ಕಳೆದ ಕೆಲವು ದಿನಗಳಿಂದ ಅಮೇರಿಕಾ ಮತ್ತು ಇಸ್ರೇಲ್ ದೇಶಗಳು ಜಂಟಿಯಾಗಿ ಇರಾನ್ ಮೇಲೆ ಯುದ್ಧವನ್ನು ನಡೆಸುತ್ತಿವೆ. ಇರಾನ್ ಬಹುದೊಡ್ಡ ತೈಲ ಪೂರೈಕೆ ಮಾಡುವ ದೇಶವಾದ ಕಾರಣ ಪ್ರಪಂಚದ ಬಹುತೇಕ ರಾಷ್ಟ್ರಗಳು ತಮ್ಮ ತಮ್ಮ ತೈಲ ಸಂಗ್ರಹದ ಬಗ್ಗೆ ಚಿಂತಿತರಾಗಿದ್ದಾರೆ. ಭಾರತವೂ ಇರಾನ್, ರಷ್ಯಾ, ಸೌದಿ ಅರೇಬಿಯಾ, ವೆನಿಜುವೆಲಾ ಮೊದಲಾದ ದೇಶಗಳಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮಲ್ಲಿ ತೈಲ ಕೊರತೆ ಕಾಣಿಸದೇ ಹೋದರೂ ಬೆಲೆ ಏರುವ ಎಲ್ಲಾ ಸಾಧ್ಯತೆಗಳು ಇವೆ. ೩-೪ ವಾರಗಳ ಬಳಿಕವೂ ಯುದ್ಧ ನಿಲ್ಲದೇ ಹೋದಲ್ಲಿ ತೈಲದ ಕೊರತೆಯೂ ಕಾಣಿಸಿಕೊಳ್ಳಬಹುದು. ಈ ತೈಲ ಸಾಗಾಟಕ್ಕೆ ಪ್ರಮುಖವಾಗಿ ಬಳಕೆಯಾಗುವ ದಾರಿ ಹರ್ಮುಜ್ ಜಲಸಂಧಿ. ಈ ಬಗ್ಗೆ ಸಂಪೂರ್ಣವಾದ ವಿವರ ‘ವಿಶ್ವವಾಣಿ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದನ್ನು ಪತ್ರಿಕೆಯ ಸೌಜನ್ಯದೊಂದಿಗೆ ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ.
***
ಒಂದು ವಾರದಿಂದ ಹರ್ಮುಜ್ ಜಲಸಂಧಿ (Strait of Hormuz) ಸುದ್ದಿಯಲ್ಲಿದೆ. ಮಧ್ಯಪ್ರಾಚ್ಯ ದೇಶಗಳ ನಡುವೆ ಸಂಘರ್ಷವುಂಟಾದಾಗಲೆಲ್ಲ ಹರ್ಮುಜ್ ಮುನ್ನೆಲೆಗೆ ಬರುವುದನ್ನು ಗಮನಿಸಿರಬಹುದು. ಇದಕ್ಕೆ ಕಾರಣಗಳೇನು ಎಂಬುದನ್ನು ಗಮನಿಸೋಣ. ಇದು ಕೇವಲ ಒಂದು ಜಲಮಾರ್ಗವಲ್ಲ, ಜತೆಗೆ ಜಾಗತಿಕ ಆರ್ಥಿಕತೆಯ 'ನಾಡಿಮಿಡಿತ'. ಪರ್ಷಿಯನ್ ಕೊಲ್ಲಿ ಮತ್ತು ಓಮಾನ್ ಕೊಲ್ಲಿಯನ್ನು ಸಂಪರ್ಕಿಸುವ ಈ ಕಿರಿದಾದ ಸಮುದ್ರಮಾರ್ಗವು ವಿಶ್ವದ ಅತ್ಯಂತ ಆಯಕಟ್ಟಿನ ಜಲಮಾರ್ಗಗಳಲ್ಲಿ ಒಂದು, ಹರ್ಮುಜ್ ಜಲಸಂಧಿಗಿರುವ ಮಹತ್ವವೆಂದರೆ ಅದು ಜಾಗತಿಕ ತೈಲ ಪೂರೈಕೆಯ ಮಹಾದ್ವಾರ, ವಿಶ್ವದಲ್ಲಿ ಪ್ರತಿದಿನ ಬಳಕೆಯಾಗುವ ಒಟ್ಟು ತೈಲದ ಸುಮಾರು ಶೇ.೨೦ರಿಂದ ಶೇ.೩೦ರಷ್ಟು ಈ ಜಲಸಂಧಿಯ ಮೂಲಕವೇ ಸಾಗುತ್ತದೆ. ಸೌದಿ ಅರೇಬಿಯಾ, ಇರಾನ್, ಯುಎಇ, ಕುವೈತ್ ಮತ್ತು ಇರಾಕ್ನಂಥ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳು ತಮ್ಮ ಕಚ್ಚಾತೈಲವನ್ನು ಜಗತ್ತಿಗೆ ತಲುಪಿಸಲು ಈ ಮಾರ್ಗವನ್ನೇ ಅವಲಂಬಿಸಿವೆ. ಕತಾರ್ ವಿಶ್ವದ ಅತಿದೊಡ್ಡ ಎಲ್ಎನ್ಜಿ ರಫ್ತುದಾರರಲ್ಲಿ ಒಂದಾಗಿದ್ದು, ಅದರ ಬಹುತೇಕ ರಫ್ತು ಈ ಮಾರ್ಗದಲ್ಲೇ ನಡೆಯುತ್ತದೆ. ಈ ಜಲಸಂಧಿಯು ಪ್ರದೇಶವಾಗಿದ್ದು, ಇದರ ಅತ್ಯಂತ ಕಿರಿದಾದ ಭಾಗವು ಕೇವಲ ೩೩ ಕಿಲೋಮೀಟರ್ ಅಗಲವಿದೆ. ಇಲ್ಲಿ ಹಡಗುಗಳು ಸಂಚರಿಸಲು ಇರುವ ಲೇನ್ಗಳು ಕೇವಲ ೩ ಕಿಲೋಮೀಟರ್ ಅಗಲವಾಗಿವೆ. ಇದರ ಉತ್ತರ ಭಾಗದಲ್ಲಿ ಇರಾನ್ ಮತ್ತು ದಕ್ಷಿಣ ಭಾಗದಲ್ಲಿ ಓಮಾನ್ ಹಾಗೂ ಯುಎಇ ದೇಶಗಳಿವೆ. ಇಷ್ಟು ಕಿರಿದಾದ ಮಾರ್ಗವಾಗಿರುವುದರಿಂದ, ಯಾವುದೇ ಸಣ್ಣ ಸಂಘರ್ಷ ಉಂಟಾದರೂ ಇಡೀ ಸಂಚಾರ ವ್ಯವಸ್ಥೆ ಸ್ಥಗಿತಗೊಳ್ಳುವ ಅಪಾಯವಿರುತ್ತದೆ. ಹರ್ಮುಜ್ ಜಲಸಂಧಿಯಲ್ಲಿ ಸಂಚಾರ ವ್ಯತ್ಯಯವಾದರೆ ಅದರ ನೇರ ಪರಿಣಾಮ ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಮೇಲೂ ಆಗುತ್ತದೆ ಎಂಬುದು ಗಮನಾರ್ಹ. ಈ ಮಾರ್ಗದಲ್ಲಿ ಅಡಚಣೆಯುಂಟಾದರೆ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರುತ್ತವೆ. ಇದು ಸಾರಿಗೆ ವೆಚ್ಚವನ್ನು ಹೆಚ್ಚಿಸಿ, ಆಹಾರ ಪದಾರ್ಥಗಳಿಂದ ಹಿಡಿದು ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆಗೆ ಕಾರಣವಾಗುತ್ತದೆ. ವಿಷಾದ ರಾಷ್ಟ್ರಗಳಾದ ಚೀನಾ, ಜಪಾನ್, ಭಾರತ ಮತ್ತು ದಕ್ಷಿಣ ಕೊರಿಯಾಗಳು ತಮ್ಮ ಇಂಧನ ಅಗತ್ಯತೆಗಾಗಿ ಈ ಮಾರ್ಗದ ಮೇಲೆ ಆತಿಯಾಗಿ ಅವಲಂಜಿತವಾಗಿವೆ. ಭಾರತಕ್ಕೆ ಹರ್ಮುಜ್ ಜಲಸಂಧಿಯು ಅತಿ ಮುಖ್ಯವಾದ 'ಜೀವನಾಡಿ' ಆಗಿದೆ. ಭಾರತವು ತನ್ನ ಕಚ್ಚಾ ತೈಲದ ಸುಮಾರು ಶೇ.೬೦ರಿಂದ ಶೇ.೭೦ರಷ್ಟು ಭಾಗವನ್ನು ಪಶ್ಚಿಮ ವಿಷ್ಯಾದ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ ಬಹುಪಾಲು ಹರ್ಮುಜ್ ಜಲಸಂಧಿಯ ಮೂಲಕವೇ ಬರುತ್ತದೆ. ಅಡುಗೆ ಅನಿಲ ಮತ್ತು ಕೈಗಾರಿಕಾ ಅನಿಲದ ಪೂರೈಕೆಯೂ ಇದೇ ಮಾರ್ಗವನ್ನು ಅವಲಂಬಿಸಿದೆ. ಇಲ್ಲಿನ ಯಾವುದೇ ಅಸ್ಥಿರತೆಯು ಭಾರತದ ಇಂಧನ ಭದ್ರತೆಗೆ ದೊಡ್ಡ ಸವಾಲಾಗುತ್ತದೆ.
ಹರ್ಮುಜ್ ಜಲಸಂಧಿಯು ಯಾವಾಗಲೂ ಭೌಗೋಳಿಕ ರಾಜಕೀಯದ (Geopolitics) ಕೇಂದ್ರವಾಗಿದೆ. ಇರಾನ್ ಮತ್ತು ಅಮೆರಿಕದ ನಡುವಿನ ಉದ್ವಿಗ್ನತೆಯ ಸಮಯದಲ್ಲಿ, ಇರಾನ್ ಈ ಜಲಸಂಧಿಯನ್ನು ಮುಚ್ಚುವ ಬೆದರಿಕೆಯನ್ನು ಹಲವು ಬಾರಿ ಹಾಕಿದೆ. ಇದು ಅಂತಾರಾಷ್ಟ್ರೀಯ ಸಮುದಾಯಕ್ಕೆ ದೊಡ್ಡ ಆತಂಕದ ವಿಷಯ. ಈ ಜಲಮಾರ್ಗವನ್ನು ಸುರಕ್ಷಿತವಾಗಿಡಲು ಅಮೆರಿಕ ಸೇರಿದಂತೆ ಹಲವು ದೇಶಗಳ ನೌಕಾಪಡೆಗಳು ಇಲ್ಲಿ ನಿರಂತರ ಗಸ್ತು ತಿರುಗುತ್ತವೆ. ಇದನ್ನು ಮುಕ್ತವಾಗಿರಿಸುವುದು ಜಾಗತಿಕ ಹಿತಾಸಕ್ತಿಯಾಗಿದೆ. ಹರ್ಮುಜ್ ಜಲಸಂಧಿಗೆ ಸಮನಾದ ಸುಲಭವಾದ ಪರ್ಯಾಯ ಮಾರ್ಗಗಳು ಸದ್ಯಕ್ಕೆ ಲಭ್ಯವಿಲ್ಲ, ಸೌದಿ ಅರೇಬಿಯಾ ಮತ್ತು ಯುಎಇ ಕೆಲವು ಪೈಪ್ಲೈನ್ ಗಳನ್ನು ನಿರ್ಮಿಸಿದ್ದರೂ, ಅವು ಹರ್ಮುಜ್ ಮೂಲಕ ಸಾಗುವ ಬೃಹತ್ ಪ್ರಮಾಣದ ತೈಲವನ್ನು ಸಾಗಿಸುವ ಸಾಮರ್ಥ್ಯ ಹೊಂದಿಲ್ಲ. ಆದ್ದರಿಂದ, ಸಮುದ್ರಮಾರ್ಗವೇ ಅನಿವಾರ್ಯವಾಗಿದೆ. ಹರ್ಮುಜ್ ಜಲಸಂಧಿಯು ಜಗತ್ತಿನ ಇಂಧನ ಹಸಿವನ್ನು ನೀಗಿಸುವ ಅತ್ಯಂತ ನಿರ್ಣಾಯಕ ಕೊಂಡಿಯಾಗಿದೆ. ಇಲ್ಲಿನ ಶಾಂತಿ ಮತ್ತು ಮುಕ್ತ ಸಂಚಾರವು ಗಲ್ ರಾಷ್ಟ್ರಗಳಿಗೆ ಮಾತ್ರವಲ್ಲದೇ, ಇಡೀ ಜಗತ್ತಿನ ಆರ್ಥಿಕ ಸ್ಥಿರತೆಗೆ ಅತ್ಯಗತ್ಯ. ಇದು ವಿಶ್ವದ ಅತ್ಯಂತ ಪ್ರಭಾವಶಾಲಿ 'ಚೋಕ್ ಪಾಯಿಂಟ್ ' ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
(ಕೃಪೆ: ವಿಶ್ವವಾಣಿ)
ಚಿತ್ರ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!