ರಾಜ್ಯದ ಆಚೆಗಿನ ಪುಣ್ಯಕ್ಷೇತ್ರಗಳಿಗೆ ತೆರಳುವ ಕನ್ನಡಿಗ ಭಕ್ತರಿಗೆ ಆಸರೆಯಾಗಬೇಕಿದ್ದ ಕರ್ನಾಟಕ ಭವನಗಳು ಇಂದು ಅವ್ಯವಸ್ಥೆಯ ಆಗರಗಳಾಗಿರುವುದು ಅತ್ಯಂತ ಖೇದಕರ ಸಂಗತಿ. ಶ್ರದ್ದೆ ಮತ್ತು ಭಕ್ತಿಯಿಂದ ದೈವದರ್ಶನಕ್ಕೆ ತೆರಳುವ ಭಕ್ತರು, ತಮ್ಮ ರಾಜ್ಯದ ಭವನಗಳಲ್ಲಿ ತಂಗುವ ಮೂಲಕ ಒಂದು ರೀತಿಯ ಆತ್ಮೀಯತೆ ಮತ್ತು ಸುರಕ್ಷತೆಯ ಅನುಭವ ಪಡೆಯುತ್ತಾರೆ. ಆದರೆ, ಆಂಧ್ರಪ್ರದೇಶದ ಮಂತ್ರಾಲಯದಿಂದ ಹಿಡಿದು ಉತ್ತರಪ್ರದೇಶದ ವಾರಾಣಸಿಯವರೆಗೆ ಇರುವ ನಮ್ಮ ಭವನಗಳ ಸ್ಥಿತಿಯನ್ನು ನೋಡಿದರೆ, ಸರಕಾರಕ್ಕೆ ಭಕ್ತರ ಹಿತಾಸಕ್ತಿಗಿಂತ ನಿರ್ಲಕ್ಷ್ಯವೇ ಹೆಚ್ಚಾದಂತಿದೆ. ಮಂತ್ರಾಲಯದಂತಹ ಪ್ರಸಿದ್ಧ ಕ್ಷೇತ್ರದಲ್ಲಿ ಹಿರಿಯ ನಾಗರಿಕರಿಗೆ ಲಿಫ್ಟ್ ಸೌಲಭ್ಯ ಇಲ್ಲದಿರುವುದು, ಕೆಟ್ಟು ನಿಂತ ಗೀಸರ್‌ಗಳು ಮತ್ತು ಅಶುಚಿತ್ವದ ವಾತಾವರಣವು ಭಕ್ತರ ಪಾಲಿಗೆ ಯಾತ್ರೆಯ ಸಂಭ್ರಮವನ್ನು ವಿಷಾದವಾಗಿ ಬದಲಿಸುತ್ತಿವೆ.

ಮುಜರಾಯಿ ಇಲಾಖೆಯ ಅಧೀನದಲ್ಲಿರುವ ರಾಜ್ಯದ ಪ್ರಮುಖ ದೇವಾಲಯಗಳಿಂದ ಪ್ರತಿ ತಿಂಗಳು ಕೋಟ್ಯಂತರ ರೂಪಾಯಿ ಆದಾಯ ಹರಿದು ಬರುತ್ತಿದೆ. ಇಷ್ಟೊಂದು ಬೃಹತ್ ಮೊತ್ತದ ಸಂಗ್ರಹವಿದ್ದರೂ, ಹೊರರಾಜ್ಯಗಳಲ್ಲಿರುವ ಸ್ವಂತ ಆಸ್ತಿಗಳನ್ನು ಸುಸ್ಥಿತಿಯಲ್ಲಿಡಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ಆಡಳಿತಾತ್ಮಕ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಶ್ರೀಶೈಲದಲ್ಲಿ ಜಾಗದ ಗುತ್ತಿಗೆ ಅವಧಿ ಮುಗಿದು ಆಂಧ್ರ ಸರಕಾರದ ವಶವಾಗುತ್ತಿರುವುದು ಮತ್ತು ಕಾಶಿಯ ಭವನದ ಗೋಡೆ ಕುಸಿದಿರುವುದು ಇಲಾಖೆಯ ದಿವ್ಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕಟ್ಟಡಗಳನ್ನು ನಿರ್ಮಿಸುವುದು ದೊಡ್ಡ ಸಾಧನೆಯಲ್ಲ; ಅವುಗಳನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡಿ ಭಕ್ತರಿಗೆ ಯೋಗ್ಯವಾದ ವಾಸ್ತವ್ಯ ಒದಗಿಸುವುದು ನಿಜವಾದ ಜವಾಬ್ದಾರಿ ಎನ್ನುವುದನ್ನೂ ಸರಕಾರ ಮರೆತಂತಿದೆ.

ಒಂದು ಪ್ರದೇಶಕ್ಕೆ ಭೇಟಿ ನೀಡುವ ಭಕ್ತರು ಅಲ್ಲಿನ ಸೌಲಭ್ಯಗಳ ಬಗ್ಗೆ ಕೇವಲ ದೂರು ನೀಡುವುದಿಲ್ಲ, ಬದಲಾಗಿ ತಮ್ಮ ಊರುಗಳಿಗೆ ಮರಳಿದ ನಂತರ ವ್ಯವಸ್ಥೆಯ ಬಗ್ಗೆ ಒಂದು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುತ್ತಾರೆ. 'ಸರಕಾರ ಭಕ್ತಸಮೂಹವನ್ನು ನಿರ್ಲಕ್ಷಿಸುತ್ತಿದೆ' ಎನ್ನುವ ಭಾವನೆ ಭಕ್ತರಲ್ಲಿ ಮೂಡಿದರೆ, ಅದು ಆಡಳಿತಾರೂಢರ ಮೇಲಿನ ನಂಬಿಕೆಗೆ ಬಲವಾದ ಆಘಾತ. ಭಕ್ತರ ಹಣ ಭಕ್ತರ ಸೌಲಭ್ಯಕ್ಕೇ ಬಳಕೆಯಾದರೂ ಸಾಕಲ್ಲವೇ?

ಹೊರರಾಜ್ಯಗಳಲ್ಲಿನ ಕರ್ನಾಟಕ ಭವನಗಳು ಕೇವಲ ಇಟ್ಟಿಗೆ-ಮಣ್ಣಿನ ಕಟ್ಟಡಗಳಲ್ಲ ಅವು ನಮ್ಮ ರಾಜ್ಯದ ಘನತೆ ಮತ್ತು ಸಂಸ್ಕೃತಿಯ ಪ್ರತೀಕಗಳು. ಇನ್ನಾದರೂ ಮುಜರಾಯಿ ಇಲಾಖೆಯು ಎಚ್ಚೆತ್ತುಕೊಂಡು, ತಕ್ಷಣವೇ ತಜ್ಞರ ಸಮಿತಿಯನ್ನು ರಚಿಸಿ ಪ್ರತಿಯೊಂದು ಭವನದ ಸ್ಥಿತಿಗತಿಗಳನ್ನು ಪರಿಶೀಲಿಸಬೇಕು. ತುರ್ತು ದುರಸ್ತಿ ಕಾರ್ಯಗಳು, ಶುಚಿತಕ್ಕೆ ಆದ್ಯತೆ ಮತ್ತು ಆಧುನಿಕ ಮೂಲಸೌಕರ್ಯಗಳನ್ನು ಕಲ್ಪಿಸುವ ಮೂಲಕ ಕನ್ನಡಿಗರ ನಂಬಿಕೆಯನ್ನು ಕಾಪಾಡಬೇಕಿದೆ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೬-೦೪-೨೦೨೬

ಚಿತ್ರ ಕೃಪೆ: ಅಂತರ್ಜಾಲ ತಾಣ