ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಸನ ನಿವಾರಣೆ ಕೇಂದ್ರ ಆರಂಭಿಸಲು ಸರಕಾರ ಮುಂದಾಗಿರುವುದು ಉತ್ತಮ ಕ್ರಮ. ಮಾದಕ ದ್ರವ್ಯ ವ್ಯಸನ ಇಂದು ಮಿತಿಮೀರುತ್ತಿದ್ದು, ಇದನ್ನು ತಡೆಯಲು ಇಂತಹ ಸಮರ್ಥ ಕ್ರಮಾ ಅಗತ್ಯವಾಗಿತ್ತು. ಎಲ್ಲ ಕಾಲೇಜುಗಳಿಗೂ ಇದನ್ನು ವಿಸ್ತರಿಸಬೇಕು. ಕೆಲವು ಪ್ರದೇಶಗಳ ಶಾಲೆಗಳಲ್ಲಿ ಕೂಡ ಮಕ್ಕಳು ಮಾದಕ ದ್ರವ್ಯ ವ್ಯಸನಿಗಳಾಗಿರುವುದು ಕಂಡುಬಂದಿದೆ. ಹೀಗಾಗಿ ಪ್ರದೇಶಕ್ಕೆ ಅನುಗುಣವಾಗಿ ಶಾಲೆಗಳಲ್ಲಿ ಕೂಡ ಆಪ್ತ ಸಮಾಲೋಚನೆ ಕೇಂದ್ರ, ಮಾದಕ ದ್ರವ್ಯ ವ್ಯಸನ ಮುಕ್ತಿ ಕೇಂದ್ರ ಆರಂಭಿಸಿದರೆ ಇನ್ನಷ್ಟು ಪರಿಣಾಮಕಾರಿಯಾಗಲು ಸಾಧ್ಯ.
ರಾಜ್ಯದಲ್ಲಿ ೨೦೨೩ರಲ್ಲಿ ೬,೭೬೭ ಮಾದಕ ದ್ರವ್ಯ ಪ್ರಕರಣಗಳು ದಾಖಲಾಗಿ, ೧೩೪ ಕೋಟಿ ರೂ. ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ೨೦೨೬ರ ಎರಡೇ ತಿಂಗಳಲ್ಲಿ ೨,೩೭೮ ಪ್ರಕರಣಗಳು ದಾಖಲಾಗಿದ್ದು, ೩೫ ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕ ದ್ರವ್ಯ ಪಿಡುಗು ತೀವ್ರವಾಗಿ ಹೆಚ್ಚಳವಾಗಿರುವುದು ಇದರಿಂದ ಸಾಬೀತಾಗುತ್ತಿದೆ. ರಾಜ್ಯದಲ್ಲಿ ಮಾದಕ ದ್ರವ್ಯ ನಿಷೇಧ ಕಾಯ್ದೆಯಡಿ ದಾಖಲಾದ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಕೇವಲ ಒಂದು ವರ್ಷದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಶೇ.63ರಷ್ಟು ತೀವ್ರ ಏರಿಕೆ ಯಾಗಿದೆ ಎಂದು ರಾಜ್ಯ ಪೊಲೀಸ್ ಅಧಿಕೃತ ಅಂಕಿಅಂಶಗಳು ಹೇಳುತ್ತವೆ. ಇದು ರಾಜ್ಯದಲ್ಲಿ ಬೆಳೆಯುತ್ತಿರುವ ಮಾದಕವಸ್ತು ಜಾಲದ ಭೀಕರತೆಯನ್ನು ಎತ್ತಿ ತೋರಿಸುತ್ತದೆ.
ಮಾದಕ ವ್ಯಸನವು ವಿಶೇಷವಾಗಿ ಯುವಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವುದು ತಜ್ಞರಲ್ಲಿ ಆತಂಕ ಮೂಡಿಸಿದೆ. ಸಿಂಥೆಟಿಕ್ ಡ್ರಗ್ ಬಳಕೆ ಹೆಚ್ಚುತ್ತಿದೆ. ಮುಂಬಯಿ ಪೊಲೀಸ್ ತಂಡವು ಈಚೆಗೆ ಮೈಸೂರಿನ ಹೊರವಲ ಯದಲ್ಲಿ ಡ್ರಗ್ ಉತ್ಪಾದನೆ ಘಟಕದ ಮೇಲೆ ದಾಳಿ ನಡೆಸಿತ್ತು. ಇದಾದ ಬಳಿಕ ಶಿಕ್ಷಣ ಸಂಸ್ಥೆಗಳು, ಐಟಿ ಕಾರಿಡಾರ್ಗಳು, ಸಾರಿಗೆ ಕೇಂದ್ರಗಳು ಮತ್ತು ಕೈಗಾರಿಕ ಪ್ರದೇಶಗಳ ಬಳಿ ಪೊಲೀಸರು ಕಣ್ಣಾವಲು ಹೆಚ್ಚಿಸಿದ್ದಾರೆ.
ಮಾದಕವಸ್ತು ಜಾಲಗಳು ಈಗ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಿಗೂ ಸಂಘಟಿತವಾಗಿ ವಿಸ್ತರಿಸುತ್ತಿವೆ. ಸ್ನೇಹಿತರ ಒತ್ತಡ, ವಿಲಾಸಿ ಜೀವನ ಶೈಲಿಯ ಆಕರ್ಷಣೆ, ಮಾದಕ ವಸ್ತುಗಳು ಸುಲಭವಾಗಿ ಸಿಗುತ್ತಿ ರುವುದು ವ್ಯಸನ ಹೆಚ್ಚಲು ಮುಖ್ಯ ಕಾರಣಗಳಾಗಿವೆ. ಈ ಜಾಲಗಳು ಪ್ರಮುಖವಾಗಿ ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕರಂತಹ ದುರ್ಬಲ ವರ್ಗದವರನ್ನು ಗುರಿಯಾಗಿಸಿಕೊಂಡಿವೆ. ಅಪ್ರಾಪ್ತ ವಯಸ್ಕರು ಹಾಗೂ ಯುವ ಜನತೆ ಮಿತಿ ಮೀರಿ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ.
'ಈ ಹಿನ್ನೆಲೆಯಲ್ಲಿ ಸರಕಾರವು ಎಲ್ಲ ಮೆಡಿಕಲ್ ಕಾಲೇಜುಗಳಲ್ಲೂ ಹೊಸದಾಗಿ ವ್ಯಸನ ನಿವಾರಣೆ ಕೇಂದ್ರ ತೆರೆಯಲು ಮುಂದಾಗಿದೆ. ಸದ್ಯ ಶೇ.20ರಷ್ಟು ಮೆಡಿಕಲ್ ಕಾಲೇಜುಗಳಲ್ಲಿ ಈ ಸೇವೆ ಆರಂಭಗೊಂಡಿವೆ. ಇಲ್ಲಿ ಮಾದಕ ವಸ್ತು ಸೇವನೆ ವ್ಯಸನಿಗಳನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ, ಸಮಾಜದಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಮಾಡಿ ಕೊಡಲಾಗುತ್ತದೆ.
ಸದ್ಯ ಈ ಕ್ರಮ ಸ್ವಾಗತಾರ್ಹವಾದರೂ ಪಿಡುಗನ್ನು ಇನ್ನಷ್ಟು ಸಮರ್ಥವಾಗಿ ಎದುರಿಸಲು ಇದನ್ನು ವಿಸ್ತರಿಸಬೇಕಾಗಿದೆ. ಎಲ್ಲ ಕಾಲೇಜುಗಳಲ್ಲಿ ಮತ್ತು ಆಯ್ದ ಕೆಲವು ಪ್ರದೇಶಗಳಲ್ಲಿ ಶಾಲಾ ಹಂತದಲ್ಲಿಯೂ ಇವುಗಳನ್ನು ಜತೆಗೆ ಆಪ್ತ ಸಮಾ ಲೋಚನೆ ಸೌಲಭ್ಯವನ್ನು ಆರಂಭಿಸಬೇಕಾಗಿದೆ. ಮಾದಕ ದ್ರವ್ಯ ವ್ಯಸನವು ವೈದ್ಯಕೀಯ ಅಥವಾ ಎಂಜಿನಿಯರಿಂಗ್ - ಹೀಗೆ ಕೆಲವೇ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಇರುವುದಲ್ಲ, ಈ ಜಾಲದ ಕರಾಳ ಬಾಹುಗಳು ಎಲ್ಲೆಡೆಗೂ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಅಗತ್ಯವಾಗಿದೆ. ಆಗ ಸಮಾಜದ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳುವುದು ಸಾಧ್ಯ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೭-೦೪-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!