ಬೀಚಿಯವರದು ಬ್ರಾಹ್ಮಣ ಕುಟುಂಬ. ಅವರ ಹೆಂಗಸರು ಮಕ್ಕಳಲ್ಲಿ ಪೋಲಿ ಪದ ಬಳಸಿದರೆ 'ಶೂದ್ರ ಮುಂಡೇದು' ಆಗಿಬಿಡುತ್ತಾರೆ. ಹಾಗಾಗಿ ಬೀಚಿ ಅವರ ಮನೆಯಲ್ಲಿ ಪೋಲಿ ಪದಗಳು ನಿಷಿದ್ಧ. ಆದ್ದರಿಂದ ಅವರ ಸಣ್ಣ ಮಗನಿಗೆ ಮೂತ್ರ ಮಾಡುವ ಅಂಗಕ್ಕೆ 'ಬೊಂಬಾಯಿ' ಅಂತ ಹೇಳಿ ಕೊಟ್ಟಿರುತ್ತಾರೆ.
ಬೀಚಿಯವರು ಮದರಾಸಿನಲ್ಲಿ ಕೆಲಸ ಮಾಡುವಾಗ ಒಂದು ಸಂಜೆ ಬೀಚಿ ಕೆಲಸದಿಂದ ಮನೆಗೆ ಬಂದಾಗ ಅವರ ಸಣ್ಣ ಮಗ ಅಳ್ತಾ ಇರ್ತಾನೆ. ಮನೆಯಲ್ಲಿ ಯಾರೋ ಇಬ್ಬರು ಪರಿಚಯದ ಹೆಂಗಸರು ಬಂದು ಕೂತಿರುತ್ತಾರೆ. ಬೀಚಿಯವರ ಹೆಂಡತಿ ಅಳುತ್ತಿರುವ ಮಗನ ಕಡೆ ಗಮನ ಕೊಡದೆ ಬಂದಿರುವ ಅತಿಥಿಗಳಿಗೆ ಉಪಚಾರ ಮಾಡುತ್ತಿರುತ್ತಾರೆ. ಬೀಚಿಯವರಿಗೆ ಸಿಟ್ಟು ಬಂದು ಮಗನನ್ನು ತಕ್ಷಣ ಎತ್ತಿಕೊಂಡು ರಮಿಸುತ್ತಾ ಸಮಾಧಾನ ಮಾಡುತ್ತಾರೆ. ಆದರೆ ಮಗು ಸಮಾಧಾನವಾಗಲೊಲ್ಲದು. ಆಚೆ ಕರೆದುಕೊಂಡು ಹೋಗಿ ತಿಂಡಿ ತಿನಿಸು ಕೊಡಿಸುತ್ತಾರೆ. ಆದರೂ ಮಗು ಸಮಾಧಾನವಾಗುತ್ತಿಲ್ಲ. ಆದರೆ ತಿಂಡಿ ಕೈಗೆ ಸಿಕ್ಕಿದ ಮೇಲೆ ಅಮ್ಮ ಹೊಡೆದಳು ಎಂಬ ತಾನು ಅಳುತ್ತಿರುವುದರ ಕಾರಣವನ್ನು ಮಗು ಹೇಳುತ್ತದೆ. ಬೀಚಿ ಮಗು ಎತ್ತಿಕೊಂಡು ಕೋಪದಿಂದ ವಾಪಸ್ ಮನೆಗೆ ಬರುತ್ತಾರೆ. ಮಗುವಿಗೆ ಯಾಕೆ ಹೊಡೆದೆ ಎಂದು ಹೆಂಡತಿಯನ್ನು ಕೇಳುತ್ತಾರೆ. ಆಮೇಲೆ ಮಾತನಾಡೋಣ ಇರಿ ಎಂದು ಆಕೆ ಹೇಳುತ್ತಾರೆ. ಮನೆಗೆ ಬಂದ ಅತಿಥಿಗಳು ಹೋಗುವವರೆಗೆ ತಾಳ್ಮೆಯಿಂದ ಇದ್ದ ಬೀಚಿ ಅವರು ಹೋದ ತಕ್ಷಣ ಕೇಳುತ್ತಾರೆ, "ಹೇಳು ಯಾಕೆ ಹೊಡೆದೆ ಮಗುವನ್ನು" ಎಂದು. ಅವನನ್ನೇ ಕೇಳಿ ಎನ್ನುತ್ತಾರೆ ಅವರ ಹೆಂಡತಿ. ಕೊನೆಗೆ ಅವರೇ ಇಡೀ ವೃತ್ತಾಂತವನ್ನು ಹೇಳುತ್ತಾರೆ. ಮನೆಗೆ ಬಂದ ಅತಿಥಿಗಳು ಮಾತನಾಡುತ್ತಾ "ಹೇಗೋ ದೇವರ ದಯದಿಂದ ಮದರಾಸು ನೋಡಿ ಆಯ್ತು. ಇನ್ನು ಬೊಂಬಾಯಿ ಒಂದು ನೋಡಬೇಕು" ಎನ್ನುತ್ತಾರೆ. ಕೂಡಲೇ ಅಲ್ಲೇ ಇದ್ದ ಇವರ ಮಗ "ಇಗೋ ಇಲ್ಲಿ ನೋಡಿ" ಎಂದು ಚೆಡ್ಡಿ ಬಿಚ್ಚಿ ತೋರುತ್ತಾನೆ. ಕಥೆ ಕೇಳಿಸಿಕೊಂಡ ಬೀಚಿ ಬಿದ್ದು ಬಿದ್ದು ನಗುತ್ತಾರೆ.
(ಬೀಚಿಯವರ ಆತ್ಮಕಥೆ "ನನ್ನ ಭಯಾಗ್ರಫಿ"ಯಲ್ಲಿ ವರ್ಣಿತವಾದ ಪ್ರಸಂಗ)
ಸಂಗ್ರಹ : ರಾಜೇಶ್ ಐತಾಳ್, ಸುರತ್ಕಲ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!