ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ ೨೦೨೬-೨೭ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ರಾಜ್ಯದ ಎಲ್ಲ ೩೧ ಜಿಲ್ಲೆಗಳು ಹಾಗೂ ಎಲ್ಲ ವಲಯಗಳನ್ನು ತಲುಪಲು ಪ್ರಯತ್ನಿಸಿರುವುದೇ ಅಲ್ಲದೆ ವಿವಿಧ ಅಭಿವೃದ್ಧಿ ಮತ್ತು ಜನಪರ ಯೋಜನೆಗಳನ್ನು ಘೋಷಿಸಿ ಅನುದಾನವನ್ನು ಮೀಸಲಿರಿಸಿದ್ದಾರೆ. ಇದೇ ವೇಳೆ ಆದಾಯ ಕ್ರೋಡೀಕರಣಕ್ಕಾಗಿ ಅಬಕಾರಿ ಕಾಯ್ದೆಗೆ ತಿದ್ದುಪಡಿ ಸಹಿತ ಪ್ರಮುಖ ಇಲಾಖೆಗಳಿಗೆ ಗುರಿಯನ್ನು ನಿಗದಿಪಡಿಸಿದ್ದಾರಲ್ಲದೆ ಯಥಾಪ್ರಕಾರ ಭಾರೀ ಪ್ರಮಾಣದ ಸಾಲದ ಮೊರೆ ಹೋಗಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಆರ್ಥಿಕ ಶಿಸ್ತನ್ನು ಕಾಯ್ದುಕೊಳ್ಳುವಲ್ಲಿ ಸರಕಾರ ಸಫಲವಾಗಿದೆ ಎಂದು ಸಿಎಂ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿರುವರಾದರೂ ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ ರಾಜ್ಯದ ಸಾಲದ ಪ್ರಮಾಣ ಬರೋಬ್ಬರಿ ೭,೬೪,೬೫೫ ಕೋ. ರೂ. ಗಳಿಗೇರಿರುವುದು ತೀರಾ ನಿರಾಶಾದಾಯಕ.

ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಮೀಸಲಿರಿಸುವ ಮೂಲಕ ಈ ಕುರಿತ ಎದ್ದಿದ್ದ ಎಲ್ಲ ಊಹಾಪೋಹಗಳಿಗೆ ಸಿಎಂ ತೆರೆ ಎಳೆದಿದ್ದಾರೆ. ಈ ಪಂಚ ಗ್ಯಾರಂಟಿಗಳ ಭರವಸೆಯ ಮೇಲೆಯೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಏಕಾಏಕಿ ಈ ಯೋಜನೆಗಳನ್ನು ಕೈಬಿಟ್ಟಲ್ಲಿ ಜನತೆಯ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುವ ಭೀತಿಯಿಂದ ಸರಕಾರ ಈ ಯೋಜನೆಗಳಿಗೆ ಅನುದಾನವನ್ನು ಮೀಸಲಿರಿಸಿದಂತೆ ತೋರುತ್ತಿದೆ. ಈ ಮುಂಗಡಪತ್ರದಲ್ಲಿ ಶಿಕ್ಷಣ ಇಲಾಖೆಗೆ ಗರಿಷ್ಠ ೪೭,೨೨೪ ಕೋ.ರೂ. ಅನು ದಾನವನ್ನು ಮೀಸಲಿರಿಸಲಾಗಿದ್ದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ೩೧,೯೨೯ ಕೋ.ರೂ. ಹಣವನ್ನು ತೆಗೆದಿರಿಸಲಾಗಿದೆ. ಆದಾಗ್ಯೂ ಮುಖ್ಯಮಂತ್ರಿ ಅವರು ಅನುದಾನ ಹಂಚಿಕೆ ವೇಳೆ ಇಲಾಖೆಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಕಸರತ್ತು ನಡೆಸಿರುವುದಂತೂ ಸ್ಪಷ್ಟ.

ಇನ್ನು ರಾಜ್ಯದ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿ ಕೊಂಡು ಆಯಾಯ ಜಿಲ್ಲೆಯ ಭೌಗೋಳಿಕ ಮತ್ತು ಸಾಮಾಜಿಕ ಅವಶ್ಯಕತೆಗಳನ್ನು ಗಮನ ದಲ್ಲಿರಿಸಿಕೊಂಡು ಮುಖ್ಯಮಂತ್ರಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದ್ದಾರೆ. ಜಿಲ್ಲಾವಾರು ಅನುದಾನ ಹಂಚಿಕೆಯ ಸಂದರ್ಭದಲ್ಲೂ ಮೂಲಸೌಕರ್ಯ, ಆರೋಗ್ಯ, ನೀರಾವರಿ, ಸಾರಿಗೆ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ. ಹೊಸ ಯೋಜನೆಗಳ ಜತೆಯಲ್ಲಿ ಸರಕಾರದ ಈ ಹಿಂದಿನ ಕೆಲವು ಯೋಜನೆಗಳಿಗೆ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಶಕ್ತಿ ತುಂಬಲಾಗಿದೆ. ಮಂಗಳೂರಿನಲ್ಲಿ ಐಟಿ ಪಾರ್ಕ್, ರಾಜ್ಯದ ೨ನೇ ಐಟಿ ನಗರವಾಗಿ ಮೈಸೂರು ಅಭಿವೃದ್ಧಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಸ್ಥಾಪನೆ, ರಾಜ್ಯದ ದ್ವಿತೀಯ ಮತ್ತು ತೃತೀಯ ಸ್ತರದ ನಗರಗಳ ಅಭಿವೃದ್ಧಿ ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ, ಪ್ರವಾಸಿ ಮಾರ್ಗದರ್ಶಕರಿಗೆ ಕೌಶಲ ತರಬೇತಿಗಾಗಿ ಡಿಪ್ಲೊಮಾ ಕೋರ್ಸ್ ಮತ್ತಿತರ ಅಭಿವೃದ್ಧಿ ಮತ್ತು ಜನಪರ ಯೋಜನೆಗಳನ್ನು ಈ ಬಜೆಟ್ ಒಳಗೊಂಡಿದೆ. ೧೬ ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸುವುದಾಗಿ ಮುಖ್ಯಮಂತ್ರಿಗಳು ಪ್ರಕಟಿಸಿರುವರಾದರೂ ಇದು ಯಾವ ರೀತಿಯಲ್ಲಿ ಅನುಷ್ಟಾನಕ್ಕೆ ಬರಲಿದೆ ಎಂಬುದನ್ನು ಕಾದುನೋಡಬೇಕು. ಹೆಚ್ಚುತ್ತಿರುವ ವಿತ್ತೀಯ ಕೊರತೆ, ಸಾಲದ ಹೊರೆಯ ನಡುವೆ ಈಗ ಬಜೆಟ್ ನಲ್ಲಿ ಘೋಷಿಸಲಾಗಿರುವ ಯೋಜನೆಗಳಿಗೆ ಸರಕಾರ ಹೇಗೆ ಹಣ ಹೊಂದಿಸಲಿದೆ ಎಂಬುದೇ ಸದ್ಯದ ಕುತೂಹಲ, ಆಡಳಿತದಲ್ಲಿ ವೆಚ್ಚ ಕಡಿತ, ದುಂದುವೆಚ್ಚಗಳಿಗೆ ಲಗಾಮು, ಆದಾಯ ಸೋರಿಕೆಗೆ ಕಡಿವಾಣದಂತಹ ಕಠಿನ ನಿಲುವುಗಳನ್ನು ತೆಳೆಯದೇ ಹೋದಲ್ಲಿ ಈ ಎಲ್ಲ ಅಭಿವೃದ್ಧಿ ಮತ್ತು ಜನಪರ ಯೋಜನೆಗಳ ಅನುಷ್ಠಾನ ಕಷ್ಟಸಾಧ್ಯವಾಗಬಹುದು.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೭-೦೩-೨೦೨೬

ಚಿತ್ರ ಕೃಪೆ: ಅಂತರ್ಜಾಲ ತಾಣ