೧೮೯೬ ಜನವರಿ ೩೧ರಂದು ಧಾರವಾಡದ ಶಿರಹಟ್ಟಿಯಲ್ಲಿ ರಾಮಚಂದ್ರ ಭಟ್ಟ ಮತ್ತು ಅಂಬಿಕೆ (ಅಂಬವ್ವ) ದಂಪತಿಗಳಿಗೆ ಜನಿಸಿದ ದತ್ತಾತ್ರೇಯ ರಾಮಚಂದ್ರ ಅವರು "ವರ ಕವಿ" ಎಂದೇ ಪ್ರಸಿದ್ಧರು. ಬೇಂದ್ರೆ ಮನೆತನದ ಮೂಲ ಹೆಸರು *ಠೋಸರ*. ಇವರದ್ದು ವೈದಿಕ ವೃತ್ತಿಯ ಕುಟುಂಬ ಇವರ ಕಾವ್ಯನಾಮ ‘ಅಂಬಿಕಾತನಯದತ್ತ’ ೧೯೧೯ರಲ್ಲಿ ರಾಣೆಬೆನ್ನೂರಿನ ಲಕ್ಷ್ಮಿ ಎನ್ನುವವರೊಂದಿಗೆ ಇವರ ವಿವಾಹವಾಯಿತು .

ಇವರು ಮೂಲತಃ ಶಿಕ್ಷಕ ವೃತ್ತಿಯಲ್ಲಿದ್ದರೂ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮ ಕೃತಿಗಳನ್ನು ರಚಿಸಿದ್ದಾರೆ .ಪ್ರಮುಖವೆಂದರೆ ಕಥೆ, ಕವನ, ವಿಮರ್ಶೆ, ಅನುವಾದ, ನಾಟಕಗಳು ಸಂಶೋಧನಾತ್ಮಕ ಲೇಖನಗಳು ಇತ್ಯಾದಿಗಳು.

ಇವರ ೨೭ ಕವನ ಸಂಕಲನಗಳು ಪ್ರಕಟವಾಗಿವೆ. ೧೪ ನಾಟಕಗಳು ಮತ್ತು ೧0 ವಿಮರ್ಶಾ ಗ್ರಂಥಗಳನ್ನು ಸಹ ಬರೆದಿದ್ದಾರೆ. ಇದಲ್ಲದೆ ಬೇಂದ್ರೆಯವರು ಮರಾಠಿಯಲ್ಲೂ ಕೆಲವು ಅಮೂಲ್ಯ ಗ್ರಂಥಗಳನ್ನು ರಚಿಸಿದ್ದಾರೆ ಮತ್ತು ಹಲವು ಗ್ರಂಥಗಳನ್ನು ಅನುವಾದಿ ಸಿದ್ದಾರೆ. ಅವರ ಕೃತಿಗಳನ್ನು ಅವಲೋಕಿಸಿದಾಗ ಬದುಕನ್ನು ಅದರ ಆಳ, ವಿಸ್ತಾರ ಹಾಗೂ ವೈವಿಧ್ಯವನ್ನು ಕಂಡ ಮಹಾ ಪ್ರತಿಭೆಯೊಂದು ನಮಗೆ ಎದುರಾಗುತ್ತದೆ. ಕನ್ನಡದ ಕಾವ್ಯ ಪ್ರಕಾರವನ್ನು ಗೌರವಾನ್ವಿತ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಕೊಡುಗೆ ಅಪಾರ. ''ದಾರ್ಶನಿಕತೆ'  ಇವರ ಕೃತಿಗಳಲ್ಲಿನ ವಿಶೇಷತೆ ಎನ್ನಬಹುದು. 

ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿ ಏರಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು. ಇವರು ಕವಿಗಳಿಗೆ ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ.ಎಲ್ಲ ಕಾಲಕ್ಕೂ ಬಾಳುವಂತಹ ಸಾಹಿತ್ಯ ರಚಿಸಿದ ಕೀರ್ತಿ ಅವರದು. ಇವರನ್ನು *ಕನ್ನಡದ ಠಾಗೋರ್* ಎಂದು ಕರೆಯಲಾಗುತ್ತದೆ.ಖಲೀಲ್ ಗಿಬ್ರಾನ್, ಶ್ರೀ ಅರವಿಂದರು, ರವೀಂದ್ರನಾಥ ಟಾಗೂರರು ಇವರ ಮೇಲೆ ಪ್ರಭಾವ ಬೀರಿದವರಲ್ಲಿ ಪ್ರಮುಖರು. 

ಇವರ ಪ್ರಮುಖ ರಚನೆಗಳೆಂದರೆ ಕೃಷ್ಣ ಕುಮಾರಿ, ಸಖೀ ಗೀತ, ಅರಳುಮರಳು, ನಾಲ್ಕು ತಂತಿ, ಮತ್ತೆ ಶ್ರಾವಣ ಬಂತು ಇತ್ಯಾದಿ,,ಇತ್ಯಾದಿ.  ಇವರ "ನಾಕುತಂತಿ" ಕವನ ಸಂಕಲನಕ್ಕೆ ೧೯೭೩ ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರಕಿತು, ಕುವೆಂಪು ನಂತರ ಕನ್ನಡದ ಎರಡನೆಯ "ಜ್ಞಾನ ಪೀಠ" ಪ್ರಶಸ್ತಿ ಇವರ ಪಾಲಾಯಿತು. ೧೯೪೩ ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರಿಗೆ ಅನೇಕ ಪ್ರಶಸ್ತಿಗಳು ಇವರನ್ನರಸಿ ಬಂದವು. ೧೯೬೮ರಲ್ಲಿ ಕರ್ನಾಟಕ ವಿ.ವಿ.ಯಿಂದ ಡಾಕ್ಟರೇಟ್ ಪದವಿ, ೧೯೭೬ರಲ್ಲಿ ಕಾಶಿಯ ವಿದ್ಯಾಪೀಠದಿಂದ ಗೌರವ ಡಾಕ್ಟರೇಟ್, ೧೯೬೮ರಲ್ಲಿ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ೧೯೫೮ ರಲ್ಲಿ ಅವರ 'ಅರಳು ಮರಳು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಶಿಫ್ ಪಡೆದರು ತಮ್ಮ ೮೫ನೇ ವಯಸ್ಸಿನಲ್ಲಿ ೨೬/೧೦/೧೯೮೧ ರಲ್ಲಿ ಮುಂಬೈಯಲ್ಲಿ ಮರಣ ಹೊಂದಿದರು. ಕನ್ನಡದ ಹಿರಿಯ ಚೇತನಕ್ಕೆ ಅವರ ಹುಟ್ಟು ಹಬ್ಬದ (ಜನವರಿ ೩೧) ಸಂದರ್ಭದಲ್ಲಿ ನಮ್ಮೆಲ್ಲರ ಹೃದಯಪೂರ್ವಕ ನಮನಗಳು.

~ಸಂಪಿಗೆ ವಾಸು, ಬಳ್ಳಾರಿ