ವೇಗವಾಗಿ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಭೂದೃಶ್ಯದಲ್ಲಿ ಬಲಾಢ್ಯ ರಾಷ್ಟ್ರಗಳು ಆಧುನಿಕ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ತಾಂತ್ರಿಕವಾಗಿ ನಾವೀನ್ಯತೆಯ ದಾರಿಗಳನ್ನು ಅನ್ವೇಷಿಸುತ್ತಿವೆ. ಈ ವಿಚಾರದಲ್ಲಿ ಭಾರತವೂ ಹಿಂದುಳಿದಿಲ್ಲ ಹೊಸದಿಲ್ಲಿಯಲ್ಲಿ ನಡೆಯುತ್ತಿರುವ 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗ- ೨೦೨೬ ವಿಶ್ವದ ಅತಿದೊಡ್ಡ ತಂತ್ರಜ್ಞಾನ ಮೇಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಭಾರತವೂ ಎಐ ಜಗದ ಆಟಗಾರನಾಗಲು ಈ ಶೃಂಗ ಮಹಾವೇದಿಕೆ ಕಲ್ಪಿಸಿರುವುದು ಸ್ಪಷ್ಟ,
ಅತ್ಯಲ್ಪಾವಧಿಯಲ್ಲಿ ಕೃತಕ ಬುದ್ಧಿಮತ್ತೆ ಮುನ್ನುಗ್ಗುತ್ತಿರುವ ವೇಗ ಗಮನಿಸಿದರೆ, ಅದರ ಸಾಮರ್ಥ್ಯ, ನಿರೀಕ್ಷೆಗಳು, ಪರಿಣಾಮಗಳನ್ನು ಎಐಗೆ ಸಂಬಂಧಿಸಿದ ಕಾಳಜಿಗಳನ್ನು ತಂತ್ರಜ್ಞಾನ ಪರಿಣತರು ಚರ್ಚಿಸುವುದು ಅತಿಮುಖ್ಯ. ಶೃಂಗದಲ್ಲಿ ಈ ಕೆಲಸವೇ ಆಗುತ್ತಿದೆ. ಸಾಮಾನ್ಯ ಜನರ ಜೀವನದಲ್ಲಿ ಎಐ ಹೇಗೆ ಕಾರ್ಯನಿರ್ವಹಿಸುತ್ತದೆ? ಮುಖ್ಯವಾಗಿ ಕೃಷಿ, ಆರೋಗ್ಯ, ಐಟಿ ರಂಗ, ಶಿಕ್ಷಣದಂಥ ಕ್ಷೇತ್ರಗಳಲ್ಲಿ ಎಐ ಯಾವ ಬದಲಾವಣೆಗಳನ್ನು ತರಬಲ್ಲದು? ಎಐನಿಂದ ರೂಪಿತವಾದ ಭವಿಷ್ಯದ ಔದ್ಯೋಗಿಕ ಪರಿಸರ ವ್ಯವಸ್ಥೆ ಹೇಗಿರಲಿದೆ? ಈ ಕುರಿತ ಪ್ರಶ್ನೆಗಳಿಗೆ ಎಐ ಶೃಂಗ ಉತ್ತರವಾದರೆ ಅದು ನಿಜಕ್ಕೂ ಸಾರ್ಥಕತೆ.
ಎಐ ತಂತ್ರಜ್ಞಾನ ಕೇವಲ ವ್ಯಾಪಾರಕ್ಕೋ, ಉದ್ಯಮಕ್ಕೋ ಸಂಬಂಧಿಸಿದ ವಿಚಾರವಾಗಿ ಉಳಿದಿಲ್ಲ, ಜನರು ಆಡುವ ಭಾಷೆಯಿಂದ ಹಿಡಿದು, ಸಂಸ್ಕೃತಿ, ಆರೋಗ್ಯ, ಶಿಕ್ಷಣ, ಜೀವನಶೈಲಿ, ಮನೆ ಪರಿಸರ ಎಲ್ಲದರ ಮೇಲೂ ಕೃತಕ ಬುದ್ಧಿಮತ್ತೆ ವೇಗದಲ್ಲಿ ಹಿಡಿತ ಸಾಧಿಸುತ್ತಿದೆ. ಶ್ರೀಸಾಮಾನ್ಯರ ಜೀವನಮಟ್ಟವನ್ನು ಸುಧಾರಿಸಲು ಎಐ ಅನುಕೂಲವಾದರಷ್ಟೇ ಈ ತಂತ್ರಜ್ಞಾನ ಸಾರ್ಥಕತೆ ಕಾಣಲು ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ, 'ಸರ್ವಜನ ಹಿತಾಯ, ಸರ್ವಜನ ಸುಖಾಯ'ಕ್ಕಾಗಿ (ಎಲ್ಲರಿಗೂ ಕಲ್ಯಾಣ, ಎಲ್ಲರಿಗೂ ನೆಮ್ಮದಿ) ಮಿಡಿಯುವ ಬದ್ಧತೆಯನ್ನು ಎಐ ಸಂಸ್ಥೆಗಳು ತೋರಲಿ.
ಎಐನ ನೂರಾರು ಭರವಸೆಗಳ ನಡುವೆ, ಭಾರತ ಮೂಲದ ಖ್ಯಾತ ಉದ್ಯಮಿ ವಿನೋದ್ ಖೋಸ್ಲಾ ಅವರ ಮಾತು ಹೆಚ್ಚು ಚಿಂತನೆಗೆ ಗುರಿಮಾಡಿದೆ. ''ಎಐ ತಂತ್ರಜ್ಞಾನ ದಿನೇದಿನೆ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿದ್ದು, ಮನುಷ್ಯರ ಬಹುತೇಕ ಉದ್ಯೋಗಗಳು ಇಲ್ಲವಾಗುತ್ತವೆ. ಮುಂದಿನ ೫ ವರ್ಷದಲ್ಲಿ ಐಟಿ ಸರ್ವಿಸ್ ಮತ್ತು ಬಿಪಿಒ ಕೆಲಸಗಳು ಬಹುತೇಕ ಕಣ್ಮರೆಯಾಗುತ್ತವೆ,' ಎಂದಿದ್ದಾರೆ ಖೋಸ್ಲಾ. ನಿಜ! ಯಾವುದೇ ತಾಂತ್ರಿಕ ಅಭಿವೃದ್ದಿಯು ಸಾಕಷ್ಟು ಅನುಕೂಲಗಳ ಜತೆಜತೆಗೆ ಕೆಲವು ವೈಪರೀತ್ಯ ಮತ್ತು ಅಪಾಯಗಳನ್ನು ನಿಶ್ಚಿತವಾಗಿ ಹೊತ್ತು ತರುತ್ತವೆ. ಈಗ ಎಐ ವಿಷಯದಲ್ಲಿಯೂ ಇದು ವಾಸ್ತವಗೊಳ್ಳುತ್ತಿದೆ. ಸಾಕ್ಷರತೆಯನ್ನು ವ್ಯಾಪಕಗೊಳಿಸುವ, ಅದರ ಸವಾಲುಗಳನ್ನು ಮೆಟ್ಟಿನಿಲ್ಲುವ ಸ್ಟೈರ್ಯ, ಕೌಶಲಗಳನ್ನು ಉತ್ತೇಜಿಸುವ ಕೆಲಸಗಳೂ ವೇಗ ಪಡೆದುಕೊಳ್ಳಬೇಕಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಭಾರತ ಎಐ ಸೃಷ್ಟಿಕರ್ತನಾಗುವುದು ಈ ಹೊತ್ತಿನ ಅನಿವಾರ್ಯತೆ. ಎಐ ಯುಗದಲ್ಲಿಯೂ ಸೇವಾವಲಯದಲ್ಲಿಯೇ ದೇಶ ಗುರುತಿಸಿಕೊಂಡರೆ. ಮುಂದುವರಿದ ದೇಶಗಳಷ್ಟೇ ಲಾಭ ಉಣ್ಣಲು ಸಾಧ್ಯ. ಎಐ ಶೃಂಗದ ಮೂಲಕ ಭಾರತ ಹೆಚ್ಚು ಪ್ರತಿಭಾವಂತರನ್ನು ಈ ದಾರಿಗೆ ಕೊಂಡೊಯ್ಯಬೇಕಿದೆ. ಅಲ್ಲದೆ, ಎಐ ಡೇಟು ಕೇಂದ್ರಗಳಲ್ಲಿನ ನೀರಿನ ಬಳಕೆಯು ಪರಿಸರದ ಮೇಲೆ ಕಳವಳ ಹೆಚ್ಚಿಸುತ್ತಿವೆ. ಉದ್ಯೋಗದಿಂದ ಹಿಡಿದು ಪರಿಸರದ ತನಕ ಎಐ ಜತೆಗಿರುವ ಕಳವಳಗಳು ದೂರವಾದಾಗ ಮಾತ್ರ ಈ ತಂತ್ರಜ್ಞಾನ ಮನುಕುಲಕ್ಕೆ ಬೆಳಕಾಗುತ್ತದೆ ಎಂಬುದನ್ನು ಮರೆಯಬಾರದು.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೯-೦೨-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!