ಖ್ಯಾತ ಕತೆಗಾರ ಗಿರಿಧರ ಖಾಸನೀಸರು ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಪ್ರತೀ ರವಿವಾರ ‘ಕಥೆ ಕಿಟಕಿ’ ಎನ್ನುವ ಅಂಕಣ ಬರೆಯುತ್ತಾರೆ. ಇದರಲ್ಲಿ ಪುಟ್ಟದಾದ ಕಥೆಯೊಂದನ್ನು ಬರೆದು, ಓದಿದ ಓದುಗರ ಮನಸ್ಸಿನಲ್ಲಿ ನೂರಾರು ಅರ್ಥಗಳು ಮೂಡುವಂತೆ ಮಾಡುತ್ತಾರೆ. ಕಳೆದ ರವಿವಾರ ಅವರದ್ದೊಂದು ‘ಚಾಕೊಲೆಟ್’ ಅನ್ನುವ ಕಥೆ ಪ್ರಕಟವಾಗಿತ್ತು. ಓದಿ ನನಗೆ ಇಷ್ಟವಾಗಿ ಅದನ್ನು ಯಥಾವತ್ತಾಗಿ ನನ್ನ ಹಲವಾರು ವಾಟ್ಸಾಪ್ ಬಳಗಗಳಲ್ಲಿ ಹಂಚಿಕೊಂಡಿದ್ದೆ. ಹಲವಾರು ಮಂದಿ ಮೆಚ್ಚಿಕೊಂಡರು. ಆದರೆ ನನ್ನ ಪ್ರೌಢ ಶಾಲೆಯ ಸಹಪಾಠಿ, ಅಮೇರಿಕಾದ ಲಾಸ್ ಏಂಜಲೀಸ್ ನಲ್ಲಿ ಉನ್ನತ ಉದ್ಯೋಗದಲ್ಲಿರುವ ಗಣೇಶ್ ರಾವ್ ಓದಿ ಮೆಚ್ಚಿಕೊಂಡು ಅವನ ಮನಸ್ಸಿನಲ್ಲಿ ಮೂಡಿದ ಕೆಲವೊಂದು ಪ್ರಶ್ನೆಗಳನ್ನು ನನಗೇ ಕೇಳಿದ.
ಆ ಪ್ರಶ್ನೆಗಳನ್ನು ನಿಮಗೆ ತಿಳಿಸುವ ಮೊದಲು ನೀವು ಖಾಸನೀಸರ ಕಥೆಯನ್ನು ಓದುವುದು ಅವಶ್ಯ. ಕಥೆ ಹೀಗಿದೆ…
ಚಾಕೊಲೆಟ್
ಮಧ್ಯರಾತ್ರಿ. ಬೀದಿ ನಾಯಿಗಳ 'ಬೊಗಳಾಟಕ್ಕೆ ಬೊಗಳಾಟಕ್ಕೆ ನಿದ್ದೆ ಹಾಳಾಯಿತು. ದೊಣ್ಣೆ ಹಿಡಿದು ಮನೆಯಿಂದ ಹೊರಗೆ ಬಂದೆ. ಕಸದ ತೊಟ್ಟಿಯ ಬಳಿ ಮೂರು-ನಾಲ್ಕು ನಾಯಿಗಳು ಗದ್ದಲ ಮಾಡುತ್ತ ನಿಂತಿದ್ದವು. ದೊಣ್ಣೆ ಬೀಸುತ್ತ ಅವುಗಳತ್ತ ನಡೆದೆ. ಅವುಗಳು ಹೆದರಿ ಹಿಂದೆ ಸರಿದವು. ಆದರೂ ಬೊಗಳುವುದನ್ನು ನಿಲ್ಲಿಸಲಿಲ್ಲ. ಅನುಮಾನ ಬಂದು ಕಸದೊಳಗೆ ಕಣ್ಣಾಡಿಸಿದೆ. ಮಿಂಚು ಬಡಿಯಿತು. ಅಲ್ಲಿ ಒಂದು ಪುಟ್ಟ ಮಗು. ಚಳಿಯಲ್ಲಿ ನಡುಗುತ್ತಿದ್ದ ಚಿಕ್ಕ ದೇಹ, ಹುಟ್ಟಿ ನಾಲೈದು ದಿನಗಳಾಗಿರಬಹುದಷ್ಟೆ
ಐದು ವರ್ಷಗಳ ನಂತರ...
ಶಾಲೆಯ ಕಚೇರಿ. ಹೆಡ್ ಮೇಡಂ ಪುಟ್ಟಿಯನ್ನು ನೋಡಿ ಮುಗುಳ್ನಕ್ಕರು. ಡ್ರಾಯರ್ ನಿಂದ ಚಾಕೊಲೆಟ್ ತೆಗೆದು ಅವಳ ಕೈಗೆ ಕೊಟ್ಟರು. ನಂತರ ಅವರ ಮುಂದಿದ್ದ ಅಪ್ಲಿಕೇಶನ್ ಪರಿಶೀಲಿಸಿದರು. ನಿಧಾನವಾಗಿ ನಗೆ ಮಾಯವಾಯಿತು. ತಾಯಿಯ ಹೆಸರಿನ ಜಾಗ ಖಾಲಿ! ಹಣೆ ಸುಕ್ಕುಗಟ್ಟಿತು. ಗೋಡೆಯ ಮೇಲಿನ ಗಡಿಯಾರದ ಟಿಕ್ ಟಾಕ್ ಬಿಟ್ಟರೆ ಎಲ್ಲ ಮೌನ. ಕ್ಷಣಗಳು ಯುಗಗಳಾದವು. ಆಗಲೇ ಮೂರು ಶಾಲೆಗಳು ಅರ್ಜಿಯನ್ನು ತಿರಸ್ಕರಿಸಿದ್ದವು.
ಪುಟ್ಟಿಯ ಕಡೆ ನೋಡಿದೆ. ಅವಳ ಗಮನವೆಲ್ಲ ಕೈಯಲ್ಲಿರುವ ಚಾಕೊಲೆಟ್ ಮೇಲೆ. ಮೇಡಂ ಜೋರಾಗಿ ನಿಟ್ಟುಸಿರು ಬಿಟ್ಟು ನನ್ನನ್ನು ನೋಡಿದರು. ನನಗೆ ಅರ್ಥವಾಯಿತು. ಪುಟ್ಟಿಯ ಕೈಯಿಂದ ಮೆಲ್ಲಗೆ ಚಾಕೊಲೆಟ್ ತೆಗೆದು ಮೇಜಿನ ಮೇಲೆ ಇಟ್ಟೆ 'ಬಾ ಪುಟ್ಟಿ, ಹೋಗೋಣ,' ಅಂದೆ.
ಬಾಗಿಲು ತಲುಪುವಷ್ಟರಲ್ಲಿ ಮೇಡಂ 'ಒನ್ ಮಿನಿಟ್,' ಅಂದರು.
'ಬಾ ಪುಟ್ಟಿ ನಿನ್ನ ಚಾಕೊಲೆಟ್ ಮರೆತೆಯೆಲ್ಲಾ' ಅಂದರು. ಪುಟ್ಟಿ ಅಲ್ಲಾಡಲಿಲ್ಲ. ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದಳು. ಮೇಡಂ ಕುರ್ಚಿಯಿಂದೆದ್ದು ಬಂದು ಪುಟ್ಟಿಯ ಮುಂದೆ ನಿಂತರು.
'ಮುಂದಿನ ಗುರುವಾರ ಶಾಲೆ ಶುರುವಾಗುತ್ತೆ’
-ಗಿರಿಧರ್ ಖಾಸನೀಸ್
***
ಇದೊಂದು ತುಂಬಾ ಸುಂದರವಾದ ನೂರಾರು ಅರ್ಥಗಳನ್ನು ನೀಡುವ ಭಾವನಾತ್ಮಕ ಕಥೆ. ನನ್ನ ಗೆಳೆಯ ಗಣೇಶ್ ಕೇಳಿದ ಮೂರು ಪ್ರಶ್ನೆಗಳು
೧. ಕಥೆಯಲ್ಲಿ ಮೂರು ಶಾಲೆಗಳು ಆಕೆಯ ಅರ್ಜಿಯನ್ನು ತಿರಸ್ಕರಿಸಿದ್ದವು. ಯಾಕಾಗಿ? ಅವಳ ತಾಯಿಯ ಹೆಸರು ಇಲ್ಲ ಎಂಬ ಕಾರಣಕ್ಕಾ?
೨. ಆ ಅರ್ಜಿಯಲ್ಲಿ ತಂದೆಯ ಹೆಸರು ಇತ್ತಾ? ಆ ವ್ಯಕ್ತಿಯ ಹೆಸರು ಇದ್ದರೂ ಆತ ಸಾಕು ತಂದೆಯಲ್ಲವೇ?
೩. ಆತನಿಗೆ ಮದುವೆಯಾಗಿರಲಿಲ್ಲವೇ? ಅರ್ಜಿಯಲ್ಲಿ ತಾಯಿಯ ಹೆಸರು ಇಲ್ಲ ಎಂದು ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸ ಬಹುದೇ?
ಈ ಪ್ರಶ್ನೆಗಳು ಕೇಳಬೇಕಾದದ್ದು ಕಥೆಗಾರನಿಗೆ ಅಂದರೆ ಗಿರಿಧರ್ ಖಾಸನೀಸರಿಗೆ. ಹಂಚಿಕೊಂಡ ತಪ್ಪಿಗೆ ನಾನೇ ಉತ್ತರಿಸಬೇಕಾಯಿತು. (ಅವರಿಗೆ ಕೇಳಿದ್ದರೆ ಏನು ಉತ್ತರ ಕೊಡುತ್ತಿದ್ದರೋ ಗೊತ್ತಿಲ್ಲ) ಮೊದಲಿಗೆ ಹೇಳಬೇಕಾದದ್ದು ಇದು ಕೇವಲ ಕಥೆಯಷ್ಟೇ. ಸತ್ಯ ಘಟನೆ ಆಧಾರಿತವೆಂದು ಲೇಖಕರು ಎಲ್ಲೂ ಹೇಳಿಲ್ಲ. ನನ್ನ ಮೇಲಿನ ವಿಶ್ವಾಸದಿಂದ ಗಣೇಶ್ ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರಿಸಲೇ ಬೇಕಾಯಿತು. ನಾನು ಅವನಿಗೆ ಬರೆದ ಉತ್ತರವನ್ನು ಯಥಾವತ್ತಾಗಿ ಇಲ್ಲಿ ನೀಡಿರುವೆ.
“ಹಾಯ್ ಗಣೇಶ್, ನೀನು ಈಗ ಓದಿದ ಕಥೆಯಿದೆಯಲ್ಲ ಅದು ನಾನು ಬರೆದದ್ದಲ್ಲ, ಗಿರಿಧರ್ ಖಾಸನೀಸರು ಪ್ರತೀ ಭಾನುವಾರ ವಿಜಯ ಕರ್ನಾಟಕ ಕ್ಕೆ ಈ ಪುಟ್ಟ ಕಥೆ ಬರೆಯುತ್ತಾರೆ. ಕಥೆಯ ಸಾರಾಂಶ ಯಾವತ್ತೂ ನೇರವಾಗಿರುವುದಿಲ್ಲ. ಓದಿದಷ್ಟು ಸಲ ಹೊಸ ಅರ್ಥಗಳನ್ನು ನೀಡುತ್ತಾ ಹೋಗುತ್ತದೆ. ಇಲ್ಲಿ ಗಮನಿಸಬೇಕಾದುದು ಏನೆಂದರೆ, ತಂದೆ ತಾಯಿಯಿಲ್ಲದ ಅನಾಥ ಮಗು ಸಾಕು ತಂದೆಯ ಬಳಿ ಬೆಳೆದು ನಿಂತಿದೆ. ಸಹಜವಾಗಿ ನೋಡಿದರೆ ಅದನ್ನು ದತ್ತಕ್ಕೆ (adopt) ಪಡೆದಾಗ ತಾಯಿಯ ಹೆಸರು ಸರ್ಟಿಫಿಕೇಟ್ ಗಳಲ್ಲಿ ಬೇಕೆಂದೇ ಇರುವುದಿಲ್ಲ. ಅದರ ಅಗತ್ಯವೂ, ಅದನ್ನು ಕೇಳಬೇಕಾದ ಅನಿವಾರ್ಯತೆಯೂ ಶಾಲೆಗೆ ಇರುವುದಿಲ್ಲ.
ಆದರೆ ಇಲ್ಲಿ ನಾವು ಕಥೆಯ ಒಳ ಅರ್ಥವನ್ನು ಅರಿಯಬೇಕು. ತಾಯಿಯ ಹೆಸರು ಇಲ್ಲ ಎನ್ನುವ ಕಾರಣಕ್ಕೆ ಹಿಂದಿನ ಶಾಲೆಗಳಲ್ಲಿ (ಮೂರು) ತಿರಸ್ಕೃತವಾಗುವ ಮಗುವಿಗೆ ಆ ಶಾಲೆಯಲ್ಲೂ ಸೀಟ್ ಸಿಗುವುದಿಲ್ಲ ಎನ್ನುವ ಬಲವಾದ ತಪ್ಪು ಕಲ್ಪನೆ ತಂದೆಯದ್ದು. ಆದರೆ ಅಲ್ಲಿಯ ಪ್ರಿನ್ಸಿಪಾಲ್ ಅವರದ್ದು ನಿಜಕ್ಕೂ ಮಾತೃ ಹೃದಯ. ಅವರು ಆ ಮಗುವಿಗೆ ಸೀಟು ಕೊಡುತ್ತಾರೆ. ಇಲ್ಲಿ ಗಮನಿಸಬೇಕಾದದ್ದು ಸಾಕು ತಂದೆಯ ಅನಿವಾರ್ಯತೆ ಮತ್ತು ಸಮಾಜದಲ್ಲಿ ಮಗುವಿಗೆ ತಕ್ಕ ಸ್ಥಾನ ನೀಡಬೇಕಾದ ಜವಾಬ್ದಾರಿ, ಮಗುವಿನ ಪುಟ್ಟ ಚಾಕಲೆಟ್ ಮೇಲಿನ ಆಸೆ ಮತ್ತು ವಿದ್ಯೆಯಿಂದ ಯಾವುದೇ ಮಗು ಹೊರಗೆ ಉಳಿಯ ಬಾರದು ಎನ್ನುವ ಪ್ರಿನ್ಸಿಪಾಲ್ ಆಶಯ. ಎಲ್ಲವೂ ಕಥೆಯಲ್ಲಿ ಮಿಳಿತವಾಗಿದೆ.
ನಾನು, ನೀನು ಇನ್ನೊಮ್ಮೆ ಈ ಕಥೆ ಓದಿದರೆ ಮತ್ತೊಂದು ಅರ್ಥ ಸಿಗಬಹುದೇನೋ? ಟ್ರೈ ಮಾಡ್ತೀಯಾ..
ಗಣೇಶ್, ನನಗೆ ತಿಳಿದಷ್ಟು ನಿನಗೆ ತಿಳಿಸಲು ಹೋಗಿರುವೆ. ಇಂತಹ ಕಥೆಗಳಿಗೆ ಒಳಾರ್ಥಗಳು ಜಾಸ್ತಿ. ನೇರ ಅರ್ಥ ಇರುವುದಿಲ್ಲ. ತಾಯಿಯಿಲ್ಲದ ಮಗುವಿಗೆ ಸೀಟ್ ಕೊಡದ ಶಾಲೆ ಇರುತ್ತದೆಯೇ? ಎನ್ನುವ ಪ್ರಶ್ನೆ ಇಲ್ಲಿ ಅರ್ಥ ಹೀನವಾಗುತ್ತದೆ. ಇಲ್ಲಿ ಕೇವಲ ಭಾವನೆಗಳು ಮಾತ್ರ ಪ್ರಬಲವಾಗಿ ಬಿಂಬಿತವಾಗುತ್ತದೆ.”
ಈ ನನ್ನ ಉತ್ತರದಿಂದ ಗಣೇಶ್ ಬಹಳ ಸಂತುಷ್ಟನಾದ. ಇಂತಹ ಹಲವಾರು ಕಥೆಗಳು ಓದಲು ಸಿಗುತ್ತವೆ. ಓದಿದಷ್ಟೂ ಹೊಸ ಅರ್ಥಗಳನ್ನು ನೀಡುತ್ತವೆ. ಉದಾಹರಣೆಗೆ ‘ಝೆನ್ ಕಥೆಗಳು’. ಇವುಗಳೂ ಹಾಗೆಯೇ, ಒಮ್ಮೆ ಓದಿದಾಗ ಸಾಧಾರಣವಾಗಿ ಅರ್ಥವಾಗುವುದಿಲ್ಲ. ಆದರೆ ಮತ್ತೆ ಮತ್ತೆ ಓದಿದಾಗ ಅದರ ಒಳಾರ್ಥ, ಗೂಡಾರ್ಥ ಗೊತ್ತಾಗುತ್ತದೆ.
‘ಚಾಕೊಲೆಟ್’ ಕಥೆಯನ್ನು ಬರೆದ ಖಾಸನೀಸರಿಗೂ, ಈ ಕಥೆಯ ಅರ್ಥವನ್ನು ಕೇಳಿದ ಗೆಳೆಯ ಗಣೇಶ್ ಗೂ ಕೃತಜ್ಞತೆ ಸಲ್ಲಿಸುವೆ. ಆತನಿಗೆ ಉತ್ತರ ಕೊಡುವ ನೆಪದಲ್ಲಿ ನಾನು ಮತ್ತೆರಡು ಬಾರಿ ಕಥೆಯನ್ನು ಓದಿದೆ. ನಿಮ್ಮಲ್ಲೂ ಈ ರೀತಿಯ ಕಥೆಗಳಿರಬಹುದಲ್ಲವೇ?
ಕಥೆಯ ಕೃಪೆ: ವಿಜಯ ಕರ್ನಾಟಕ ಪತ್ರಿಕೆ
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!