ನಮ್ಮ ದೇಶದಲ್ಲಿ ಚಾಲನಾ ಪರವಾನಗಿ ಅಥವಾ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡು ಇಡೀ ದೇಶದಾದ್ಯಂತ ವಾಹನವನ್ನು ಚಲಾಯಿಸಬಹುದು. ಆದರೆ ನೀವು ವಿದೇಶ ಪ್ರವಾಸಕ್ಕೆ ಅಥವಾ ಕೆಲಸದ ಮೇಲೆ ಹೋದಾಗ ಅಲ್ಲಿಯೂ ನಿಮ್ಮ ವಾಹನ ಚಾಲನಾ ಪರವಾನಗಿಯನ್ನು ಬಳಸಿ ಕಾರ್ ಡ್ರೈವಿಂಗ್ ಮಾಡಬಹುದೇ? ನೀವು ಇರುವ ದೇಶದಲ್ಲಿ ನಿಮ್ಮ ಚಾಲನಾ ಪರವಾನಗಿಗೆ ಮಾನ್ಯತೆ ಇದೆಯೇ? ಇಲ್ಲವಾದಲ್ಲಿ ಏನು ಮಾಡಬೇಕು? ಸಿಕ್ಕಿ ಬಿದ್ದರೆ ಏನೆಲ್ಲಾ ಅಷ್ಟಕ್ಕೆ ನೀವು ಒಳಗಾಗುವ ಸಾಧ್ಯತೆ ಇದೆ ಗೊತ್ತೇ? 

ಚಾಲನಾ ಪರವಾನಗಿ ಭಾರತದಲ್ಲಿ ಪ್ರಮುಖ ದಾಖಲೆಯಾಗಿದ್ದು, ದೇಶದಲ್ಲಿ ವಾಹನವನ್ನು ಚಲಾಯಿಸ ಬೇಕೆಂದರೆ ಕಾನೂನುಬದ್ದವಾಗಿ ಪಡೆದ ಲೈಸೆನ್ಸ್ ಬೇಕೇಬೇಕು. ಹಾಗೆಯೇ ವಿದೇಶಕ್ಕೆ ಪ್ರವಾಸಕ್ಕೆ ಹೋದಾಗ ನಿಮಗೆ ಚಾಲನೆ ಗೊತ್ತಿದ್ದು, ಭಾರತದ ಲೈಸೆನ್ಸ್ ಪಡೆದಿದ್ದರೂ ಕೂಡ ನಾವು ನೇರವಾಗಿ ವಾಹನವನ್ನು ಬಾಡಿಗೆ ಪಡೆದು ವಾಹನ ಚಲಾಯಿಸುವಂತಿಲ್ಲ. ಆ ಕಾರಣಕ್ಕೆ ಒಬ್ಬ ಡ್ರೈವರ್ ಅನ್ನು ಇಟ್ಟುಕೊಂಡೇ ಊರೆಲ್ಲ ಸುತ್ತಾಡುತ್ತೇವೆ. ಯಾಕೆಂದರೆ ವಿದೇಶದಲ್ಲಿ ನಾವು ಕಾರು ಓಡಿಸಬಹುದೇ? ಭಾರತೀಯ ಚಾಲನಾ ಪರವಾನಗಿ ಇಲ್ಲಿ ಕಾರ್ಯನಿರ್ವಹಿಸುತ್ತದೆಯೇ ಎಂಬ ಗೊಂದಲ ನಮ್ಮಲ್ಲಿರುತ್ತದೆ. ಈ ಲೇಖನ ನಿಮ್ಮ ಆ ಗೊಂದಲಕ್ಕೆ ಪರಿಹಾರವಾಗಬಲ್ಲದು. ಭಾರತದ ಡ್ರೈವಿಂಗ್ ಲೈಸೆನ್ಸ್ ಯಾವೆಲ್ಲಾ ದೇಶದಲ್ಲಿ ಮಾನ್ಯತೆ ಪಡೆದುಕೊಂಡಿದೆ ಎಂಬ ವಿಷಯ ನಿಮಗೆ ತಿಳಿದಿದ್ದರೆ, ಮುಂದಿನ ಸಲ ಆ ದೇಶಗಳಿಗೆ ತೆರಳಿದಾಗ ನೀವು ಕೇವಲ ಕಾರ್ ಅನ್ನು ಮಾತ್ರ ಬಾಡಿಗೆಗೆ ಪಡೆದೊಂಡು ನೀವೇ ಚಲಾಯಿಸಬಹುದು.

ಸುಮಾರು ೧೨ ದೇಶಗಳಲ್ಲಿ ಭಾರತದ ಚಾಲನಾ ಪರವಾನಗಿಗೆ ಮಾನ್ಯತೆ ಇದೆ. ಆದರೆ ನಿಮ್ಮ ಪರವಾನಗಿ ಜೊತೆಗೆ ಕೆಲವು ಷರತ್ತುಗಳೂ ಇವೆ. ಅವುಗಳನ್ನು ಪರಿಶೀಲಿಸುವುದಾದರೆ, 

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ: ಅಮೆರಿಕದ ಹೆಚ್ಚಿನ ರಾಜ್ಯಗಳು ಭಾರತೀಯ ಚಾಲಕರು ತಮ್ಮ ಭಾರತೀಯ ಚಾಲನಾ ಪರವಾನಗಿಗಳೊಂದಿಗೆ ಒಂದು ವರ್ಷದವರೆಗೆ ಬಾಡಿಗೆ ಕಾಡುಗಳನ್ನು ಚಲಾಯಿಸಲು ಅವಕಾಶ ನೀಡುತ್ತವೆ. ಆದರೆ ಅದಕ್ಕೆ ಅದರದ್ದೇ ಆದ ಕೆಲವು ನಿಯಮಗಳಿವೆ ಅದನ್ನು ಪಾಲಿಸುವುದು ಕೂಡ ಅಗತ್ಯವಾಗಿರುತ್ತದೆ. ಪರವಾನಗಿಯು ಆಂಗ್ಲ ಭಾಷೆಯಲ್ಲಿರಬೇಕು ಮತ್ತು ಅವುಗಳು ಪ್ರಸ್ತುತ ದಿನಾಂಕಕ್ಕೆ ಮಾನ್ಯತೆ ಹೊಂದಿರಬೇಕು. ಇದರ ಜತೆಗೆ ನೀವು ಅಮೆರಿಕಗೆ ಬಂದ ದಿನಾಂಕವನ್ನು ಒಳಗೊಂಡಿರುವ I-94 ಫಾರ್ಮ್ ಸಹಾ ಹೊಂದಿರಬೇಕು.

ಜರ್ಮನಿ: ಭಾರತೀಯ ಚಾಲಕರು ಪರವಾನಗಿಗಳೊಂದಿಗೆ ಜರ್ಮನಿಯಲ್ಲಿ ಆರು ತಿಂಗಳವರೆಗೆ ವಾಹನಗಳನ್ನು ಚಲಾಯಿಸಬಹುದು. ಆದಾಗ್ಯೂ ನಿಮ್ಮ ಪರವಾನಗಿಯ ಜರ್ಮನ್ ಭಾಷೆಗೆ ಭಾಷಾಂತರಿಸಿದ ಪ್ರತಿ ಮತ್ತು ಅಂತಾರಾಷ್ಟ್ರೀಯ ಚಾಲನಾ ಪರವಾನಗಿಯನ್ನು ಕೊಂಡೊಯ್ಯುವುದು ಸೂಕ್ತ ಅತ್ಯಗತ್ಯ.

ಆಸ್ಟ್ರೇಲಿಯಾ: ಭಾರತೀಯ ಚಾಲನಾ ಪರವಾನಗಿಗಳು ಉತ್ತರ ಆಸ್ಟ್ರೇಲಿಯಾದಲ್ಲಿ ಮೂರು ತಿಂಗಳವರೆಗೆ ಮಾನ್ಯವಾಗಿರುತ್ತವೆ. ಪರವಾನಗಿ ಇಂಗ್ಲಿಷ್‌ನಲ್ಲಿರಬೇಕು ಮತ್ತು ಯಾವುದೇ ಭಾರತೀಯ ಸ್ಥಳೀಯ ಭಾಷೆಯಲ್ಲಿರಬಾರದು.

ಗ್ರೇಟ್ ಬ್ರಿಟನ್: ಇಂಗ್ಲೆಂಡ್, ವೇಲ್ಸ್ ಮತ್ತು ಸ್ಕಾಟ್ಲಂಡ್ ನಲ್ಲಿ ಭಾರತೀಯ ಇಂಡಿಯನ್ ಡಿಎಲ್ ಮಾತ್ರವೇ ಇದ್ದರೂ ಡ್ರೈವ್ ಮಾನ್ಯವಾಗಿರುತ್ತವೆ. ಆದಾಗ್ಯೂ, ಯುಕೆ ಭಾರತೀಯ ಚಾಲನಾ ಪರವಾನಗಿ ಹೊಂದಿರುವ ಚಾಲಕರು ಎಲ್ಲಾ ಷರತ್ತುಗಳನ್ನೂ ತಿಳಿದುಕೊಳ್ಳಬೇಕಾಗುತ್ತದೆ. ಕೆಲವು ವರ್ಗದ ವಾಹನಗಳನ್ನು ಮಾತ್ರ ಚಲಾಯಿಸಲು ಅನುಮತಿಸುತ್ತದೆ.

ನ್ಯೂಜಿಲೆಂಡ್: ಭಾರತೀಯ ಚಾಲನಾ ಪರವಾನಗಿಗಳು ಒಂದು ವರ್ಷದವರೆಗೆ ನ್ಯೂಜಿಲೆಂಡ್‌ನಲ್ಲಿ ಮಾನ್ಯವಾಗಿರುತ್ತವೆ, ಆದರೆ ಕಾರು ಓಡಿಸಲು ನಿಮಗೆ ೨೧ ವರ್ಷ ವಯಸ್ಸಾಗಿರಬೇಕು. ಪರವಾನಗಿ ಇಂಗ್ಲಿಷ್‌ನಲ್ಲಿರಬೇಕು ಅಥವಾ ನ್ಯೂಜಿಲೆಂಡ್ ಸಾರಿಗೆ ಸಂಸ್ಥೆಯಿಂದ ಅಧಿಕೃತವಾಗಿ ಮಾನ್ಯತೆ ಪಡೆದಿರಬೇಕು.

ಮಲೇಷ್ಯಾ : ಮಲೇಷ್ಯಾದ ರಸ್ತೆಗಳಲ್ಲಿ ವಾಹನ ಚಲಾಯಿಸಲು ಭಾರತೀಯ ಚಾಲನಾ ಪರವಾನಗಿ ಆಂಗ್ಲ ಅಥವಾ ಮಲಯ (ಮಲೇಷ್ಯಾದ ಭಾಷೆ) ಭಾಷೆಯಲ್ಲಿರಬೇಕು. ಅದನ್ನು ಅಲ್ಲಿಯ ಅಧಿಕೃತ ಅಧಿಕಾರಿಗಳಿಂದ ಪರಿಶೀಲನೆ ನಡೆಸಿರಬೇಕು. ಅವರಿಗೆ ನಿಮ್ಮ ಭಾರತೀಯ ಲೈಸೆನ್ಸ್ ತೃಪ್ತಿಕರವಾಗಿಲ್ಲದಿದ್ದರೆ, ನೀವು ಅಂತರಾಷ್ಟ್ರೀಯ ಪರವಾನಗಿಗೆ ಅರ್ಜಿ ಸಲ್ಲಿಸಬೇಕು.

ಸ್ವಿಟ್ಟಲೆಂಡ್: ಭಾರತೀಯ ಚಾಲನಾ ಪರವಾನಗಿಗಳು ಒಂದು ವರ್ಷ  ಮಾನ್ಯವಾಗಿರುತ್ತವೆ. ನಿಮ್ಮ ಚಾಲನಾ ಪರವಾನಗಿಯು ಆಂಗ್ಲ ಭಾಷೆಯಲ್ಲಿದ್ದರೆ ನೀವು ಸುಲಭವಾಗಿ ಬಾಡಿಗೆ ಕಾರು ಪಡೆದುಕೊಂಡು ಅದನ್ನು ನೀವೇ ಚಲಾಯಿಸಬಹುದು.

ಇವುಗಳು ಕೆಲವು ಭಾರತೀಯ ಚಾಲನಾ ಪರವಾನಗಿಯನ್ನು ಮಾನ್ಯ ಮಾಡುವ ದೇಶಗಳು. ಬಹುತೇಕ ದೇಶಗಳಲ್ಲಿ ಅಂತರಾಷ್ಟ್ರೀಯ ಚಾಲನಾ ಪರವಾನಗಿಯನ್ನು ಮಾನ್ಯ ಮಾಡುತ್ತಾರೆ. ಆದರೂ ವಿದೇಶದಲ್ಲಿ ವಾಹನ ಚಲಾಯಿಸುವ ಮುನ್ನ ಅಲ್ಲಿಯ ನೀತಿ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡಿರುವುದು ಅತೀ ಮುಖ್ಯ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ