ಸಾಹಸಮಯ”ವಾಗಿತ್ತೆಂದು ನೌಕೆಯ ಆಫೀಸರ್-ಇನ್-ಚಾರ್ಜ್ ಕಮಾಂಡರ್ ಹೇಮಂತ್ ಕುಮಾರ್ ತಿಳಿಸಿದರು. ಈ ಯಾನದಲ್ಲಿ ಹಲವಾರು ಸವಾಲುಗಳನ್ನು ಪ್ರಯಾಣಿಕರು ಎದುರಿಸಬೇಕಾಯಿತೆಂದು ಅವರು ಮಾಹಿತಿ ನೀಡಿದರು. ಉದಾಹರಣೆಗೆ, ಮಲಗಲು ಸರಿಯಾದ ಹಾಸಿಗೆಗಳು ಇರಲಿಲ್ಲ ಮತ್ತು ಸಮುದ್ರದ ತೀವ್ರ ಉಷ್ಣತೆಯಲ್ಲಿ ಸುಧಾರಿಸಿಕೊಳ್ಳಲು ಏರ್-ಕಂಡಿಶನ್ ವ್ಯವಸ್ಥೆ ಇರಲಿಲ್ಲ. ಜೊತೆಗೆ ಸಮುದ್ರಯಾನ ಸಂಬಂಧಿ ಅಸೌಖ್ಯತೆಯ ಬಾಧೆ.
ಅದೇನಿದ್ದರೂ, ಐಎನ್-ಎಸ್-ವಿ ನೌಕೆಯ ಈ ಚಾರಿತ್ರಿಕ ಯಾನ ಪ್ರಾಚೀನ ಕಾಲದಲ್ಲಿ ಭಾರತ ದೇಶವು ನೌಕಾನಿರ್ಮಾಣ ಮತ್ತು ನೌಕಾ ಯಾನದಲ್ಲಿ ಸಾಧಿಸಿದ್ದ ಪ್ರಗತಿಯನ್ನು ನೆನಪಿಸುತ್ತದೆ, ಅಲ್ಲವೇ?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!