ತೈಲ ಉತ್ಪಾದಿಸುವ ಕೊಲ್ಲಿ ರಾಷ್ಟ್ರಗಳಲ್ಲಿ, ಮಧ್ಯಪ್ರಾಚ್ಯದಲ್ಲಿ ಯುದ್ಧ ಬಿಕ್ಕಟ್ಟು, ಅಸ್ಥಿರತೆ ಕಾಡಿದಾಗಲೆಲ್ಲ ಭಾರತದ ತೈಲ ಮಾರುಕಟ್ಟೆಗೆ ಪರಿಣಾಮ ತಟ್ಟಿದೆ. ಈಗಿನ ಇರಾನ್ ಮೇಲಿನ ಅಮೆರಿಕ- ಇಸ್ರೇಲ್‌ನ ಜಂಟಿ ದಾಳಿಯ ಸಂದರ್ಭದಲ್ಲೂ ಇಂಥದ್ದೇ ಮುನ್ಸೂಚನೆ ಕಾಣುತ್ತಿದೆ. ಇರಾನ್ ಯುದ್ಧ ಪ್ರಾರಂಭವಾಗುವ ಮುನ್ನವೇ ತೈಲ ಬೆಲೆ ಏರುತ್ತಿತ್ತು. ಯುದ್ಧ ಕಾಲದಲ್ಲಿ ಈಗ ಇನ್ನೆಷ್ಟು ಎತ್ತರಕ್ಕೆ ಏರುತ್ತೆ ಎನ್ನುವುದೇ ಸದ್ಯದ ಪ್ರಶ್ನೆ.

ಕಳೆದ ಜೂನ್‌ನಲ್ಲಿ ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದಾಗ ತೈಲವು ಬ್ಯಾರೆಲ್‌ಗೆ ೭೦ ಡಾಲರ್‌ನಿಂದ ೮೦ ಡಾಲರ್‌ಗೆ ಏರಿತ್ತು. ಆಗ ತಜ್ಞರು ೧೦೦-೧೨೦ ಡಾಲರ್ ಗೆ ತಲುಪಬಹುದು ಎಂದೇ ವಿಶ್ಲೇಷಿಸಿದ್ದರು. ಆದರೆ, ಅದು ಕೇವಲ ೧೨ ದಿನಗಳ ಯುದ್ಧವಷ್ಟೇ. ಈ ಬಾರಿ ಯುದ್ಧ ಯಾವಾಗ ನಿಲ್ಲುವುದು ಎಂದು ಯಾರಿಗೂ ತಿಳಿದಿಲ್ಲ. ಈಗ ಬ್ಯಾರೆಲ್‌ ಗೆ ೮೨ ಡಾಲರ್ ಇದ್ದು ಯುದ್ಧ ಹೀಗೆ ಮುಂದುವರಿದರೆ ಅಂತಿಮವಾಗಿ ೧೦೦ ಮುಟ್ಟುವ ನಿರೀಕ್ಷೆಯಿದೆ.

ಮಧ್ಯಪ್ರಾಚ್ಯದ ದೀರ್ಘಕಾಲದ ಯುದ್ಧವು ಭಾರತ ಮತ್ತು ಚೀನಾದಂಥ ದೊಡ್ಡ ಖರೀದಿದಾರರಿಗೆ ಮೂರು ವಿಧಗಳಲ್ಲಿ ಪರಿಣಾಮ ಬೀರುತ್ತದೆ. ಒಂದು, ಇರಾನ್ ಯುದ್ಧಾವೇಶದಲ್ಲಿರುವಾಗ ತೈಲ ಟ್ಯಾಂಕರ್‌ಗಳು ಹರ್ಮುಜ್ ಜಲಸಂಧಿಯ ಮೂಲಕ ಸಾಗಿಬರಲು ಸಾಧ್ಯವಿಲ್ಲ; ಎರಡು, ನೆರೆಹೊರೆಯವರ ತೈಲಬಾವಿಗಳು ಮತ್ತು ಸಂಸ್ಕರಣಾಗಾರಗಳನ್ನು ಇರಾನ್ ಗುರಿಯಾಗಿಸಿಕೊಂಡರೂ ಕಡುಕಷ್ಟ, ಮೂರು, ಯೆಮೆನ್ ನಲ್ಲಿರುವ ಇರಾನ್‌ನ ಪ್ರಾಕ್ಸಿಗಳು ಮತ್ತೊಮ್ಮೆ ಕೆಂಪು ಸಮುದ್ರದ ಮಾರ್ಗವನ್ನು ಮುಚ್ಚಿದರೆ, ಅವುಗಳ ನೇರ ಪರಿಣಾಮ ಭಾರತ ಮತ್ತು ಚೀನಾದ ತೈಲ ಮಾರುಕಟ್ಟೆಗೆ ತಟ್ಟುತ್ತದೆ. ತೈಲ ಟ್ಯಾಂಕರ್‌ಗಳು ಮಾರ್ಗ ಬದಲಿಸಿ ದಕ್ಷಿಣ ಆಫ್ರಿಕಾವನ್ನು ಸುತ್ತುವರಿದು ಬಂದರೆ, ಸರಕು ಸಾಗಣೆ ವೆಚ್ಚಗಳು ಶೇ.೬೦ರವರೆಗೆ ತಲುಪಲೂಬಹುದು.

ಹರ್ಮುಜ್ ಜಲಸಂಧಿಯ ಮೂಲಕ ಪ್ರತಿದಿನ ಸುಮಾರು ೨೦ ದಶಲಕ್ಷ ಬ್ಯಾರೆಲ್ ತೈಲ ಹರಿಯುತ್ತದೆ. ಈ ಪ್ರಮಾಣವು ಭಾರತ-ಚೀನಾ ಒಟ್ಟು ದೈನಂದಿನ ಬೇಡಿಕೆಗೆ ಸರಿಸುಮಾರು ಸಮ. ಅದನ್ನು ಬದಲಾಯಿಸಲು ಯಾವುದೇ ಸುಲಭ ಮಾರ್ಗವಿಲ್ಲ. ಅಮೆರಿಕದ ಒತ್ತಡದಿಂದಾಗಿ ಭಾರತವು ರಷ್ಯಾದ ಸರಬರಾಜುಗಳನ್ನು ತಗ್ಗಿಸಿದ ನಂತರ, ಇರಾಕ್ ಮತ್ತು ಸೌದಿ ಅರೇಬಿಯಾದಿಂದ ತೈಲದ ಮೇಲಿನ ಅವಲಂಬನೆ ಹೆಚ್ಚಾಗಿದೆ. ವೆನಿಜುವೆಲಾ ದಿನಕ್ಕೆ ೧೦ ಲಕ್ಷ ಬ್ಯಾರಲ್‌ ಗಿಂತ ಕಡಿಮೆ ಉತ್ಪಾದಿಸುತ್ತಿರುವುದರಿಂದ, ಭಾರತಕ್ಕೆ ಅದು ಪರ್ಯಾಯವಾಗಿಲ್ಲ. ಬ್ರೆಜಿಲ್ ಮತ್ತು ಅಮೆರಿಕದ ಪೂರೈಕೆಯನ್ನೂ ಭಾರತ ಸದ್ಯಕ್ಕೆ ನಿರೀಕ್ಷಿಸಲಾಗದು. ಯುದ್ಧಕ್ಕೆ ತೆರೆ ಬಿದ್ದರಷ್ಟೇ ತೈಲ ದರ ಏರಿಕೆ ಬ್ಯಾರೆಲ್‌ಗೆ ೧೦೦ ಡಾಲರ್ ತಲುಪುವುದನ್ನು ತಡೆಯಬಹುದಷ್ಟೇ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ. ೦೩-೦೩-೨೦೨೬

ಚಿತ್ರ ಕೃಪೆ: ಅಂತರ್ಜಾಲ ತಾಣ