೧. ಬುದ್ಧ ವಿಗ್ರಹದ ಬಂಧನ

ಹೆಗಲಲ್ಲಿ ಹತ್ತಿ ಸುರುಳಿಗಳನ್ನು ಹೊತ್ತು ಸಾಗುತ್ತಿದ್ದ ವ್ಯಾಪಾರಿಯೊಬ್ಬನಿಗೆ ಮಾರ್ಗ ಮಧ್ಯದಲ್ಲಿ ಬಿಸಿಲಿನ ಧಗೆ ಸಹಿಸದಾಯಿತು. ಎಲ್ಲಾದರೂ ನೆರಳು ಕಂಡಲ್ಲಿ ವಿಶ್ರಮಿಸಿಕೊಳ್ಳೋಣ ಎಂದುಕೊಂಡ. ಸುತ್ತಮುತ್ತ ನೆರಳ ಆಶ್ರಯವಿದೆಯೇ ಎಂದು ನೋಡಿದರೆ, ಕಲ್ಲಿನಿಂದ ನಿರ್ಮಿಸಲಾಗಿದ್ದ ಗೋಪುರವೊಂದರ ಕೆಳಗೆ ನಿಂತಿದ್ದ ಶಿಲಾನಿರ್ಮಿತ ಬುದ್ದ ವಿಗ್ರಹ ಕಾಣಿಸಿತು. ಆ ಗೋಪುರವನ್ನು ಹೊಕ್ಕು ದಣಿವಾರಿಸಿಕೊಳ್ಳುತ್ತಿದ್ದಂತೆ ಜೊಂಪು ಹತ್ತಿತು. ಸೊಗಸಾದ ನಿದ್ದೆ ಮುಗಿಸಿ ಎದ್ದು ನೋಡುತ್ತಾನೆ; ಹತ್ತಿ ಸುರುಳಿಗಳು ಮಂಗಮಾಯ! ಗಾಬರಿಯಿಂದ ಓಡೋಡು ಹೋಗಿ ಪೋಲೀಸರಿಗೆ ದೂರುಕೊಟ್ಟ.

ನ್ಯಾಯಾಧೀಶ ಇವನ ಪ್ರಕರಣವನ್ನು ಕೈಗೆತ್ತಿಕೊಂಡು ವಿಚಾರಣೆ ಶುರು ಮಾಡಿದ. ಆ ಹತ್ತಿ ಸುರುಳಿಗಳನ್ನು ಕದ್ದವರಾದರೂ ಯಾರು? ಮತ್ಯಾರು, ಆ ಕಲ್ಲಿನ ಬುದ್ದನೇ ಎಂಬುದು ಆ ನ್ಯಾಯಾಧೀಶನ ಲೆಕ್ಕಾಚಾರವಾಗಿತ್ತು! "ಆ ಬುದ್ದ ಬಡಪಾಯಿ ಜನರ ಕಾಳಜಿ ತೆಗೆದುಕೊಳ್ಳಬೇಕೋ ಬೇಡವೋ? ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಅವನು ವಿಫಲನಾಗಿದ್ದಾನೆ! ಅವನನ್ನು ಬಂಧಿಸಿ!'' ಎಂದು ಆತ ಪೋಲೀಸರಿಗೆ ಆಜ್ಞೆ ಇತ್ತ.

ಸರಿ. ಶಿಲಾನಿರ್ಮಿತ ಬುದ್ಧ ಪ್ರತಿಮೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ತಂದೇಬಿಟ್ಟರು ಪೊಲೀಸರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರಿಗೆ ಎಲ್ಲಿಲ್ಲದ ಕುತೂಹಲ, 'ಏನಿದು ಕಥೆ? ನ್ಯಾಯಾಧೀಶನ ತೀರ್ಪೇನು ನೋಡೇಬಿಡೋಣ' ಎಂದು ಅವರೆಲ್ಲ ತಲೆಗೊಂದು ಮಾತಾಡುತ್ತ ಕಾದುನಿಂತರು.

ನ್ಯಾಯಾಧೀಶ ಬಂದ. ಪೀಠ ಏರಿದವನೆ ಗುಲ್ಲೆಬ್ಬಿಸುತ್ತ ನಿಂತಿದ್ದ ಜನರನ್ನು ತರಾಟೆಗೆ ತೆಗೆದುಕೊಂಡ- "ಏನಂತ ಅಂದುಕೊಂಡಿದ್ದೀರಿ ನೀವೆಲ್ಲ? ಕೋರ್ಟಿನೆದುರು ಬರುವುದಕ್ಕೆ ಯಾರು ಕೊಟ್ಟರು ನಿಮಗೆ ಅಧಿಕಾರ? ನ್ಯಾಯಾಲಯದ ನಿಂದನೆ ಮಾಡಿದ್ದೀರಿ ನೀವೆಲ್ಲ, ಇದಕ್ಕೆ ದಂಡ ಮತ್ತು ಜೈಲು ಶಿಕ್ಷೆ. ಗೊತ್ತ ನಿಮಗೆ?'' ಅಂದ.

ಜನರು ಗಾಬರಿಯಿಂದ ಹೌಹಾರಿದರು. "ಅಯ್ಯಾ ತಪ್ಪಾಯಿತು'' ಎಂದು ದುಂಬಾಲು ಬಿದ್ದರು. “ಇಲ್ಲ ! ನಿಮಗೆ ದಂಡ ಹಾಕಲೇಬೇಕಾಗುತ್ತದೆ ನಾನು. ಆದರೆ ಒಂದು ಷರತ್ತಿನ ಮೇಲೆ ಅದನ್ನು ರದ್ದು ಮಾಡುವುದಕ್ಕೆ ಸಾಧ್ಯ...! ನೀವು ಪ್ರತಿಯೊಬ್ಬರೂ ಒಂದೊಂದು ಸುರುಳಿ ಹತ್ತಿ ತಂದುಕೊಡುವುದಕ್ಕೆ ಸಿದ್ದರಿದ್ದೀರಿ ಎಂದಾದರೆ ನಿಮಗೆ ಮಾಫಿ! ಇದಕ್ಕೆ ಯಾರಾದರೂ ತಪ್ಪಿದಿರೆಂದರೆ ಬಂಧಿಸಬೇಕಾಗುತ್ತದೆ'' ಎಂದ ನ್ಯಾಯಾಧೀಶ.

ಹಾಗೆ ಒಬ್ಬೊಬ್ಬರೂ ಒಂದೊಂದು ಹತ್ತಿ ಸುರುಳಿ ತಂದು ಒಪ್ಪಿಸಿದರು. ಅವುಗಳಲ್ಲಿ ಒಂದು ಸುರುಳಿ ತನ್ನದೇ ಎಂದು ಆ ವ್ಯಾಪಾರಿ ಗುರುತಿಸಿದ. ಹೀಗೆ ಕಳ್ಳ ಸುಲಭದಲ್ಲಿ ಸಿಕ್ಕಿಬಿಟ್ಟ.

***

೨. ಬುದ್ಧ ಇಲ್ಲದ ಸ್ಥಳ

ಝನ್ ಒಗಟು (ಕೊಅನ್) ಗಳ ಪರಂಪರೆಯನ್ನು ಮರು ಸ್ಥಾಪಿಸಿದ್ದ ಗುರು ಹಕು ಯಿನ್ ಅವರ ಗುರುಕುಲದಲ್ಲಿ ಹಲವಾರು ಮಂದಿ ಸನ್ಯಾಸಿಗಳು ಸಾಧನೆ ಮಾಡುತ್ತಿದ್ದರು.

ಹಕು ಯಿನ್ ಅವರ ಶಿಷ್ಯರ ಗುಂಪಿಗೆ ಸೇರಿಕೊಂಡ ಮೊದಲಿಗರಲ್ಲಿ ಹದಿನಾರರ ಹರೆಯದ ಸತ್ ಸು ಕೂಡ ಒಬ್ಬಳು. ಅಧ್ಯಯನ, ಸಾಧನೆ ನಡೆಸಿದ ಕೆಲವೇ ಸಮಯದಲ್ಲಿ ಆಕೆಗೆ ಜ್ಞಾನೋದಯವಾಗಿತ್ತು.

ಒಂದು ದಿನ ಅವಳು ಪೆಟ್ಟಿಗೆಯೊಂದರ ಮೇಲೆ ಕುಳಿತು ಝಾ ಝನ್ (ಧ್ಯಾನ ಪ್ರಕ್ರಿಯೆ) ನಲ್ಲಿ ನಿರತಳಾಗಿದ್ದಾಗ ಅವಳ ತಂದೆ ಆಗಮಿಸಿದ. ಮಗಳು ಪೆಟ್ಟಿಗೆಯ ಮೇಲೆ ಕುಳಿತಿದ್ದನ್ನು ಕಂಡವನೇ. ''ಇದೇನು ಮಾಡುತ್ತಿದ್ದಿ? ಆ ಪೆಟ್ಟಿಗೆಯಲ್ಲಿ ಬುದ್ಧನ ಪ್ರತಿಮೆ ಇದೆ!'' ಎಂದ.

ಆಕೆ ತಣ್ಣಗೆ ಉತ್ತರಿಸಿದಳು: ''ಅಪ್ಪಾ, ಆ ಬುದ್ದ ಇಲ್ಲದ ಸ್ಥಳ ಯಾವುದಾದರೂ ಇದ್ದರೆ ದಯವಿಟ್ಟು ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತೀಯಾ?''

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ