ಇತ್ತೀಚಿನ ವರ್ಷಗಳಲ್ಲಿ ಜನರು ದೇಹಾರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ತಮ್ಮ ದೇಹದಲ್ಲಿ ಅನಾವಶ್ಯಕವಾಗಿ ಕೊಬ್ಬು ಶೇಖರಣೆಗೊಳ್ಳದಂತೆ ಮುಂಜಾಗ್ರತೆ ವಹಿಸುತ್ತಾರೆ. ಏಕೆಂದರೆ ಕೊಬ್ಬಿನ ಅಧಿಕ ಸೇವನೆಯಿಂದ ದೇಹ ಸ್ಥೂಲವಾಗಿ ಬೆಳೆದು ಹೃದಯದ ಆರೋಗ್ಯಕ್ಕೆ ಧಕ್ಕೆ ಒಡ್ಡುತ್ತದೆ ಎಂಬುದು ಎಲ್ಲರಲ್ಲೂ ಮನವರಿಕೆಯಾಗಿದೆ. ಇತರೆ ಪ್ರಾಣಿ ಮೂಲ ಆಹಾರಗಳಿಗೆ ಹೋಲಿಸಿದರೆ, ಮೀನಿನಲ್ಲಿ ಕೊಬ್ಬಿನ ಅಂಶ ಕಡಿಮೆ ಇದೆ. (ಸಾಮಾನ್ಯವಾಗಿ ಶೇ. ೫ಕ್ಕಿಂತ ಕಡಿಮೆ) ಆದರೆ ಬೂತಾಯಿ (ಸಾರ್ಡಿನ್) ಯಂತಹ ಕೆಲವು ಮೀನುಗಳಲ್ಲಿ ಶೇ ೧೮-೨೦ ರವರೆಗೂ ಕೊಬ್ಬಿನ ಅಂಶ ಇರುತ್ತದೆ. ಮೀನಿನ ಕೊಬ್ಬಿನಲ್ಲಿ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾದ “ಅಸಂತೃಪ್ತ” ಮೇಧೋ ಆಮ್ಲಗಳ ಪ್ರಮಾಣ ಅಧಿಕವಾಗಿದ್ದು (ಶೇ. ೭೦), ಸಂತೃಪ್ತ ಮೇಧೋ ಆಮ್ಲಗಳ ಪ್ರಮಾಣ ಕಡಿಮೆ ಇರುತ್ತದೆ
ಸಂತೃಪ್ತ ಮೇದೋ ಆಮ್ಲಗಳ ಅಧಿಕ ಸೇವನೆ ಹೃದಯದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಏಕೆಂದರೆ, ಅಂಥಾ ಆಮ್ಲಗಳ ಅಧಿಕ ಸೇವನೆಯಿಂದ ರಕ್ತದಲ್ಲಿ "ಕೊಲೆಸ್ಟರಾಲ್" ಪ್ರಮಾಣ ಜಾಸ್ತಿಯಾಗಿ "ಅಥೆರೋ ಸಿಕ್ಲೊರೋಸಿಸ್" ಎಂಬ ಹೃದ್ರೋಗ ಉಂಟಾಗುತ್ತದೆ. ರಕ್ತದಲ್ಲಿ ಹೆಚ್ಚಿದ ಕೊಬ್ಬು, ಕೊಲೆಸ್ಟರಾಲ್, ಜೀವಕೋಶಗಳು ಮತ್ತು ಇತರೇ ತೇಲುಕಣಗಳು ಹೆಪ್ಪುಗಟ್ಟಿ ರಕ್ತನಾಳಗಳು ಕ್ರಮೇಣ ಮುಚ್ಚಿ ಹೋಗಿ ರಕ್ತ ಪರಿಚಲನೆಗೆ ಅಡ್ಡಿಯಾಗುವುದರಿಂದ ಈ ರೋಗ ಉಂಟಾಗುತ್ತದೆ. ರಕ್ತನಾಳಗಳು ಸಂಪೂರ್ಣ ಮುಚ್ಚಲ್ಪಟ್ಟಾಗ ರಕ್ತ ಪರಿಚಲನೆ ನಿಂತು ಹೃದಯ ಸ್ಥಂಭನವಾಗುತ್ತದೆ. ಆದ್ದರಿಂದ, ಸಂತ್ರಪ್ತ ಮೇಧೋ ಆಮ್ಲಗಳು ಅಧಿಕವಿರುವ ಆಹಾರಗಳ ಬಳಕೆಯ ಮೇಲೆ (ಅಧಿಕ ಕೊಬ್ಬಿನಿಂದ ಕೂಡಿದ ಮಾಂಸಾಹಾರಗಳು, ಡಾಲ್ಡ, ತುಪ್ಪ ಮುಂತಾದವು) ನಿಯಂತ್ರಣವಿರಬೇಕು.
ಸಮುದ್ರ ಮೂಲದ ಕೊಬ್ಬುಯುಕ್ತ ಮೀನುಗಳಲ್ಲಿ (ಮ್ಯಾಕರಲ್, ಹರ್ರಿಂಗೆ, ಸಾರ್ಡಿನ್ ಮುಂತಾದವು) ಒಮೇಗ-೩ ಎಂಬ ವಿಶಿಷ್ಟ ವರ್ಗದ ಕೊಬ್ಬು (ಲಿನೊಲಿನಿಕ್ ಗುಂಪಿಗೆ ಸೇರಿದ) ಇರುವುದರಿಂದ ಅದರ ನಿತ್ಯ ಬಳಕೆಯಿಂದ ಹೃದ್ರೋಗಕ್ಕೆ ಸಂಬಂಧಿಸಿದ ಮತ್ತು ರಕ್ತದಲ್ಲಿ ಕರಗಿರುವ ಕೊಲೆಸ್ಟರಾಲ್ ಮತ್ತು ಟ್ರೆಗ್ಲಿಸರೈಡ್ಸ್ ಎಂಬ ಕೊಬ್ಬುಗಳ ಮಟ್ಟವನ್ನು ತಗ್ಗಿಸಿ ತನ್ಮೂಲಕ ಹೃದ್ರೋಗ ತಡೆಗಟ್ಟುವ ಸಾಮರ್ಥ್ಯ ಅದಕ್ಕಿದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಈ ಸಂಬಂಧ ಸಾಕಷ್ಟು ವಾದ ವಿವಾದಗಳು ಸೃಷ್ಟಿಯಾಗಿವೆಯಾದರೂ, ವರ್ಷದ ಹಿಂದೆ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಒಂದು ಸಂಶೋಧನೆಯ ಪ್ರಕಾರ, ವಾರಕ್ಕೊಮ್ಮೆ ಅಧಿಕ ಕೊಬ್ಬಿನಿಂದ ಕೂಡಿದ ಮೀನುಗಳ ಆಹಾರ ಸೇವನೆಯಿಂದ ಹೃದಯಾಘಾತವನ್ನು ಶೇ. ೫೦ರಷ್ಟು ಕಮ್ಮಿಗೊಳಿಸಲು ಸಾಧ್ಯ ಎಂದು ತಿಳಿದು ಬಂದಿದೆ. ಇದಕ್ಕೆ ಮೀನಿನ ಎಣ್ಣೆಯಲ್ಲಿರುವ ಒಮೇಗಾ-೩ ಮೇಧೋ ಆಮ್ಲಗಳು ಕಾರಣವೆಂತಲೂ ಮತ್ತು ತಿಂಗಳೊಂದರಲ್ಲಿ ೫.೫ಗ್ರಾಂ. ಒಮೇಗಾ – ೩ ಎಣ್ಣೆ ಸೇವನೆಯಿಂದ ಹೃದ್ರೋಗ ಸಮಸ್ಯೆ ನಿವಾರಿಸಲು ಸಾಧ್ಯ ಎಂದೂ ಆ ಸಂಶೋಧನಾ ವರದಿ ತಿಳಿಸಿದೆ. ಆಸ್ಟ್ರೇಲಿಯಾದ ಹೃದಯ ಫೌಂಡೇಶನ್ ಪ್ರೋಗ್ರಾಂ ಮ್ಯಾನೇಜರ್ ರ್ಸೆಟ್ಟಾಗ್ರಂಡಿ ಅವರು "ಒಮೇಗಾ-೩ ಕೊಬ್ಬು, ಹೃದ್ರೋಗವನ್ನು ನಿವಾರಿಸುತ್ತದೆ ಮತ್ತು ಮಕ್ಕಳಲ್ಲಿ ನರಮಂಡಲದ ಬೆಳವಣಿಗೆಯನ್ನೂ ಚುರುಕುಗೊಳಿಸುತ್ತದೆ" ಎಂದು ತಿಳಿಸಿದ್ದಾರೆ. ಬುಲ್ಲಿಯಾ, ರೆಡ್ಡಿ ಮತ್ತಿತರರು (೧೯೮೯) ನಮ್ಮ ದೇಶದಲ್ಲಿ ನಡೆಸಿದ ಸಂಶೋಧನೆಯಿಂದ ಮೀನನ್ನು ಹೆಚ್ಚಾಗಿ ಆಹಾರದಲ್ಲಿ ಉಪಯೋಗಿಸುವ ಜನಸಮುದಾಯದವರ (ಮೀನನ್ನು ಬಳಸದೇ ಇರುವ ಜನ ಸಮುದಾಯಕ್ಕೆ ಹೋಲಿಸಿದಾಗ) ರಕ್ತದಲ್ಲಿ ಒಟ್ಟು ಕೊಲೆಸ್ಟರಾಲ್, ಟ್ರೆಂಗ್ಲಿಸರೈಡ್ಸ್ ಮತ್ತು ರಕ್ತದ ಒತ್ತಡ ಕಡಿಮೆ ಮಟ್ಟದಲ್ಲಿರುವುದು ಕಂಡು ಬಂದಿದೆ. ಅಲ್ಲದೆ, ೧೦೦ಗ್ರಾಂ ತೂಕದ ಸೀಯರ್ ಫಿಶ್ (ಅಂಜಲ್), ಹಿಲ್ಸ, ಕಪ್ಪು ಪಾಂಪ್ಲೆಟ್ ಮೀನು ಮಾಂಸವು ಸಾಕಷ್ಟು ಒಮೇಗಾ-೩ ಕೊಬ್ಬನ್ನು ಪೂರೈಸುವುದೆಂದೂ ತಿಳಿದು ಬಂದಿದೆ. (ಅಂಜಲ್ನಲ್ಲಿ ಅತೀ ಹೆಚ್ಚು ಪ್ರಮಾಣದ ಒಮೇಗಾ-೩ ಕೊಬ್ಬು, ಅಂದರೆ ೩ಗ್ರಾಂ/೧೦೦ಗ್ರಾA ಹಿಲ್ಸಾದಲ್ಲಿ ೨.೩೩ಗ್ರಾಂ/೧೦೦ಗ್ರಾA, ಕಪ್ಪು ಪಾಂಪ್ಲೆಟ್ ೨.೦೨ ಗ್ರಾಂ/೧೦೦ಗ್ರಾA, ಮಲ್ಲೆಟ್ (ಮಾಲ) ೧.೩೪ ಗ್ರಾಂ/೧೦೦ಗ್ರಾA ಇರುವುದಾಗಿಯೂ ಸಂಶೋಧನಾ ವರದಿ ಸೂಚಿಸುತ್ತದೆ) ಅಲ್ಲದೆ, ಒಮೇಗಾ-೩ ಕೊಬ್ಬು ‘ಎಕ್ಸೆಮಾ’ ಮತ್ತು ‘ಸೋರಿಯಾಸಿಸ್’ ಎಂಬ ಚರ್ಮದ ರೋಗಗಳನ್ನೂ ಸಂದಿವಾತದ ತೊಂದರೆಗಳನ್ನೂ ನಿವಾರಿಸುವುದೆಂದೂ ತಿಳಿದುಬಂದಿದೆ.
ಸಾಮಾನ್ಯವಾಗಿ, ಕೊಲೆಸ್ಟರಾಲ್ ಮತ್ತು ಸಂತೃಪ್ತ ಮೇಧೋ ಆಮ್ಲ ಹೆಚ್ಚಿರುವ ಕೆಂಪು ಮಾಂಸ (ಹಂದಿ ಮತ್ತು ಮೇಕೆ ಮಾಂಸ) ಮತ್ತು ಹೈನು ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವವರಲ್ಲಿ "ಅಥೆರೋಸ್ಕಿಲರೋಸಿಸ್" ರೋಗ ಸಾಮಾನ್ಯವಾಗಿ ಕಂಡು ಬರುತ್ತದೆ. ಅಂದರೆ, ಮೀನಿನಲ್ಲಿ ಕೊಲೆಸ್ಟರಾಲ್ ಮತ್ತು ಸಂತ್ರಪ್ತ ಮೇಧೋ ಆಮ್ಲಗಳ ಪ್ರಮಾಣ ಕಡಿಮೆ ಇರುವುದರಿಂದ, ಮೀನಿನ ಕೊಬ್ಬು ಹೃದಯದ ಆರೋಗ್ಯದ ದೃಷ್ಟಿಯಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ.
ಹಂದಿ ಮತ್ತು ಮೇಕೆ ಮಾಂಸದಲ್ಲಿ ಸಂತೃಪ್ತ ಮೇಧೋ ಆಮ್ಲದ ಪ್ರಮಾಣ ಅನುಕ್ರಮವಾಗಿ ಶೇ. ೩೯ ಮತ್ತು ಶೇ. ೪೮ ಇದ್ದರೆ, ಮೀನಿನಲ್ಲಿ ಅದು ಕೇವಲ ಶೇ. ೧೧-೨೭ ರಷ್ಟಿದೆ. ಒಂದು ನೂರು ಗ್ರಾಂ ಬಂಗುಡೆ (Mackerel) ಮೀನನ್ನು ಅಥವಾ ಬೇಯಿಸಿದ ಸಿಗಡಿಯನ್ನು ತಿಂದರೆ, ನಾವು ಬಳಸುವ ಸಂತೃಪ್ತ ಮೇಧೋ ಆಮ್ಲದ ಪ್ರಮಾಣ ಕೇವಲ ೦.೧ ರಿಂದ ೦.೨ ಗ್ರಾಂ ಆದರೆ, ಅಷ್ಟೇ ತೂಕದ ಮೇಕೆ ಅಥವಾ ಗೋ ಮಾಂಸದ ಬಳಕೆಯಿಂದ ಸಂತೃಪ್ತ ಮೇಧೋ ಆಮ್ಲದ ಪ್ರಮಾಣ ೫೦ ಪಟ್ಟು ಜಾಸ್ತಿ ಅಂದರೆ, ಸುಮಾರು ೧೧ ಗ್ರಾಂ ನಷ್ಟಿರುತ್ತದೆ’
ಮೀನನ್ನು ಪ್ರಧಾನ ಆಹಾರವಾಗಿ ಬಳಸುವ ಪಶ್ಚಿಮ ಗ್ರೀನ್ಲ್ಯಾಂಡ್ನ ಎಸ್ಕಿಮೋ ಮತ್ತು ಜಪಾನ್ ದೇಶದ ಜನರ ರಕ್ತದಲ್ಲಿ ಕೊಲೆಸ್ಟರಾಲ್ - ಪ್ರಮಾಣ ತುಂಬಾ ಕಡಿಮೆ ಇದ್ದು ಅವರಲ್ಲಿ ಹೃದ್ರೋಗದಿಂದ ನರಳುವವರ ಸಂಖ್ಯೆ ತುಂಬಾ ವಿರಳ ಅಥವಾ ಇಲ್ಲವೇ ಇಲ್ಲ ಎನ್ನಬಹುದಾಗಿದೆ. ಆ ಜನರು ಪ್ರತಿ ದಿನ ೨೫೦ರಿಂದ ೪೦೦ಗ್ರಾಂ ನಷ್ಟು ಮೀನನ್ನು ಆಹಾರದಲ್ಲಿ ಬಳಸುತ್ತಾರೆ.
ಕ್ಯಾನ್ಸರ್ ನಿರೋಧಕ : ಅಧಿಕ ಕೊಬ್ಬಿನಿಂದ ಕೂಡಿದ ಆಹಾರವನ್ನು ಅತಿಯಾಗಿ ಸೇವಿಸುವುದರಿಂದ (ಪಾಶ್ಚಿಮಾತ್ಯ ದೇಶಗಳಲ್ಲಿ ಇದು ಸಾಮಾನ್ಯ) ಕೆಲವೊಂದು ರೀತಿಯ ಕ್ಯಾನ್ಸರ್ಗೆ ಕಾರಣವೆಂದು ನಂಬಲಾಗಿದೆ. ಇತರೇ ಪ್ರಾಣಿಮೂಲ ಆಹಾರಗಳಿಗೆ ಹೋಲಿಸಿದಾಗ ಮೀನಿನಲ್ಲಿ ಕೊಬ್ಬಿನ ಅಂಶ ತುಂಬಾ ಕಡಿಮೆ ಇದೆ. ಆದ್ದರಿಂದ, ಇತರೆ ಪ್ರಾಣಿಮೂಲ ಆಹಾರಗಳ ಬದಲು ಮೀನನ್ನು ಆಹಾರವಾಗಿ ಬಳಸುವುದರಿಂದ ಕೊಬ್ಬಿನ ಸೇವನೆಯನ್ನು ಗಣನೀಯವಾಗಿ ನಿಯಂತ್ರಿಸಬಹುದಾಗಿದೆ.
ರಕ್ತದ ಒತ್ತಡ ತಗ್ಗಿಸುವಲ್ಲಿ ಪರಿಣಾಮಕಾರಿ: ಬಹಳಷ್ಟು ಜನರಲ್ಲಿ ರಕ್ತದ ಒತ್ತಡ ಹೆಚ್ಚಲು ಅವರು ತಮ್ಮ ಆಹಾರದಲ್ಲಿ ಅತಿಯಾಗಿ ಬಳಸುವ ‘ಸೋಡಿಯಂ’ ಖನಿಜ ಕಾರಣವಾಗಿದೆ. ಮೀನುಗಳಲ್ಲಿ ಸೋಡಿಯಂನ ಅಂಶ ಸಹಜವಾಗಿಯೇ ಕಡಿಮೆ ಇರುವುದರಿಂದ (ಡಬ್ಬೀಕರಿಸಿದ ಮೀನು, ಹೊಗೆಯಾಡಿಸಿದ ಮೀನು, ಉಪ್ಪಿನಿಂದ ಸಂಸ್ಕರಿಸಿದ ಮೀನು ಮತ್ತು ಒಣಗಿಸಿದ ಮೀನನ್ನು ಹೊರತು ಪಡಿಸಿ) ಮೀನನ್ನು ಬಳಸುವುದರಿಂದ ಸೋಡಿಯಂ ಬಳಕೆಯ ಪ್ರಮಾಣವನ್ನು ತಗ್ಗಿಸಬಹುದಾಗಿದೆ. ಪ್ರತಿ ೧೦೦ಗ್ರಾಂ ಮೀನಿನಲ್ಲಿ ಸರಾಸರಿ ೬೦ ಮಿ.ಗ್ರಾಂ ಸೋಡಿಯಂ ಅಡಗಿದೆ. ಪ್ರತಿನಿತ್ಯ ನಮ್ಮ ದೇಹಕ್ಕೆ ೧-೩ ಗ್ರಾಂ ನಷ್ಟು ಉಪ್ಪು ಸಾಕಿದ್ದರೂ, ನಾವು ಸಾಮಾನ್ಯವಾಗಿ ೨-೭ ಗ್ರಾಂ ನಷ್ಟು ಉಪ್ಪನ್ನು ಬಳಸುತ್ತೇವೆ.
ಮೀನಿನ ಕೊಬ್ಬು ಪ್ರಯೋಜನಕಾರಿಯಾಗಿರುವುದರಿಂದ ಮಾಂಸಹಾರಿಗಳು ಕೋಳಿ, ಕುರಿ, ಹಂದಿಯ ಮಾಂಸವನ್ನು ತಿನ್ನುವುದನ್ನು ಕಡಿಮೆ ಮಾಡಿ ಮೀನು ತಿನ್ನುವುದು ಹಿತಕಾರಿ. ಆದರೆ ಅಧಿಕ ಪ್ರಮಾಣದ ಎಣ್ಣೆ ಬಳಸಿ ಕರಿದ ಮೀನುಗಳನ್ನು ಆಹಾರದಲ್ಲಿ ಹೆಚ್ಚಿಗೆ ಬಳಸಬೇಡಿ.
ಪೂರಕ ಮಾಹಿತಿ: ಡಾ.ಎಸ್.ವಿಜಯಕುಮಾರ ಮತ್ತು ಶ್ರೀ ಗಣೇಶ ಪ್ರಸಾದ. ಎಲ್, ಮೀನುಗಾರಿಕಾ ತಜ್ಞರು
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!