ನಾವು ಯಾರ ಜೊತೆ ಹೆಚ್ಚಿನ ಸಮಯವನ್ನು ಕಳೆಯುತ್ತೇವೆಯೋ ಅವರಂತೆಯೇ ಆಗಿಬಿಡುತ್ತೇವೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ, ನಮ್ಮ ಸಾಮರ್ಥ್ಯದ ಅರಿವು ನಮ್ಮ ಗಮನಕ್ಕೆ ಬಾರದೆ ಹೋಗಿಬಿಡುತ್ತದೆ. ನಮ್ಮ ಚಿಂತನೆ, ಕಲ್ಪನೆ, ನಡವಳಿಕೆ ಎಲ್ಲವೂ ಜೊತೆಗಾರರ ಸಾಮರ್ಥ್ಯದ ಮಿತಿಯಲ್ಲಿಯೇ ಉಳಿದುಬಿಡುತ್ತದೆ. ನಮ್ಮ ಸಾಮರ್ಥ್ಯವನ್ನು ಗುರುತಿಸಿಕೊಳ್ಳದ ಮನಸ್ಥಿತಿಗೆ, ತಿಳಿಯದೆ ತಲುಪಿ ಬಿಡುತ್ತೇವೆ.

ಒಂದು ಬಾರಿ ಹದ್ದು ಒಂದು ತನ್ನ ಮೊಟ್ಟೆಗಳನ್ನು ಕೋಳಿಯ ಗೂಡಿನಲ್ಲಿ ಇಷ್ಟು ಹಾರಿ ಹೋಯಿತು. ಮತ್ತೆ ಅದು ಮರಳಿ ಬರಲೇ ಇಲ್ಲ, ಕೋಳಿ ತನ್ನ ಮೊಟ್ಟೆಗಳೊಂದಿಗೆ ಹದ್ದಿನ ಮೊಟ್ಟೆಗೂ ಕಾವು ಕೊಡಲು ಆರಂಭಿಸಿತು. ಒಂದು ದಿನ ಮೊಟ್ಟೆ ಒಡೆದು ಮರಿ ಹೊರಬಂದಿತು. ಗಾತ್ರದಲ್ಲಿ, ಆಕಾರದಲ್ಲಿ ಹದ್ದಿನ ಮರಿ ಭಿನ್ನವೇ ಆಗಿತ್ತು. ಯಾವುದನ್ನೂ ಅರಿಯದ ಮರಿ, ಬೇರೆಲ್ಲ ಮರಿಗಳೊಂದಿಗೆ ತಾನೂ ಕೋಳಿಯ ಮರಿಯೇ ಎಂದು ಭಾವಿಸಿ, ಬೆಳೆಯ ತೊಡಗಿತು. ಬೆಳೆಯುತ್ತಾ ಬೆಳೆಯುತ್ತಾ ಕೋಳಿಯ ಮರಿಗಳಂತೆ ಕಾಲಿನಲ್ಲಿ ಕಾಳುಗಳನ್ನು ಕೆದಕುತ್ತಾ. ಅದನ್ನೇ ತಿನ್ನುತ್ತಾ, ಕೋಳಿಯಂತೆಯೇ ವರ್ತಿಸುತ್ತಾ ಹೋಯಿತು. ತನಗೆ ಹಾರಲು ಸಾಧ್ಯವಿದೆ ಎನ್ನುವ ಕಲ್ಪನೆಯು ಸಹ ಹದ್ದಿನ ಮರಿಯಲ್ಲಿ ಮೂಡಲಿಲ್ಲ. ಹಾಗಾಗಿ ಅದು ಹಾರುವ ಪ್ರಯತ್ನವನ್ನೇ ಮಾಡಲಿಲ್ಲ.

ಒಮ್ಮೆ ಹದ್ದಿನ ಮರಿ, ಆಕಾಶದಲ್ಲಿ ಎತ್ತರದಲ್ಲಿ ಹಾರಾಡುತ್ತಿದ್ದ ಹದ್ದನ್ನು ಕಂಡು, ಕೋಳಿಯ ಬಳಿ ''ಇಷ್ಟು ಸುಂದರವಾದ ಪಕ್ಷಿ ಯಾವುದು? ಎಷ್ಟು ಎತ್ತರದಲ್ಲಿ ಹಾರುತ್ತಿದೆ! ಅದರ ರೆಕ್ಕೆಗಳೆಷ್ಟು ಬಲಿಷ್ಠವಾಗಿವೆಯಲ್ಲವೇ?'' ಎಂದು ಆಶ್ಚರ್ಯ ವ್ಯಕ್ತಪಡಿಸಿತು. ಅದಕ್ಕೆ ಕೋಳಿ ''ಅದು ಹದ್ದು. ಅತ್ಯಂತ ಎತ್ತರದಲ್ಲಿ ಹಾರುವ ಪಕ್ಷಿ. ಅದು ಪಕ್ಷಿಗಳಲ್ಲಿಯೇ ಅತ್ಯಂತ ಶಕ್ತಿಶಾಲಿಯಾದ ಪಕ್ಷಿಯೂ ಹೌದು. ಅದು ಮೋಡಗಳಿಗಿಂತ ಎತ್ತರದಲ್ಲಿ ಹಾರುತ್ತದೆ. ಆದರೆ ನಿನಗದು ಸಾಧ್ಯವಿಲ್ಲ, ಏಕೆಂದರೆ ನೀನು ಕೋಳಿ'' ಎಂದಿತು. ಹದ್ದಿನ ಮರಿ ತನ್ನನ್ನು ತಾನು ಪರಾಂಬರಿಸಿ ನೋಡಿಕೊಳ್ಳುವ ಪ್ರಯತ್ನವನ್ನೇ ಮಾಡಲಿಲ್ಲ. ತನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಸಾಹಸವನ್ನೂ ಮಾಡಲಿಲ್ಲ, ಕೋಳಿ ಹೇಳಿದ ಮಾತನ್ನು ಪೂರ್ಣವಾಗಿ ನಂಬಿಬಿಟ್ಟಿತು. ಅ ಮಾತನ್ನು ಸ್ವಲ್ಪವಾದರೂ ವಿಮರ್ಶಿಸಬೇಕು. ಎಂದು ಅದಕ್ಕೆ ಹೊಳೆಯಲೇ ಇಲ್ಲ. ತನ್ನ ಜೀವಿತಾವಧಿಯನ್ನೆಲ್ಲಾ ಕೋಳಿಯಾಗಿಯೇ ಬದುಕಿ ಬಿಟ್ಟಿತು ತಾನು ಯಾರೆಂಬುದನ್ನು ಸಹ ತಿಳಿಯದೆ ಅದರ ಅಂತ್ಯವಾಯಿತು.

ಹದ್ದಿನಂತೆ ಹಾರಾಡಬೇಕಾದರೆ ಅದರ ರೀತಿ,-ನೀತಿಗಳನ್ನು ಕಲಿಯಬೇಕು. ಹಾಗೆ ಕಲಿಯಬೇಕಾದರೆ ಹದ್ದುಗಳ ಜೊತೆಯಲ್ಲೇ ಇರಬೇಕು. ಸಾಧಕರೊಂದಿಗೆ ಸಾಧನೆ ಮಾಡಬಹುದಾದರೆ, ಚಿಂತಕರೊಂದಿಗೆ ಚಿಂತನೆ ನಡೆಸಬಹುದು. ಎತ್ತರದಲ್ಲಿ ಹಾರಾಡಲು ಎತ್ತರದ ಜ್ಞಾನವಿರಬೇಕು. ಅದಕ್ಕಾಗಿ ಅಂತದೇ ಕನಸುಗಳು ಬೇಕು. ಕನಸು ಕಾಣಲು ಸ್ವ. ಸಾಮರ್ಥ್ಯದ ಅರಿವಿರಬೇಕು.

-ಮಾಯಾ ಬಾಲಚಂದ್ರ

ಚಿತ್ರ ಕೃಪೆ: ಇಂಟರ್ನೆಟ್ ತಾಣ