ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಎಂಬ ದಾಖಲೆ ಹೊಂದಿರುವ ಬೃಹನ್ಮುಂಬೈ ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಬಹುಮತ ಗಳಿಸುವ ಮೂಲಕ ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಮಂಬೈ ಸೇರಿದಂತೆ ೨೯ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲೂ ಬಿಜೆಪಿ ಮಿತ್ರಕೂಟವೇ ಬಹಳ ಕಡೆ ಅಧಿಕಾರಕ್ಕೆ ಬರುತ್ತಿದೆ. ಸರಿ ಸುಮಾರು ಮೂರು ದಶಕಗಳಿಂದ ಮುಂಬೈ ಮಹಾನಗರದ ಮೇಲೆ ಉದ್ಭವ್ ಠಾಕ್ರೆ ನೃತೃತ್ವದ ಶಿವಸೇನೆ ಬಿಗಿ ಹಿಡಿತ ಹೊಂದಿತ್ತು. ಅದು ಈಗ ಮುಖಭಂಗ ಅನುಭವಿಸುವಂತಾಗಿದೆ. ಹಾಗಂತ  ಬಿಜೆಪಿಯೊಂದಕ್ಕೆ ಬಹುಮತ ಬಂದಿದೆ ಎಂದಲ್ಲ, ಬಿಜೆಪಿಯ  ಮಿತ್ರಪಕ್ಷವಾಗಿರುವ ಏಕನಾಥ ಶಿಂಧೆಯವರ ನೇತೃತ್ವದ ಶಿವಸೇನೆ ಉತ್ತಮ ಸ್ಥಾನ ಗಳಿಕೆ ಮಾಡಿದ್ದರೂ, ಅವರು ಮೈತ್ರಿಮಾಡಿಕೊಂಡಿದ್ದ ರಾಜ್ ಠಾಕ್ರೆ ಪಕ್ಷ ನೀರಸ ಸಾಧನೆ ಮಾಡಿರುವುದರಿಂದ ಅವರಿಗೆ ಹಿನ್ನಡೆಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಈ ಫಲಿತಾಂಶದೊಂದಿಗೆ ಮುಂಬೈ ಮಹಾನಗರಪಾಲಿಕೆಯಲ್ಲಿ ಬಿಜೆಪಿಗರೊಬ್ಬರು ಮೊದಲ ಬಾರಿಗೆ ಮೇಯರ್ ಪಟ್ಟಕೇರುವುದು ಪಕ್ಕಾ ಆದಂತೆ ಆಗಿದೆ. ಈ ಮೊದಲು ಬಿಜೆಪಿ-ಶಿವಸೇನೆ ಮೈತ್ರಿ ಪಕ್ಷಗಳಾಗಿದ್ದರೂ, ಮುಂಬೈನ ವಿಚಾರಕ್ಕೆ ಬಂದ ಶಿವಸೇನೆಯೇ ದೊಡ್ಡಣ್ಣ ಎಂಬಂತಾಗಿತ್ತು. ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡ ಬಳಿಕವೂ ಮುಂಬೈಯಲ್ಲಿ ಉದ್ಭವ್ ಪಕ್ಷ ಪಾರುಪತ್ಯ ಮೆರೆದಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಬಲಾಢ್ಯವಾಗಿರುವ ಹಿನ್ನಲೆಯಲ್ಲಿ ವೈರತ್ವವನ್ನು ಮರೆತು ೨೦ ವರ್ಷಗಳ ಬಳಿಕ ತಮ್ಮ ಸೋದರ ಸಂಬಂಧಿ ರಾಜ್ ಠಾಕ್ರೆ ಜತೆ ಅವರು ಮೈತ್ರಿ ಮಾಡಿಕೊಂಡಿದ್ದರು. ಫೈರ್ ಬ್ರ್ಯಾಂಡ್ ನಾಯಕರಾಗಿರುವ ರಾಜ್ ಠಾಕ್ರೆ ಅವರು ಬಿಜೆಪಿ ನಾಯಕ ಅಣ್ಣಾಮಲೈ ಬಗ್ಗೆ ಆಡಿದ ಮಾತುಗಳು ಬಹುಷಃ ಶಿವಸೇನೆಗೆ ನಷ್ಟ ಉಂಟು ಮಾಡಿರಬೇಕು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಈ ಫಲಿತಾಂಶದಿಂದ ಒಂದು ಸ್ಪಷ್ಟವಾಗುವುದೆಂದರೆ, ಜನರು ಆಡಳಿತ ಪಕ್ಷದ ಪರ ಮತ ಚಲಾಯಿಸಿದ್ದಾರೆ. ವಿಪಕ್ಷಗಳನ್ನು ತಿರಸರಿಸಿದ್ದಾರೆ. ಇದು ಚುನಾವಣೆ ನಡೆಸಲು ಮೀನಾಮೇಷ ನಡೆಸುತ್ತಿರುವ ಸರಕಾರಗಳಿಗೆ ಸಂದೇಶವಾಗಬಹುದು. ಒಟ್ಟಿನಲ್ಲಿ ಈ ಫಲಿತಾಂಶದಿಂದ ಮಹಾರಾಷ್ಟ್ರದಲ್ಲಿ ಬಿಜೆಪಿ ಮೇಲುಗೈಯಾಗಿದ್ದರೆ, ಠಾಕ್ರೆ ಸೋದರರಿಗೆ ಹಿನ್ನಡೆಯಾಗಿದೆ. ಫಲಿತಾಂಶದ ಬಳಿಕವೂ ಠಾಕ್ರೆ ಸೋದರರು ಒಂದಾಗಿಯೇ ಇರುತ್ತಾರಾ? ಬಿಜೆಪಿ ವಿರುದ್ಧ ಒಗ್ಗೂಡಿ ಹೋರಾಡುತ್ತಾರಾ ಎಂಬುದು ಮಹಾರಾಷ್ಟ್ರ ಅದರಲ್ಲೂ ವಿಶೇಷವಾಗಿ ಮುಂಬೈ ರಾಜಕಾರಣದ ದಿಕ್ಕನ್ನು ನಿರ್ಧರಿಸಲಿದೆ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೭-೦೧-೨೦೨೬

ಚಿತ್ರ ಕೃಪೆ: ಅಂತರ್ಜಾಲ ತಾಣ