ಓರ್ವ ಸಿರಿವಂತನ ಮನೆಯ ಹಿತ್ತಲದ ಗಿಡದಲ್ಲಿ ಕಾಗೆಯು ಒಂದು ಮುಳ್ಳಿನ ಗೂಡನ್ನು ಕಟ್ಟಿ ನಾಲ್ಕು ತತ್ತಿ ಇಟ್ಟು ಮಕ್ಕಳ ಬರುವಿಗಾಗಿ ದಾರಿ ಕಾಯುತ್ತಿತ್ತು. ಅದನ್ನು ನೋಡಿದ ಸಿರಿವಂತನು ಕಾಗೆಗೆ ಕೇಳಿದ “ನನ್ನ ಮನೆ ನೋಡು ಎಷ್ಟು ಭವ್ಯವಾಗಿದೆ. ನಿನ್ನ ಈ ಮುಳ್ಳಿನ ಗೂಡಿಗೆ ಯಾರಾದರೂ ಮನೆ ಎನ್ನುತ್ತಾರೆಯೇ ? ಕಾಗೆ ಹೇಳಿತು. “ಸಿರಿವಂತರೆ, ನನ್ನ ಮನೆ ಮುಳ್ಳಿನದಿರಬಹುದು ಆದರೆ ಅದನ್ನು ನಾನೇ ಪರಿಶ್ರಮದಿಂದ ಕಟ್ಟಿದ್ದೇನೆ. ನಿಮ್ಮ ಮನೆ ನೀವು ಕಟ್ಟಿದ್ದಲ್ಲ, ಯಾರೋ ಕಟ್ಟಿದ ಮನೆಗೆ ನನ್ನ ಮನೆ ಎನ್ನುತ್ತಿದ್ದೀರಿ" ಕಾಗೆಯ ಮಾತು ಕೇಳಿ ಸಿರಿವಂತನ ಕಣ್ಣು ತೆರೆಯಿತು. ಕಾಗೆಗೆ ಇರುವ ವಿಶಾಲಭಾವ ಸಂತೃಪ್ತಿ ನನಗೆ ಬರುವುದು ಯಾವಾಗ ಎಂದು ಚಿಂತನೆಗೆ ತೊಡಗಿದ.
ನಮ್ಮ ಮಗು ಪರೀಕ್ಷೆಯಲ್ಲಿ ನೂರಕ್ಕೆ ೯೦ ಅಂಕ ಗಳಿಸಿದೆ ಎಂದು ಕೇಳಿದಾಗ ನಮಗೆ ಸಂತಸವಾಗುತ್ತದೆ. ಆದರೆ ನೆರೆಮನೆಯವರ ಮಗು ನೂರಕ್ಕೆ ೯೫ ಗಳಿಸಿದೆ ಎಂದು ಕೇಳಿದ ತಕ್ಷಣ ನಮ್ಮ ಸಂತಸ ಮಾಯವಾಗಿ ಬಿಡುತ್ತದೆ. ಆಶೆ, ಅಮಿಷಗಳನ್ನು ಕಳೆದುಕೊಂಡು ಯಾವಾಗ ಎಲ್ಲರೂ ನನ್ನವರು, ಎಲ್ಲವೂ ನನ್ನದು ಎಂಬ ಭಾವವು ಒಡಮೂಡುತ್ತದೆಯೋ ಅದೇ ಕ್ಷಣ ನಮ್ಮ ಮನ ಘನಮನ ಆಗುತ್ತದೆ. ಇದುವೆ ಸದ್ಗುರುಗಳು ತೋರುವ ದಿವ್ಯ ಸಾಧನಾಪಥ.
(ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಪ್ರವಚನ ಮಾಲಿಕೆಯಿಂದ)
(ಸಂಗ್ರಹ) ಸಂತೋಷ್ ಕುಮಾರ್ ಸುರತ್ಕಲ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!