ಹೊಸದಿಲ್ಲಿಯಲ್ಲಿ ಗುಜರಿಯಾಗಿ ಪರಿಗಣಿಸಲ್ಪಟ್ಟಿರುವ ೧೦ ವರ್ಷ ಬಳಕೆಯಾದ ವಾಹನಗಳಿಗೀಗ ಕರ್ನಾಟಕ ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆಯೇ ಎಂಬ ಗುಮಾನಿ ವ್ಯಕ್ತವಾಗತೊಡಗಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಗ್ರಾಮೀಣ ಪ್ರದೇಶಗಳ ಸಹಿತ ರಾಜ್ಯದೆಲ್ಲೆಡೆ ಈಗ ದಿಲ್ಲಿಯಲ್ಲಿ ನೋಂದಣಿಯಾದ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳಲಾರಂಭಿಸಿವೆ. ದಿನಗಳೆದಂತೆ ಇದೊಂದು ದಂಧೆಯಾಗಿ ಮಾರ್ಪಟ್ಟಿದ್ದು ಗ್ರಾಮೀಣ ಭಾಗಗಳಲ್ಲಿ ಈ ವಾಹನಗಳ ಓಡಾಟ ಒಂದಿಷ್ಟು ಆತಂಕಕ್ಕೆ ಕಾರಣವಾಗಿದೆ.

ದೇಶದ ರಾಜಧಾನಿ ದಿಲ್ಲಿಯಲ್ಲಿ ವಾಯುಮಾಲಿನ್ಯ ತೀರಾ ಅಪಾಯಕಾರಿ ಮಟ್ಟಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ವಾಹನಗಳನ್ನು ಗರಿಷ್ಠ ೧೦ ವರ್ಷಗಳವರೆಗೆ ಮಾತ್ರ ಬಳಸಲು ಸರಕಾರ ಅನುಮತಿ ನೀಡಿದೆ. ೧೦ ವರ್ಷದ ಬಳಿಕ ಈ ವಾಹನಗಳನ್ನು ಗುಜರಿಯಾಗಿ ಪರಿಗಣಿಸಲು ಸರಕಾರ ನಿರ್ಧರಿಸಿದೆ. ಗುಜರಿಗೆ ಹಾಕುವುದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಈ ವಾಹನಗಳು ಹೊರ ರಾಜ್ಯಗಳಲ್ಲಿ ಬಿಕರಿಯಾಗುತ್ತಿರುವುದರಿಂದ ಹಳೆಯ ವಾಹನಗಳ ಮಾಲಕರು ಮಧ್ಯವರ್ತಿಗಳಿಗೆ ಸಿಕ್ಕಷ್ಟು ಬೆಲೆಗೆ ತಮ್ಮ ವಾಹನ ಗಳನ್ನು ಮಾರಾಟ ಮಾಡುತ್ತಿದ್ದಾರೆ. ಸದ್ಯ ಈ ವಾಹನಗಳಿಗೆ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಹೆಚ್ಚಿನ ಬೇಡಿಕೆ ಇದೆ. ಕೋಟ್ಯಂತರ ರೂ. ಬೆಲೆಬಾಳುವ ವಾಹನಗಳು ಮಾತ್ರವಲ್ಲದೆ ಮಾಧ್ಯಮ ವರ್ಗದ ಜನರು ಬಳಸುವ ವಾಹನಗಳು ಕೂಡ ಕಡಿಮೆ ಬೆಲೆಯಲ್ಲಿ ರಾಜ್ಯದಲ್ಲಿ ಮಾರಾಟವಾಗುತ್ತಿದೆ. ಸಹಜವಾಗಿಯೇ ಈ ಐಷಾರಾಮಿ ಕಾರುಗಳತ್ತ ಜನರು ಆಕರ್ಷಿತರಾಗುತ್ತಿದ್ದು ಇವುಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.

ದಿಲ್ಲಿಯ ಹಳೆಯ ವಾಹನಗಳಿಗೆ ಕರ್ನಾಟಕ ಬಲು ದೊಡ್ಡ ಮಾರುಕಟ್ಟೆಯಾಗಿ ರೂಪುಗೊಳ್ಳುತ್ತಿದ್ದಂತೆ ಮಧ್ಯವರ್ತಿಗಳು, ಅಕ್ರಮ ವಾಹನ ಮಾರಾಟ ದಂಧೆಕೋರರು ಇದರ ಲಾಭ ಪಡೆಯಲು ಮುಂದಾಗಿದ್ದಾರೆ. ತಮ್ಮ ಅಕ್ರಮ ದಂಧೆಗೆ ಇನ್ನಿಲ್ಲದ ತಂತ್ರ ಗಾರಿಕೆಯನ್ನು ಬಳಸಲಾರಂಭಿಸಿದ್ದಾರೆ. ೧೦ ವರ್ಷಗಳ ಹಳೆಯ ಕಾರುಗಳ ನಕಲಿ ದಾಖಲೆಗಳ ಸೃಷ್ಟಿಸಿ, ಈ ಕಾರುಗಳ ಮೀಟ‌ರ್ ಗಳನ್ನು ತಿರುಚಿ ಕಡಿಮೆ ಕಿ.ಮೀ. ಓಡಿದಂತೆ ತೋರಿಸುವುದು, ಹಳೆಯ ಬಿಡಿಭಾಗಗಳ ಜೋಡಣೆ, ನಕಲಿ ನಂಬರ್ ಪ್ಲೇಟ್ ಅಳವಡಿಕೆ, ಚಾಸಿಸ್ ನಂಬರ್ ಬದಲಾವಣೆ, ಕಳವುಗೈದ ವಾಹನಗಳ ಮಾರಾಟದಂತಹ ಅಕ್ರಮಗಳನ್ನು ರಾಜಾರೋಷವಾಗಿ ನಡೆಸತೊಡಗಿದ್ದಾರೆ. ಈ ಅಕ್ರಮ ದಂಧೆಕೋರರು ದಿಲ್ಲಿಯಲ್ಲಿ ೧೦ ವರ್ಷ ಬಳಕೆಯಾದ ವಾಹನಗಳಿಗೆ ಸರಾಗವಾಗಿ ನಿರಾಕ್ಷೇಪಣ ಪತ್ರ ಪಡೆದು ಅವುಗಳನ್ನು ಕರ್ನಾಟಕಕ್ಕೆ ತಂದು ಮಾರಾಟ ಮಾಡಲಾರಂಭಿಸಿದ್ದಾರೆ. ಕಡಿಮೆ ಬೆಲೆಯಲ್ಲಿ ಐಷಾರಾಮಿ ಸಹಿತ ಸಾಮಾನ್ಯ ಕಾರುಗಳು ಲಭಿಸುತ್ತಿವೆ ಎಂಬ ಸಂಭ್ರಮದಲ್ಲಿ ರಾಜ್ಯದ ಅದರಲ್ಲೂ ಗ್ರಾಮೀಣ ಪ್ರದೇಶದ ವಾಹನ ಖರೀದಿದಾರರು ಮೋಸ ಹೋಗುತ್ತಿದ್ದಾರೆ. ಬಹುತೇಕ ಎಲ್ಲ ಕಂಪೆನಿಗಳ ಕಾರುಗಳು ಅಗ್ಗದ ಬೆಲೆಯಲ್ಲಿ ಲಭಿಸುತ್ತಿರುವುದರಿಂದ ಜನ ಕೂಡ ಈ ಅಕ್ರಮಗಳತ್ತ ತಲೆಕೆಡಿಸಿಕೊಳ್ಳದೆ ಈ ವಾಹನಗಳ ಖರೀದಿಗೆ ಮುಗಿ ಬೀಳತೊಡಗಿದ್ದಾರೆ.

ಅಕ್ರಮವಾಗಿ ಅದರಲ್ಲೂ ಕಳವುಗೈದ ದರಲ್ಲೂ ಕಳವುಗೈದ ವಾಹನಗಳನ್ನು ಕಿಡಿಗೇಡಿಗಳು ತಮ್ಮ ದುಷ್ಕೃತ್ಯಗಳನ್ನು ಎಸಗಲು, ವಿವಿಧ ಅಪರಾಧ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವೆ ಪ್ರಕರಣಗಳು ವರದಿಯಾಗತೊಡಗಿದ್ದು ಇದು ನಿಜಕ್ಕೂ ಕಳವಳಕಾರಿ ಬೆಳವಣಿಗೆ ಇಂತಹ ವಾಹನಗಳನ್ನು ಬಳಸಿ ಅಪರಾಧ ಕೃತ್ಯಗಳನ್ನು ಎಸಗಿದ ಸಂದರ್ಭದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವುದು ಕೂಡ ಪೊಲೀಸರಿಗೆ ಬಲುದೊಡ್ಡ ಸವಾಲಾಗಿ ಪರಿಣಮಿಸಲಿದೆ. ಇವೆಲ್ಲವನ್ನು ಗಮನದಲ್ಲಿರಿಸಿಕೊಂಡು ರಾಜ್ಯದ ಸಾರಿಗೆ ಮತ್ತು ಪೊಲೀಸ್ ಇಲಾಖೆ ದಿಲ್ಲಿಯಲ್ಲಿ ನೋಂದಣಿಯಾಗಿರುವ ವಾಹನಗಳ ಮೇಲೆ ಹೆಚ್ಚಿನ ನಿಗಾ ಇರಿಸುವ ಅಗತ್ಯವಿದೆ. ಆರಂಭದಲ್ಲಿಯೇ ಈ ಅಕ್ರಮ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಎರಡೂ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಈ ವಾಹನಗಳ ನೋಂದಣಿ ಪ್ರಮಾಣಪತ್ರದ ವರ್ಗಾವಣೆಯ ಸಂದರ್ಭದಲ್ಲಿಯೇ ಸಾರಿಗೆ ಅಧಿಕಾರಿಗಳು ಈ ವಾಹನಗಳ ದಾಖಲೆ ಪತ್ರ, ಪ್ರಮಾಣಪತ್ರಗಳ ಸಾಚಾತನವನ್ನು ಖಾತರಿಪಡಿಸಿಕೊಳ್ಳಬೇಕು.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೪-೦೨-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ