ಬೆಂಗಳೂರು ರಸ್ತೆಗಳಲ್ಲೆಲ್ಲ ಗುಲಾಬಿ ರಂಗು ಚೆಲ್ಲಿದೆ. ಬೆಂಗಳೂರು ಪಿಂಕ್ ಸಿಟಿ 'ಆಗಿ ನಿವಾಸಿಗಳನ್ನು ಆಕರ್ಷಿಸುತ್ತಿದೆ, ಜೊತೆಗೆ ಮನಸ್ಸಿಗೆ ಖುಷಿ ನೀಡುತ್ತಿದೆ. ಎಲ್ಲೆಲ್ಲೂ ಸೌಂದರ್ಯವೆ.... ಹೇಗೆ ಅಂತೀರಾ... ? ಟಬೆಬುಯಾ ರೋಸಿಯಾ ಎಂಬ ಹೆಸರಿನ ಪಿಂಕ್ ಹೂವು ಬೆಂಗಳೂರಿನ ಬೀದಿ ಬೀದಿಗಳಲ್ಲಿ ಅರಳಿ ನಿಂತಿದೆ. ಇದನ್ನು ರೋಸಿ ಟ್ರಂಪೆಟ್ ಟ್ರೇ ಎಂದೂ ಕರೆಯುತ್ತಾರೆ. ಹಿಂದಿಯಲ್ಲಿ ಇದನ್ನು 'ಬಸಂತ್ ರಾಣಿ' ಎಂದು ಕರೆಯಲಾಗುತ್ತದೆ. ಟಬೆಬುಯಾ ಸಸ್ಯಶಾಸ್ತ್ರದ ಬಿನ್ನೋನಿಯೇಸಿ ಕುಟುಂಬಕ್ಕೆ ಸೇರಿದೆ. ಇದು ಮೂಲತಃ ಪೆರು ದೇಶದ ಹೂವು. ಈ ಗುಲಾಬಿ ಬಣ್ಣದ ಹೂಗಳು ಕಾಲಕ್ಕನುಗುಣವಾಗಿ ಅರಳುತ್ತವೆ. ಈ ಜಾತಿಯ ಮರಗಳು ದಕ್ಷಿಣ ಮೆಕ್ಸಿಕೋ, ವೆನೆಜುವೆಲಾ ಮತ್ತು ಈಕ್ವೆಡಾರ್‌ನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ಹೂವನ್ನು ಎಲ್-ಸಾಲ್ವೆಡಾರ್ ದೇಶ ತನ್ನ ರಾಷ್ಟ್ರೀಯ ಹೂವಾಗಿ ಘೋಷಿಸಿದೆ.

ಈ ಮರವನ್ನು ಹೆಚ್ಚಾಗಿ ಅಲಂಕಾರಿಕ ಮರವಾಗಿ ಉದ್ಯಾನಗಳಲ್ಲಿ ನೆಡಲಾಗುತ್ತದೆ. ಮಳೆಗಾಲದಲ್ಲಿ ಇದು ನೆರಳು ನೀಡುತ್ತದೆ. ಮಾರ್ಚ್ ತಿಂಗಳಿನಲ್ಲಿ, ವಸಂತ ಋತುವಿನಾಗಮನವಾದಂತೆ ಎಲೆಗಳು ಉದುರಿ ಹೂಗಳು ಅರಳಲು ಆರಂಭವಾಗುತ್ತವೆ. ಸುಮಾರು 30 ಮೀಟರು ಎತ್ತರದವರೆಗೆ ಬೆಳೆಯುವ ಇದು ಉಷ್ಣವಲಯದಲ್ಲಿ ಬೆಳೆಯುವ ಮರವಾಗಿದೆ. ಹೂವುಗಳು ನಸುಗುಲಾಬಿ, ಕಡುಗುಲಾಬಿ, ನಸುನೇರಳೆ... ಹೀಗೆ ವಿವಿಧ ಛಾಯೆಯಲ್ಲಿರುತ್ತವೆ. ಪರಾಗಸ್ಪರ್ಶವು ಕೀಟಗಳಿಂದ ಸಂಭವಿಸುತ್ತದೆ. ಹೂವುಗಳು ಟ್ಯಾನೇಜರ್, ಹಮ್ಮಿಂಗ್ ಬರ್ಡ್‌ ಮತ್ತು ಓರಿಯೊಲ್ ಗಳಂತಹ ಅನೇಕ ಪಕ್ಷಿಗಳನ್ನು ಆಕರ್ಷಿಸುತ್ತದೆ. ಇವುಗಳೂ ಪರಾಗಸ್ಪರ್ಶದಲ್ಲಿ ನೆರವಾಗುತ್ತವೆ. ಈ ಮರವು ಔಷಧೀಯ ಗುಣಗಳನ್ನೂ ಒಳಗೊಂಡಿದೆ. ತೊಗಟೆಯ ಕಷಾಯವನ್ನು ಔಷಧವಾಗಿ ಉಪಯೋಗಿಸುತ್ತಾರೆ.

ಇನ್ನು ಇವು ಬೆಂಗಳೂರಿಗೆ ಬಂದದ್ದು ಹೇಗೆ? ಬ್ರಿಟಿಷರ ಕಾಲ ಕೊನೆಗೊಳ್ಳುವ ಸಮಯ, ಆಗ ತಾನೇ ಸ್ವಾತಂತ್ರ್ಯ ಬಂದಿತ್ತು. ಆ ಸಮಯದಲ್ಲಿ ನಮ್ಮ ತೋಟಗಾರಿಕಾ ತಜ್ಞರು ಬೆಂಗಳೂರಿನಲ್ಲಿ ವಿವಿಧ ಜಾತಿಯ ಹೂವುಗಳು ಮತ್ತು ಸಸ್ಯಗಳನ್ನು ಬೆಳೆ ಯುವ ಬಗ್ಗೆ ಚರ್ಚಿಸಿ ಈ ಹೂವಿನ ಮರಗಳನ್ನು ಬೆಂಗಳೂರಿಗೆ ಉಡುಗೊರೆಯಾಗಿ ಕೊಟ್ಟರು. ಇವರಲ್ಲದೆ, ಬೆಂಗಳೂರನ್ನು ಉದ್ಯಾನ ನಗರವನ್ನಾಗಿಸುವುದರಲ್ಲಿ 80ರ ದಶಕದಲ್ಲಿ ಅರಣ್ಯ ಇಲಾಖೆ ಮುಖ್ಯಸ್ಥರಾಗಿದ್ದ ದಿವಂಗತ ಶ್ರೀ ಎಸ್. ಜಿ. ನೇಗಿನಾಳ್ (ಚಿತ್ರ 2) ಅವರದು ದೊಡ್ಡ ಕೊಡುಗೆಯಿದೆ.

ಬೆಂಗಳೂರಿನ ಲಾಲ್ ಬಾಗ್, ಜಯನಗರ 4ನೇ ಬ್ಲಾಕ್, ಕಬ್ಬನ್ ಪಾರ್ಕ್‌ಗೆ ಹೋದರೆ ಟಬೆಬುಯಾ ಸೌಂದರ್ಯವನ್ನು ಕಣ್ಣುಂಬಿಕೊಳ್ಳಬಹುದು. ಅಲ್ಲದೆ ನಗರದ ಅನೇಕ ಕಡೆ ರಸ್ತೆಗಳಲ್ಲಿ ಟಬೆಬುಯಾ ಮರಗಳನ್ನು ನೋಡಬಹುದು. ಹೊರಗೆ ಹೋದಾಗ ಈ ಹೂಗಳನ್ನು ನೋಡಲು ಮರೆಯದಿರಿ. ಒಮ್ಮೆ ಅತ್ತ ಕಣ್ಣು ಹಾಯಿಸಿ ನಿಮ್ಮ ಚಿಂತೆಯೆಲ್ಲ ಮರೆತುಬಿಡಿ. ಹಾಗೆಯೇ ಈ ಮರಗಳನ್ನು ನೆಡಿಸಿದವರಿಗೆ ನಮಿಸಿ.

-ವೀಣಾ ಭಟ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ