ಎರಡು ವರ್ಷಗಳ ಹಿಂದೆ ಕೇವಲ ೮ ರಾಜ್ಯಗಳಿಗೆ ಸೀಮಿತವಾಗಿದ್ದ ನಕಲಿ ಈ ವಿಶ್ವವಿದ್ಯಾಲಯಗಳು ಈಗ ೧೨ ರಾಜ್ಯಗಳಿಗೆ ವಿಸ್ತರಣೆಯಾಗಿರುವುದರ ಮತ್ತು ಅವುಗಳ ಸಂಖ್ಯೆ ೨೦ರಿಂದ ೩೨ಕ್ಕೆ ಏರಿರುವುದರ ಮಾಹಿತಿ ಹೊರಬಿದ್ದಿದೆ. ಈ ಕುರಿತಾಗಿ ಪಟ್ಟಿಯೊಂದನ್ನು ಬಿಡುಗಡೆ ಮಾಡಿರುವ 'ವಿಶ್ವವಿದ್ಯಾಲಯ ಅನುದಾನ ಆಯೋಗ' (ಯುಜಿಸಿ), ಇಂಥ 'ನಕಲಿ ನೆಲೆ'ಗಳ ಕುರಿತು ಜಾಗೃತರಾಗಿರುವಂತೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಎಚ್ಚರಿಕೆ ನೀಡಿದೆ. ದೇಶದ ಶಿಕ್ಷಣ ವ್ಯವಸ್ಥೆಯೊಳಗೇ ತೂರಿಕೊಂಡು ಬಿಲವನ್ನು ಕೊರೆಯುವ ಇಂಥ ಹೆಗ್ಗಣಗಳನ್ನು ಹೀಗೆ ತಡವಾಗಿಯಾದರೂ ಪತ್ತೆಹಚ್ಚಿರುವುದು ಸಮಾಧಾನಕರ ಸಂಗತಿ. ಆದರೆ, ಇಂಥ ನಕಲಿ ವಿಶ್ವವಿದ್ಯಾಲಯಗಳು ೧೨ ರಾಜ್ಯಗಳಿಗೆ ತಮ್ಮ ಕಬಂಧಬಾಹುವನ್ನು ಚಾಚಿ ಸಂಖ್ಯೆಯನ್ನು ೩೨ಕ್ಕೆ ಹೆಚ್ಚಿಸಿಕೊಳ್ಳುವವರೆಗೆ ಆಯಾ ರಾಜ್ಯಗಳ ಆಳುಗ ವ್ಯವಸ್ಥೆಗಳು 'ಕಡ್ಲೆಪುರಿ' 'ತಿನ್ನುತ್ತಿದ್ದವಾ? ಅಲ್ಲಲ್ಲಿನ ಅಧಿಕಾರಿಗಳ 'ವಿಚಕ್ಷಣಾ ಸಾಮರ್ಥ್ಯ' ಎಲ್ಲಿ ಅವಿತಿಟ್ಟುಕೊಂಡಿತ್ತು? ಎಂಬ ಪ್ರಶ್ನೆಗಳು ಇಲ್ಲಿ ಮೂಡುತ್ತವೆ. ಏಕೆಂದರೆ, ವ್ಯವಸ್ಥೆಯನ್ನು ಕಾವಲು ಕಾಯಬೇಕಾದ ಕೊತ್ವಾಲರು ಮೇಜಿನ ಕೆಳಗೆ ಕೈಚಾಚಿ ಅದನ್ನು ಮಸಿಮಾಡಿಕೊಂಡಾಗ ಮಾತ್ರವೇ ಇಂಥ ಅಪಸವ್ಯಗಳು ಘಟಿಸಲು ಸಾಧ್ಯ ಮತ್ತು ನಕಲಿ ವಿವಿಗಳನ್ನು ತೆರೆದಿಟ್ಟು ಕೂರುವವರಿಗೆ ಭಂಡಧೈರ್ಯ ಬರಲು ಸಾಧ್ಯ. ಆದ್ದರಿಂದ, ಅಧಿಕಾರಿ ವರ್ಗದಲ್ಲಿ ಠಿಕಾಣಿ ಹೊಡೆದಿರುವ ಇಂಥ 'ಅನಾರೋಗ್ಯಕರ' ಕೊಂಡಿಗಳನ್ನು ಮುಲಾಜಿಲ್ಲದೆ ಕಿತ್ತೆಸೆಯಬೇಕಿದೆ. ಗುಣಮಟ್ಟದ ರಸಭರಿತ ಹಣ್ಣುಗಳ ಬುಟ್ಟಿಯಲ್ಲೊಂದು ಕೊಳೆತ ಹಣ್ಣು ಸೇರಿಕೊಂಡಿರುವುದು ಗೊತ್ತಿದ್ದರೂ 'ಒಂದೇ ಒಂದು ಕೊಳೆತ ಹಣ್ಣು ತಾನೇ..?' ಎಂದು ನಿರ್ಲಕ್ಷ್ಯ ಮಾಡಿದರೆ, ಅದು ಮುಂದೊಂದು ದಿನ ದುಬಾರಿಯಾಗಿ ಪರಿಣಮಿಸಬಹುದು. ನಕಲಿಗಳ ಮೂಲೋತ್ಪಾಟನೆಯಾಗಲಿ ಇದು ನಕಲಿ ವಿವಿಗಳಿಗೆ ಮಾತ್ರವಲ್ಲದೆ, ವ್ಯವಸ್ಥೆಯೊಳಗೆ ಝಾಂಡಾ ಊರಿರುವ ಎಲ್ಲ ತೆರನಾದ ಕಳ್ಳಬೆಕ್ಕುಗಳಿಗೂ ಅನ್ವಯಿಸಬೇಕಾದ ಶಿಸ್ತುಕ್ರಮ ಎಂಬುದನ್ನು ಸಂಬಂಧಪಟ್ಟವರು ಅರಿಯಲಿ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೧-೦೨-೨೦೨೬

ಚಿತ್ರ ಕೃಪೆ: ಅಂತರ್ಜಾಲ ತಾಣ