ಇಡೀ ದೇಶ ಇಂದು ಇತಿಹಾಸದಲ್ಲೇ ಕಾಣದಂತಹ ಗಂಭೀರ ಜಲ ಸಂಕಷ್ಟದ ಹೊಸ್ತಿಲಲ್ಲಿ ಬಂದು ನಿಂತಿದೆ. ಪ್ರತಿ ವರ್ಷ ಬೇಸಿಗೆ ಆರಂಭಕ್ಕೂ ಮುನ್ನವೇ ಬತ್ತಿ ಹೋಗುವ ಬೋರ್ವೆಲ್ಗಳು, ಟ್ಯಾಂಕರ್ ನೀರಿಗಾಗಿ ಸಾಲು ನಿಂತ ಜನಸಾಮಾನ್ಯರು, ಕೈಕೊಡುತ್ತಿರುವ ಅಂತರ್ಜಲ ಮಟ್ಟ ಮುಂತಾದ ಸಂಗತಿಗಳು ಭವಿಷ್ಯದ ಬಗ್ಗೆ ಆತಂಕಕಾರಿ ಮುನ್ಸೂಚನೆ ನೀಡುತ್ತಿವೆ. ಈ ಜಲಕ್ಷಾಮ ಕೇವಲ ನೈಸರ್ಗಿಕ ವಿಕೋಪವಲ್ಲ, ಇದು ನಮ್ಮ ದಶಕಗಳ ಕಾಲದ ಬೇಜವಾಬ್ದಾರಿ ಮತ್ತು ಅವೈಜ್ಞಾನಿಕ ನಗರೀಕರಣದ ಫಲ. ನಾವು ಇಂದು ಅನುಭವಿಸುತ್ತಿರುವ ನೀರಿನ ಅಭಾವ ವ್ಯವಸ್ಥಿತ ನಿರ್ಲಕ್ಷ್ಯದ ಪ್ರತಿಬಿಂಬ.
ಜಾಗತಿಕ ತಾಪಮಾನ ಏರಿಕೆ ಮಳೆಯ ವಿನ್ಯಾಸವನ್ನು ಬದಲಿಸಿರುವುದು ನಿಜವಾದರೂ ನಮ್ಮ ಸುತ್ತಮುತ್ತಲಿನ ಜಲಮೂಲಗಳನ್ನು ನಾವು ಹೇಗೆ ನಿರ್ವಹಿಸಿದ್ದೇವೆ ಎಂಬುದು ಕೂಡ ಮುಖ್ಯವಾಗುತ್ತದೆ. ಒಂದು ಕಾಲದಲ್ಲಿ 'ಸಾವಿರ ಕೆರೆಗಳ ನಗರ' ಎನಿಸಿಕೊಂಡಿದ್ದ ಬೆಂಗಳೂರು ಸಹ ಈಗ ನೀರಿಗಾಗಿ ಬಿಡುವಂತಾಗಿದೆ. ಹಲವಾರು ದೊಡ್ಡ ನಗರಗಳಲ್ಲಿ ಇಂದು ಬಹುತೇಕ ಕೆರೆಗಳು ಒತ್ತುವರಿಯಾಗಿವೆ. ಅವೆಲ್ಲವೂ ಕಾಂಕ್ರೀಟ್ ಕಾಡುಗಳಾಗಿ ಮಾರ್ಪಟ್ಟಿವೆ. ಕೆರೆಗಳು ಕೇವಲ ನೀರಿನ ಮೂಲಗಳಲ್ಲ. ಅವು ಅಂತರ್ಜಲವನ್ನು ಮರುಪೂರಣ ಮಾಡುವ ಶ್ವಾಸಕೋಶಗಳು. ಶ್ವಾಸಕೋಶಗಳನ್ನೇ ಮುಚ್ಚಿ ಹಾಕಿದ ಮೇಲೆ ನೆಲದ ಅಡಿಯಲ್ಲಿ ನೀರು ಸಿಗುವುದನ್ನು ನಿರೀಕ್ಷಿಸುವುದಾದರೂ ಹೇಗೆ? ಸೌರ ವಿದ್ಯುತ್ ಬಳಕೆ, ಮಳೆನೀರು ಕೊಯ್ಲುನಂತಹ ವಿವಿಧ ಯೋಜನೆಗಳು ಕೇವಲ ಕಾಗದದ ಮೇಲಿನ ಕಡ್ಡಾಯ ನಿಯಮಗಳಾಗಿ ಉಳಿದಿವೆಯೇ ಹೊರತು, ಎಲ್ಲಿಯೂ ಅವುಗಳ ಅನುಷ್ಠಾನದಲ್ಲಿ ಗಂಭೀರತೆ ಕಾಣುತ್ತಿಲ್ಲ. ಈ ವಿಷಯದಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ನೀತಿ ಆಯೋಗದ ವರದಿಗಳ ಪ್ರಕಾರ, ದೇಶದ ಪ್ರಮುಖ ನಗರಗಳಲ್ಲಿ ಅಂತರ್ಜಲ ಸದ್ಯೋಭವಿಷ್ಯದಲ್ಲಿ ಶೂನ್ಯ ಮಟ್ಟಕ್ಕೆ ತಲುಪುವ ಅಪಾಯವಿದೆ. ಅತಿಯಾದ ಅಂತರ್ಜಲ ಬಳಕೆ ಮತ್ತು ಅದನ್ನು ಮರುಪೂರಣ ಮಾಡುವಲ್ಲಿ ತೋರಿಸುತ್ತಿರುವ ನಿರ್ಲಕ್ಷ್ಯ ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡನ್ನೂ ಸಮಾನವಾಗಿ ಕಾಡುತ್ತಿದೆ. ಕೃಷಿ ಕ್ಷೇತ್ರದಲ್ಲಿನ ಅಸಮತೋಲಿತ ನೀರಾವರಿ ಪದ್ಧತಿ ಮತ್ತು ನಗರಗಳಲ್ಲಿನ ಅನಿಯಂತ್ರಿತ ಕೊಳವೆ ಬಾವಿಗಳ ಸಂಖ್ಯೆ ಈಗ ಭೂಮಿಯೊಳಗಿನ ಕೊನೆಯ ಹನಿ ನೀರನ್ನೂ ಹೀರುತ್ತಿದೆ. ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯದಿಂದ ನಿರಂತರವಾಗಿ ಕಲುಷಿತಗೊಳ್ಳುತ್ತಿರುವ ನದಿಗಳು ಬಳಕೆಗೆ ಯೋಗ್ಯವಲ್ಲ ಎಂಬಂತಾಗಿರುವುದು ಈ ಸಂಕಷ್ಟವನ್ನು ಇನ್ನಷ್ಟು ಜಟಿಲಗೊಳಿಸಿದೆ.
ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ಜಲಮೂಲಗಳ ಪುನಶ್ಚೇತನಕ್ಕೆ ಮತ್ತು ಅಂತರ್ಜಲದ ಮರುಪೂರಣಕ್ಕೆ ಯುದ್ದೋಪಾದಿಯಲ್ಲಿ ಕ್ರಮ ಕೈಗೊಳ್ಳುವುದು ನಮ್ಮ ಮುಂದೆ ಕೇವಲ ಆಯ್ಕೆಯಾಗಿ ಉಳಿದಿಲ್ಲ, ಅದು ಅನಿವಾರ್ಯತೆಯಾಗಿ ಪರಿಣಮಿಸಿದೆ. ಸರ್ಕಾರಗಳು ಕೇವಲ ಯೋಜನೆಗಳನ್ನು ಘೋಷಿಸಿದರೆ ಸಾಲದು. ಕೆರೆಗಳ ಹೂಳೆತ್ತುವಿಕೆ, ಕಾಲುವೆಗಳ ಸ್ವಚ್ಛತೆ ಮತ್ತು ಪ್ರತಿ ಮನೆಯಲ್ಲಿ ಮಳೆನೀರು ಕೊಯ್ದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.
ನೀರಿನ ಮಿತ ಬಳಕೆ ಮತ್ತು ಮರುಬಳಕೆಯ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ ಇದು ಕೇವಲ ಸರ್ಕಾರದ ಹೊಣೆಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ನಾವು ಇಂದು ನೀರನ್ನು ಉಳಿಸುವಲ್ಲಿ ವಿಫಲರಾದರೆ, ಮುಂದಿನ ಪೀಳಿಗೆಗೆ ನಾವು ಬಂಜರು ಭೂಮಿಯನ್ನು ಕೊಟ್ಟು ಹೋಗುತ್ತೇವೆ. ಕುಡಿಯುವ ನೀರಿಗಾಗಿ ಯುದ್ಧ ಮಾಡುವ ಭೀಕರ ಸನ್ನಿವೇಶವನ್ನು ಮಾತ್ರ ಪರಂಪರೆಯಾಗಿ ಬಿಟ್ಟುಹೋಗುತ್ತೇವೆ. ಕಾಲ ಮಿಂಚುವ ಮುನ್ನ ಎಚ್ಚೆತ್ತುಕೊಳ್ಳೋಣ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೩-೦೨-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!