೨೦೨೪ರ ಆಗಸ್ಟ್‌ನಲ್ಲಿ ಶೇಖ್ ಹಸೀನಾ ಪದಚ್ಯುತಿಗೊಂಡ ನಂತರ ಬಾಂಗ್ಲಾದೇಶದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದಿವಂಗತ ಖಲೀದಾ ಜಿಯಾ ಅವರ ಪುತ್ರ ತಾರೀಖ್ ರಹಮಾನ್ ಸಾರಥ್ಯದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಜಯಭೇರಿ ಬಾರಿಸಿದೆ. ಶೇಖ್ ಹಸೀನಾ ಅವರ ಅವಾಮಿ ಲೀಗ್ ಈ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಹೀಗಾಗಿ ಈ ಗೆಲುವು ನಿರೀಕ್ಷಿತವೇ ಆಗಿತ್ತು. ಶೇಖ್ ಹಸೀನಾ ಅವಧಿಯಲ್ಲಿ ಭಾರತ- ಬಾಂಗ್ಲಾದೇಶ ಸಂಬಂಧ ಸುಮಧುರವಾಗಿತ್ತು. ಅವರ ಸರ್ಕಾರದ ಪತನಾನಂತರ ಎರಡೂ ದೇಶಗಳ ಬಾಂಧವ್ಯ ನೆಲಕಚ್ಚಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಅದರಲ್ಲೂ ವಿಶೇಷವಾಗಿ ಹಿಂದುಗಳನ್ನು ಗುರಿಯಾಗಿಸಿಕೊಂಡು ಸಾಕಷ್ಟು ದಾಳಿಗಳು ನಡೆದಿವೆ. ಭಾರತ ಜತೆ ಸ್ನೇಹ ಸಂಬಂಧ ಹೊಂದಿದ್ದ ಬಾಂಗ್ಲಾದೇಶ ಈ ಒಂದೂವರೆ ವರ್ಷದಲ್ಲಿ ಭಾರತವನ್ನು ದ್ವೇಷಿಸಲು ಆರಂಭಿಸಿದೆ. ಹಾಗೆ ನೋಡಿದರೆ, ಪಾಕಿಸ್ತಾನದ ನಿಯಂತ್ರಣದಲ್ಲಿದ್ದ ಪೂರ್ವ ಪಾಕಿಸ್ತಾನವನ್ನು ವಿಮೋಚನೆಗೊಳಿಸಿ ಬಾಂಗ್ಲಾ ದೇಶವನ್ನು ಅಸ್ತಿತ್ವಕ್ಕೆ ತಂದಿದ್ದೇ ಭಾರತ. ಬದಲಾದ ಕಾಲಘಟ್ಟದಲ್ಲಿ ಬಾಂಗ್ಲಾದೇಶ ಮತ್ತೆ ಪಾಕಿಸ್ತಾನದತ್ತ ಆಕರ್ಷಿತವಾಗುತ್ತಿದೆ. ಇದು ಭಾರತಕ್ಕೆ ಶುಭ ಸೂಚನೆಯಲ್ಲ.

ಪ್ರಧಾನಿ ಪಟ್ಟ ಅಲಂಕರಿಸಲು ಸಜ್ಜಾಗಿರುವ ತಾರೀಖ್ ರಹಮಾನ್ (೬೦) ೧೭ ವರ್ಷಗಳ ಕಾಲ ದೇಶದಿಂದ ಸ್ವಯಂ ಗಡೀಪಾರು ಆಗಿದ್ದವರು. ಲಂಡನ್‌ನಲ್ಲಿ ನೆಲೆಸಿದ್ದ ಅವರ ಮೇಲೆ ಬಾಂಗ್ಲಾದೇಶದ ಜನರು ಅಪಾಯ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಾರೀಖ್ ಅವರಿಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಫಲಿತಾಂಶ ಮಾನ್ಯ ಮಾಡಿದ್ದಕ್ಕೆ ಅವರೂ ಧನ್ಯವಾದ ಹೇಳಿದ್ದಾರೆ. ತಾರೀಖ್ ರಹಮಾನ್ ಅವರ ತಾಯಿ ಖಲೀದಾ ಜಿಯಾ ಪ್ರಧಾನಿಯಾಗಿದ್ದ ಭಾರತದ ಜತೆಗಿನ ಬಾಂಗ್ಲಾದೇಶ ಬಾಂಧವ್ಯ ಅತ್ಯುತ್ತಮವಾಗಿ ಏನೂ ಇರಲಿಲ್ಲ. ಆದರೆ ತಾರೀಖ್ ಕಾಲದಲ್ಲಿ ಅದು ಸುಧಾರಣೆಯಾಗಬಹುದು ಎಂಬ ಆಶಾವಾದವಿದೆ. ಬಾಂಗ್ಲಾ ಜತೆ ಗಡಿ ಹಂಚಿಕೊಂಡಿರುವ ಭಾರತಕ್ಕೆ ಅಕ್ರಮ ನುಸುಳುಕೋರರ ಸಮಸ್ಯೆ ಇದೆ, ಅಲ್ಪಸಂಖ್ಯಾತ ಹಿಂದುಗಳ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಕಳವಳವಿದೆ, ಜತೆಗೆ ಎರಡೂ ದೇಶಗಳ ನಡುವೆ ೫೪ ನದಿಗಳು ಹರಿಯುತ್ತಿದ್ದು, ಜಲ ರಾಜತಾಂತ್ರಿಕತೆ ಕೂಡ ಬೇಕಾಗುತ್ತದೆ. ಬಾಂಗ್ಲಾದ ಗಾರ್ಮೆಂಟ್ಸ್ ಉದ್ಯಮಕ್ಕೆ ಹೆಚ್ಚಿನ ಹತ್ತಿ ಪೂರೈಕೆಯಾಗುವುದೇ ಭಾರತದಿಂದ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೪-೦೨-೨೦೨೬

ಚಿತ್ರ ಕೃಪೆ: ಅಂತರ್ಜಾಲ ತಾಣ