ಮಾವಿನ ಮರದಲ್ಲಿ ಕಾಯಿಗಳು ಬೆಳೆಯುತ್ತಿವೆ. ಕೆಲವೆಡೆ ಸ್ವಲ್ಪ ಕೊಯ್ಲು ಪ್ರಾರಂಭವಾಗಿದೆ. ಮಳೆ ಬರುವುದಕ್ಕೆ  ಮುಂಚೆ ಹಣ್ಣಾಗುವ ಮಾವಿನ ಕಾಯಿಗೆ ಹಣ್ಣು ನೊಣ ಉಪಟಳ ಕಡಿಮೆ. ಒಂದು ಮಳೆ ಬಂದರೆ ಸಾಕು ಮಾವಿನ ಹಣ್ಣನ್ನು ಕತ್ತರಿಸಿ ನೋಡದೆ ಬಳಕೆ ಮಾಡುವುದು ಸಾಧ್ಯವೇ ಇಲ್ಲ. ನೋಡಲು ಸರಿಯಾಗಿದ್ದರೂ ಒಳಗೆ ಹುಳ ಇರಬಹುದು. ಹುಳ ಇಲ್ಲವಾದರೆ ಒಳಗೆ ರಸ ಕದಡಿರಬಹುದು. ಮಾವಿನ ಹಣ್ಣಿನಲ್ಲಿ ಹುಳ ಬರುವುದಿಲ್ಲ ಎಂದಾದರೆ ಎಷ್ಟು ಖುಷಿ ಪಟ್ಟು ತಿನ್ನಬಹುದು. ಆದರೆ ಹುಳ ಇರದ ಮಾವು ಹುಡುಕುವುದೇ ಕಷ್ಟ.  

ಮಾವಿನ ಮರದಲ್ಲಿ ಕಾಯಿಗಳು ಲಿಂಬೆ ಗಾತದಷ್ಟು ಬೆಳೆಯುವಾಗ ಈ ಹುಳ ಪ್ರತ್ಯಕ್ಷವಾಗುತ್ತದೆ. ಈ ಹಂತದಿಂದಲೇ ಪ್ರಾರಂಭಿಸಿ ಹಣ್ಣು ನೊಣ ಬಾರದಂತೆ ಮಾಡಿದರೆ ಸ್ವಲ್ಪ ಮಟ್ಟಿಗೆಯಾದರೂ ಉತ್ತಮ ಹಣ್ಣನ್ನು  ಉಳಿಸಬಹುದು. ಮಾವಿನ ಹಣ್ಣಿನಲ್ಲಿ ಒಂದೇ ಅಲ್ಲ ಎಲ್ಲಾ ನಮೂನೆಯ ಹಣ್ಣಿಗೂ ಬೆಳೆದು ತಿನ್ನುವ ಸಮಯಕ್ಕಾಗುವಾಗ ಹುಳ ಬೆಳೆದು ಹೊರಬರುವುದು ಅತೀ ದೊಡ್ಡ ಸಮಸ್ಯೆ. ಒಂದು ಜಾತಿಯ ನೊಣ ಮಾವು ಕಾಯಿ ಹಂತದಲ್ಲಿದ್ದಾಗ ಅದರ ಸಿಪ್ಪೆಯ ಮೇಲೆ ಚುಚ್ಚಿ ಮೊಟ್ಟೆ ಇಡುತ್ತದೆ. ಹಣ್ಣು ಪಕ್ವವಾಗುವಾಗ ಹಣ್ಣಿನೊಳಗೆಲ್ಲಾ ಹುಳವಿರುತ್ತದೆ. ಮಾವು ಬೆಳೆಯಲಾಗುವ ಎಲ್ಲಾ ಕಡೆ ಹಣ್ಣು ನೊಣ ಇದೆ. ಹಣ್ಣು ಇರುವಲ್ಲೆಲ್ಲಾ ಹಣ್ಣು ನೊಣ ಇದೆ ಎನ್ನಬಹುದು. ಮಾವು, ಪೇರಳೆ, ಮೂಸಂಬಿ, ಕಿತ್ತಳೆ, ಕರಬೂಜ, ಎಲ್ಲಾ ನಮೂನೆಯ ಹಣ್ಣಿನ ಬೆಳೆಗಳಿಗೂ ಹಣ್ಣು ನೊಣ ಅತೀ ದೊಡ್ಡ ಶತ್ರು. ಮಾರಾಟ, ದಾಸ್ತಾನು,  ರಫ್ತು ಪ್ರತೀಯೊಂದರಲ್ಲಿ ಮಾವಿಗೆ ಕೆಟ್ಟ ಹೆಸರು ತಂದ ಕೀಟ ಇದು. ಅದೇ ರೀತಿಯಲ್ಲಿ ತರಕಾರಿ ಬೆಳೆಗಳಲ್ಲೂ ಹಣ್ಣು ನೊಣ ಅತೀ ದೊಡ್ಡ ಶತ್ರು. 

ಈ ನೋಣಗಳು ಜೇನು ನೊಣವನ್ನು ಹೋಲುವಂತವುಗಳಾಗಿದ್ದು, ಸಾಮಾನ್ಯವಾಗಿ ತುಳಸಿ ಗಿಡವು ಹೂವು ಬಿಡುವಾಗ  ಅದರ ಪುಷ್ಪದ ಸುತ್ತ ಹಾರಾಡುತ್ತಿರುವುದನ್ನು ಗಮನಿಸಬಹುದು. ತುಳಸಿ ಗಿಡದ ಸುವಾಸನೆ ಅದನ್ನು ಅತಿಯಾಗಿ ಆಕರ್ಷಿಸುತ್ತದೆ. ಇವುಗಳ ಹತೋಟಿಗೆ ಕೀಟನಾಶಕದ ಬಳಕೆ ಬೇಕೋ ಬೇಡವೋ ಎಂದು ನಿರ್ಧರಿಸಲು ಮೋಹಕ ಬಲೆಗಳು ಸಹಕಾರಿ. ಮೋಹಕ ಬಲೆಗಳೆಂದರೆ ಹಣ್ಣು ನೊಣದ ಟ್ರಾಪುಗಳು. ಇದನ್ನು ಮಾವಿನ ಮಿಡಿ ಕಚ್ಚುವ ಸಮಯದಲ್ಲಿ ಮರದ ಗೆಲ್ಲಿನಲ್ಲಿ ನೆಲಮಟ್ಟದಿಂದ ೪-೫ ಅಡಿ ಎತ್ತರಕ್ಕಿರುವಂತೆ ನೆರಳಿನ ಜಾಗದಲ್ಲಿ ನೇತು ಹಾಕಬೇಕು. ಅದರಲ್ಲಿ ಮಿಥೇಲ್ ಯುಜೆನಾಲ್ ಎಂಬ ರಾಸಾಯನಿಕ ಇದ್ದು, ಇದು ಹಣ್ಣು ನೊಣದ ಗಂಡು ದುಂಬಿಗೆ ಹೆಣ್ಣಿನ ವಾಸನೆಯನ್ನು ಸೂಸುತ್ತದೆ. ಅದಕ್ಕೆ  ಆಕರ್ಷಿತವಾಗಿ  ಗಂಡು ನೊಣಗಳು ಬರುತ್ತವೆ. ಅಲ್ಲಿ ಸುತ್ತುತ್ತಾ ತಲೆ ತಿರುಗಿ  ಬೀಳುತ್ತವೆ. ಅದನ್ನು ಕಾಯಿಗಳು ನಿಂಬೆ ಕಾಯಿಯ ಗಾತ್ರದಲ್ಲಿರುವಾಗ ಇಟ್ಟರೆ ಗಂಡು ಇಲ್ಲದೆ ಹೆಣ್ಣೂ ಸಂತಾನಾಭಿವೃದ್ದಿಗೆ ಅನನುಕೂಲವಾಗಿ ಮೊಟ್ಟೆ ಇಡುವಿಕೆ ಕಡಿಮೆಯಾಗುತ್ತದೆ. ಟ್ರಾಪನ್ನು ನೇತಾಡಿಸಿದಾಗ ಬೀಳುವ ನೊಣಗಳ ಸಂಖ್ಯೆಯನ್ನು  ಗಮನಿಸಿ ಮೊದಲ ಹಂತದಲ್ಲಿ (ಕಾಯಿ ಬೆಳವಣಿಗೆಗೆ ೧ ತಿಂಗಳ ಮುಂಚೆ) ಕೀಟನಾಶಕ ಸಿಂಪಡಿಸಿ ಒಂದಷ್ಟು ನೊಣಗಳನ್ನು  ನಾಶಮಾಡಬಹುದು. ಒಂದು ಟ್ರಾಪಿನಲ್ಲಿ ದಿನಕ್ಕೆ ೬ಕ್ಕಿಂತ ಹೆಚ್ಚು ನೊಣಗಳು ಬಿದ್ದರೆ ಅದರ ಸಂಖ್ಯೆ ಹೆಚ್ಚುಇದೆ ಎಂದರ್ಥ. ಅದನ್ನು ಟ್ರಾಪಿನೊಂದಿಗೆ ಕೀಟನಾಶಕದ ಬಳಕೆ ಮಾಡಿ ನಿಯಂತ್ರಣ ಮಾಡಬೇಕಾಗುತ್ತದೆ.

ಹಣ್ಣು ನೊಣಗಳು ಎಲ್ಲಿಂದ ಬರುತ್ತವೆ?: ಮಾವಿನ ಸಸಿ ನೆಟ್ಟ ಮೊದಲ ವರ್ಷ ಹಣ್ಣು ನೊಣದ ತೊಂದರೆ ಬಹಳ ಕಡಿಮೆ. ನಂತರದ ವರ್ಷ ಅದು ಪ್ರಾರಂಭವಾಗುತ್ತದೆ. ಹೀಗಾದರೆ ಮಾವಿನ ಮರದಲ್ಲಿ ಬಿಡುವ ಎಲ್ಲಾ ಹಣ್ಣುಗಳೂ ಉಳಿಯುವುದಿಲ್ಲ. ಕೆಲವು ಅಪಕ್ವ ಸ್ಥಿತಿಯಲ್ಲಿ ಉದುರುತ್ತವೆ. ಅದನ್ನು ಯಾಕಾಗಿ ಹೆಕ್ಕುವುದು, ಹಾಳು ಮಾವಿನಿಂದ ನಮಗೇನು ಪ್ರಯೋಜನ ಎಂದು ಅದನ್ನು ಅಲ್ಲೇ ಬಿಡುತ್ತೇವೆ. ಅದರ ಮೂಲಕ ಹಣ್ಣು ನೊಣ ಸಂತಾನಭಿವೃದ್ದಿಯಾಗುತ್ತದೆ. ಅವು ಹಾರುವ ಕೀಟಗಳಾಗಿದ್ದು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹಾರಿ ಬರುತ್ತವೆ.  ಆಹಾರ ಇದ್ದರೆ ಅಲ್ಲಿ ಮೊಟ್ಟೆ ಇಡುತ್ತವೆ. ಇಲ್ಲವಾದರೆ ನಾಶವಾಗುತ್ತದೆ. ಬಿದ್ದ ಕಾಯಿಗಳ ಮೂಲಕ  ಸಂತಾನಾಭಿವೃದ್ದಿಯಾಗಿ ಅದು ನೆಲದಲ್ಲಿ, ಮರದ ಎಡೆ ಸಂದುಗಳಲ್ಲಿ ವಾಸ್ತವ್ಯವಿರುತ್ತದೆ. ಮತ್ತೆ ಮಾವಿನ ಹಣ್ಣಿನ ಸೀಸನ್‌ನಲ್ಲಿ ಕಾಯಿಯ ಮೇಲೆ ಮೊಟ್ಟೆ ಇಡಲು ಪ್ರಾರಂಭಿಸುತ್ತದೆ. ಆದ ಕಾರಣ ಮೂಲದಲ್ಲೇ ಹಣ್ಣು ನೊಣದ ಸಂತತಿಯನ್ನು ಹತ್ತಿಕ್ಕಲು ಮಾವು ಬೆಳೆಸುವವರು ಬುಡದಲ್ಲಿ  ಬೀಳುವ ಯಾವುದೇ ಕಾಯಿಗಳನ್ನು ಅಲ್ಲೇ ಕೊಳೆಯಲು ಬಿಡಬಾರದು. ಅದನ್ನು ಸುಡಬೇಕು, ಇಲ್ಲವೇ ಆಳದಲ್ಲಿ ಹುಗಿಯಬೇಕು. ಇಲ್ಲವೇ ಬಿದ್ದ ಕಾಯಿಗಳನ್ನು ಕೀಟನಾಶಕ ದ್ರಾವಣದಲ್ಲಿ ಹಾಕಬೇಕು.     

ಹಣ್ಣು ನೊಣವು ಕಾಯಿಗಳ ಮೇಲೆ ಕುಳಿತು ತನ್ನ ಶರೀರದ ಭಾಗದ  ಕೊಂಡಿಯ ಮೂಲಕ ಚುಚ್ಚಿ ಮೊಟ್ಟೆ ಇಡುತ್ತದೆ. ಮೊಟ್ಟೆಗಳು ಅದರೊಳಗೆ ಬೆಳೆಯುತ್ತಾ ಸುಮಾರು ೫೦- ೬೦ ದಿನಗಳಲ್ಲಿ ಹುಳುಗಳಾಗುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ ಮಾವಿನ ಕಾಯಿಯ ಸಿಪ್ಪೆಯ ಮೇಲ್ಮೈಯಲ್ಲಿ ಸಣ್ಣ ಚುಚ್ಚಿದ ಗಾಯ ಕಪ್ಪು ಬಣ್ಣದಲ್ಲಿ ಕಾಣಿಸುತ್ತದೆ. ಮಾವಿನ  ಬೆಳೆ ಇರುವಲ್ಲಿ ಅಥವಾ ಇತರ ಕಿತ್ತಳೆ, ಮೂಸಂಬಿ, ಕಲ್ಲಂಗಡಿ, ತರಕಾರಿ ಬೆಳೆಯುತ್ತಿರುವ ಜಾಗದಲ್ಲಿ ಮನೆ ನೊಣದ ತರಹದ ಕೀಟವೊಂದು ಹಾರಾಡುತ್ತಿರುವುದು, ಕಾಯಿಗಳ ಮೇಲೆ ಕುಳಿತಿರುವುದನ್ನು ಗಮನಿಸಬಹುದು. ಹುಳ ಭಾಧಿತವಾದುದು  ಉದುರಿ ಬಿದ್ದರೆ ಅದರಲ್ಲಿದ್ದ ಹಣ್ಣಿನ ಹುಳುಗಳು ಹೊರಬಂದು ಮಣ್ಣಿಗೆ ಸೇರಿ ಕೋಶಾವಸ್ಥೆಯನ್ನು ತಲುಪುತ್ತದೆ. ಕೆಲವೇ ದಿನಗಳಲ್ಲಿ ಕೋಶಾವಸ್ಥೆಯಿಂದ ಪ್ರೌಢಾವಸ್ಥೆಗೆ ಬಂದ ನೊಣಗಳು ಮತ್ತೆ ಮೊಟ್ಟೆ ಇಟ್ಟು ಅಲ್ಲಿ ಸಂತಾನಾಭಿವೃದ್ಧಿಗೊಳ್ಳುತ್ತವೆ. ಹುಳ ಚಿಕ್ಕದಾದರೂ ಅದು ನೆಲಕ್ಕೆ ಬಿದ್ದಾಗ ಎರಡೂ ಮಗ್ಗುಲನ್ನೂ ನೆಲಕ್ಕೆ  ಒತ್ತಿ ಸುಮಾರು ೧ ಮೀ ಜಿಗಿಯುತ್ತದೆ. 

ಮೋಹಕ ಬಲೆಗಳನ್ನು ಒಂದು ಎಕ್ರೆಗೆ ೨ ರಿಂದ ೧೦ ಸಂಖ್ಯೆಯಲ್ಲಿ ಕಟ್ಟಬೇಕು. ನೀರಿನ  ಪ್ಲಾಸ್ಟಿಕ್ ಬಾಟಲಿಯನ್ನು  (ಚಿತ್ರದಲ್ಲಿ ೨ರಲ್ಲಿ ತೋರಿಸಿದಂತೆ) ಎರಡೂ ಕಡೆ ತೆರೆದು ಮಿಥೇಲ್ ಯುಜಿನಾಲ್ ದ್ರವ ಹಾಕಿದ ಕಾರ್ಡ್ ಬೋರ್ಡ್ ತುಂಡನ್ನು ಬಾಟಲಿಯ ಮುಚ್ಚಳಕ್ಕೆ ಹಗ್ಗದಿಂದ ಸುರಿದು ಬಾಟಲಿಯ ಒಳಭಾಗದೊಳಗೆ ನೇತಾಡಿಸಬೇಕು. ಕೆಲವು ತಯಾರಿಕೆಗಳಲ್ಲಿ  ನೇತಾಡಿಸುವ ಕಂಟೈನರ್ ಸಹ ದೊರೆಯುತ್ತದೆ. ಕಟ್ಟುವಾಗ ಭೂಮಿಯಿಂದ ೩ ರಿಂದ ೬ ಅಡಿ ಎತ್ತರದಲ್ಲಿ, ಗಾಳಿಗೆ ಅಲುಗಾಡದಂತೆ ಹಾಗೂ ನೇರವಾಗಿ ಬಿಸಿಲು ಬೀಳದ ಕಡೆ ಎಲೆಗಳ ಮರೆಯಲ್ಲಿ ಕಟ್ಟಬೇಕು. ಮೋಹಕ ಬಲೆಗಳನ್ನು ಹಣ್ಣುಗಳೆಲ್ಲಾ ಮುಗಿಯುವವರೆಗೂ  ಉಳಿಸಬೇಕು. ಒಂದು ಹಣ್ಣು ನೊಣಕ್ಕೆ ಆಹಾರವಾಗಿ ಕೊಳೆತು ಕೆಳಕ್ಕೆ ಬಿದ್ದರೂ ಸಹ ಅದು ಮುಂದಿನ ವರ್ಷಕ್ಕೆ ನೆಲದಲ್ಲಿ ಸುಪ್ತಾವಸ್ಥೆಯಲ್ಲಿ ಇರುತ್ತದೆ. ಪ್ರತೀ ವಾರ ನೊಣಗಳ ಬೀಳುವಿಕೆಯನ್ನು  ಗಮನಿಸುತ್ತಿರಬೇಕು. ದಿನಕ್ಕೆ  ಒಂದು ಬಲೆಯಲ್ಲಿ ಐದಕ್ಕಿಂತ ಹೆಚ್ಚು ನೊಣಗಳು ಬಿದ್ದಲ್ಲಿ ಬಲೆಯ ಸಂಖ್ಯೆಯನ್ನು  ಹೆಚ್ಚಿಸಬೇಕು. ಕನಿಷ್ಟ ವಾರಕ್ಕೊಮ್ಮೆಯಾದರೂ ಬಲೆಯ ಸಂಗ್ರಾಹಕದಲ್ಲಿ ಬಿದ್ದ ನೊಣಗಳನ್ನು ತೆಗೆದು ಸ್ವಚ್ಚಗೊಳಿಸುತ್ತಿರಬೇಕು. ಪಾತ್ರೆಯೊಳಗೆ ನೀರು ಸೇರಿಕೊಂಡರೆ ಅದನ್ನು ತೆಗೆಯಬೇಕು. ಮೋಹಕ ಬಲೆಗಳು ಮಾರುಕಟ್ಟೆಯಲ್ಲಿಯೂ ದೊರೆಯುತ್ತದೆ. ಬೆಂಗಳೂರಿನಲ್ಲಿರುವ ಭಾರತೀಯ ತೊಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಸಹ ಲಭ್ಯವಿದೆ. 

ರಾಸಾಯನಿಕವಾಗಿ ಹತೋಟಿ ಮಾಡಲು ಹೂವು ಬಿಡುವ ಸಮಯದಲ್ಲಿ ಮರದ ಬುಡ ಭಾಗವನ್ನು ಉಳುಮೆ ಮಾಡಿ ತೆಳುವಾಗಿ ನೀರು ಸಿಂಪರಣೆ ಮಾಡಿ ಮರದ ಗೆಲ್ಲು ವ್ಯಾಪಿಸಿರುವಷ್ಟು ಭಾಗಕ್ಕೆ ಕ್ಲೋರೋಫೆರಿಫೋಸ್ ಅಥವಾ ಮೆಲಾಥಿಯಾನ್ ಕೀಟನಾಶಕವನ್ನು (೩-೫ ಮಿಲಿ) ಸಿಂಪಡಿದರೆ ಬುಡ, ನೆಲ ಭಾಗದಲ್ಲಿ ಅಡಗಿರುವ ಹುಳದ ಕೊಶಗಳು ಸಾಯುತ್ತವೆ. ಜನವರಿ- ಫೆಬ್ರವರಿ ತಿಂಗಳಲ್ಲಿ ಶೇ. ೧ ಬೇವಿನ ಬೀಜದ ಕಷಾಯವನ್ನು ಸಿಂಪರಣೆ ಮಾಡುವುದರಿಂದ ಬಹಳಷ್ಟು ಕೀಟಗಳು ಸಾಯುತ್ತವೆ. ಮನೆ ಬಳಕೆಗಾಗಿ ಸಣ್ಣ ಪ್ರಮಾಣದಲ್ಲಿ ಮಾವು ಬೆಳೆಸಿದವರು ಕೈಗೆ ಎಟಕುವ ಮಾವಿನ ಕಾಯಿಗಳಿಗೆ ಪ್ಲಾಸ್ಟಿಕ್ ಇಲ್ಲವೇ ನ್ಯೂಸ್ ಪೇಪರಿನ ಕವರ್ ಮಾಡಿ ಕಾಯಿಗಳನ್ನು ಮುಚ್ಚುವಂತೆ ಮಾಡಿದರೆ ೧೦೦ ಕ್ಕೆ ೧೦೦ ಹಣ್ಣು ನೊಣ ತೊಂದರೆ ಇಲ್ಲ. ಅದನ್ನು ಅಂಜಿಕೆ ಇಲ್ಲದೇ ಕಚ್ಚಿ ತಿನ್ನಬಹುದು. ಹಣ್ಣು ನೊಣ ನಿಯಂತ್ರಣ ಬಗ್ಗೆ ಇನ್ನಷ್ಟು ಸಂಶೋಧನೆಗಳಾಗ ಬೇಕಿದೆ. ಮಾವಿನ ಮರದ ಸುತ್ತಲೂ ತುಳಸಿ ಗಿಡ ಬೆಳೆಸಿ ಅದಕ್ಕೆ ಬರುವ ನೊಣಗಳ ಮೇಲೆ  ಕಿಟನಾಶಕ ಸಿಂಪಡಿಸಿ ಬಹಳಷ್ಟು ಹಣ್ಣು ನೊಣಗಳನ್ನು  ಕೊಲ್ಲಬಹುದು. 

ಮಾಹಿತಿ: ರಾಧಾಕೃಷ್ಣ ಹೊಳ್ಳ