ಮೋಜಿಗಾಗಿ ಕೆಲವೊಂದು ವಿಷಯಗಳನ್ನು ಆತಿ ರಂಜಿತವಾಗಿ ಬಿಂಬಿಸಿ ಅದನ್ನು ಸಾಮಾಜಿಕ ತಾಣಗಳ ಮೂಲಕ ಹರಿ ಬಿಡುವುದರಿಂದ ಏನಾಗುತ್ತದೆ ಎಂಬುದಕ್ಕೆ ಈಗ ವಾಟ್ಸ್ ಆಪ್, ಪೇಸ್ ಬುಕ್, ಇನ್ಸ್ಟಾಗ್ರಾಂ ಮುಂತಾದ ಸಾಮಾಜಿಕ ಮಾಧ್ಯಮಗಳ ಮೂಲಕ ಬಿತ್ತರವಾಗುತ್ತಿರುವ ಸುದ್ದಿಗಳೇ ಸಾಕ್ಷಿ. ಕೆಲವು ಕಿಡಿಗೇಡಿಗಳು ಇಂತದ್ದನ್ನು ಸೃಷ್ಟಿಸಿ ರೈತರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ಇದು ಖಂಡನೀಯ. ಕೆಲವು ಸಮಯದ ಹಿಂದೆ ತಾನೇ ವಾಟ್ಸ್ ಅಪ್ ನಲ್ಲಿ ಒಂದು ವೀಡಿಯೋ ನೋಡಿದೆ. ಕಲ್ಲಂಗಡಿ ಹಣ್ಣಿಗೆ ಚುಚ್ಚು ಮದ್ದಿನ ಮೂಲಕ ಬಣ್ಣವನ್ನು ಚುಚ್ಚುವ ವೀಡಿಯೋ ಅದು. ಇದನ್ನು ನೋಡಿದ ಜನ ಏನು ತಿಳಿದು ಕೊಳ್ಳುತ್ತಾರೆ? ಕಲ್ಲಂಗಡಿ ಹಣ್ಣು ಕೆಂಪಗಿದ್ದರೆ ಅದಕ್ಕೆ ಬಣ್ಣಹಾಕಿದ್ದಾರೋ ಏನೋ ಎಂದು ಸಂಶಯ ಪಡುವಂತಾಗಿದೆ. ಇದರಲ್ಲಿ ಜನತೆ ರೈತರನ್ನು ತಪ್ಪಿತಸ್ಥರನ್ನಾಗಿ ನೋಡುತ್ತಾರೆಯೇ ವಿನಹ ಇಂತಹ ವೀಡಿಯೋವನ್ನು ತಯಾರಿಸಿದವರನ್ನಲ್ಲ. ಇಂತಹ ಸುಳ್ಳು ವೀಡಿಯೋ ರೈತರನ್ನೇ ಗುರಿಯಾಗಿಸಿಕೊಂಡು ತಯಾರಿಸಿದಂತೆ ಇರುತ್ತದೆ.
ನಿಜವಾಗಿಯೂ ರೈತರು ಇದನ್ನು ಮಾಡುತ್ತಾರೆಯೇ? ಮಾಡಲು ಸಾಧ್ಯವೇ ? ಖಂಡಿತವಾಗಿಯೂ ಅಸಾಧ್ಯ. ಈ ರೀತಿ ಮಾಡಿದ ಹಣ್ಣು ಕೇವಲ ಒಂದು ದಿನದಲ್ಲಿ ಹಾಳಾಗುತ್ತದೆ. ರೈತರು ಬೆಳೆದ ಹಣ್ಣು ಗ್ರಾಹಕರಿಗೆ ತಲುಪುವಾಗ ಏನಿಲ್ಲವೆಂದರೂ ಮೂರು ನಾಲ್ಕು ದಿನ ಆಗಿರುತ್ತದೆ. ಒಂದು ವೇಳೆ ಹಾಗೆ ಮಾಡಿದರೆ ಅಷ್ಟು ಸಮಯದ ತನಕ ಆ ಹಣ್ಣು ಉಳಿಯಲು ಸಾಧ್ಯವೇ ಇಲ್ಲ.
ಇದೊಂದೇ ಅಲ್ಲ. ಏನು ಕಂಡರೂ ಅದನ್ನು ಅತಿ ರಂಜಿತವಾಗಿ ವೀಡಿಯೋ ಮುಖಾಂತರವೂ, ಫೋಟೋ ಮುಖಾಂತರವೋ ಹಂಚಿಕೊಳ್ಳುವುದು. ಇದೆಲ್ಲವೂ ರೈತರು ಬೆಳೆದ ಉತ್ಪನ್ನಕ್ಕೆ ಮಾರುಕಟ್ಟೆ ಹಾಳು ಮಾಡಲು ಮಾಡುವ ಕುತಂತ್ರ. ಹಿಂದೊಮ್ಮೆ ಒಂದು ಕಂಪೆನಿಯ ನೀರಿಗೆ ಎಬೋಲಾ ವೈರಸ್ ಸೇರಲ್ಪಟ್ಟಿದೆ. ಆದ ಕಾರಣ ಆ ನೀರನ್ನು ಬಳಕೆ ಮಾಡಬೇಡಿ ಎಂಬ ಸಂದೇಶ ಸುತ್ತುತ್ತಿತ್ತು. ಅದೇ ರೀತಿ ಕೆಲವು ಪಂಗಡದ ವರ್ತಕರು ಮತ್ತೊಂದು ಪಂಗಡದ ಗ್ರಾಹಕರನ್ನು ರೋಗಿಗಳನ್ನಾಗಿ ಮಾಡಲು ಏಡ್ಸ್ ರೋಗಿಗಳ ರಕ್ತವನ್ನು ಹಣ್ಣು ಹಂಪಲಿನಲ್ಲಿ ಸೇರಿಸುತ್ತಾರೆ ಎಂದೆಲ್ಲಾ ಮನಬಂದಂತೆ ಬರೆಯಲಾರಂಭಿಸಿದ್ದೂ ಇದೆ. ಅದೇ ರೀತಿ ಕಳೆದ ವರ್ಷ ತಾನೇ ಸುದ್ದಿಯಲ್ಲಿದ್ದ ಬಾವಲಿ ಜ್ವರ (ನಿಫಾ ವೈರಸ್) ಸಮಯದಲ್ಲೂ ಹೀಗೇ ಮಾಡಿದ್ದುಂಟು. ವಾಸ್ತವವಾಗಿ ವೈರಸ್ ಗಳನ್ನು ಹೀಗೆಲ್ಲಾ ಪಸರಿಸಲು ಸಾಧ್ಯವಿಲ್ಲ.
ಇಂತಹ ಕೆಲಸವನ್ನು ಯಾವ ವರ್ತಕರೂ, ಯಾವ ಕಂಪೆನಿಯೂ ಮಾಡುವುದಿಲ್ಲ. ಜೊತೆಗೆ ಯಾವ ರೈತನೂ ಮಾಡುವುದಿಲ್ಲ. ವ್ಯಾಪಾರಿಯು ಅವನ ವ್ಯಾಪಾರ ಧರ್ಮವನ್ನು ಬಿಟ್ಟು ವ್ಯಾಪಾರ ಮಾಡಲಾರ. ಅವನು ವ್ಯಾಪಾರದಲ್ಲಿರುವಾಗ ಜಾತಿ ಬೇಧವನ್ನೆಂದೂ ಮಾಡಲಾರ. ಅದೇ ರೀತಿ ಯಾವುದೇ ಕಂಪೆನಿ ತನ್ನ ಉತ್ಪನ್ನಕ್ಕೆ ಕೆಟ್ಟ ಹೆಸರು ತಂದುಕೊಳ್ಳುವುದಿಲ್ಲ. ಯಾವುದೇ ರೈತ ತನ್ನ ಉತ್ಪನ್ನವನ್ನು ಹಾಳು ಮಾಡಿ ಮಾರಾಟ ಮಾಡುವುದಿಲ್ಲ. ಇದು ಸತ್ಯ.
ಕೆಲವು ವಿಕೃತ ಮನಸ್ಸಿನ ಮಂದಿಗೆ ಏನಾದರೂ ಮಾಡುತ್ತಾ ಇರುವ ಚಟ. ಇವರು ಯಾವುದೋ ಉದ್ದೇಶಕ್ಕೆ ಇಂತದ್ದನ್ನು ಮಾಡುತ್ತಿರುತ್ತಾರೆ. ಇದರಲ್ಲಿ ಇವರ ಉದೇಶ ಏನೇ ಇರಲಿ, ಹಾಳಾಗುವುದು ಮಾತ್ರ ರೈತರು. ಬಾವಲಿ ಜ್ವರ, ನಿಫಾ ವೈರಸ್, ಹಂದಿ ಜ್ವರ ಬಗ್ಗೆ ಮನಬಂದಂತೆ ಬರೆದು ಅದರಿಂದಾಗಿ ಕೇರಳದ ವಯನಾಡಿನಲ್ಲಿ ಪ್ರವಾಸೋದ್ಯಮಕ್ಕೆ ಭಾರೀ ತೊಂದರೆ ಆಗಿತ್ತು. ಹಣ್ಣು ಹಂಪಲಿನ ಮಾರುಕಟ್ಟೆ ಕುಸಿದಿದೆ. ಜೋಸೆಫ್ ಎಂಬ ಒಬ್ಬ ಹಣ್ಣು ಮಾರುವ ಅಂಗಡಿಯವ ಹೇಳುವಂತೆ ಈ ವರ್ಷ ರಾಂಬುಟಾನ್ ಹಣ್ಣುಗಳಿಗೆ ಬೇಡಿಕೆ ಕುಸಿದಿದೆಯಂತೆ. ಅದೇ ರೀತಿ ಪೇರಳೆ, ದಿವ್ವಿ ಹಲಸು, ಹಲಸು, ಮಾವು ಮುಂತಾದ ಹಣ್ಣು ಹಂಪಲುಗಳನ್ನು ಕೊಳ್ಳುವವರು ಕಡಿಮೆಯಾಗಿದ್ದಾರಂತೆ. ಮಲ್ಲಿಕಾ ಮಾವಿಗೆ ಸೀಸನ್ ಸಮಯದಲ್ಲಿ ೮೦ ರೂ ತನಕ ದರ ಇರುತ್ತಿತ್ತು. ಆದರೆ ಕಳೆದ ವರ್ಷ ಅಂತಹ ಉತ್ಪಾದನೆ ಇಲ್ಲದಿದ್ದರೂ ಸಹ ಗ್ರಾಹಕರ ಬೇಡಿಕೆ ಕಡಿಮೆ ಇದ್ದ ಕಾರಣ ಬೆಲೆ ನೀಲಂ ಹಣ್ಣಿಗೆ ೪೦- ಮಲ್ಲಿಕಾ ೫೦ರ ದರದಲ್ಲಿ ಮಾರಾಟ ಮಾಡಿದ್ದೇವೆ. ಅದಕ್ಕೂ ಗಿರಾಕಿಗಳು ಕಡಿಮೆ.
ಇವಿಷ್ಟೇ ಅಲ್ಲ. ಗ್ರಾಹಕರಿಗೆ ಯಾವುದೇ ಹಣ್ಣು ಹಂಪಲು ಕೊಳ್ಳುವಾಗಲೂ ಸಂಶಯ. ಆಪಲ್ ಹಣ್ಣು ಖರೀದಿಸುವಾಗ ಅದರ ಸಿಪ್ಪೆ ಉಗುರಿನಿಂದ ಉಜ್ಜಿ ಅದರಲ್ಲಿ ಏನೋ ಮೇಣ ಬರುತ್ತದೆ ಎಂದು ಅದು ವಿಷವಾಗಿರಬಹುದು ಎಂಬುದಾಗಿ ಸಂಶಯ ಪಡುತ್ತಾರೆ. ಕೆಲವು ಹಣ್ಣು ಹಂಪಲುಗಳ ನೋಟ ಹೊಳಪಾಗಿರಲು ಕೆಲವು ಬಗೆಯ ಮೇಣ ಸಿಂಪರಣೆ ಇದೆಯಾದರೂ ಅದೆಲ್ಲವೂ ವಿಷ ಅಥವಾ ಆರೋಗ್ಯಕ್ಕೆ ಹಾನಿಕರ ಎಂದು ತೀರ್ಮಾನಕ್ಕೆ ಬರುವಂತಿಲ್ಲ. ಅದರಲ್ಲಿ ಹಾನಿ ರಹಿತವಾದವುಗಳು (Food Grade) ಇವೆ. ಖರೀದಿ ಮಾಡುವ ಜನ ನೋಟ ಉತ್ತಮವಾಗಿರುವುದನ್ನೇ ಖರೀದಿಸುತ್ತಾರೆ. ಗ್ರಾಹಕರ ಮನೋಸ್ಥಿತಿಗನುಗುಣವಾಗಿ ರೈತರು ಅಥವಾ ವ್ಯಾಪಾರಿಗಳು ಉತ್ಪನ್ನವನ್ನು ಒದಗಿಸುತ್ತಾರೆ. ಕಜ್ಜಿ ಬಿದ್ದು, ಹೊಳಪಿಲ್ಲದ ದಾಳಿಂಬೆ ಹಣ್ಣುಗಳನ್ನು ರಸ್ತೆ ಬದಿಯಲ್ಲಿ ಕಿಲೋ ೫೦-೭೦ ರೂ. ಗಳಿಗೆ ಮಾರಾಟ ಮಾಡಿದರೆ ಅದನ್ನು ಕೊಳ್ಳಲು ಜನ ಹಿಂದೇಟು ಹಾಕುತ್ತಾರೆ. ವಾಸ್ತವವಾಗಿ ಇದಕ್ಕೆ ಯಾವುದೇ ಕೀಟನಾಶಕ ರೋಗನಾಶಕ - ಬೆಳವಣಿಗೆ ಪ್ರಚೋದಕ ಬಳಸದ ಕಾರಣ ಹೀಗಾಗಿದೆ. ಅಂಗಡಿಯಲ್ಲಿ ಹೊಳಪು ಹೊಳಪಾಗಿದ್ದು, ಯಾವುದೇ ಕಲೆ ಇಲ್ಲದ, ಬಣ್ಣ ಹೊಂದಿದ ವಸ್ತುವನ್ನು ಯಾವುದೇ ದರ (ಸುಮಾರು ೨೦೦-೨೫೦ ರೂ ಕೆ ಜಿಗೆ) ಕೊಟ್ಟು ಖರೀದಿ ಮಾಡುತ್ತಾರೆ. ನೋಟ- ಗಾತ್ರ, ಬಣ್ಣ ಉತ್ತಮ ಇರುವಂತದ್ದರ ಮೇಲೆಯೇ ಎಲ್ಲಾ ಖರೀದಿದಾರರಿಗೂ ಆಸಕ್ತಿ. ನೋಟ- ಗಾತ್ರ ಆಕರ್ಷಕವಾಗಿ ಇರುವ ಹಣ್ಣು ತರಕಾರಿಗಳಿಗೆ ಮಾತ್ರ ಗ್ರಾಹಕರಿಂದ ಬೇಡಿಕೆ ಇರುವ ಕಾರಣ ಅದಕ್ಕೆ ಉತ್ತಮ ಬೆಲೆ ಕೊಡುತ್ತಾರೆ. ಬಾಳೆ ಹಣ್ಣು ಇನ್ನೇನು ಹಣ್ಣು ಆಗುವ ಪ್ರಾರಂಭದ ಹಂತದಲ್ಲಿ ಹಳದಿ ಹಳದಿಯಾಗಿರುತ್ತದೆ. ದಿನ ಕಳೆದಂತೆ ಅದು ಕಪ್ಪಗಾಗುತ್ತಾ ಬರುತ್ತದೆ. ಸಿಪ್ಪೆಯಲ್ಲಿ ಸಣ್ಣ ಕಪ್ಪು ಕಲೆ ಕಂಡರೆ ಅದಕ್ಕೆ ಮತ್ತೆ ಗಿರಾಕಿ ಇಲ್ಲ. ಅದಕ್ಕೆ ಅನುಗುಣವಾಗಿ ವ್ಯಾಪಾರಿ ತನ್ನ ತಂತ್ರಗಾರಿಕೆಯನ್ನೂ ರೈತನು ತನ್ನ ತಂತ್ರಗಾರಿಕೆಯನ್ನೂ ಬಳಸದೇ ನಿರ್ವಾಹವೇ ಇಲ್ಲದಾಗುತ್ತದೆ.
ಗ್ರಾಹಕನನ್ನು ಸೆಳೆಯುವುದಕ್ಕಾಗಿ ಬೆಳೆ ಬೆಳೆಸುವವರು ಕೆಲವು ರಾಸಾಯನಿಕ ಕೀಟನಾಶಕ, ರೋಗನಾಶಕ, ಬೆಳವಣಿಗೆ ಪ್ರಚೋದಕಗಳನ್ನು ಬೆಳೆಗಳಿಗೆ ಬಳಸುತ್ತಾರೆಯೇ ಹೊರತು ಬೇರೆ ಕಾರಣಕ್ಕಾಗಿ ಅಲ್ಲ. ಇವೆಲ್ಲಾ ದುಬಾರಿ ಬೆಲೆಯವುಗಳಾದ ಕಾರಣ ಬಳಸದೆ ಬೆಳೆಯುವುದು ರೈತನಿಗೆ ಲಾಭದಾಯಕವಾಗುತ್ತದೆ. ಹಾಗೆಂದು ಗ್ರಾಹಕರ ಇಚ್ಚೆಗನುಗುಣವಾಗಿ ಬೆಳೆಯದೇ ಇದ್ದರೆ ಬೀದಿ ಬದಿಯ ವ್ಯಾಪಾರಿಗೆ ಮಾರಾಟ ಮಾಡಿ ನಷ್ಟದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು.
ಗ್ರಾಹಕರೇ, ನೀವು ನೋಟ- ಗಾತ್ರ- ಬಣ್ಣ ಎಂದು ದುಂಬಾಲು ಬೀಳುವುದರ ಹಿಂದೆ ಇರುವ ಸತ್ಯ ಸಂಗತಿಯ ಬಗ್ಗೆ ಅರಿಯಿರಿ. ನೀವು ಅಪೇಕ್ಷಿಸುವ ಈ ಮೇಲಿನ ಗುಣಗಳಿಗಾಗಿ ರೈತನು ರಾಸಾಯನಿಕ ಬಳಕೆ ಮಾಡುತ್ತಾನೆ. ಇದೇ ನಿಮ್ಮ ಆರೋಗ್ಯಕ್ಕೆ ತೊಂದರೆ ಮಾಡಿದರೂ ಅಚ್ಚರಿ ಇಲ್ಲ.ತಾವು ಬಳಕೆ ಮಾಡುವ ಉತ್ಪನ್ನದ ಮೂಲ ಗುಣ ಏನು ಎಂಬುದನ್ನು ತಿಳಿದು ಬಳಕೆ ಮಾಡಿ.
ರೈತರು ಬೆಳೆಯುವ ಉತ್ಪನಗಳ ಮಾರುಕಟ್ಟೆಗೆ ಧಕ್ಕೆಯಾಗುವಂಥಹ ಯಾವುದೇ ಸುದ್ದಿಗಳಿದ್ದರೂ ಅದನ್ನು ಮತ್ತೆ ಮತ್ತೆ ಪ್ರಸರಿಸುವ ಮುನ್ನ ಇಂತದ್ದು ಸಾಧ್ಯವೇ ಎಂದು ಕೆಲವು ತಜ್ಜರಲ್ಲಿ ವಿಚಾರಿಸಿ ನಂತರ ತೀರ್ಮಾನಕ್ಕೆ ಬನ್ನಿ. ಸರಕಾರ ಈ ರೀತಿ ಸುಳ್ಳು ಸುದ್ದಿಗಳನ್ನು ಹಬ್ಬಸುವ ಸಾಮಾಜಿಕ ಮಧ್ಯಮಗಳ ಮೇಲೆ ಕಣ್ಗಾವಲು ಇಡುವ ವ್ಯವಸ್ಥೆಯನ್ನು ಮಾಡಿರುವುದು ನಿಜಕ್ಕೂ ಶ್ಲಾಘನೀಯ. ರೈತರಿರಲಿ ಅಥವಾ ಇನ್ಯಾರೇ ಆಗಲಿ ಸುಳ್ಳು ಸುದ್ದಿಗಳನ್ನು ಪಸರಿಸುವುದು ಒಳ್ಳೆಯದಲ್ಲ.
ಮಾಹಿತಿ : ರಾಧಾಕೃಷ್ಣ ಹೊಳ್ಳ
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!