ರಾಜ್ಯದಲ್ಲಿ ವಿಶೇಷವಾಗಿ, ಗ್ರಾಮೀಣ ಪ್ರದೇಶದವರಲ್ಲಿ ಅಧಿಕ ರಕ್ತದೊತ್ತಡ (ಹೈ ಬಿಪಿ) ಕಳವಳಕಾರಿ ಪ್ರಮಾಣದಲ್ಲಿ ಪತ್ತೆಯಾಗಿದೆ. ರಾಜ್ಯದಲ್ಲಿ ೩೫.೨೭ ಲಕ್ಷಕ್ಕೂ ಹೆಚ್ಚು ಜನರು ಅಧಿಕ ರಕ್ತದ ಒತ್ತಡ ಸಮಸ್ಯೆ ಹೊಂದಿರುವುದು ಗೃಹ ಆರೋಗ್ಯ ಯೋಜನೆ ಯಡಿ ತಪಾಸಣೆ ನಡೆಸಿದಾಗ ತಿಳಿದುಬಂದಿದೆ. ಹೃದ್ರೋಗ, ಮೂತ್ರಪಿಂಡ ಸಮಸ್ಯೆ, ಪಾರ್ಶ್ವವಾಯು ಸಹಿತ ಅನೇಕ ಅನಾರೋಗ್ಯಗಳಿಗೆ ದಾರಿ ಮಾಡಿಕೊಡುವ ಅಧಿಕ ರಕ್ತದೊತ್ತಡ ಇಷ್ಟು ಪ್ರಮಾಣದಲ್ಲಿ ಕಂಡುಬಂದಿರುವುದು ಅನೇಕ ಆಯಾಮಗಳಲ್ಲಿ ಎಚ್ಚರಿಕೆಯ ಕರೆಘಂಟೆಯಾಗಿದೆ. ಈಗಾಗಲೇ ವಿಳಂಬವಾಗಿದೆ, ಹೀಗಾಗಿ ತತ್ ಕ್ಷಣ ಕ್ರಿಯಾಶೀಲರಾಗಬೇಕಾಗಿದೆ.
ರಾಜ್ಯ ಸರಕಾರ ಆರೋಗ್ಯ ಇಲಾಖೆಯ ಮೂಲಕ ತಪಾಸಣೆ ನಡೆಸಿದಾಗ ಅಧಿಕ ರಕ್ತದೊತ್ತಡ ರೋಗಭಾರ ಗಣನೀಯ ಪ್ರಮಾಣದಲ್ಲಿರುವುದು ಪತ್ತೆಯಾಗಿದೆ. ಇದೇ ರೀತಿ ಮಧುಮೇಹ ಕೂಡ ದೊಡ್ಡ ಪ್ರಮಾಣದಲ್ಲಿ ಇದೆ ಕಳವಳಕಾರಿ ವಿಷಯವೆಂದರೆ, ಗ್ರಾಮೀಣ ಪ್ರದೇಶಗಳಲ್ಲಿ ಇದು ಹೆಚ್ಚಿರುವುದು. ಸಾಮಾನ್ಯವಾಗಿ ನಗರ ಪ್ರದೇಶದವರಿಗಿಂತ ಗ್ರಾಮೀಣ ಜನರು ಹೆಚ್ಚು ಆರೋಗ್ಯವಂತರಾಗಿರುತ್ತಾರೆ ಎಂಬ ನಂಬಿಕೆ ಇದೆ. ಈಗ ನಡೆದಿರುವ ತಳಮಟ್ಟದ ಈ ತಪಾಸಣೆಯಿಂದ ಇದು ಸುಳ್ಳು ಎಂಬುದು ಸಾಬೀತಾಗಿದೆ.
ಎಲ್ಲರೂ ತಿಳಿದಿರುವಂತೆ ಬದಲಾದ ಆಹಾರ ಮತ್ತು ಜೀವನಶೈಲಿ ಇದಕ್ಕೆ ಪ್ರಮುಖ ಕಾರಣ. ದೈಹಿಕ ಚಟುವಟಿಕೆಯ ಕೊರತೆ, ಜಂಕ್ ಫುಡ್, ಉಪ್ಪಿನ ಅಂಶ ಹೆಚ್ಚಿರುವ ಆಹಾರ ಸೇವನೆ, ಒತ್ತಡದ ಜೀವನ ಅಧಿಕ ರಕ್ತದೊತ್ತಡಕ್ಕೆ ಕಾರಣಗಳು. ಇದು ಸಾಮಾನ್ಯವಾಗಿ ಜೀವನಪರ್ಯಂತ ಇರುವ ಅನಾರೋಗ್ಯ. ಇದರಿಂದಾಗಿ ಕ್ರಮೇಣ ಮೂತ್ರಪಿಂಡ ಕಾಯಿಲೆಗಳು, ಹೃದ್ರೋಗಗಳು, ಲಕ್ಕಾದಂತಹ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವಾ ಸೌಲಭ್ಯ ಸಾಕಷ್ಟು ಇಲ್ಲ ಜತೆಗೆ ಹಳ್ಳಿ ಜನರು ರೋಗನಿರ್ಣಯ ಮಾಡಿಸಿಕೊಳ್ಳುವುದು ಕಡಿಮೆ. ಪತ್ತೆಯಾದ ಬಳಿಕವೂ ಸರಿಯಾಗಿ ಔಷಧ ಅನುಸರಣೆ ಮಾಡುತ್ತಾರೆ ಎನ್ನಲಾಗುವುದಿಲ್ಲ ಈ ಅಂಶಗಳು ವಿಷಯವನ್ನು ಇನ್ನಷ್ಟು ಕಳವಳಕಾರಿಯಾಗಿಸಿವೆ.
ಅಧಿಕ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಇತ್ಯಾದಿಗಳು ಸಾಂಕ್ರಾಮಿಕೇತರ ಕಾಯಿಲೆ (ಎನ್ಸಿಡಿ)ಗಳ ವರ್ಗದಲ್ಲಿ ಬರುತ್ತವೆ. ಅಂದರೆ ಇವು ಹರಡುವುದಿಲ್ಲ ಮತ್ತು ಜೀವನಶೈಲಿಗೆ ಸಂಬಂಧಿಸಿದವುಗಳು. ದೇಶದಲ್ಲಿ ಪ್ರಸ್ತುತ ಒಟ್ಟು ಆಗುವ ಸಾವು ಗಳಲ್ಲಿ ಶೇ. ೬೩-೬೬ರಷ್ಟು ಇವುಗಳಿಂದಾಗಿಯೇ ಉಂಟಾಗುತ್ತಿದೆ. ೨೦೪೦-೫೦ರ ವೇಳೆಗೆ ಇವುಗಳ ಹೊರೆ ಇನ್ನಷ್ಟು ತೀವ್ರವಾಗಿ ಹೆಚ್ಚಲಿದೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ. ಈ ಅನಾರೋಗ್ಯಕ್ಕೆ ಒಳಗಾಗುವ ಸರಾಸರಿ ವಯೋಮಾನ ಕಡಿಮೆಯಾ ಗುತ್ತ ಬರುತ್ತಿರುವುದು ಅಂದರೆ ಸಣ್ಣವಯಸ್ಸಿನವರು ಈ ರೋಗಗಳಿಗೆ ತುತ್ತಾಗುತ್ತಿರು ವುದು ಇನ್ನಷ್ಟು ಗಂಭೀರ ವಿಷಯ. ಇದರಿಂದ ದೇಶಕ್ಕೆ ಉಂಟಾಗುವ ಆರ್ಥಿಕ ಹೊರೆ-ನಷ್ಟವೂ ಬಹಳ, ನಾವು ಅಂದರೆ ಭಾರತೀಯರು ಜನಾಂಗೀಯವಾಗಿ ಪಾಶ್ಚಾತ್ಯರಿಗಿಂತ ಹೆಚ್ಚು ಈ ರೋಗಗಳಿಗೆ ತುತ್ತಾಗುವ ಅಪಾಯ ಹೊಂದಿದ್ದೇವೆ.
ಈ ಹಿನ್ನೆಲೆಯಲ್ಲಿ ಸರಕಾರ, ಆರೋಗ ಸರಕಾರ, ಆರೋಗ್ಯ ಇಲಾಖೆ, ಸರಕಾರೇತರ ಸಂಘ ಸಂಸ್ಥೆಗಳು, ಆರೋಗ್ಯ ಸೇವಾ ಸಂಸ್ಥೆಗಳು ತತ್ ಕ್ಷಣ ಅಧಿಕ ರಕ್ತದೊತ್ತಡ ಸಹಿತ ಎಲ್ಲ ಎನ್ಸಿಡಿಗಳ ಬೆಳವಣಿಗೆಯನ್ನು ಹತ್ತಿಕ್ಕುವ ಕ್ರಮಗಳನ್ನು ಸಮರೋಪಾದಿ ಯಲ್ಲಿ ಕೈಗೊಳ್ಳಬೇಕಾಗಿದೆ. ಈ ವಿಷಯವನ್ನು ರಾಷ್ಟ್ರೀಯ ಮತ್ತು ರಾಜ್ಯ ಆರೋಗ್ಯ ಕಾರ್ಯಕ್ರಮಗಳ ಅಂಶವನ್ನಾಗಿ ಸೇರ್ಪಡೆ ಮಾಡಿಕೊಳ್ಳುವುದು ಕೂಡಲೇ ಆಗಬೇಕಾದ ಕ್ರಮ ಇದರಿಂದ ವ್ಯವಸ್ಥಿತವಾಗಿ ಈ ರೋಗಗಳು ಬಾರದಂತೆ ತಡೆಗಟ್ಟುವುದು, ಇವುಗಳು ಉಂಟಾಗುವುದಕ್ಕೆ ಕಾರಣವಾಗುವ ಅಂಶಗಳ ನಿರ್ವಹಣೆ, ಚಿಕಿತ್ಸೆ ಜಾಗೃತಿ ಇತ್ಯಾದಿಯಾಗಿ ಸಮಗ್ರ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವುದು ಸಾಧ್ಯವಾಗುತ್ತದೆ. ಈ ವಿಷಯದಲ್ಲಿ ನೀತಿ ನಿರೂಪಕರು, ಸರಕಾರೇತರ ಸಂಸ್ಥೆಗಳು, ಖಾಸಗಿ ಆರೋಗ್ಯ ಸೇವಾ ಸಂಸ್ಥೆಗಳು ಸರಕಾರದ ಜೊತೆಗೆ ಕೈಜೋಡಿಸಬೇಕು. ಜೊತೆಗೆ ಮುಖ್ಯವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ವ್ಯಾಪಕವಾಗಿ ನಡೆಯಬೇಕಾಗಿದೆ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೪-೦೩-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!