ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕು ಸರಕಾರಿ ಆಸ್ಪತ್ರೆ ಆಡಳಿತವು ಮಹಿಳೆಯೊಬ್ಬರಿಗೆ ಪತಿಯ ಮರಣ ಪ್ರಮಾಣ ಪತ್ರ ನೀಡಲು ಸತಾಯಿಸುತ್ತಿರುವುದು, ಅಲ್ಲಿನ ಆಡಳಿತ ವ್ಯವಸ್ಥೆಯ ಜಡತೆಗೆ ಹಿಡಿದ ಕನ್ನಡಿ ತನ್ನ ಪತಿಯ ಮರಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಮಹಿಳೆಗೆ ಅಲ್ಲಿನ ಸಿಬ್ಬಂದಿಯೊಬ್ಬರು ಮೊದಲು ದೋಷಪೂರಿತ ಪತ್ರ ನೀಡಿದ್ದಾರೆ. ಮೃತರ ತಾಯಿಯ ಹೆಸರನ್ನು ತಪ್ಪಾಗಿ ನಮೂದಿಸಿದ ಪರಿಣಾಮ, ಅದು ತಿರಸ್ಕೃತವಾಗಿದೆ. ಬಳಿಕ ಹೊಸ ಅರ್ಜಿ ಸಲ್ಲಿಸಿದಾಗ, ಪತಿಯ ಮರಣ ಪತ್ರ ನೀಡುವ ಬದಲು, ಅರ್ಜಿ ಸಲ್ಲಿಸಿದ ಮಹಿಳೆಯ ಹೆಸರಿಗೆ ತಾಲೂಕು ಆಸ್ಪತ್ರೆಯವರು ಮರಣ ಪತ್ರ ನೀಡಿದ್ದಾರೆ. ಅಂದರೆ, ಮರಣ ಪತ್ರ ನೀಡುವ ಪ್ರಕ್ರಿಯೆಯ ಹಂತದಲ್ಲಿ ಎರಡು ಎಡವಟ್ಟಿನ ಕೃತ್ಯವೆಸಲಾಗಿದೆ. ಸ್ವಸಹಾಯ ಸಂಘಕ್ಕೆ ಸಲ್ಲಿಸಿದಾಗಲೇ ಮಹಿಳೆಗೆ ಮರಣ ಪತ್ರದ ಎಡವಟ್ಟು ಗೊತ್ತಾಗಿದೆ. ತಕ್ಷಣ ಅವರು ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ. ಇದೆಲ್ಲಾ ನಡೆದ ವರ್ಷವಾದರೂ ಮಹಿಳೆಗೆ ತನ್ನ ಗಂಡನ ಮರಣ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗಿಲ್ಲ.

ಸರಕಾರಿ ಕಾರ್ಯಕಲಾಪಗಳು, ಪ್ರಕ್ರಿಯೆಗಳೆಲ್ಲವೂ ಗಣಕೀಕರಣಗೊಂಡಿರುವ ಈ ಹೊತ್ತಲ್ಲಿ ಮರಣ ಪ್ರಮಾಣ ಪತ್ರವೂ ಸೇರಿದಂತೆ ಯಾವುದೇ ಪ್ರಮಾಣ ಪತ್ರ ನೀಡುವುದಕ್ಕೆ ತಗಲುವ ಸಮಯ ಸೆಕೆಂಡ್‌ಗಳಷ್ಟೆ. ತನ್ನದೇ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿ ಯಾವ ದಿನ, ಯಾವ ಕಾರಣಕ್ಕಾಗಿ ಮೃತರಾದರು ಎಂಬ ಮಾಹಿತಿ ಬೆರಳ ತುದಿಯಲ್ಲಿ ಇರುತ್ತದೆ. ಸಂಬಂಧಿಸಿದ ಅರ್ಜಿ ಸ್ವರೂಪವೂ ಕಂಪ್ಯೂಟರಿನಲ್ಲಿ ಸಿದ್ಧವಾಗಿರುತ್ತದೆ. ದಾಖಲೆ ಪರಿಶೀಲಿಸಿ, ಸೆಕೆಂಡ್ ಲೆಕ್ಕದಲ್ಲಿ ನೀಡಬಹುದಾದ ಅರ್ಜಿಯನ್ನು ವಿಲೇವಾರಿ ಮಾಡಲು ಈಗಲೂ ನಮ್ಮ ಸರಕಾರಿ ವ್ಯವಸ್ಥೆ ವರ್ಷ ತೆಗೆದುಕೊಂಡಿದೆ. ಇದನ್ನು ಸೆಕೆಂಡ್ ಲೆಕ್ಕದಲ್ಲಿ ಹೇಳುವುದೇ ಆದರೆ ೩ ಕೋಟಿ ಸೆಕೆಂಡ್ ಗಳು ಕಳೆದರೂ ಮಹಿಳೆಗೆ ತನ್ನ ಗಂಡನ ಮರಣ ಪ್ರಮಾಣ ಪತ್ರ ಸಿಕ್ಕಿಲ್ಲ. ಇದು ವಿಳಂಬದ್ರೋಹದ ಪರಮಾವಧಿ ಅಲ್ಲದೇ ಇನ್ನೇನೂ ಅಲ್ಲ.

ಮರಣ ಪ್ರಮಾಣ ಪತ್ರ ಸಿಕ್ಕದೇ ಇರುವುದರಿಂದ ಆ ಮಹಿಳೆಗೆ ಜಾತಿ ಪ್ರಮಾಣ ಪತ್ರ ಸಿಕ್ಕಿಲ್ಲ, ಸ್ವಸಹಾಯ ಸಂಘದ ಯಾವುದೇ ಪ್ರಯೋಜನ ಪಡೆಯಲು ಸಾಧ್ಯವಾಗಿಲ್ಲ, ಸಂಬಂಧಿಸಿದ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ ಎಂದಷ್ಟೇ ತಾಲೂಕು ವೈದ್ಯಾಧಿಕಾರಿ ಹೇಳಿರುವುದು ಸಮಸ್ಯೆಗೆ ಪರಿಹಾರವಲ್ಲ, ಇದು ಕೇವಲ ಒಂದು ತಾಲೂಕು ಆಸ್ಪತ್ರೆಯ ಕಥೆಯಲ್ಲ, ನಮ್ಮ ಬಹುತೇಕ ಸರಕಾರಿ ಆಸ್ಪತ್ರೆಗಳು, ತಹಸೀಲ್ದಾರ್, ಎಸಿ, ಡಿಸಿ ಕಚೇರಿಗಳು-ಎಲ್ಲ ಕಡೆಯೂ ಇಂಥ ವಿಳಂಬದ್ರೋಹದ ವ್ಯಥೆಗಳು ಇದ್ದೇ ಇವೆ. ಸಕಾಲದಂಥ ಯೋಜನೆಗಳು ಇದ್ದರೂ ಏನೂ ಪ್ರಯೋಜನವಿಲ್ಲ. ಹಾಗಾಗಿ, ಈ ಘಟನೆಯನ್ನು ಯಾವುದೋ ಒಂದು ಪ್ರಕರಣ ಎಂದು ಕಡೆಗಣಿಸಬಾರದು. ಇಂಥವು ವರದಿಯಾದಾಗ ಸಂಬಂಧಿಸಿದ ಸರಕಾರಿ ಸೇವಕರಿಗೆ ಸರಿಯಾಗಿ ಬಿಸಿಮುಟ್ಟಿಸಬೇಕು. ಇಂಥ ಯೋಜನೆಗಳ ಪ್ರಯೋಜನ ಪಡೆಯುವ ಶ್ರೀಸಾಮಾನ್ಯರು ಕೂಡ ಸ್ವಲ್ಪ ಜಾಗೃತರಾಗಿ ವರ್ತಿಸಬೇಕು.

ಸರಕಾರಿ ನೌಕರರು ಅಲೆದಾಡಿಸಿದರೆ ಮೇಲಿನವರ ಗಮನಕ್ಕೆ ತರುವ ಕೆಲಸ ಮಾಡಬೇಕು. ಯಾರೂ ಈ ವ್ಯವಸ್ಥೆ ಬಗ್ಗೆ ಅಪನಂಬಿಕೆ ಇಡಬಾರದು. ಸೇವೆ ನೀಡುವುದು ಸರಕಾರಿ ನೌಕರರ ಕರ್ತವ್ಯ, ಅದನ್ನು ವಡೆಯುವುದು ಶ್ರೀಸಾಮಾನ್ಯರ ಹಕ್ಕು. ಈ ಪ್ರಜ್ಞೆಯನ್ನು ಇಟ್ಟುಕೊಂಡೇ ವ್ಯವಹರಿಸಬೇಕಿದೆ. ಮೊಳಕಾಲ್ಕುರು ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಮಹಿಳೆಗೆ ಕೂಡಲೇ ಅವರ ಗಂಡನ ಮರಣ ಪ್ರಮಾಣಪತ್ರ ನೀಡಿಸಬೇಕು. ಲೋಪವೆಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೨-೦೧-೨೦೨೬

ಚಿತ್ರ ಕೃಪೆ: ಇಂಟರ್ನೆಟ್ ತಾಣ