ಭಾರತದ ತಂತ್ರಜ್ಞಾನ ನಕ್ಷೆಯಲ್ಲಿ ಕರ್ನಾಟಕ ಅತ್ಯಂತ ಪ್ರಮುಖ ರಾಜ್ಯ. ರಾಜ್ಯದಲ್ಲಿ ಸಾವಿರಾರು ಐಟಿ ಕಂಪೆನಿಗಳು, ನೂರಾರು ಸ್ಟಾರ್ಟ್ ಅಪ್ಗಳು ಕಾರ್ಯನಿರ್ವಹಿಸುತ್ತಿದ್ದು, ಲಕ್ಷಾಂತರ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಕ ಬುದ್ಧಿಮತ್ತೆ, ಕ್ಯಾಂಟಮ್ ಕಂಪ್ಯೂಟಿಂಗ್, ಬಯೋಟೆಕ್ ಸಂಶೋಧನೆಗಳಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ. ಐಐಎಸ್ಸಿ, ಇಸ್ರೋ ಸೇರಿ ಹಲವಾರು ಜಾಗತಿಕ ಸಂಶೋಧನ ಮತ್ತು ಅಭಿವೃದ್ಧಿ ಕೇಂದ್ರಗಳು ರಾಜ್ಯದ ವೈಜ್ಞಾನಿಕ ಹಾಗೂ ತಾಂತ್ರಿಕ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ.
ಆದರೆ ರಾಜ್ಯದ ಶಾಲೆಗಳಲ್ಲಿನ ತಂತ್ರಜ್ಞಾನ ಶಿಕ್ಷಣದ ಸ್ಥಿತಿ ಶೋಚನೀಯ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ(ಡಿಎಸ್ಇಆರ್ಟಿ) ವರದಿ ಹೇಳಿದೆ. ಶೇ.೫೦ಕ್ಕೂ ಹೆಚ್ಚು ಶಾಲೆಗಳಲ್ಲಿ ಕಂಪ್ಯೂಟರ್ ಅಥವಾ ಟ್ಯಾಬ್ ಇಲ್ಲ ಶೇ.೭೩ಕ್ಕೂ ಹೆಚ್ಚು ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದು 'ಡಿಜಿಟಲ್ ಕರ್ನಾಟಕ' ಎಂಬ ಕನಸಿನ ನಡುವೆಯೇ ಮೂಲ ಶಿಕ್ಷಣದ ಕೊರತೆಯನ್ನು ಎತ್ತಿಹಿಡಿಯುತ್ತದೆ. ಡಿಜಿಟಲ್ ಶಿಕ್ಷಣ ಈಗ ಆಯ್ಕೆಯ ವಿಷಯವಲ್ಲ, ಅಗತ್ಯ. ಕೋಡಿಂಗ್, ಡೇಟಾ ವಿಶ್ಲೇಷಣೆ, ಆನ್ ಲೈನ್ ಕಲಿಕೆ, ವಿಜ್ಞಾನ ಪ್ರಯೋಗ ಇವೆಲ್ಲವೂ ತಂತ್ರಜ್ಞಾನ ಅವಲಂಬಿತ. ಶಾಲಾ ಹಂತದಲ್ಲೇ ಈ ಕಲಿಕೆಯನ್ನು ನೀಡುವುದರಿಂದ ಮಕ್ಕಳನ್ನು ವೃತ್ತಿಪರ ಬದುಕಿಗೆ ಅಣಿಗೊಳಿಸಬಹುದು.
ಆದರೆ ಶಾಲೆಗಳಲ್ಲಿ ಸೌಲಭ್ಯಗಳ ಕೊರತೆಯಿಂದಾಗಿ ಮುಂದಿನ ತಲೆಮಾರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಿಂದೆ ಬೀಳುವ ಅಪಾಯ ಇಲ್ಲದಿಲ್ಲ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಮತ್ತು ನಗರ ಶಿಕ್ಷಣದ ನಡುವಿನ ಅಂತರ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ಇನ್ನೊಂದು ಗಂಭೀರ ವಿಚಾರವೆಂದರೆ, ವಿಜ್ಞಾನ ಶಿಕ್ಷಕರ ಅರ್ಹತೆ. ವಿಜ್ಞಾನ ಪಾಠ ಮಾಡುವ ಶಿಕ್ಷಕರಲ್ಲಿ ಶೇ.೨೪ ಮಂದಿ ವಿಜ್ಞಾನ ಪದವೀಧರರೇ ಅಲ್ಲ ಎಂಬುದು ಗುಣಮಟ್ಟದ ಶಿಕ್ಷಣದ ಪ್ರಶ್ನೆಯನ್ನು ಎತ್ತುತ್ತದೆ. ಭೌತಶಾಸ್ತ್ರ ಗಣಿತ ವಿಷಯಗಳಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ವಿದ್ಯಾರ್ಥಿಗಳ ಮೂಲ ವೈಜ್ಞಾನಿಕ ಅರಿವು ದುರ್ಬಲಗೊಳ್ಳಬಹುದು. ಇದೇ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಎಂಜಿನಿಯರಿಂಗ್, ಸಂಶೋಧನೆ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಿಗೆ ಸೇರುವವರಾಗಿರುವುದರಿಂದ ಇದು ದೀರ್ಘಕಾಲಿಕ ಪರಿಣಾಮ ಉಂಟುಮಾಡಬಹುದು. ಇನ್ನೊಂದೆಡೆ ಕರ್ನಾಟಕವು ಕ್ವಾಂಟಮ್ ಟೆಕ್ನಾಲಜಿ, ಸೆಮಿಕಂಡಕ್ಟರ್ ಉದ್ಯಮ, ಡೀಪ್ ಟೆಕ್ ಸ್ಟಾರ್ಟ್ ಅಪ್ ಗಳಿಗೆ ಹೂಡಿಕೆ ಆಕರ್ಷಿಸುತ್ತಿದೆ. ಬಯೋಟೆಕ್ ಮತ್ತು ಸ್ಪೇಸ್ ಟೆಕ್ ಕ್ಷೇತ್ರಗಳಲ್ಲಿಯೂ ರಾಜ್ಯ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ ಶಾಲಾ ಮಟ್ಟದಲ್ಲೇ ವಿಜ್ಞಾನ ಶಿಕ್ಷಣದ ಅಡಿಪಾಯ ದುರ್ಬಲವಾಗಿದ್ದರೆ, ಈ ಕ್ಷೇತ್ರಗಳಿಗೆ ಬೇಕಾದ ಮಾನವ ಸಂಪನ್ಮೂಲವನ್ನು ರೂಪಿಸುವುದು ಕಷ್ಟ"
ಡಿಎಸ್ಇಆರ್ಟಿ ವರದಿಯಲ್ಲಿ ಶಿಫಾರಸು ಮಾಡಿದಂತೆ, ಕಡಿಮೆ ವೆಚ್ಚದ ವಿಜ್ಞಾನ ಮಾದರಿಗಳು, ಚಾರ್ಟ್ ಗಳು, ಪ್ರಯೋಗಾಧಾರಿತ ಕಲಿಕೆ, ಶಿಕ್ಷಕರ ವೃತ್ತಿಪರಾಭಿವೃದ್ಧಿ ತರಬೇತಿ, ಪೋಷಕರ ಭಾಗವಹಿಸುವಿಕೆ, ಇವೆಲ್ಲವನ್ನು ತಕ್ಷಣ ಜಾರಿಗೆ ತರುವ ಅಗತ್ಯವಿದೆ. ಜತೆಗೆ ಡಿಜಿಟಲ್ ಸಾಧನಗಳ ಲಭ್ಯತೆ, ಸಮರ್ಪಕ ಪ್ರಯೋಗಾಲಯಗಳು ಮತ್ತು ಶಿಕ್ಷಕರ ನೇಮಕಾತಿಗೆ ಸರಕಾರ ಹೆಚ್ಚು ಆದ್ಯತೆ ನೀಡಬೇಕು. ಈ ಶಿಫಾರಸುಗಳನ್ನು ಸರಕಾರ ಗಂಭೀರವಾಗಿ ಪರಿ ಗಣಿಸಿ, ಅವುಗಳನ್ನು ಹಂತಹಂತವಾಗಿ ಜಾರಿಗೊಳಿಸಲು ಪ್ರಯತ್ನಿಸಬೇಕು. ಐಟಿ ಕ್ಷೇತ್ರದಲ್ಲಿ ವಿಶ್ವಮಟ್ಟದ ಸಾಧನೆ ಮಾಡಿದ ಕರ್ನಾಟಕ, ತನ್ನ ಶಾಲಾ ಶಿಕ್ಷಣ ದಲ್ಲೂ ಅದೇ ಗುಣಮಟ್ಟ ಸಾಧಿಸಬೇಕಾಗಿದೆ. ತಂತ್ರಜ್ಞಾನ ಬೆಳವಣಿಗೆಯ ಪ್ರತಿಯೊಬ್ಬ ವಿದ್ಯಾರ್ಥಿಗೂ ತಲುಪಿದಾಗ ಮಾತ್ರ ಕರ್ನಾಟಕದ ಪ್ರಗತಿ ಪರಿಪೂರ್ಣ ಅನಿಸುತ್ತದೆ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೦-೦೨-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!