ಇರಾನಿನ ನಾಗರಿಕತೆಯನ್ನೇ ನಾಶ ಮಾಡುತ್ತೇನೆ ಎಂದು ಗುಡುಗಿ, ಗಡುವು ವಿಧಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಠಾತ್ತನೆ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ. ಇರಾನ್ ಕೂಡಾ ಕದನ ವಿರಾಮದ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದು, ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಸಮ್ಮತಿಸಿದೆ. ಇದು ಕಳೆದ ಒಂದೂವರೆ ತಿಂಗಳಿಂದ ನಡೆಯುತ್ತಿರುವ ಕೊಲ್ಲಿ ಸಮರದ ಕಡೆಯಿಂದ ಕೇಳಿ ಬಂದ ಮೊದಲ ಸಮಾಧಾನಕರ ಬೆಳವಣಿಗೆ, ಕೇವಲ ಇರಾನ್, ಅಮೆರಿಕ ಮತ್ತು ಯುದ್ಧ ಸಂತ್ರಸ್ತವಾದ ಕೊಲ್ಲಿ ರಾಷ್ಟ್ರಗಳಷ್ಟೇ ಅಲ್ಲದೆ ಇಡೀ ಜಗತ್ತೇ ನಿಟ್ಟುಸಿರು ಬಿಟ್ಟಿದೆ. ಏಕೆಂದರೆ ಇರಾನ್, ಇಸ್ರೇಲ್, ಅಮೆರಿಕ ನಡುವಿನ ಈ ಸಮರವು ಜಾಗತಿಕ ದುಷ್ಪರಿಣಾಮಗಳನ್ನು ಸೃಷ್ಟಿಸಿತ್ತು. ಯುದ್ಧವು ಇನ್ನಷ್ಟು ಕಾಲ ಮುಂದುವರಿಯುವುದು ಜಗತ್ತಿನ ಎಲ್ಲಾ ದೇಶಗಳ ಪಾಲಿಗೂ ಅಸಹನೀಯವೆನಿಸಿತ್ತು. ಹಾಗಾಗಿ ತೆರೆಮರೆಯಲ್ಲಿ ಸಾಕಷ್ಟು ಸಂಧಾನ ಪ್ರಕ್ರಿಯೆಗಳು ನಡೆದಿದ್ದವು. ಅಂತಹ ಪ್ರಸ್ತಾವಗಳೂ ಆರಂಭದಲ್ಲಿ ಹಿನ್ನಡೆಗಳನ್ನು ಕಂಡಿದ್ದವು. ಆದರೀಗ ಉಭಯತ್ರಯರೂ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿರುವುದು ಸಮಾಧಾನಕರ ವಿಷಯ. ಪ್ರಸಕ್ತ ಕದನ ವಿರಾಮ ರೂಪುಗೊಳ್ಳುವಲ್ಲಿ ನೇಪಥ್ಯದಲ್ಲಿ ಚೀನಾ ಮಹತ್ವದ ಪಾತ್ರ ವಹಿಸಿದೆಯೆಂದು ಈಗ ಹೇಳಲಾಗುತ್ತಿದೆ. ಆದರೆ ಯುದ್ಧ ಪೂರ್ಣ ಸಮಾಪ್ತಿಯಾಯಿತೆಂದು ಈಗಲೇ ಸಂಪೂರ್ಣ ಸಮಾಧಾನಪಟ್ಟುಕೊಳ್ಳುವಂತಿಲ್ಲ, ಏಕೆಂದರೆ ರಾಜತಾಂತ್ರಿಕ ಮಾತುಕತೆಗಳು ಇನ್ನಷ್ಟೇ ನಡೆಯಬೇಕಿದೆ. ಎಲ್ಲರಿಗೂ ಸಮ್ಮತವಾಗುವಂತಹ ಅಂತಿಮ ಒಪ್ಪಂದ ಇನ್ನಷ್ಟೇ ರೂವುಗೊಳ್ಳಬೇಕಿದೆ. ಈ ಮಾತುಕತೆಯಲ್ಲಿ ಸಾಕಷ್ಟು ಹಗ್ಗಜಗ್ಗಾಟಗಳೂ ನಡೆಯಲಿರುವುದು ಖಂಡಿತ. ಡೊನಾಲ್ಡ್ ಟ್ರಂಪ್ನಂತಹ ಅಪ್ರಬುದ್ಧ, ಅಹಂಭಾವಿ ಮುಖಂಡನ ಜತೆ ಸಂಧಾನ ನಡೆಸುವುದೂ ಕಷ್ಟಕರವೆ. ಸಂಧಾನ ಮುರಿದು ಬಿದ್ದು ಹಠಾತ್ತನೆ ಯುದ್ಧ ಪುನರಾರಂಭಗೊಂಡರೂ ಅಚ್ಚರಿ ಪಡಬೇಕಿಲ್ಲ. ಸದ್ಯಕ್ಕಂತೂ ಎರಡು ವಾರಗಳ ವಿರಾಮವಂತೂ ಸಿಕ್ಕಿತಲ್ಲಾ ಎನ್ನುವುದೇ ಸಮಾಧಾನ.
ಈವರೆಗಿನ ಸಮರವೇ ಸಾಕಷ್ಟು ಹಾನಿ ತಂದೊಡ್ಡಿದೆ. ಜೀವ ಹಾನಿಯಪ್ಪ ಅಲ್ಲದೆ ಸೊತ್ತು ಹಾನಿಯೂ ಸಾಕಷ್ಟು ಸಂಭವಿಸಿದೆ. ಬಾಂಬು ದಾಳಿ, ಕ್ಷಿಪಣಿ ವಾಳೆಯಿಂದ ಹಾನಿಗೀಡಾದ ಪ್ರದೇಶಗಳ ದುರಸ್ತಿಗೇ ಬಹಳಷ್ಟು ಪರಿಶ್ರಮ, ವೆಚ್ಚ ತಗಲಲಿದೆ. ಯುದ್ಧದಿಂದಾಗಿ ಬಹಳಷ್ಟು ದೇಶಗಳ ಆರ್ಥಿಕತೆಗೂ ಹೊಡೆತ ಬಿದ್ದಿದೆ. ತೈಲೋತ್ಪನ್ನ ಮತ್ತು ಬಿಡುಗೆ ಅನಿಲಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇವೆಲ್ಲ ಸರಿರೂಪಕ್ಕೆ ಬರಲು ಇನ್ನಷ್ಟು ಕಾಲಾವಕಾಶ ಬೇಕು. ಭಾರತಕ್ಕೆ ಸಂಬಂಧಿಸಿ ಹೇಳುವುದಾದರೆ, ಸಮರ ಕಾಲದಲ್ಲೂ ತೈಲ ಪರಿಸ್ಥಿತಿ ಮತ್ತು ಎಲ್ ಪಿಜಿ ಪೂರೈಕೆಯನ್ನು ಸಮರ್ಥವಾಗಿ ನಿಭಾಯಿಸಿದುದಕ್ಕೆ ಭಾರತ ಸರಕಾರವನ್ನು ಅಭಿನಂದಿಸಬೇಕಾಗುತ್ತದೆ. ಈ ಯುದ್ಧ ಎಲ್ಲರಿಗೂ ಸಾಕಷ್ಟು ಪಾಠಗಳನ್ನು ಕಲಿಸಿದೆ. ಇನ್ನಾದರೂ ಯುದ್ಧ ನಿರತ ಪಕ್ಷಗಳೆಲ್ಲವೂ ಯುಕ್ತ ಜ್ಞಾನವನ್ನು ತಂದುಕೊಂಡು ಸಮರಕ್ಕೆ ಶಾಶ್ವತ ಅಂತ್ಯ ಹಾಡಲಿ, ಜಾಗತಿಕ ವ್ಯವಸ್ಥೆ ಮತ್ತೆ ಹಿಂದಿನ ಪರಿಸ್ಥಿತಿಗೆ ಮರಳಲಿ ಎಂಬುದೇ ಎಲ್ಲರ ಅಶಯ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೯-೦೪-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!