ರಾಜ್ಯ ಸರಕಾರಿ ನೌಕರರ ಮುಂಬಡ್ತಿಗೆ ಕೇವಲ ಸೇವಾ ಜೇಷ್ಠತೆ ಮತ್ತು ಅನುಭವವನ್ನಷ್ಟೇ ಪರಿಗಣಿಸದೆ, ಇನ್ನು ಮುಂದೆ ಅಗತ್ಯ ತರಬೇತಿಯನ್ನು ಕಡ್ಡಾಯಗೊಳಿಸಿರುವುದು ಆಡಳಿತ ಸುಧಾರಣೆಯ ದೃಷ್ಟಿಯಿಂದ ಅತ್ಯಂತ ಆಶಾದಾಯಕ ಮತ್ತು ಸಮಯೋಚಿತ ಕ್ರಮವಾಗಿದೆ. 'ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಮುಂಬಡ್ತಿಗೆ ತರಬೇತಿ ಕಡ್ಡಾಯ) ನಿಯಮಗಳು-೨೦೨೬ರ ಅಂತಿಮ ಅಧಿಸೂಚನೆಯು ಸರಕಾರಿ ಯಂತ್ರದ ಕಾರ್ಯವೈಖರಿಯಲ್ಲಿ ಹೊಸ ಚೈತನ್ಯ ತುಂಬುವ ನಿರೀಕ್ಷೆಯಿದೆ. ಈ ಮಹತ್ವದ ಬದಲಾವಣೆಯು ಆಡಳಿತದಲ್ಲಿ ವೃತ್ತಿಪರತೆ ಮತ್ತು ದಕ್ಷತೆ ಹೆಚ್ಚಿಸುವಲ್ಲಿ ಮೈಲುಗಲ್ಲಾಗಲಿದೆ ಎನ್ನುವುದರಲ್ಲಿ ಸಂಶಯವಿಲ್ಲ.
ಖಾಸಗಿ ವಲಯದಲ್ಲಿಯೂ ಬಡ್ತಿ ಮಾನದಂಡಗಳು ಇಂಥದ್ದೇ ಅರ್ಹತೆಯ ಮಾದರಿಯಲ್ಲಿ ಇರುತ್ತವೆ. ಆದರೆ, ಸಾಮಾನ್ಯವಾಗಿ ಸರಕಾರಿ ವಲಯದಲ್ಲಿ ಒಮ್ಮೆ ಉದ್ಯೋಗ ದೊರೆತರೆ ಸಾಕು, ನಿವೃತ್ತಿಯವರೆಗೆ ಕೇವಲ ಕಾಲಮಿತಿಯ ಬಡ್ತಿಗಳನ್ನು ಪಡೆಯುತ್ತಾ ಸಾಗುವ ಪ್ರವೃತ್ತಿ ದಶಕಗಳಿಂದ ಮನೆಮಾಡಿದೆ. ಇದರಿಂದಾಗಿ ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಹೊಸ ಕೌಶಲ ಮೈಗೂಡಿಸಿಕೊಳ್ಳುವ ಉತ್ಸಾಹ ಸಾಕಷ್ಟು ನೌಕರರಲ್ಲಿ ಕುಂಠಿತವಾಗುತ್ತಿತ್ತು. ಆದರೆ, ಇಂದಿನ ತಂತ್ರಜ್ಞಾನ ಆಧಾರಿತ ಯುಗದಲ್ಲಿ ಈ ಧೋರಣೆ ಆಡಳಿತಕ್ಕೆ ಮಾರಕ. ನಿನ್ನೆಯ ತಂತ್ರಜ್ಞಾನ ಇಂದು ಹಳತಾಗುತ್ತಿರುವ, ಕೃತಕ ಬುದ್ಧಿಮತ್ತೆಯಂಥ (ಎಐ) ಕ್ರಾಂತಿಕಾರಿ ಬದಲಾವಣೆಗಳು ಆಡಳಿತದ ಅಂಗವಾಗುತ್ತಿರುವ ಈ ಕಾಲದಲ್ಲಿ, ನೌಕರರು ಅಷ್ಟೇಟ್ ಆಗುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ 'ಕ್ಷಮತೆ ನಿರ್ಮಾಣ ಆಯೋಗ'ದ (Capacity Building Commission- CBC) ಮಾದರಿಯಲ್ಲೇ ರಾಜ್ಯ ಸರಕಾರ ಹೆಜ್ಜೆ ಇಟ್ಟಿರುವುದು ಅಭಿನಂದನೀಯ.
ಮುಂಬಡ್ತಿ ಎಂಬುದು ಕೇವಲ ಹಕ್ಕಾಗದೆ, ಅದು ಅರ್ಹತೆಯ ಸಂಕೇತವಾಗಬೇಕು. ತರಬೇತಿಯನ್ನು ಕಡ್ಡಾಯಗೊಳಿಸುವುದರಿಂದ ನೌಕರರಲ್ಲಿ ಜವಾಬ್ದಾರಿಯ ಅರಿವು ಹೆಚ್ಚುವುದಲ್ಲದೆ, ಉನ್ನತ ಹುದ್ದೆಯ ಸವಾಲುಗಳನ್ನು ಎದುರಿಸಲು ಅವರು ಸನ್ನದ್ದರಾಗುತ್ತಾರೆ. ಇದರಿಂದ ಸಾರ್ವಜನಿಕರಿಗೆ ಸಿಗುವ ಸೇವೆಯ ಗುಣಮಟ್ಟವೂ ಉತ್ತಮಗೊಳ್ಳುತ್ತದೆ, ವೇಗಗೊಳ್ಳುತ್ತದೆ. ಹೊಸ ನಿಯಮದ ಪ್ರಕಾರ, ಬಡ್ತಿ ಪಡೆಯುವ ಪ್ರತಿಯೊಬ್ಬ ನೌಕರನೂ ತನ್ನ ಮುಂದಿನ ಜವಾಬ್ದಾರಿಗೆ ಪೂರಕವಾದ ಆಧುನಿಕ ತಾಂತ್ರಿಕ ಜ್ಞಾನ ಮತ್ತು ನಿರ್ವಹಣಾ ಕೌಶಲ ಕಲಿಯಲೇಬೇಕಾಗುತ್ತದೆ. ಇದು ಕೇವಲ ವೈಯಕ್ತಿಕ ಅಭಿವೃದ್ಧಿಯಲ್ಲದೆ, ಇಡೀ ರಾಜ್ಯದ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ವಿಚಾರವೂ ಹೌದು.
ಆದರೆ, ಈ ನಿಯಮ ಕೇವಲ ಕಾಗದದ ಮೇಲೆ ಉಳಿಯದೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬರಬೇಕಿದೆ. ನೀಡಲಾಗುವ ತರಬೇತಿಯು ಕೇವಲ ಔಪಚಾರಿಕವಾಗಿರದೆ. ಪ್ರಾಯೋಗಿಕ ಮತ್ತು ಗುಣಮಟ್ಟದಿಂದ ಕೂಡಿರಬೇಕು. ತರಬೇತಿ ಕೇಂದ್ರಗಳ ಮೂಲಸೌಕರ್ಯ ಮತ್ತು ತರಬೇತುದಾರರ ಸಾಮರ್ಥ್ಯವೂ ಅಷ್ಟೇ ಮುಖ್ಯವಾಗಬೇಕು ಅಡೆತಡೆಗಳಿಲ್ಲದ, ಪಾರದರ್ಶಕ ತರಬೇತಿ ವ್ಯವಸ್ಥೆ ರೂಪಿಸಿದರೆ ಮಾತ್ರ ಸರಕಾರದ ಈ ಆಶಯ ಸಫಲವಾಗಲು ಸಾಧ್ಯ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೨-೦೪-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!