ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರವಿವಾರ ಮಂಡಿಸಿದ ೨೦೨೬-೨೭ನೇ ಸಾಲಿನ ಬಜೆಟ್‌ ನಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸಲು ಸುಭದ್ರ ಅಡಿಪಾಯವನ್ನು ನಿರ್ಮಿಸಲು ಮುಂದಡಿ ಇರಿಸಿದ್ದಾರೆ. ದೇಶದ ಪ್ರಗತಿ ಮತ್ತು ಜನತೆಯ ಭವಿಷ್ಯವನ್ನು ಹಸನಾಗಿಸುವ ದಿಸೆಯಲ್ಲಿ ಮಹತ್ವದ ಉಪಕ್ರಮ ಮತ್ತು ಯೋಜನೆಗಳನ್ನು ಈ ಬಜೆಟ್ ಒಳಗೊಂಡಿದೆ. ಸುಧಾರಣೆ ಮತ್ತು ದೂರಗಾಮಿ ಚಿಂತನೆಗಳಿಂದ ತುಂಬಿರುವ ಈ ಬಜೆಟ್ ಬಹುತೇಕ ಎಲ್ಲ ವಲಯಗಳನ್ನೂ ಸ್ಪರ್ಶಿಸಿದೆ.

ದೇಶದ ಜನಸಾಮಾನ್ಯರು ಮತ್ತು ಮಧ್ಯಮವರ್ಗದ ಜನತೆಗೆ ದಿಢೀರ್ ಆಗಿ ಯಾವುದೇ ಮಹತ್ವದ ಪ್ರಯೋಜನ ತಂದುಕೊಡುವಂತಹ ಯೋಜನೆ ಅಥವಾ ಘೋಷಣೆಗಳನ್ನು ಈ ಬಜೆಟ್ ಹೊಂದಿರದಿರುವುದರಿಂದ ಈ ಬಜೆಟ್ ಈ ವರ್ಗಗಳ ಜನರಿಗೆ ಒಂದಿಷ್ಟು ನಿರಾಸೆ ಮೂಡಿಸುವಂತಿದ್ದರೂ ದೇಶದ ಅಭಿವೃದ್ಧಿ ಮತ್ತು ಭವಿತವ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾದ ಪಾತ್ರ ವಹಿಸಲಿರುವುದಂತೂ ನಿಶ್ಚಿತ.

ಈ ಮುಂಗಡಪತ್ರದಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗ, ತಂತ್ರ ಜ್ಞಾನ, ರಕ್ಷಣೆ, ಕೈಗಾರಿಕೆ, ಮೂಲಸೌಕರ್ಯ, ಸಾರಿಗೆ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದ್ದು, ಪ್ರಕಟಿಸಲಾಗಿರುವ ಪ್ರತಿಯೊಂದು ಯೋಜನೆಗಳಲ್ಲೂ ಸರಕಾರದ ದೂರದೃಷ್ಟಿತ್ತ ಪ್ರತಿಬಿಂಬಿತವಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಜಾಗತಿಕ ಅನಿಶ್ಚಿತತೆಯ ಹೊರತಾಗಿಯೂ ತನ್ನ ಬಿಗಿ ನಿಲುವು ಮತ್ತು ಸುಧಾರಣ ಕ್ರಮಗಳಿಂದಾಗಿ ದೇಶದ ಆರ್ಥಿಕತೆಯನ್ನು ಪ್ರಗತಿಪಥದಲ್ಲಿ ಮುನ್ನಡೆಸುವಲ್ಲಿ ಯಶಸ್ವಿಯಾಗಿರುವ ಕೇಂದ್ರ ಸರಕಾರ ಈ ಬಜೆಟ್ ನಲ್ಲೂ ಅದೇ ಹಾದಿಯನ್ನು ತುಳಿದಿದೆ. ಇದೇ ವೇಳೆ ದೇಶದ ಜನತೆಯ ಹಿತವನ್ನು ಕಾಯ್ದುಕೊಳ್ಳುವತ್ತಲೂ ಲಕ್ಷ್ಯ ಹರಿಸಿದ್ದು ದೂರಗಾಮಿ ಪರಿಣಾಮ ಬೀರಬಲ್ಲ ಒಂದಿಷ್ಟು ಪರಿಣಾಮಕಾರಿ ಯೋಜನೆಗಳನ್ನು ಘೋಷಿಸಿದೆ.

ಪ್ರಸಕ್ತ ಸಾಲಿನಲ್ಲಿ ದೇಶದ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ರಾಜ್ಯಗಳತ್ತ ಹಣಕಾಸು ಸಚಿವರು ತಮ್ಮ ದೃಷ್ಟಿಯನ್ನು ಹರಿಸಿರುವರಾದರೂ ಅಂತಹ ಮಹತ್ತರವಾದ ಘೋಷಣೆಗಳನ್ನು ಮಾಡದಿರುವ ಮೂಲಕ ಜಾಣೆ ಮೆರೆದಿದ್ದಾರೆ. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಪಣತೊಟ್ಟಿರುವ ಕೇಂದ್ರ ಸರಕಾರ ಈ ಬಾರಿಯೂ ಆ ರಾಜ್ಯಗಳಿಗೆ ಸೀಮಿತವಾಗಿ ಹೊಸ ಯೋಜನೆಗಳನ್ನು ಘೋಷಿಸುವ ಮೂಲಕ ದೇಶದ ಎಲ್ಲ ಮೂಲೆಗಳನ್ನು ತಲುಪುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿರುವುದು ಶ್ಲಾಘನೀಯ.

ಮೂಲಸೌಕರ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದರೆ ದೇಶದ ಕರಾವಳಿ ಪ್ರದೇಶಗಳಲ್ಲಿ ಬಂದರು, ಶಿಪ್ ಯಾರ್ಡ್‌ ಗಳ ನಿರ್ಮಾಣ ಮತ್ತು ಅಭಿವೃದ್ಧಿ ಮೀನುಗಾರಿಕ ವಲಯಕ್ಕೆ ವಿಶೇಷ ಒತ್ತು ನೀಡಲಾಗಿದೆ. ಪ್ರಮುಖ ನಗರಗಳ ನಡುವೆ ಹೈಸ್ಪೀಡ್ ರೈಲು ಓಡಾಟದ ಘೋಷಣೆ ಮಾಡಲಾಗಿದೆ. ಕೃಷಿ ಕ್ಷೇತ್ರಕ್ಕೂ ಒಂದಿಷ್ಟು ಯೋಜನೆಯನ್ನು ಘೋಷಿಸಲಾಗಿದ್ದರೂ ದೇಶದ ಆರ್ಥಿಕತೆ ಮತ್ತು ಬಹುಪಾಲು ಜನತೆಯ ಜೀವನಾಧಾರವಾಗಿರುವ ಕೃಷಿಗೆ ಇನ್ನಷ್ಟು ಹೆಚ್ಚಿನ ಬಲವನ್ನು ತುಂಬುವ ಪ್ರಯತ್ನ ಸರಕಾರದಿಂದಾಗಬೇಕಿತ್ತು. ವೈದ್ಯಕೀಯ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮ ಅಭಿವೃದ್ಧಿಯೋಜನೆಗಳನ್ನು ಕೂಡ ಒಳಗೊಂಡಿದೆ. ಹಿಮಾಲಯದ ತಪ್ಪಲಲ್ಲಿರುವ ಪ್ರದೇಶಗಳಿಗೂ ರೈಲು ಸಂಪರ್ಕವನ್ನು ಒದಗಿಸಲು ಮುಂದಾಗಿರುವುದು ಈ ಬಜೆಟ್‌ ನ ಮತ್ತೊಂದು ಪ್ರಮುಖ ಅಂಶ.

ಆದಾಯ ಮತ್ತು ವೆಚ್ಚದ ನಡುವೆ ಸಮತೋಲನ ಕಾಯ್ದುಕೊಳ್ಳುವಲ್ಲಿ ಹಣ ಕಾಸು ಸಚಿವರು ಸಫಲರಾಗಿದ್ದು ಆ ಮೂಲಕ ವಿತ್ತೀಯ ಶಿಸ್ತನ್ನು ಕಾಯ್ದುಕೊಂಡು ದೇಶದ ಆರ್ಥಿಕತೆ ಹಳಿ ತಪ್ಪದಂತೆ ಎಚ್ಚರ ವಹಿಸಿರುವುದು ಸುಸ್ಪಷ್ಟ ಜಾಗತಿಕ ಅನಿ ಸ್ಥಿತತೆಗಳು, ವಿಶ್ವದ ಕೆಲವು ರಾಷ್ಟ್ರಗಳಲ್ಲಿನ ಭೌಗೋಳಿಕ-ರಾಜಕೀಯ ಬೆಳವಣಿಗೆ ಗಳಿಂದಾಗಿ ವಿಶ್ವದ ರಾಷ್ಟ್ರಗಳ ಆರ್ಥಿಕತೆ ಇನ್ನೂ ಆಮೆಗತಿಯಲ್ಲಿರುವ ಹಿನ್ನೆಲೆ ಯಲ್ಲಿ ಹಣಕಾಸು ಸಚಿವರು ಜನಪ್ರಿಯತೆಗೆ ಮಣೆ ಹಾಕದೆ ದೇಶವನ್ನು ಪ್ರಗತಿ ಪಥದಲ್ಲಿ ಮುನ್ನಡೆಸುವಂತಹ ಮುಂಗಡಪತ್ರವನ್ನು ದೇಶದ ಜನತೆಯ ಮುಂದಿರಿಸಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೨-೦೨-೨೦೨೬

ಚಿತ್ರ ಕೃಪೆ: ಅಂತರ್ಜಾಲ ತಾಣ