ಈ ವರ್ಷ ಗಣರಾಜ್ಯೋತ್ಸವದ ಹಿಂದಿನ ದಿನ, ೯೨ ವರ್ಷದ ಕೇರಳದ ಕೊಲ್ಲಕ್ಕಯಿಲ್ ದೇವಕಿ ಅಮ್ಮನಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ಘೋಷಿಸಿತು. ಇದು ಆಕೆಯ ದೀರ್ಘಕಾಲದ ಪರಿಸರ ಸೇವೆಗೆ ಸಲ್ಲಿಸಿದ ಗೌರವ. ನಮ್ಮ ರಾಜ್ಯದವರೇ ಆದ ಸಾಲುಮರದ ತಿಮ್ಮಕ್ಕ, ವೃಕ್ಷ ಮಾತೆ ತುಳಸೀ ಗೌಡ ಇವರ ಸಾಲಿಗೆ ದೇವಕಿ ಅಮ್ಮನವರೂ ಸೇರಿದರು. ಪ್ರಶಸ್ತಿ ಆಯ್ಕೆಯಲ್ಲಿ ಏನೇ ರಾಜಕೀಯ ಇರಲಿ ಇತ್ತೀಚೆಗೆ ಕನಿಷ್ಟ ೫೦ % ಪದ್ಮ ಪ್ರಶಸ್ತಿಗಳಾದರೂ ಎಲೆಮರೆಯ ಕಾಯಿಗಳಂತಿರುವ ಅರ್ಹ ಸಾಧಕರಿಗೆ ಸಲ್ಲುತ್ತಿದೆ. ಈ ಸಾಲಿಗೇ ಸೇರಿದ್ದಾರೆ ದೇವಕಿ ಅಮ್ಮ.
ಒಂದು ಕಾಲದಲ್ಲಿ ಇಂಗ್ಲಿಷ್ ಶಿಕ್ಷಕರಾಗಿದ್ದ ಗೋಪಾಲಕೃಷ್ಣ ಪಿಳ್ಳೆಯವರನ್ನು ಮದುವೆಯಾದ ದೇವಕಿ, ಶಾಲೆಯಲ್ಲಿ ಗಂಡ ಪಾಠ ಮಾಡುತ್ತಿದ್ದರೂ ಮನೆಯ ಹಿತ್ತಲು-ಮನೆಯಲ್ಲಿ ಕೃಷಿಯ ಪಾಠಗಳನ್ನು ಕಲಿತಳು. ತನ್ನ ಅತ್ತೆ ಭತ್ತದ ಗದ್ದೆಗಳಲ್ಲಿ ಕೆಲಸ ಮಾಡುವುದನ್ನು ಕಂಡು, ಪರಿಸರದ ಮಹತ್ವವನ್ನು ಹೃದಯದಲ್ಲಿ ಮುದ್ರಿಸಿಕೊಂಡಳು. ತನ್ನ ಅತ್ತೆಯಿಂದ ಅಮೂಲ್ಯವಾದ ಕೃಷಿ ಕಾರ್ಯವನ್ನು ಕಲಿತುಕೊಂಡರು. ಆದರೆ ಜೀವನ ಒಂದು ದಿನ ಆಕೆಯನ್ನು ಘನಘೋರ ಪರೀಕ್ಷೆಗೆ ಒಡ್ಡಿತು. ಕಾರು ಅಪಘಾತದಲ್ಲಿ ದೇವಕಿಯ ಕಾಲಿಗೆ ಗಂಭೀರ ಗಾಯವಾಯಿತು. ಈ ಗಾಯದ ಕಾರಣ ಆಕೆ ಮೂರು ವರ್ಷಗಳ ಕಾಲ ಹಾಸಿಗೆ ಹಿಡಿಯಬೇಕಾಯಿತು.
ಆ ಸಮಯದಲ್ಲಿ ವಿಧಿಯನ್ನು ಹಳಿಯುವ ಬದಲು, ದೇವಕಿ ಅಮ್ಮ ಧೈರ್ಯದ ಹೆಜ್ಜೆ ಇಟ್ಟರು. ಗಂಡ ಶಾಲೆಗೆ ಹೋದಾಗ, ಸಮಯ ಕಳೆಯಲು ಮನೆಯ ಹಿತ್ತಲಲ್ಲಿ ಒಂದು ಸಸಿಯನ್ನು ನೆಟ್ಟರು. ಅದು ಬೆಳೆಯುವುದನ್ನು ನೋಡಿ ಸಂತಸಗೊಂಡು ಇನ್ನಷ್ಟು ಸಸಿಗಳನ್ನು ನೆಡತೊಡಗಿದರು. ಅತ್ತೆಯ ನಿಧನದ ನಂತರ ಅವರ ಐದು ಎಕರೆ ಭತ್ತದ ಭೂಮಿ ಅನಾಥವಾಯಿತು. ನಾಟಿ ಮಾಡುವುದು ಅಸಾಧ್ಯವಾದರೂ, ಆ ಭೂಮಿಯಲ್ಲೇ ಸಸಿಗಳನ್ನು ನೆಡುವುದನ್ನು ಮುಂದುವರಿಸಿದರು.
ಕಾಲ ಸರಿದಂತೆ ಕಾಲು ಸುಧಾರಿಸಿತು. ಆದರೆ ದೇವಕಿ ಅಮ್ಮನ ಮನಸ್ಸು ಮಾತ್ರ ನಿಲ್ಲಲಿಲ್ಲ. ಒಂದೊಂದೇ ಸಸಿಯನ್ನು ನೆಡುತ್ತಾ, ಕೊನೆಗೆ ಇಡೀ ಐದು ಎಕರೆಯನ್ನು ಹಸಿರು ಸಸಿಗಳಿಂದ ತುಂಬಿದರು. ೧೯೮೦ರ ದಶಕದ ಆರಂಭದಲ್ಲಿ ಆರಂಭವಾದ ಈ ಪ್ರಯತ್ನದ ಫಲವಾಗಿ ಇಂದು ಸುಮಾರು ೩,೦೦೦ಕ್ಕೂ ಹೆಚ್ಚು ಮರಗಳು, ಔಷಧೀಯ ಸಸ್ಯಗಳು, ನೈಸರ್ಗಿಕವಾಗಿ ಹುಟ್ಟಿಕೊಂಡ ಕೆರೆಗಳು ತುಂಬಿವೆ. ಆ ಭೂಮಿ ಭತ್ತದ ಗದ್ದೆಯಿಂದ 'ತಪೋವನ' ಎಂಬ ಹೆಸರಿನ ಸ್ವಾಭಾವಿಕ ಕಾಡಾಗಿ ಪರಿವರ್ತನೆಯಾಗಿದೆ.
ಈ ತಪೋವನದಲ್ಲಿ ಎರಡು ಕೆರೆಗಳು ಸಹಜವಾಗಿ ರೂಪುಗೊಂಡಿವೆ. ನೂರಾರು ಪಕ್ಷಿಗಳು, ಪ್ರಾಣಿಗಳು ಆಶ್ರಯ ಪಡೆದಿವೆ. ವಿದ್ಯಾರ್ಥಿಗಳು, ಸಂಶೋಧಕರು, ಪರಿಸರ ತಜ್ಞರು ಇಲ್ಲಿಗೆ ಬಂದು ಅಧ್ಯಯನ ನಡೆಸುತ್ತಾರೆ. ಆಲಪ್ಪಳ ಜಿಲ್ಲೆಯ 'ಕೇರಳದ ಭತ್ತದ ಕಣಜ' ಎನಿಸಿಕೊಂಡ ಪ್ರದೇಶದಲ್ಲಿ, ಕೃಷಿ ಬಿಟ್ಟು ೪೬ ವರ್ಷಗಳ ಕಾಲ ಕೈಯಿಂದಲೇ ಕಾಡು ಬೆಳೆಸಿದ್ದು ಅಪರೂಪದ ಸಾಧನೆ.
ಮೊದಲಿಗೆ ಪತಿ ಗೋಪಾಲಕೃಷ್ಣ ಪಿಳ್ಳೆ ಅವರು ಪ್ರತಿದಿನ ಸಸಿಗಳನ್ನು ತಂದುಕೊಟ್ಟರು. ತಮ್ಮ ಹಿರಿಯರ ಗಿಡದ ಬಗ್ಗೆ ಇರುವ ಪ್ರೀತಿ ಕಂಡು ಮಕ್ಕಳು, ಮೊಮ್ಮಕ್ಕಳು ಪ್ರೇರಿತರಾದರು. ಇವರ ಪುತ್ರಿ ಪ್ರೊ. ಡಿ. ತಂಗಮಣಿ ಅವರು ತಿರುವನಂತಪುರಂ ಎಂಜಿನಿಯರಿಂಗ್ ಕಾಲೇಜಿನ ಪರಿಸರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ದೇವಕಿ ಅಮ್ಮನ ಶ್ರಮದ ಕುರಿತು ಹಲವಾರು ಸಾಕ್ಷ್ಯ ಚಿತ್ರಗಳೂ ತಯಾರಾಗಿವೆ.
ನಾಲ್ಕು ಗೋಡೆಗಳ ನಡುವೆ ಕೂತು ನಡೆಸುವ ಹವಾಮಾನ ಬದಲಾವಣೆಯ ಚರ್ಚೆಗಳ ಮಧ್ಯೆ, ದೇವಕಿ ಅಮ್ಮನ ಹಸಿರು ಗಿಡಗಳ ನಡುವೆ ನಡೆಸುವ ಪ್ರಾಯೋಗಿಕ ಕೆಲಸ ದೊಡ್ಡ ಸಂದೇಶ ನೀಡುತ್ತದೆ. ಚಿಪ್ಕೋ ಚಳವಳಿಯ ಭಚ್ನಿ ದೇವಿ, ಸಾಲುಮರದ ತಿಮ್ಮಕ್ಕ ಅವರಂತಹ ಪರಿಸರ ಹೋರಾಟಗಾರ್ತಿಯರ ಸಾಲಿಗೆ ದೇವಕಿ ಅಮ್ಮ ಸೇರುತ್ತಾರೆ. ಒಬ್ಬರೇ ಸಾವಿರಾರು ಮರಗಳನ್ನು ಬೆಳೆಸಿ, 'ವನಮುತ್ತಾಶಿ' ಎನಿಸಿಕೊಂಡ ಈ ಮಹಿಳೆಯ ಸಾಧನೆ ಕಿರಿಯರಿಗೆ ಅನಂತ ಸ್ಫೂರ್ತಿಯಾಗಬೇಕಾಗಿದೆ. ಇಂತಹ ಸರಳ ಆದರೆ ಅಚಲ ನಿಷ್ಠೆಯಿಂದ ಭೂಮಿಯನ್ನು ಹಸಿರು ಮಾಡಿದ ದೇವಕಿ ಅಮ್ಮನವರಿಗೆ ಸಿಕ್ಕ ಪದ್ಮಶ್ರೀ ಪ್ರಶಸ್ತಿ ಅರ್ಹ ವ್ಯಕ್ತಿಗೆ ಸಿಕ್ಕ ಸರಿಯಾದ ಗೌರವ.
(ಆಧಾರ)
ಚಿತ್ರ ಕೃಪೆ : ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!