ನೀರಿನ ಉಳಿತಾಯಕ್ಕೆ ಹನಿ ನೀರಾವರಿ ವ್ಯವಸ್ಥೆಯ ಕೊಡುಗೆ ಅನನ್ಯ. ಸಾಂಪ್ರದಾಯಿಕ ನೀರಾವರಿ ಕ್ರಮದಲ್ಲಿ ಬೆಳೆ ಬೆಳೆಸುವ ಪ್ರದೇಶಕ್ಕಿಂತ ಹನಿ ನೀರಾವರಿಯಲ್ಲಿ ಕನಿಷ್ಟ ೫ ಪಟ್ಟು ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ಬೆಳೆಸಬಹುದು. ಇಂದು ನಮ್ಮ ಬಳಕೆಗೆ ಯಥೇಚ್ಚವಾಗಿ ಹಣ್ಣು ಹಂಪಲುಗಳು, ತರಕಾರಿಗಳು ಲಭ್ಯವಾಗಿದ್ದರೆ ಅದೆಲ್ಲವೂ ಹನಿ ನೀರಾವರಿಯ ಕೊಡುಗೆಗಳಿಂದ. ಹನಿ ನೀರಾವರಿ ಎಂದರೆ ನಾವು ಬಳಸುವ ನೀರಿನ ಮೂಲವನ್ನು ಸೋಸಿ, ಅತೀ ಸಣ್ಣ ಕೊಳವೆ, ಸಣ್ಣ  ಸಣ್ಣ ನೀರು ತೊಟ್ಟಿಕ್ಕುವ ಸಾಧನಗಳ ಮೂಲಕ ಬೇಕಾದಲ್ಲಿಗೆ ಬೇಕಾದಷ್ಟೇ ಕೊಡುವುದು. ಈ ಸಾಧನಗಳ ಮೂಲಕ ನೀರು ಹೊರ ಚೆಲ್ಲುವ ತೂತುಗಳು ಅತೀ ಸೂಕ್ಷ್ಮವಾಗಿದ್ದು, ಅತೀ ಸಣ್ಣ ಕಣ ರೂಪದ ವಸ್ತುವೂ ಇಲ್ಲಿ ಕಟ್ಟಿ (ಸಿಕ್ಕಿ) ಕೊಳ್ಳುತ್ತದೆ. ಆದ ಕಾರಣ ಹನಿ ನೀರಾವರಿ ವ್ಯವಸ್ಥೆಯ ಪರಿಪೂರ್ಣತೆಗೆ ಸೋಸುವ ವ್ಯವಸ್ಥೆಗಳು ಅತ್ಯಗತ್ಯ.

ನಮ್ಮಲ್ಲಿ ಹೆಚ್ಚಿನವರು ಕಡಿಮೆ ಖರ್ಚಿನಲ್ಲಿ ವ್ಯವಸ್ಥೆಗಳನ್ನು ಮಾಡಿಕೊಳ್ಳುವ ಉದ್ದೇಶದಿಂದ ಅಗತ್ಯವಾದ ಸೋಸು ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದಿಲ್ಲ. ನುರಿತವರಿಂದ ಅಳವಡಿಕೆ ಮಾಡಿಸಿಕೊಳ್ಳುವುದೂ ಇಲ್ಲ. ತಮ್ಮಲ್ಲೂ ಅದರ ಕನಿಷ್ಟ ಜ್ಞಾನ ಇರುವುದಿಲ್ಲ. ಎಲ್ಲಕ್ಕೂ ಮುಖ್ಯವಾಗಿ ಎಲ್ಲಾ ಮಾರಾಟಗಾರರಿಗೂ ವೈಜ್ಞಾನಿಕ ಅಳವಡಿಕೆ ವಿಚಾರ ತಿಳಿದಿಲ್ಲ. ಸರಕಾರದ ಸಹಾಯಧನ ಪಡೆಯಲಿಕ್ಕಾಗಿ ಹನಿ ನೀರಾವರಿ ವ್ಯವಸ್ಥೆಯ ಮಾರಾಟ ನಡೆಯುತ್ತಿದೆ ಎಂದರೂ ಅತಿಶಯೋಕ್ತಿಯಲ್ಲ. 

ನಾವು ನೀರಾವರಿಗಾಗಿ ಬಳಕೆ ಮಾಡುವ ನೀರಿನ ಮೂಲಗಳೆಂದರೆ ಬಾವಿ- ಕೆರೆ ನೀರು, ಕೊಳವೆ ಬಾವಿ ನೀರು, ಹೊಳೆ- ಕಾಲುವೆ, ಹಳ್ಳಗಳ ನೀರು. ಈ ಮೂರು ನೀರಿನ ಮೂಲದಲ್ಲೂ  ಬೇರೆ ಬೇರೆ ನಮೂನೆಯ ಕಟ್ಟಿಕೊಳ್ಳುವ ವಸ್ತುಗಳಿರುತ್ತವೆ. ಅದನ್ನು ಮೊದಲಾಗಿ ತಿಳಿಯಬೇಕು. ಬಾವಿ -ಕೆರೆ, ಟ್ಯಾಂಕ್ ನೀರಿನಲ್ಲಿ ಹೆಚ್ಚಾಗಿ ಹಾವಸೆ ಮತ್ತು ಮಣ್ಣಿನ ಕಣಗಳು ಇರುತ್ತವೆ. ಇದು ನೀರಿನೊಂದಿಗೆ ಬೆರೆತಿದ್ದರೂ, ಬರಿ ಕಣ್ಣಿಗೆ ಕಾಣಿಸುವುದಿಲ್ಲ. ಅತೀ ಸಣ್ಣ ದ್ವಾರಗಳ ಮೂಲಕ ಹೊರ ಹಾಕಲ್ಪಡುವಾಗ ಕಟ್ಟಿಕೊಳ್ಳುವ ಸಮಸ್ಯೆ ಉಂಟಾಗುತ್ತದೆ. ಹೊಳೆ – ಕಾಲುವೆ, ಹಳ್ಳ ನೀರಿನಲ್ಲಿ ಹಾವಸೆ, ಮರಳಿನ ಸಣ್ಣ ಕಣಗಳು ಮತ್ತು ಅಲ್ಪ ಸ್ವಲ್ಪ  ಮಣ್ಣು ಸೇರಿಕೊಂಡಿರುತ್ತವೆ. 

ಕೊಳವೆ  ಬಾವಿಯ ನೀರಿನಲ್ಲಿ ಕಲ್ಲಿನ ಸಣ್ಣ ಹುಡಿ ಮತ್ತು ಮಣ್ಣಿನ ಕಣಗಳು (ಸಿಲ್ಟ್) ಹೆಚ್ಚಾಗಿ ಇರುತ್ತವೆ. ಎಲ್ಲಾ ಮೂಲದ ನೀರನ್ನು  ಹನಿ ನೀರಾವರಿಯ  ಮೂಲಕ  ಉಪಯೋಗ ಮಾಡುವಾಗ ಮೊದಲಾಗಿ ನೀರನ್ನು ಪರೀಕ್ಷೆ ಮಾಡಬೇಕು. ಒಂದು ಗಂಟೆ ಕಾಲ ನೀರನ್ನು ಪಂಪಿನ ಮೂಲಕ ಹರಿಸಿ ನಂತರ ಅದನ್ನು ಒಂದು ೨೦೦ ಲೀ. ಸಾಮರ್ಥ್ಯದ  ಬ್ಯಾರಲ್‌ಗೆ ತೀರಾ ಸೂಕ್ಷ್ಮ ತೂತು ಉಳ್ಳ ಬಟ್ಟೆ ಕಟ್ಟಿ ತುಂಬಿಸಬೇಕು. ಬಟ್ಟೆಯ ಮೇಲೆ ಹಾವಸೆ, ಮಣ್ಣಿನ  ಕಣ, ಕಲ್ಲಿನ ಹುಡಿ, ಸಣ್ಣ ಮರಳು ತಂಗುತ್ತದೆ. ಕೊಳವೆ ಬಾವಿಯಲ್ಲಿ ಹಾವಸೆ ಇರುವ ಸಾಧ್ಯತೆ ಇಲ್ಲ. ಒಂದು ದಿನ ಕಳೆದ ಮೇಲೆ ಬ್ಯಾರೆಲ್ ನೀರನ್ನು ಗಮನಿಸಿದಾಗಲೂ ಅದರಲ್ಲಿ ಕಣಗಳು ತಳದಲ್ಲಿ ಸಂಗ್ರಹವಾಗುತ್ತದೆ. ಇದಲ್ಲವಾದರೆ ನೀರಾವರಿ ಮಾಡಬೇಕಾದ ಕೊನೆ ತನಕ ನೀರನ್ನು  ಪೈಪಿನಲ್ಲಿ  ಸಾಗಿಸಿ, ನಂತರ ಡೆಲಿವರಿ ಲೈನಿನಲ್ಲಿ  ಪೈಪನ್ನು  ಇಳಿಸಿ. ಕೊನೆಯಲ್ಲಿ ಎಂಡ್ ಕ್ಯಾಪ್ ಹಾಕಿ.ಒಂದು ಎರಡು ದಿನ ಬಿಟ್ಟು ಎಂಡ್ ಕ್ಯಾಪ್ ತೆಗೆದಾಗ ಅದರಲ್ಲಿ ನೀರಿನಲ್ಲಿರುವ ಕಣಗಳ ಸಂಗ್ರಹ ಇರುತ್ತದೆ. ಯಾವುದೇ ಸೂಕ್ಷ್ಮ ಕಣಗಳು ನೀರಿನಲ್ಲಿ ಸೇರಿಕೊಂಡಿದ್ದರೂ ಅದನ್ನು ಹನಿ ನೀರಾವರಿಯ ಕೊಳವೆಗಳ ಮೂಲಕ  ಹರಿಸಿದಾಗ ಅದು ನೀರು ತೊಟ್ಟಿಕ್ಕುವ ಸಾಧನಗಳ ದ್ವಾರದಲ್ಲಿ ಸಿಕ್ಕಿಕೊಂಡು ನೀರಿನ ಹರಿವನ್ನು  ಕಡಿಮೆ ಇಲ್ಲವೇ ನಿಲ್ಲಿಸುತ್ತದೆ. ನೀರಿನಲ್ಲಿ ಯಾವುದೇ ಕಶ್ಮಲ ವಸ್ತುಗಳು ಇಲ್ಲ ಎನ್ನುವಂತಿಲ್ಲ. ಕೆಲವು ಕಣ್ಣಿಗೆ ಕಾಣುವಂತದ್ದು ಇರಬಹುದು, ಇನ್ನು ಕೆಲವು ಕಾಣಿಸದೇ ಇರುವಂತದ್ದು ಇರಬಹುದು. ಇದನ್ನು ಕೂಲಂಕುಷವಾಗಿ ಗಮನಿಸಿಯೇ ತಿಳಿಯಬೇಕು. ಅತೀ ಸಣ್ಣ ಸಣ್ಣ ಕಣಗಳ ತರಹದ ಕಶ್ಮಲಗಳು ಸ್ವಲ್ಪ ಸ್ವಲ್ಪವೇ ಸಂಗ್ರಹವಾಗುವ ಮೂಲಕ ಅದು ದೊಡ್ಡ ಮೊತ್ತವಾಗುತ್ತದೆ. ಅದು ಹನಿ ಹನಿ ನೀರಾವರಿ ತೊಟ್ಟಿಕ್ಕುವ ಸಾಧನಗಳನ್ನು ಮುಚ್ಚುವಂತೆ ಮಾಡುತ್ತದೆ. ಕೊನೆಗೆ ವ್ಯವಸ್ಥೆ ಕೆಲಸ ಮಾಡುವುದಿಲ್ಲ.

ಹಾವಸೆಗಳು: ಇದು ಸಾಮಾನ್ಯವಾಗಿ ಬರೇ ನೀರಿನಲ್ಲಿ ಕಾಣಿಸುವುದಿಲ್ಲ. ನೀರನ್ನು ಸೂಕ್ಷ್ಮ ತೂತಿನ ಬಟ್ಟೆಯ ಮೂಲಕ ಸೋಸಿ ಹೋಗುವಂತೆ ಮಾಡಿದರೆ ೧/೨ - ೧ ಗಂಟೆ ನಂತರ ಬಟ್ಟೆಯಲ್ಲಿ ಇದು ಅಂಟಿರುವುದು  ಕಂಡು ಬರುತ್ತದೆ. ಈ ಹಾವಸೆಗಳು ಮುಖ್ಯ ಪೈಪಿನ ಮೂಲಕ, ಕೊಳವೆಗಳ ಮೂಲಕ, ನೀರು ತೊಟ್ಟಿಕ್ಕುವ ಸಾಧನಗಳ ಮೂಲಕ  ಸಾಗುತ್ತಾ ಅಲ್ಲಲ್ಲಿ  ಶೇಖರಣೆಯಾಗಿ ಅಲ್ಲೇ ಅದು ಬೆಳೆಯುತ್ತದೆ, ಸಂಖ್ಯಾಭಿವೃದ್ದಿಯಾಗುತ್ತದೆ. ಸ್ಪ್ರಿಂಕ್ಲರ್ ವಾಲ್ವ್ ನಲ್ಲಿ, ಪಂಪಿನ ಬದಿಯಲ್ಲಿ ಎಲ್ಲಾದರೂ ನೀರು ಸೋರಿಕೆ ಇದ್ದರೆ ಅಲ್ಲಿ ಹಾವಸೆ ಬೆಳೆದಿದ್ದರೆ ನಿಮ್ಮ ನೀರಿನಲ್ಲಿ ಹಾವಸೆ ಇದೆ ಎಂದರ್ಥ. ಬಿಸಿಲು ಬೀಳುವ ನೀರಿನ ಮೂಲದಲ್ಲೆಲ್ಲಾ ಹಾವಸೆ ಇದ್ದೇ ಇರುತ್ತದೆ. ಇದನ್ನು ಸಾಮಾನ್ಯವಾಗಿ ಮೆಶ್ ಫಿಲ್ಟರ್ ಮೂಲಕ ತಡೆದು ಮುಂದೆ ಚಲಿಸದಂತೆ ಮಾಡಬಹುದು. ನೀರು ಹೊರ ಹರಿವಿನ ಜಾಗಕ್ಕೆ ಮಾತ್ರ ಮೆಶ್ ಫಿಲ್ಟರ್ ಅಳವಡಿಸಿದರೆ ಸಾಲದು. ನೀರನ್ನು ಹೀರಿಕೊಳ್ಳುವ ಭಾಗಕ್ಕೂ ಮೆಶ್ ಫಿಲ್ಟರ್ ಅಥವಾ ಮೆಶ್ ಸುತ್ತುವುದು ಒಳ್ಳೆಯದು. ಹೀಗೆ ಮಾಡಿದಾಗ ಹಾವಸೆಗಳು ತಡೆಯಲ್ಪಟ್ಟು ಮುಂದೆ ಹೋಗುವುದು ಕಡಿಮೆಯಾಗುತ್ತದೆ.

ಸೂಕ್ಷ್ಮ ಮರಳು – ಕಲ್ಲಿನ ಹುಡಿ: ಇದನ್ನೂ ಹಾವಸೆಯ ಇರುವಿಕೆಯನ್ನು ಗಮನಿಸಿದ ವಿಧಾನದಲ್ಲೇ ಗಮನಿಸಬಹುದು.  ಕಲ್ಲಿನ ಹುಡಿಗಳು ೧೦೦ ಮೈಕ್ರಾನ್ ನಷ್ಟು ಸೂಕ್ಷ್ಮ ತೂತಿನಲ್ಲೂ ದಾಟಿ ಹೊರ ಹೋಗುತ್ತವೆ. ಆದ ಕಾರಣ ಕಲ್ಲಿನ ಹುಡಿಯನ್ನು ಸೋಸಲು ಕನಿಷ್ಟ ೧೨೫ ಮೈಕ್ರಾನ್ ಅಳತೆಯ ಮೆಶ್ ಮೂಲಕ ನೀರನ್ನು ಹರಿಸಬೇಕು. ಕೊಳವೆ ಬಾವಿಯ ನೀರಿನಲ್ಲಿ ಈ ಕಣಗಳು ಇರುತ್ತವೆ, ಕೆರಯ ನೀರಿನಲ್ಲೂ ಜೇಡಿ ಮಣ್ಣಿನೊಂದಿಗೆ ಸೇರಿರುವ ಕೆಲವು ಅತೀ ಸಣ್ಣ ಕಣಗಳು ಇರುತ್ತವೆ. ಇದನ್ನು ೧ ಗಂಟೆ ತನಕ ೧೨೫ ಅಥವಾ ಅದಕ್ಕಿಂತ ಹೆಚ್ಚು ಮೈಕ್ರಾನ್ ಅಳತೆಯ ಮೆಶ್ ಮೂಲಕ ಹರಿಸಿ ಪತ್ತೆ ಮಾಡಿ ಅದಕ್ಕನುಗುಣವಾಗಿ ಸೋಸು ವ್ಯವಸ್ಥೆಯನ್ನು  ಅಳವಡಿಸಿಕೊಳ್ಳಬೇಕು.

(ಇನ್ನೂ ಇದೆ) 

ಮಾಹಿತಿ : ರಾಧಾಕೃಷ್ಣ ಹೊಳ್ಳ