ಹಿರಿಯ ನಾಯಕ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮೋದಿಯವರನ್ನು ಭಯೋತ್ಪಾದಕ ಎಂದು ಟೀಕಿಸಿದ ಪ್ರಕರಣಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ, ಖರ್ಗೆಯವರು ನಾನು ಹಾಗೆ ಹೇಳಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಅವರು ಹಾಗೆ ಹೇಳದಿದ್ದರೆ ಅದು ವ್ಯಾಪಕವಾಗಿ ಹರಡಿದ್ದಾದರೂ ಹೇಗೆ ಎಂಬುದು ಮುಖ್ಯಪ್ರಶ್ನೆ. ಮನಸ್ಸಿನ ಸ್ಥಿಮಿತತೆ ಕಳೆದುಕೊಂಡು ಮಾತಾಡಿದ ನಂತರ ನಾನು ಆಡಿಯೇ ಇಲ್ಲ. ಆ ಅರ್ಥದಲ್ಲಿ ಹೇಳಿಲ್ಲ ಎಂದು ಸಮಜಾಯಿಷಿಗಳನ್ನು ನೀಡುವುದು ರಾಜಕಾರಣಿಗಳ ಜಾಯಮಾನ! ಖರ್ಗೆಯಂಥ ಮಹಾ ನಾಯಕರ ಬಾಯಿಂದ ಅಂತಹ ಮಾತು ಬಂತೆಂದು ಸುಖಾಸುಮ್ಮನೆ ಸುದ್ದಿಯಾಗುವುದಿಲ್ಲ. ಅಲ್ಲದೆ ತೆಲಂಗಾಣದ ಕಾಂಗ್ರೆಸ್ ಮುಖ್ಯಮಂತ್ರಿ ರೇವಂತ ರೆಡ್ಡಿಯಂಥ ಬುದ್ದಿವಂತರು ಕೂಡ ಮೋದಿಯವರನ್ನು ಮಾರೀಚನಿಗೆ ಹೋಲಿಸಿದ್ದಾರೆ. ಉಳಿದ ಸಂದರ್ಭಗಳಲ್ಲಿ ರಾಜಕಾರಣಿಗಳ ಬಾಯಿಂದ ಇಂಥ ಪುರಾಣಪಾತ್ರಗಳೇಕೆ ಉದುರುವುದಿಲ್ಲ ಎಂಬುದನ್ನು ಗಮನಿಸಿದರೆ ಅವರ ಮನಸ್ಸು ಮತ್ತು ಬುದ್ದಿ - ಎಲ್ಲಿಗೆ ಸೀಮಿತವಾಗುತ್ತಿದೆ ಎಂಬುದರ ಅಂದಾಜು ಸಿಗುತ್ತದೆ. ಅದೂ ಎಂತೆಂಥಾ ನಾಯಕರ ಬಾಯಿಂದ ಇಂಥ ಮಾತುಗಳು ಹೊರಬರುತ್ತಿವೆ ಎಂಬುದು ಕೂಡ ಇಲ್ಲಿ ಮುಖ್ಯ.

ಮಲ್ಲಿಕಾರ್ಜುನ ಖರ್ಗೆಯವರ ಅನುಭವ ಮತ್ತು ಮುತ್ಸದ್ದಿತನ ಅವರು ಕೇವಲ ಕಾಂಗ್ರೆಸಿನ ಸ್ವತ್ತು ಮಾತ್ರ ಅಲ್ಲ. ಅವರು ದಮನಿತ ವರ್ಗದಿಂದ ಮೇಲೆ ಬಂದವರು. ಭಾರತದ ಸಂವಿಧಾನ ಎಷ್ಟು ಪ್ರಬಲ ಎಂಬುದಕ್ಕೆ ನಿದರ್ಶನದಂತಿರುವರು. ಇಂದು ದೇಶದ ರಾಜಕಾರಣಿಗಳ ಪೈಕಿ ಬೆಂಕಿಯಿಂದ ಅರಳಿದವರು ಯಾರೆಂದು ಹುಡುಕಿದರೆ ಮೊದಲ ಸಾಲಿನಲ್ಲಿ ಖರ್ಗೆಯವರದ್ದೇ ಹೆಸರು ಬರುತ್ತದೆ. ಅಂಥ ನಾಯಕರು ತಮ್ಮ ಪ್ರಬುದ್ಧತೆಯಿಂದಲೇ ಪಕ್ಷದಲ್ಲಿ ಮೇಲೇರಿದವರು ಮತ್ತು ಉನ್ನತ ಸ್ಥಾನಗಳನ್ನು ಪಡೆದವರು. ಖರ್ಗೆಯವರು ಇದೇ ರೀತಿ ಕೆಲಸಮಯದ ಹಿಂದೆ ಮೋದಿಯವರನ್ನು ವಿಷಸರ್ಪ ಎಂದು ಟೀಕಿಸಿದ್ದರು. ಹಿಂದೆಲ್ಲಾ ರಾಜಕಾರಣಿಗಳ ಟೀಕೆಗಳು ಆರೋಗ್ಯಪೂರ್ಣವಾಗಿರುತ್ತಿದ್ದವು ಎಂಬ ಸಂಗತಿಗಳನ್ನೂ ಕೇಳಿದ್ದೇವೆ. ಆಶ್ಚರ್ಯವೆಂದರೆ ಆ ಕಾಲದಲ್ಲೂ ಮಲ್ಲಿಕಾರ್ಜುನ ಖರ್ಗೆಯವರು ಸಕ್ರಿಯ ರಾಜಕಾರಣದಲ್ಲಿದ್ದರು. ಅಂದರೆ ಹಿಂದೆ ಹೀಗೆಲ್ಲಾ ಹೇಳಿಕೆಗಳನ್ನು ನೀಡದಿದ್ದವರು ಈಗ ಅಸಭ್ಯ ಭಾಷೆಗಳನ್ನು ಏಕೆ ಬಳಸುತ್ತಿದ್ದಾರೆ? ಈ ಬದಲಾವಣೆ ಅವರಲ್ಲಿ ಯಾಕಾಯಿತು? ಸತತವಾಗಿ ಸೋಲುತ್ತಾ ಬರುತ್ತಿರುವ ಕಾಂಗ್ರೆಸ್ ಒಂದೆಡೆಯಾದರೆ ಪಕ್ಷದಲ್ಲಿ ಕಾಣದ ಶಿಸ್ತು ಮತ್ತು ಅಧಿಕಾರ ಕಳೆದುಕೊಂಡ ಹತಾಶೆಯಿಂದ ಇಂಥ ಪದಪ್ರಯೋಗಗಳು ಬರುತ್ತಿವೆಯೇ? ಅದರಲ್ಲೂ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಕಾಂಗ್ರೆಸ್ ನೆಲಕಚ್ಚಿರುವುದರ ಅಸಹಾಯಕತೆ ಇಂಥ ಮಾತುಗಳಿಗೆ ಕಾರಣವಾಗುತ್ತಿದೆಯಾ ತಿಳಿಯುತ್ತಿಲ್ಲ. ಆದರೆ ದೇಶದ ಪ್ರಜ್ಞಾವಂತ ತಮ್ಮ ಪ್ರಧಾನಮಂತ್ರಿಯವರನ್ನು ಹೀಗೆ ಕರೆಯುವುದನ್ನಂತೂ ಸಹಿಸುವುದಿಲ್ಲ. ಇದು ಕಾಂಗ್ರೆಸಿಗೂ ಹಿನ್ನಡೆಯಾಗುವುದರ ಜೊತೆಗೆ ಖರ್ಗೆಯವರ ವ್ಯಕ್ತಿತ್ವವನ್ನೂ ಕುಗ್ಗಿಸುತ್ತದೆ. ರಾಜಕಾರಣದ ಉನ್ನತ ಸ್ಥಾನದಲ್ಲಿರುವವರು ಹಿಡಿತ ತಪ್ಪದಂತೆ ಪದಗಳನ್ನು ಬಳಸಬೇಕಿದೆ. ಪದಬಳಕೆ ಅವರ ವ್ಯಕ್ತಿತ್ವದ ಪ್ರತಿಬಿಂಬ ಎನ್ನುವುದು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿರುವ ಮಾತು. ಈ ಪರಿಸ್ಥಿತಿಯಲ್ಲಿ ಖರ್ಗೆಯವರು ತಾನು ಆ ಪದ ಬಳಸಬಾರದಿತ್ತು ಎಂದಿದ್ದರೆ ಅವರ ವ್ಯಕ್ತಿತ್ವ ಇನ್ನಷ್ಟು ಹೆಚ್ಚುತ್ತಿತ್ತು.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೩-೦೪-೨೦೨೬

ಚಿತ್ರ ಕೃಪೆ: ಅಂತರ್ಜಾಲ ತಾಣ