ಜನವರಿ ೧೬, ೨೦೨೬ರ ಸಂಜೆ ನಾನು ಮನೆಯಿಂದ ಹೊರಗಿದ್ದೆ. ಅಪ್ಪ ಫೋನ್ ಮಾಡಿದರು. ‘ಮನೆಯ ಹಿಂದೆ ಒಂದು ಗಿಡುಗ ಬಂದು ಕೂತಿದೆ. ಅದಕ್ಕೆ ಹಾರಲು ಆಗುತ್ತಿಲ್ಲ’ ಎಂದರು. ನಾನು ಆಗ ಆ ವಿಷಯವನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನಂತರ ನಾನು ನನ್ನ ಕೆಲಸಗಳನ್ನು ಮುಗಿಸಿ ಮನೆಗೆ ತಲುಪಿದಾಗ ಗಿಡುಗ ಅಲ್ಲೇ ಇತ್ತು. ಹಾರಲಾಗದೆ ಮುದುಡಿ ಕುಳಿತಿತ್ತು. ಓಡಿಸಿದಾಗಲೂ ಹಾರಲಿಲ್ಲ. ಬಹುಷಃ ರೆಕ್ಕೆಗೆ ಏಟು ತಗಲಿರಬೇಕೆಂದು ನಾನು ಅಂದಾಜು ಮಾಡಿದೆ. ಆ ಸಮಯ ಯಾರಿಗೆ ತಿಳಿಸಲಿ? ಎನ್ನುವ ಆಲೋಚನೆಯಲ್ಲಿರುವಾಗ ಅದು ಮನೆಯ ಹತ್ತಿರದ ಕಂಪೌಂಡ್ ಹತ್ತಿ ಕುಳಿತಿತು. ಸ್ವಲ್ಪ ಹುಷಾರಾಯಿತು, ಇನ್ನು ಹಾರಿ ಹೋಗಬಹುದು ಎಂದು ಅಂದುಕೊಂಡೆ. ಆಗಲೇ ರಾತ್ರಿಯಾಗುತ್ತಾ ಬಂದಿತ್ತು. ರಾತ್ರಿಯಲ್ಲಿ ಗಿಡುಗಕ್ಕೆ ಕಣ್ಣು ಕಾಣುವುದಿಲ್ಲ ಎಂದು ಎಲ್ಲೋ ಓದಿದ ನೆನಪು.  

ರಾತ್ರಿ ಮತ್ತೆ ಹೊರ ಬಂದು ನೋಡುವಾಗ ಆ ಗಿಡುಗ ಮಾಯವಾಗಿತ್ತು. ಬಹುಷಃ ಸುಧಾರಿಸಿಕೊಂಡು ಹಾರಿ ಹೋಗಿರಬೇಕು ಎಂದು ಅಂದುಕೊಂಡೆ. ಮರುದಿನ ಬೆಳಿಗ್ಗೆ (ಜನವರಿ ೧೭) ಎದ್ದು ನೋಡುವಾಗ ಮನೆಯ ಹಿಂದುಗಡೆ, ಬಾವಿಯ ದಂಡೆಯ ಮೇಲೆ ಎಲ್ಲೂ ಕಾಣಲು ಸಿಗಲಿಲ್ಲ. ಅಸಹಾಯಕ ಹಕ್ಕಿಯನ್ನು ಬೆಕ್ಕು ಅಥವಾ ನಾಯಿಗಳು ಹಿಡಿಯುವ ಸಾಧ್ಯತೆ ಇತ್ತು. ಅವುಗಳ ಯಾವುದೇ ಚಿನ್ಹೆ ಕಾಣದೇ ಇದ್ದುದರಿಂದ ಸ್ವಲ್ಪ ನಿರಾಳನಾದೆ. ಸುಮಾರು ೯ ಗಂಟೆಯ ಸುಮಾರಿಗೆ ನನ್ನ ಪತ್ನಿ ಕರೆದಳು. “ಆ ಗಿಡುಗ ನಮ್ಮ ನೆರೆಮನೆಯವರ ತೆಂಗಿನ ಮರದ ಬುಡದಲ್ಲಿದೆ” ಎಂದು ಹೇಳಿದಳು. ಹೋಗಿ ನೋಡುವಾಗ ಮೊದಲ ದಿನ ಹೇಗೆ ಅಸಹಾಯಕ ಸ್ಥಿತಿಯಲ್ಲಿತ್ತೋ ಅದೇ ರೀತಿಯಲ್ಲಿ ಮುದುಡಿ ಕೂತಿತ್ತು ಗಿಡುಗ. ಗಿಡುಗ ಶುದ್ಧ ಮಾಂಸಹಾರಿ ಹಕ್ಕಿಯಾಗಿರುವುದರಿಂದ ಅನ್ನ, ಹಣ್ಣು, ಬಿಸ್ಕಿಟ್ ಯಾವುದನ್ನೂ ಮುಟ್ಟುತ್ತಿರಲಿಲ್ಲ. ನೆರೆಮನೆಯವರು ಸ್ವಲ್ಪ ನೀರನ್ನು ಕೊಟ್ಟಾಗ ಮಾತ್ರ ಚೆನ್ನಾಗಿ ಕುಡಿಯಿತು. 

ನಾನು ನನ್ನ ಪತ್ರಕರ್ತ ಗೆಳೆಯರೊಬ್ಬರನ್ನು ಸಂಪರ್ಕಿಸಿದಾಗ ಅವರು ಪರಿಸರ ಪ್ರಿಯರಾದ ಶ್ರೀ ಶಶಿಧರ್ ಶೆಟ್ಟಿಯವರ ದೂರವಾಣಿ ಸಂಖ್ಯೆ ನೀಡಿದರು. ಅವರನ್ನು ಸಂಪರ್ಕಿಸಿದಾಗ ಅವರು ಅರಣ್ಯ ಇಲಾಖೆಯ ರೇಂಜ್ ಆಫೀಸರ್ ಶ್ರೀ ರಾಜೇಶ್ ಅವರ ದೂರವಾಣಿ ಸಂಖ್ಯೆ ನೀಡಿದರು. ಪ್ರಾರಂಭದಲ್ಲಿ ಫೋನ್ ಎತ್ತದೇ ಇದ್ದಾಗ ಸ್ವಲ್ಪ ಬೇಸರವಾದರೂ, ಮತ್ತೆ ಅವರೇ ಕರೆ ಮಾಡಿ ವಿಷಯ ಕೇಳಿದರು. ಅವರು ಸಿಬ್ಬಂದಿಯನ್ನು ಕಳಿಸುವರೆಂದು ತಿಳಿಸಿದರು. ನಮಗೋ ಆ ಗಿಡುಗ ಆ ಜಾಗದಿಂದ ಬೇರೆಲ್ಲಿಯಾದರೂ ಹೋಗುವುದೋ ಎನ್ನುವ ಧಾವಂತ. ಈ ನಡುವೆ ಆ ಗಿಡುಗ ಒಂದು ಮೊಟ್ಟೆಯನ್ನು ಹಾಕಬೇಕೇ? ಅದು ಸಿಮೆಂಟ್ ನೆಲವಾದುದರಿಂದ ಅದು ಒಡೆದೇ ಹೋಯಿತು. ಒಂದೆಡೆ ರೆಕ್ಕೆಗೆ ಏಟಾಗಿ ಹಾರಲಾಗದ ಅಸಹಾಯ ಸ್ಥಿತಿ, ಮತ್ತೊಂದೆಡೆ ತನ್ನ ಮೊಟ್ಟೆ ಒಡೆದ ನೋವು. ಗಿಡುಗನ ಸ್ಥಿತಿ ಕಂಡು ಮರುಕವಾಯಿತು.

ಅರಣ್ಯ ಸಿಬ್ಬಂದಿ ಬರುವುದು ತಡವಾಗುತ್ತಿದೆ ಎಂದು ನಮ್ಮ ನೆರೆ ಮನೆಯವರೂ ಅವರ ಸಂಪರ್ಕದ ಪರಿಚಿತರಿಗೆ ತಿಳಿಸಿದಾಗ ಅವರೂ ಸಂಪರ್ಕ ಮಾಡಿದ್ದು ನಾನು ಕರೆ ಮಾಡಿದ್ದ ಅರಣ್ಯ ಇಲಾಖೆಯ ಅಧಿಕಾರಿಯನ್ನೇ. ಅಂತೂ ಇಂತೂ ಸುಮಾರು ೧೨ ಗಂಟೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಶ್ರೀ ಅಶೋಕ್ ಎಂಬವರು ಬಂದು ಆ ಗಿಡುಗನನ್ನು ಪರೀಕ್ಷಿಸಿದರು. ಆಗ ಅದರ ರೆಕ್ಕೆಯ ಕೆಳಗೆ ಗಾಯವಾಗಿತ್ತು. ಆ ಕಾರಣದಿಂದ ಅದಕ್ಕೆ ಹಾರಲು ಆಗುತ್ತಿರಲಿಲ್ಲ. ಬಹುಷಃ ಯಾವುದೋ ತಂತಿಗೆ ಅದರ ರೆಕ್ಕೆ ಸಿಕ್ಕಿಕೊಂಡಿರಬಹುದು ಎಂದು ಅಂದಾಜಿಸಿದರು. ಅದನ್ನು ಜಾಗ್ರತೆಯಿಂದ ಹಿಡಿದು ರಟ್ಟಿನ ಪೆಟ್ಟಿಗೆಯಲ್ಲಿ ಅರಣ್ಯ ಇಲಾಖೆಯವರ ಆಸ್ಪತ್ರೆಗೆ ತೆಗೆದುಕೊಂಡು ಹೋದರು. ಇಲ್ಲಿಗೆ ಗಿಡುಗ ಪುರಾಣದ ಮೊದಲ ಅಧ್ಯಾಯ ಮುಗಿಯುತ್ತದೆ. 

ನಮ್ಮ ನೆರೆಮನೆಯವರ ಮಗಳು ಡಾ. ಅಪರ್ಣಾ ನಾಯಕ್, ಕಣ್ಣಿನ ವೈದ್ಯೆಯಾದರೂ ಆಕೆಗೆ ಪರಿಸರ, ವನ್ಯಜೀವಿಗಳ ಬಗ್ಗೆ ತುಂಬಾ ಆಸಕ್ತಿ. ಕೆಲಸದ ಕಾರಣದಿಂದ ಹೊರ ಊರಿನಲ್ಲಿದ್ದು ವಾರಾಂತ್ಯಗಳಲ್ಲಿ ಮನೆಗೆ ಬರುತ್ತಾಳೆ. ಆ ಶನಿವಾರ (ಜನವರಿ ೧೭) ಸಂಜೆ ಮನೆಗೆ ಬಂದಾಗ ಆಕೆಗೆ ಈ ವಿಷಯ ತಿಳಿದು ಮರುದಿನ ಗಿಡುಗನ ಚಿಕಿತ್ಸೆ ನಡೆಯುತ್ತಿದ್ದ ಮಂಗಳೂರಿನ ಕುಲಶೇಖರದ ಲಿಟಲ್ ಪಾವ್ಸ್ (Little Paws) ವೆಟರ್ನರಿ ಆಸ್ಪತ್ರೆಗೆ ಹೋಗುತ್ತಾಳೆ. ಅಲ್ಲಿ ಆಕೆಗೆ ಅದರ ರೆಕ್ಕೆಗೆ ಏಟಾಗಿ ಹುಳವಾಗಿರುವ ವಿಷಯ ತಿಳಿಯುತ್ತದೆ. ಏಟು ಬಲವಾಗಿದ್ದು ಸೋಂಕು (Infection) ಒಳಗೂ ಹಬ್ಬಿದ್ದರೆ ಗುಣಮುಖವಾಗುವುದು ಕಷ್ಟ ಎಂಬ ವಿಷಯ ತಿಳಿಯುತ್ತದೆ. ನಾಲ್ಕು ವರ್ಷ ಪ್ರಾಯದ ಹೆಣ್ಣು ಗಿಡುಗ ಎನ್ನುವ ವಿಷಯ ತಿಳಿಯುತ್ತದೆ. ನಂತರದ ದಿನಗಳಲ್ಲಿ ನಾನು ಈ ವಿಷಯ ಮರೆತು ಬಿಟ್ಟರೂ ಆಕೆ ಆಸ್ಪತ್ರೆಯ ವೈದ್ಯರಾದ ಡಾ. ಯಶಸ್ವಿ ಹಾಗೂ ಸಿಬ್ಬಂದಿಯಾದ ಶ್ರೀ ರಾಹುಲ್ ಜೊತೆ ನಿರಂತರ ಸಂಪರ್ಕ ಇರಿಸಿಕೊಳ್ಳುತ್ತಾಳೆ. ಕಳೆದ ವಾರ ಗಿಡುಗವನ್ನು ನೋಡಲು ಹೋದಾಗ ಅದು ಗುಣಮುಖವಾಗಿದ್ದರೂ ಹಾರುವ ಸಾಧ್ಯತೆ ಕಡಿಮೆ ಎಂದು ತಿಳಿದು ಬರುತ್ತದೆ. ಆದರೆ ರಾಹುಲ್ ಅವರ ಆರೈಕೆಯ ಫಲವೋ ಏನೋ ಪವಾಡದ ರೀತಿಯಲ್ಲಿ ಗಿಡುಗ ಚೇತರಿಸಿಕೊಳ್ಳುತ್ತದೆ. ಫೆಬ್ರವರಿ ೨ರಂದು ಆಸ್ಪತ್ರೆಯಿಂದ ಆಕೆಗೆ ಕರೆ ಬರುತ್ತದೆ. ‘ಗಿಡುಗ ಗುಣಮುಖವಾಗಿದ್ದು ಹಾರಾಟಕ್ಕೆ ಸಜ್ಜಾಗಿದೆ, ಅದನ್ನು ಸಿಕ್ಕಿದ ಜಾಗದಲ್ಲೇ ಬಿಡಲಾಗುವುದು’ ಎಂಬ ಸುದ್ದಿ ಕೇಳಿ ನಮಗೆಲ್ಲಾ ತುಂಬಾನೇ ಖುಷಿ ಆಗುತ್ತದೆ. 

ಫೆಬ್ರವರಿ ೩, ಬೆಳಿಗ್ಗೆ ೯.೩೦ರ ಆಸುಪಾಸು. ರಾಹುಲ್ ಗಿಡುಗನ ಗೂಡು ತಂದು ಅದರ ಬಾಗಿಲು ತೆರೆದು ಅದನ್ನು ಹೊರ ತೆಗೆದು ಅದರ ರೆಕ್ಕೆಯನ್ನು ಬಿಡಿಸಿ ಗುಣಮುಖವಾದ ವಿಷಯ ವಿವರಿಸುತ್ತಾರೆ. ಡಾ. ಅಪರ್ಣ ತನ್ನ ಕೈಯಿಂದಲೇ ಗಿಡುಗನನ್ನು ಆಗಸಕ್ಕೆ ಹಾರಿ ಬಿಡುತ್ತಾಳೆ. ಗಿಡುಗ ತನ್ನ ರೆಕ್ಕೆಯನ್ನು ಪಟ ಪಟನೇ ಬೀಸುತ್ತಾ ಸಂತಸದಿಂದ ಆಗಸದಲ್ಲಿ ಹಾರಿ ಹೋಗುತ್ತದೆ. ಈ ದೃಶ್ಯ ನನಗೆ ಈಗಲೂ ಕಣ್ಣ ಮುಂದೆ ಬರುತ್ತಿದೆ. ನಿಜಕ್ಕೂ ಇದೊಂದು ಸಾರ್ಥಕ ಕ್ಷಣ. ಕೇವಲ ಹದಿನೈದೇ ದಿನಗಳಲ್ಲಿ ಗಿಡುಗ ಮತ್ತೆ ಆಗಸಕ್ಕೆ ಹಾರುವಲ್ಲಿ ಅತ್ಯಂತ ಮುತುವರ್ಜಿ ವಹಿಸಿದ ಆಸ್ಪತ್ರೆಯ ವೈದ್ಯರಾದ ಡಾ. ಯಶಸ್ವಿ ಮತ್ತು ರಾಹುಲ್ ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಇಲ್ಲಿಗೆ ಗಿಡುಗ ಪುರಾಣದ ಎರಡನೇ ಅಧ್ಯಾಯವೂ ಮುಗಿಯುತ್ತದೆ.

***

ಕೊನೇ ಮಾತು: ಗಿಡುಗ ಅಂದರೆ ಹದ್ದು (eagle) ಅಲ್ಲ. ಗಿಡುಗನನ್ನು Kite Bird ಎನ್ನುತ್ತಾರೆ. ಇದರಲ್ಲಿ ಬ್ಲಾಕ್ ಕೈಟ್ ಮತ್ತು ಬ್ರಾಹ್ಮಿಣಿ ಕೈಟ್ (Brahminy Kite) ಎನ್ನುವ ಎರಡು ವಿಧಗಳಿವೆ. ನಾವು ಸಣ್ಣವರಿರುವಾಗ ‘ಗೇಲ್ ಗಿಡಿ’ ಅಥವಾ ಗೆಲುವಿನ ಗಿಡುಗ ಎಂದು ಕರೆಯುವ ಬಿಳಿ ಬಣ್ಣದ ಕತ್ತಿನ ಕಂದು ಮೈ ಬಣ್ಣದ ಗಿಡುಗ (ಗರುಡ) ಇದು ಒಂದು ವಿಧವಾದರೆ ಮತ್ತೊಂದು ಕಪ್ಪು, ಬೂದಿ ಬಣ್ಣದ ಸಾಮಾನ್ಯ ಗಿಡುಗ ಮತ್ತೊಂದು ವಿಧ. ಗಿಡುಗಗಳ ಸಂತತಿಯೂ ಈಗ ಕಡಿಮೆಯಾಗುತ್ತಿದೆ. ಈ ಕಾರಣದಿಂದ ಅವುಗಳನ್ನು ಉಳಿಸುವ ಕಾರ್ಯ ತುರ್ತಾಗಿ ಆಗಬೇಕಿದೆ.  

ಚಿತ್ರ ೧: ಹಾರಾಟಕ್ಕೆ ತಯಾರಾದ ಗಿಡುಗ

ಚಿತ್ರ ೨: ಅಸಹಾಯಕ ಪರಿಸ್ಥಿತಿಯಲ್ಲಿ ಕಂಡು ಬಂದ ಗಿಡುಗ 

ಸಹಕಾರ: ಡಾ. ಅಪರ್ಣಾ ನಾಯಕ್