ರಾತ್ರಿ ಹೊತ್ತು ಉಗುರು ಕತ್ತರಿಸಿಕೊಳ್ಳುವಾಗ ಹಿರಿಯರು ಯಾರಾದರೂ ನೋಡಿದರೆ, ರಾತ್ರಿ ಕತ್ತರಿಸಬೇಡ, ಹಗಲಿನಲ್ಲಿ ಈ ಕೆಲಸ ಮಾಡು ಎನ್ನುತ್ತಾರೆ. ಆಗ ನಮಗೆ ಕಿರಿಕಿರಿಯಾಗುತ್ತದೆ. ಅಷ್ಟೇ ಅಲ್ಲ, "ಏನಿದು ತಮಾಷೆ' ಎಂದು ನಗುತ್ತೇವೆ. ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣವಿದೆ.

ವೈಜ್ಞಾನಿಕ ಕಾರಣ ಒಂದೆಡೆಯಾದರೆ, ಹಿರಿಯರು ಈ ನಿಯಮವನ್ನು ಮಾಡಲು ಕಾರಣವೇನೆಂದು ನೋಡೋಣ. ಮೊದಲನೆಯದಾಗಿ ಹಿಂದೂ ಪುರಾಣಗಳ ಪ್ರಕಾರ, ರಾತ್ರಿಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚು ಎಂದು ನಂಬಲಾಗಿದೆ. ಆ ಸಮಯದಲ್ಲಿ ನಮ್ಮ ದೇಹದಲ್ಲಿ ಸಂಭವಿಸುವ ಯಾವುದೇ ಬದಲಾವಣೆ ದೇಹವು ತಕ್ಷಣವೇ ಆ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ.

ಇದು ಹಿರಿಯರು ಕೊಡುವ ಕಾರಣ. ಇವುಗಳನ್ನು ನಂಬುವುದು ಬಿಡುವುದು ನಿಮ್ಮ ವೈಯಕ್ತಿಕ ವಿಷಯ. ಆದರೆ ಈ ಮೊದಲೇ ಹೇಳಿದ ಹಾಗೆ ಇದರ ಹಿಂದೆ ಕೆಲವು ವೈಜ್ಞಾನಿಕ ಕಾರಣಗಳೂ ಇವೆ. ಕೆಲವರು ದಿನವಿಡೀ ತಿರುಗಾಡಿ ಮನೆಗೆ ಬಂದಿರುತ್ತಾರೆ. ಆಚೆ ಅನೇಕ ಕೆಲಸಗಳನ್ನು ಮಾಡಿರುತ್ತಾರೆ. ಆಗ ಉಗುರುಗಳಲ್ಲಿ ವಿವಿಧ ರೀತಿಯ ಧೂಳು, ಕೊಳಕು ಮತ್ತು ಬ್ಯಾಕ್ಟಿರಿಯಾಗಳು ಸೇರಿಕೊಳ್ಳುತ್ತವೆ. ಅಂತಹ ಸಮಯದಲ್ಲಿ ಉಗುರುಗಳನ್ನು ಕಟ್ ಮಾಡಿದರೆ ಆ ಎಲ್ಲಾ ಬ್ಯಾಕ್ಟಿರಿಯಾಗಳು ಹರಡುತ್ತವೆ. ಒಂದು ವೇಳೆ ನೀವು ಆ ಬೆರಳುಗಳನ್ನು ನಿಮ್ಮ ಬಾಯಿ ಮತ್ತು ಮೂಗಿನ ಮೇಲಿಟ್ಟರೆ ಬ್ಯಾಕ್ಟಿರಿಯಾಗಳು ಅಲ್ಲಿಯೂ ಹರಡುತ್ತವೆ. ಅದೇ ನಿಮ್ಮ ಕೈ ಅಥವಾ ಉಗುರುಗಳು ಸ್ವಚ್ಛವಾಗಿರುವಾಗ ಉಗುರುಗಳನ್ನು ಕಟ್ ಮಾಡುವುದರಿಂದ ಯಾವುದೇ ಹಾನಿ ಇರಲ್ಲ.

ಈಗ ಬಿಡಿ, ನಮ್ಮಲ್ಲಿ ಎಲ್ಲಾ ರೀತಿಯ ದೀಪಗಳು ಲಭ್ಯವಿದೆ. ಆದರೆ ಅವುಗಳು ಇಲ್ಲದ ಒಂದು ಕಾಲವಿತ್ತು. ಜನರು ರಾತ್ರಿಯಿಡೀ ದೀಪಗಳನ್ನು ಹಚ್ಚಿಕೊಂಡು ಮಲಗುತ್ತಿದ್ದರು. ಆ ಕತ್ತಲೆಯಲ್ಲಿ ನೀವು ನಿಮ್ಮ ಉಗುರುಗಳನ್ನು ಕತ್ತರಿಸಲು ಪ್ರಯತ್ನಿಸಿದರೆ ಆಕಸ್ಮಿಕವಾಗಿ ನಿಮ್ಮ ಬೆರಳುಗಳನ್ನು ತುಂಡು ಮಾಡಿಕೊಳ್ಳುವ ಅಪಾಯವಿರುತ್ತಿತ್ತು. ಅದಕ್ಕಾಗಿಯೇ ಈ ನಿಯಮವನ್ನು ಆಗ ತರಲಾಯಿತು. ಇದಲ್ಲದೆ ಸಂಜೆಯ ಹೊತ್ತಿಗೆ ದೇಹವು ಸಂಪೂರ್ಣವಾಗಿ ವಿಶ್ರಾಂತಿ ಪಡೆಯುತ್ತಿರುತ್ತದೆ. ಆ ಸಮಯದಲ್ಲಿ ನೀವು ನಿಮ್ಮ ಉಗುರುಗಳನ್ನು ಕತ್ತರಿಸುವ ಕೆಲಸಗಳನ್ನು ಮಾಡಿದರೆ ಈ ವಿಶ್ರಾಂತಿಗೆ ಅನಗತ್ಯವಾಗಿ ಅಡ್ಡಿಯಾಗುತ್ತದೆ. ಬಹುಶಃ ರಾತ್ರಿ ವೇಳೆ ನಿಮ್ಮ ಉಗುರುಗಳನ್ನು ಕತ್ತರಿಸಬೇಡಿ ಎಂದು ಹೇಳಲು ಇವೆಲ್ಲಾ ಒಂದು ಕಾರಣವಾಗಿರಬಹುದು.

ಈ ಕಾರಣಗಳೇ ಅಲ್ಲದೇ, ರಾತ್ರಿ ಹೊತ್ತು ನೀವು ಉಗುರು ಕತ್ತರಿಸಿದರೆ ಅದು ಕತ್ತಲಿನಲ್ಲಿ ಮನೆಯ ಒಳಗೇ ಎಲ್ಲಾದರೂ ಬಿದ್ದು ಹೋಗಿ, ನಾವು ತಿನ್ನುವ ಆಹಾರ ಪದಾರ್ಥಗಳಲ್ಲಿ ಅಥವಾ ಮನೆಯಲ್ಲಿ ಓಡಾಡುವ ಸಣ್ಣ ಮಕ್ಕಳ ಕೈಯಲ್ಲಿ ಸಿಕ್ಕಿ ತೊಂದರೆಗಳು ಉಂಟಾಗಬಹುದು. ಈ ಕಾರಣಗಳಿಗಾಗಿ ರಾತ್ರಿ ಹೊತ್ತು ಉಗುರು ಕತ್ತರಿಸಬಾರದು ಎನ್ನುತ್ತಾರೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ