ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡವನ್ನು ಅನುಷ್ಠಾನಕ್ಕೆ ತರುವ ಮಾದರಿ ಕಾರ್ಯ ನಡೆಸಬೇಕಾದ ಸಚಿವಾಲಯದಲ್ಲಿಯೇ ಕನ್ನಡ ಹುದ್ದೆಗಳಿಗೆ ನೇಮಕಾತಿ ಆಗದೆ ಇರುವುದು ಕಳವಳಕಾರಿ. ವಿಧಾನಸೌಧದಿಂದ ಕಾರ್ಯ ನಿರ್ವಹಿಸುವ ವಿವಿಧ ಇಲಾಖೆಗಳಲ್ಲಿ ನೂರಾರು ಕನ್ನಡ ಬೆರಳಚ್ಚುಗಾರರು ಹಾಗೂ ಶೀಘ್ರ ಲಿಪಿಗಾರರ ಹುದ್ದೆಗಳು ಖಾಲಿ ಇವೆ. ಕಳೆದ ಐದಾರು ವರ್ಷಗಳಿಂದ ನೇಮಕಾತಿ ನಡೆಯದೆ ಇರುವುದು ವಿಪರ್ಯಾಸ, ಇದರ ಜತೆಗೆ ವಿವಿಧ ಇಲಾಖೆಗಳಲ್ಲಿ ಸಾವಿರಾರು ಇತರ ಹುದ್ದೆಗಳು ಕೂಡ ಖಾಲಿ ಇರುವುದು ತುರ್ತಾಗಿ ಗಮನ ಹರಿಸಬೇಕಾಗಿರುವ ವಿಷಯ.
ಆಡಳಿತ ಯಂತ್ರ ಸುಲಲಿತವಾಗಿ ಕೆಲಸ ಮಾಡಬೇಕಾದರೆ ವಿವಿಧ ಹಂತಗಳಲ್ಲಿ ಸಿಬಂದಿ, ಅಧಿಕಾರಿಗಳು ಕಾರ್ಯನಿರತವಾಗಿರುವುದು ಅಗತ್ಯ. ಅದಕ್ಕಾಗಿ ಅಗತ್ಯವಿದ್ದಷ್ಟು ಹುದ್ದೆಗಳನ್ನು ಸೃಷ್ಟಿಸಲಾಗಿರುತ್ತದೆ. ನಿವೃತ್ತಿ ಸಹಿತ ವಿವಿಧ ಕಾರಣಗಳಿಂದಾಗಿ ಹುದ್ದೆಗಳು ತೆರವಾದರೆ ಸಾಧ್ಯವಾದಷ್ಟು ಬೇಗನೆ ಭರ್ತಿ ಮಾಡಬೇಕು. ಹುದ್ದೆಗಳು ಖಾಲಿ ಉಳಿದರೆ ಆಡಳಿತ ಯಂತ್ರ ಕುಂಟುತ್ತದೆ, ಅಂತಿಮವಾಗಿ ಹೊರೆ ಜನಸಾಮಾನ್ಯನ ಮೇಲೆ ಬೀಳುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಸರಕಾರದ ಮಟ್ಟದಲ್ಲಿ ಆಗುವ ನಿರ್ಧಾರಗಳು, ನೀತಿ ನಿರ್ಣಯಗಳ ಸೂಚನೆಗಳನ್ನು ಕೆಳಹಂತದ ಅಧಿಕಾರಿ ಮತ್ತು ಸಿಬಂದಿ ಮೂಲಕ ಸಾರ್ವಜನಿಕರಿಗೆ ತಲುಪಿಸುವಲ್ಲಿ ಶೀಘ್ರ ಲಿಪಿಕಾರರು ಮತ್ತು ಬೆರಳ ಚುಕಾರರು ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಈ ಹುದ್ದೆ ಅನೇಕ ವರ್ಷಗಳಿಂದ ಭರ್ತಿಯಾಗದೆ ಇಲಾಖಾ ಪ್ರಗತಿ ಮಂದಗತಿಯಾಗಿದೆ.
೪೦ಕ್ಕೂ ಅಧಿಕ ಇಲಾಖೆಗಳಲ್ಲಿ ಕನ್ನಡ ಶೀಘ್ರ ಲಿಪಿಕಾರರ ೨೨೮, ಹಿರಿಯ ಶೀಘ್ರ ಲಿಪಿಕಾರರ ೪೯ ಹುದ್ದೆ ಸಹಿತ ಒಟ್ಟು ೨೭೭ ಹುದ್ದೆಗಳು ಹಾಗೂ ಬೆರಳಚ್ಚುಕಾರರ ೨೭೫ ಮತ್ತು ಹಿರಿಯ ಬೆರಳಚ್ಚುಕಾರರ ೯ ಸಹಿತ ಒಟ್ಟು ೨೮೪ ಹುದ್ದೆಗಳು ಖಾಲಿ ಇವೆ. ಶೀಘ್ರ ಲಿಪಿಕಾರರು ಮತ್ತು ಬೆರಳಚ್ಚುಕಾರರ ಒಟ್ಟು ೫೬೧ ಹುದ್ದೆಗಳು ಖಾಲಿ ಇವೆ. ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ೨೮ ಶೀಘ್ರ ಲಿಪಿಕಾರರು ಮತ್ತು ೫೭ ಬೆರಳಚ್ಚುಕಾರರ ಸಹಿತ ೮೫ ಹುದ್ದೆಗಳು ಖಾಲಿ ಇವೆ. ಹಲವು ವರ್ಷಗಳಿಂದ ನೇಮಕಾತಿ ನಡೆಯದೇ ಇರುವುದರಿಂದ ಶೀಘ್ರ ಲಿಪಿಕಾರರಾಗಿ ತರಬೇತಿ ಪಡೆಯುವವರು ಕೂಡ ಆಸಕ್ತಿ ಕಳೆದುಕೊಳ್ಳುತ್ತಾರೆ. ಈ ರೀತಿಯಾದರೆ ಅದು ಮುಂದೊಂದು ದಿನ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ
ಕೇವಲ ಶೀಘ್ರ ಲಿಪಿಕಾರರು ಮತ್ತು ೫೭ ಬೆರಳಚ್ಚುಕಾರರ ಹುದ್ದೆಗಳಷ್ಟೇ ಅಲ್ಲ ಮೀಸಲಾತಿ ಗೊಂದಲ ಮತ್ತಿತರ ಕಾರಣಗಳಿಂದ ಅನೇಕ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಭರ್ತಿಯಾಗದೆ ಇವೆ. ಕಾಯಂ ಭರ್ತಿ ಸಾಧ್ಯವಾಗದೆ ಗುತ್ತಿಗೆ ನೌಕರರು, ಹಂಗಾಮಿ ಸಿಬಂದಿಯ ಬಲದಿಂದ ಅನೇಕ ಇಲಾಖೆಗಳಲ್ಲಿ ಕಾರ್ಯನಿರ್ವಹಣೆ ನಡೆಯುತ್ತಿದೆ. ಇದು ಆಡಳಿತ ದಕ್ಷತೆಗೂ ಸವಾಲೇ ಸರಿ. ಮೀಸಲಾತಿ-ಒಳಮೀಸಲಾತಿ ಗೊಂದಲವು ಅನೇಕ ಇಲಾಖೆಗಳಲ್ಲಿ ನೇಮಕಾತಿಗೆ ಅಡ್ಡಿಯಾಗಿದೆ. ಇದರ ನಡುವೆಯೇ ಸರಕಾರವು ಇತ್ತೀಚೆಗೆ ೨೦೨೭ರ ಡಿ. ೩೧ರ ವರೆಗಿನ ನೇರ ನೇಮಕಾತಿಗಳಿಗೆ ವಯೋಮಿತಿ ಸಡಿಲಿಸಿದ್ದು ಉತ್ತಮ ಕ್ರಮ. ಇದರಿಂದ ವಯಸ್ಸಿನ ಕಾರಣದಿಂದ ಅವಕಾಶ ವಂಚಿತರಾಗುವ ಅನೇಕ ಮಂದಿ ನೇಮಕಾತಿಗೆ ಅರ್ಹವಾಗುವಂತಾಗಿದೆ.
ಸರಕಾರವು ಇನ್ನುಳಿದ ಹುದ್ದೆಗಳ ನೇಮಕಾತಿಗೆ ಕೂಡ ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ. ಇದರಿಂದ ಸಾವಿರಾರು ಮಂದಿಗೆ ಸರಕಾರಿ ಉದ್ಯೋಗ ಪ್ರಾಪ್ತಿಯಾಗುವುದಷ್ಟೇ ಅಲ್ಲ ವಿವಿಧ ಇಲಾಖೆಗಳ ಕಾರ್ಯನಿರ್ವಹಣೆ ಸುಗಮವಾಗುವಂತಾಗುತ್ತದೆ ದಕ್ಷ ಆಡಳಿತವನ್ನು ನೀಡುವ ವಿಷಯದಲ್ಲಿ ಈ ಆಯಾಮವೂ ಸೇರಿರುವುದನ್ನು ಸಂಬಂಧಿತರು ಗಮನಿಸಿ ಕಾರ್ಯೋನ್ಮುಖರಾಗಬೇಕಾಗಿದೆ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೭-೦೧-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!