ಅಮೆರಿಕ-ಇಸ್ರೇಲ್‌ಗಳು ಜತೆಗೂಡಿ ಇರಾನ್ ಮೇಲೆ ದಾಳಿ ನಡೆಸುವ ಮೂಲಕ ೧೫ ದಿನಗಳ ಹಿಂದೆ ಆರಂಭಿಸಿದ ಮಧ್ಯಪ್ರಾಚ್ಯ ಯುದ್ಧ ಏಕೋ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಆ ಸಮರದಿಂದ ಮಧ್ಯಪ್ರಾಚ್ಯ ಭಾಗವಷ್ಟೇ ಅಲ್ಲ, ಭಾರತದ ಸಣ್ಣ ಊರಿನ ಅಡುಗೆ ಮನೆಗಳಿಗೂ ಬಿಸಿ ತಟ್ಟಲು ಆರಂಭಿಸಿದೆ. ಅಡುಗೆ ಅನಿಲ ಸಿಗುತ್ತಿಲ್ಲ, ಹೋಟೆಲ್ ಗ್ಯಾಸ್ ಸಿಲಿಂಡರ್‌ಗಳು ಲಭಿಸುತ್ತಿಲ್ಲ ಹಾಗೂ ಆಟೋ ರಿಕ್ಷಾಗಳಿಗೆ ಎಲ್‌ಪಿಜಿ ದೊರೆಯುತ್ತಿಲ್ಲ ಎಂಬ ಸಾಲು ಸಾಲು ದೂರುಗಳು ಕೇಳಿಬರುತ್ತಿವೆ. ಈ ಸಮರ ಇನ್ನೊಂದಿಷ್ಟು ದಿನ ಮುಂದುವರಿದರೆ ಕತೆ ಏನು ಎಂದು ಚಿಂತೆ ಪಡುವಂತಾಗಿದೆ.

ಇಂತಹ ಹೊತ್ತಿನಲ್ಲೇ ಕೇಂದ್ರ ಸರ್ಕಾರ ಹಣದುಬ್ಬರಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಫೆಬ್ರವರಿಗೆ ಸಂಬಂಧಿಸಿದ ಲೆಕ್ಕ ಇದಾಗಿದ್ದರೂ, ಆ ತಿಂಗಳು ಹಣದುಬ್ಬರ ಶೇ.೩.೨೧ಕ್ಕೆ ಏರಿಕೆಯಾಗಿದೆ. ಜನವರಿಯಲ್ಲಿ ಶೇ.೨.೭೪ ರಷ್ಟಿದ್ದ ಹಣದುಬ್ಬರ ಭಾರಿ ಏರಿಕೆ ಕಂಡಿದೆ. ಫೆಬ್ರವರಿ ತಿಂಗಳ ಹಣದುಬ್ಬರ ಕಳೆದ ೧೦ ತಿಂಗಳಲ್ಲಿ ದಾಖಲಾದ ಗರಿಷ್ಠ ಹಣದುಬ್ಬರ ಎಂಬುದು ಗಮನಾರ್ಹ. ಯುದ್ಧ ಆರಂಭವಾಗಿದ್ದು ಫೆ.೨೮ರಂದು.

ಫೆಬ್ರವರಿ ತಿಂಗಳಲ್ಲಿ ೧೦ ತಿಂಗಳ ದಾಖಲೆಯ ಹಣದುಬ್ಬರ ಕಂಡುಬಂಡಿದೆ. ಯುದ್ಧ ನಿಲ್ಲದೇ ಹೋದರೆ ಹಣದುಬ್ಬರ ಮತ್ತಷ್ಟು ಹೆಚ್ಚಾಗಿ ಪ್ರತಿಯೊಬ್ಬರ ಜೇಬು ಸುಡುವುದು ನಿಶ್ಚಿತ. ಹೀಗಾಗಿ ಮಾರ್ಚ್‌ನ ಹಣದುಬ್ಬರ ಮತ್ತಷ್ಟು ಜಿಗಿತ ಕಾಣುವ ಆತಂಕವಿದೆ. ಯುದ್ಧ ನಿಲ್ಲದೇ ಹೋದರೆ, ಗ್ಯಾಸ್‌ ಅಷ್ಟೇ ಅಲ್ಲ ಬೇರೆ ಕಾರಣಗಳಿಂದಲೂ ಭಾರತ ಹಾಗೂ ಒಟ್ಟಾರೆ' ವಿಶ್ವ ಬಿಸಿ ಅನುಭವಿಸಬೇಕಾಗುತ್ತದೆ. ಸದ್ಯ ಗ್ಯಾಸ್, ದರ ಏರಿಕೆಯಾಗಿದೆ. ಯುದ್ದ ಇನ್ನೊಂದಿಷ್ಟು ದಿನ ಮುಂದುವರಿದರೆ ಈಗಾಗಲೇ ಬ್ಯಾರಲ್‌ಗೆ ೧೦೦ ಡಾಲರ್ ತಲುಪಿರುವ ಕಚ್ಚಾ ತೈಲ ಬೆಲೆಯೂ ದಾಖಲೆ ಪ್ರಮಾಣದಲ್ಲಿ ಏರಬಹುದು. ಪೆಟ್ರೋಲಿಯಂ ಕಂಪನಿಗಳು ತೈಲ ದರ ಏರಿಸಬಹುದು. ಹಾಗಾದಾಗ ತರಕಾರಿಯಿಂದ ದಿನಬಳಕೆಯ ವಸ್ತುಗಳು ಹಾಗೂ ಪ್ರಯಾಣದವರೆಗೆ ಎಲ್ಲವೂ ದುಬಾರಿಯಾಗುತ್ತದೆ. ಇದರ ಜತೆಗೆ ಈಗಾಗಲೇ ಡಾಲರ್ ವಿರುದ್ಧ ರುಪಾಯಿ ಮೌಲ್ಯ ೯೩ ರು. ಗಡಿಯತ್ತ ದಾಪುಗಾಲು ಹಾಕುತ್ತಿದೆ. ರುಪಾಯಿ ಬಲ ಕಳೆದುಕೊಂಡಷ್ಟೂ ಆಮದು ವೆಚ್ಚ ಹೆಚ್ಚಾಗಿ, ಅದು ಪ್ರತಿ ನಾಗರಿಕರಿಗೆ ಹೊಡೆತ ನೀಡುತ್ತದೆ. ವಿಶ್ವದ ಯಾವುದೋ ಮೂಲೆಯಲ್ಲಿ ನಡೆಯುವ ಯುದ್ದದಿಂದ ನಮಗೇನೂ ಆಗುವುದಿಲ್ಲ ಎನ್ನುತ್ತಾ ಜಾಗತೀಕರಣದ ಯುಗದಲ್ಲಿ ಸುಮ್ಮನಿರಲು ಸಾಧ್ಯವೇ ಇಲ್ಲ. ಪ್ರತಿಯೊಬ್ಬರ ಜೇಬಿಗೂ ಭಾರ ತರುವ ಯುದ್ಧಗಳನ್ನು ನಿಲ್ಲಿಸುವುದೇ ಪರಿಹಾರ. ಕಾದಾಡುತ್ತಿರುವ ದೇಶಗಳು ಇನ್ನಾದರೂ ಈ ನಿಟ್ಟಿನಲ್ಲಿ ಗಮನಹರಿಸುವುದು ಒಳಿತು ಅಮೆರಿಕ ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದು.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೪-೦೩-೨೦೨೬

ಚಿತ್ರ ಕೃಪೆ: ಅಂತರ್ಜಾಲ ತಾಣ