ಇರಾನ್ ಮೇಲಿನ ಅಮೇರಿಕಾ - ಇಸ್ರೇಲ್ ಯುದ್ಧ ಪ್ರಾರಂಭವಾಗಿ ಸುಮಾರು ಎರಡು ವಾರಗಳೇ ಕಳೆದಿವೆ. ನಿಧಾನವಾಗಿ ಪ್ರಪಂಚದ ಎಲ್ಲೆಡೆ ಯುದ್ಧದ ನೇರವಲ್ಲದ ಪರಿಣಾಮಗಳು ಕಾಣಿಸಲು ಪ್ರಾರಂಭಿಸಿವೆ. ಭಾರತದ ಪರಿಸ್ಥಿತಿಯನ್ನೇ ನೋಡುವುದಾದರೆ ನಾವು ತೈಲಕ್ಕೆ ಅವಲಂಬಿಸಿರುವುದು ನೂರಕ್ಕೆ ನೂರು ಶೇಕಡಾ ಹೊರ ದೇಶಗಳನ್ನೇ. ಅದು ಕೊಲ್ಲಿ ರಾಷ್ಟ್ರವಾಗಿರಬಹುದು, ವೆನಿಜುಯೆಲಾ, ರಷ್ಯಾ ಅಥವಾ ಇರಾನ್ ಆಗಿರಲೂ ಬಹುದು. ಈ ಯುದ್ಧದ ಕಾರಣದಿಂದ ನಮಗೆ ಬೇಕಾದಷ್ಟು ಪ್ರಮಾಣದ ಅಡುಗೆ ಅನಿಲವೂ ಬರುತ್ತಿಲ್ಲವಾದುದರಿಂದ ವಾಣಿಜ್ಯ ಜಾಡಿಗಳ ಕೊರತೆ ಕಾಣಿಸಿವೆ. ಹೋಟೇಲ್ ಗಳು ಒಂದೊಂದಾಗಿ ಬಾಗಿಲು ಹಾಕುತ್ತಿವೆ ಇಲ್ಲವೇ ಪರ್ಯಾಯ ವಿಧಾನವಾಗಿ ಸೋಲಾರ್, ವಿದ್ಯುತ್, ಸೌದೆಯ ಒಲೆಗಳ ಮೊರೆ ಹೋಗುತ್ತಿದ್ದಾರೆ. 

ನಮ್ಮಿಂದ ರಫ್ತಾಗುತ್ತಿದ್ದ ಹಲವಾರು ವಸ್ತುಗಳು ಬಂದರಿನಲ್ಲೇ ಉಳಿದಿವೆ. ಹೂವು, ಹಣ್ಣು, ತರಕಾರಿ, ಮೊಟ್ಟೆ ಇವೆಲ್ಲಾ ಹೆಚ್ಚು ದಿನ ಬಾಳಿಕೆ ಬಾರದ ಕಾರಣ ವ್ಯಾಪಾರಿಗಳಲ್ಲಿ ಆತಂಕ ಮನೆಮಾಡಿದೆ. ಅದರಲ್ಲೂ ಕೋಳಿ ಮೊಟ್ಟೆಯನ್ನು ಹೆಚ್ಚು ದಿನ ಇಡಲಾಗದು. ಈ ಕಾರಣದಿಂದ ಮೊಟ್ಟೆಯ ಬೆಲೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕಾರ್ಖಾನೆಗಳಲ್ಲಿ ಯಂತ್ರಗಳು ತಯಾರಿಸುವ ವಸ್ತುಗಳಾದರೆ ನಿಲ್ಲಿಸಬಹುದಿತ್ತು ಮೊಟ್ಟೆ ಇಡುವ ಕೋಳಿಗೆ ‘ಇನ್ನು ಸ್ವಲ್ಪ ದಿನ ಮೊಟ್ಟೆ ಇಡಬೇಡ’ ಎನ್ನುವುದಾದರೂ ಹೇಗೆ? ಕೋಳಿ ಅಂಗಡಿಗಳಲ್ಲೂ ಅನಿಲ ಸಮಸ್ಯೆ ಕಾಡತೊಡಗಿದೆ. 

ಆದರೆ ಕೋಳಿ ಪದಾರ್ಥ ಎಂದಾಕ್ಷಣ ಮಾಂಸಹಾರಿಗಳ ಬಾಯಲ್ಲಿ ನೀರು ಬರುತ್ತದೆ. ಚಿಕನ್ ಕಬಾಬ್ ಎಂದರೆ ಮಕ್ಕಳಿಗೆ ಜೀವ. ಊಟದಲ್ಲಿ ಒಂದು ತುಂಡು ಕಬಾಬ್ ಆದರೂ ತಿಂದು ಖುಷಿ ಪಡುತ್ತಾರೆ. ಚಿಕನ್ ಇಲ್ಲದ ಮಾಂಸಹಾರಿ ಅಡುಗೆಗಳನ್ನು ಕಲ್ಪಿಸಿಕೊಳ್ಳುದೇ ಕಷ್ಟ. ಚಿಕನ್ ಸಾರು, ಬಿರಿಯಾನಿ, ಚಿಲ್ಲಿ, ಸೂಪ್, ಘೀ ರೋಸ್ಟ್ ಹೀಗೆ ವೈವಿಧ್ಯಮಯ ಅಡುಗೆಗಳನ್ನು ಮಾಡಿ ಸವಿಯುತ್ತಾರೆ. 

ಮಾರುಕಟ್ಟೆಯಲ್ಲಿ ಸಿಗುವ ಕೋಳಿಗಳಲ್ಲೂ ಹಲವಾರು ವಿಧಗಳಿವೆ. ಮಾಂಸಕ್ಕೆಂದೇ ಉತ್ಪಾದಿಸಲಾಗುವ ಬ್ರಾಯ್ಲರ್ (ಬಿಳಿ ಕೋಳಿ), ಇದರಲ್ಲೇ ಸ್ವಲ್ಪ ದೊಡ್ದ ಗಾತ್ರದ ಟೈಸನ್ ಕೋಳಿ, ತಮಿಳುನಾಡಿನ ಸೇಲಂ ನಿಂದ ಬರುವ ಬಣ್ಣದ ಹೋಳಿಗಳು, ನಮ್ಮ ಊರಿನದ್ದೇ ಆದ ನಾಟಿ ಕೋಳಿಗಳು, ಗಿರಿರಾಜ ಕೋಳಿ, ಗೀಜುಗ ಹೀಗೆ ವಿವಿಧ ತಳಿಗಳಿವೆ. ಇದರಲ್ಲಿ ಕೆಲವರು ಬ್ರಾಯರ್ ಕೋಳಿ ತುಂಬಾ ಜನಪ್ರಿಯ ಹಾಗೂ ಅಗ್ಗವೂ ಹೌದು. ಆದರೆ ಕೆಲವರು ಬ್ರಾಯ್ಲರ್ ಕೋಳಿಯನ್ನು ತಿಂದ್ರೆ, ಇನ್ನೂ ಅನೇಕರು ನಾಟಿ ಕೋಳಿಯನ್ನು ತಿನ್ನಲು ಇಷ್ಟಪಡುತ್ತಾರೆ. ಈಗಂತೂ ಹೆಚ್ಚಾಗಿ ಬ್ರಾಯರ್ ಕೋಳಿಗಳನ್ನೇ ಆಹಾರದಲ್ಲಿ ಬಳಸಲಾಗುತ್ತದೆ. ಇವುಗಳ ಮಾಂಸ ಗಟ್ಟಿಯಾಗಿರದೇ ಸುಲಭವಾಗಿ ಬೇಯುತ್ತದೆ. ಆದರೆ ನಾಟಿ ಕೋಳಿಯ ಮಾಂಸ ಸ್ವಲ್ಪ ಗಟ್ಟಿ ಆದರೆ ರುಚಿಕರ ಎನ್ನುವುದು ಮಾಂಸ ಪ್ರಿಯರ ಅನಿಸಿಕೆ. ಅದರೆ ಇವೆರಡರಲ್ಲಿ ಯಾವುದರ ಸೇವನೆ ಆರೋಗ್ಯಕ್ಕೆ ಉತ್ತಮ, ಯಾವುದರಲ್ಲಿ ಪೌಷ್ಟಿಕಾಂಶ ಹೆಚ್ಚಿದ ಎಂಬುದರ ಬಗ್ಗೆ ತಿಳಿಯೋಣ.

ಬ್ರಾಯರ್ ಕೋಳಿಗಳು ಕಡಿಮೆ ಬೆಲೆಗೆ ಲಭ್ಯವಿದೆ ನಿಜ. ಆದರೆ ಇವುಗಳನ್ನು ಕೃತಕವಾಗಿ ಬೆಳೆಸಲಾಗುತ್ತದೆ. ಇವುಗಳ ಸಾಕಾಣೆಯ ಸಮಯದಲ್ಲಿ ಇವುಗಳಿಗೆ ಹಾರ್ಮೋನು, ಪ್ರತಿಜೀವಕಗಳನ್ನು ಬಳಸಲಾಗುತ್ತದೆ. ಆದ್ದರಿಂದ ಇದನ್ನು ಹೆಚ್ಚು ಸೇವನೆ ಮಾಡುವ ಜನ ಹೆಚ್ಚಿನ ಕೊಲೆಸ್ಟ್ರಾಲ್, ರೋಗ ನಿರೋಧಕ ಶಕ್ತಿಯ ಕೊರತೆ, ಹಾರ್ಮೋನು ಅಸಮತೋಲನ, ಬ್ಯಾಕ್ಟಿರಿಯಾ ಸಮಸ್ಯೆಯಂತಹ ಅನೇಕ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಈ ಬ್ರಾಯರ್‌ ಕೋಳಿಗಳಿಗೆ ಹೋಲಿಸಿದರೆ ನಾಟಿ ಕೋಳಿ ಆರೋಗ್ಯಕ್ಕೆ ಉತ್ತಮ, ಗ್ರಾಮೀಣ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಸಲಾಗುವ ನಾಟಿ ಕೋಳಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ.

ಬ್ರಾಯರ್ ಮತ್ತು ನಾಟಿ ಕೋಳಿ ನಡುವಿನ ವ್ಯತ್ಯಾಸ: ೧೦೦ ಗ್ರಾಂ ಬ್ರಾಯ್ಡರ್ ಕೋಳಿ ೧೩೦ ರಿಂದ ೧೫೦ ಕ್ಯಾಲೊರಿಗಳನ್ನು ಹೊಂದಿದ್ದರೆ, ೧೦೦ ಗ್ರಾಂ ನಾಟಿ ಕೋಳಿ ೧೨೦ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಕೊಬ್ಬಿನ ವಿಷಯದಲ್ಲಿ ನಾಟಿ ಕೋಳಿ ಸೇವನೆ ಉತ್ತಮ.. ಇದು ಕಡಿಮೆ ಕೊಬ್ಬಿನಾಂಶವನ್ನು ಹೊಂದಿದೆ. ಬ್ರಾಯ್ಲರ್ ಕೋಳಿಯಲ್ಲಿ ಹೆಚ್ಚಿನ ಕೊಬ್ಬಿನ ಅಂಶವಿದೆ. ನಾಟಿ ಕೋಳಿಗಳಲ್ಲಿ ಪೋಷಕಾಂಶಗಳು ಅಧಿಕವಾಗಿರುತ್ತವೆ. ಆದರೆ ಬ್ರಾಯ್ಲರ್ ಕೋಳಿಗಳಲ್ಲಿ ಬಹಳ ಕಡಿಮೆ ಇರುತ್ತವೆ. ನಿಸ್ಸಂದೇಹವಾಗಿ, ನಾಟಿ ಕೋಳಿ ಬ್ರಾಯ್ಡರ್ ಕೋಳಿಗಿಂತ ಉತ್ತಮವಾಗಿದೆ.

ನಾಟಿ ಕೋಳಿಯ ಆರೋಗ್ಯ ಪ್ರಯೋಜನಗಳು: ನಾಟಿಕೋಳಿ ಮಾಂಸವು ಪ್ರೋಟೀನ್, ವಿಟಮಿನ್ ಬಿ-ಕಾಂಪ್ಲೆಕ್ಸ್, ಡಿ, ಇ, ಸತು, ಕಬ್ಬಿಣ ಮತ್ತು ಸೆಲೆನಿಯಮ್‌ ನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಇವು ಸ್ನಾಯುಗಳು, ಮೂಳೆಗಳು, ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆಯನ್ನು ಬಲಪಡಿಸುತ್ತವೆ. ಇದರಲ್ಲಿ ಕೊಬ್ಬು ಕಡಿಮೆ. ಪೋಷಕಾಂಶಗಳು ಅಧಿಕವಾಗಿರುತ್ತದೆ. ಇದು ತೂಕ ನಿರ್ವಹಣೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಒಮೆಗಾ-3,6 ಕೊಬ್ಬಿನಾಮ್ಲಗಳಿವೆ. ಇದರಲ್ಲಿ ಕೊಬ್ಬಿನ ಅಂಶವೂ ಕಡಿಮೆ. ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿರುವ ಕಬ್ಬಿಣವು ರಕ್ತಹೀನತೆಯನ್ನು ತಡೆಯುತ್ತದೆ ಎಂದು ತಜ್ಞರು ಹೇಳುತ್ತಾರೆ.

ಅವಿಭಜಿತ ದಕ್ಷಿಣ ಕನ್ನಡದಲ್ಲಿ ಜರುಗುವ ಭೂತದ ಕೋಲ, ನೇಮ, ಉತ್ಸವ ಮೊದಲಾದ ಸಂದರ್ಭಗಳಲ್ಲಿ ಸಾಂಪ್ರದಾಯಿಕವಾಗಿ ಜರುಗುವ ಕೋಳಿ ಕಟ್ಟ (ಕಾದಾಟ) ದ ಸಮಯದಲ್ಲಿ ಸೋತು ಸಾಯುವ ಕೋಳಿಯ ಮಾಂಸ ಬಹಳ ರುಚಿಕರ ಎನ್ನುತ್ತಾರೆ. ಈ ಸತ್ತ ಕೋಳಿಗೆ (ಒಟ್ಟೆ ಕೋಳಿ) ಸಾವಿರಾರು ರೂಪಾಯಿ ನೀಡಿ ಖರೀದಿಸುವ ಮಂದಿಯೂ ಇದ್ದಾರೆ. ಈಗೀಗ ಈ ಕೋಳಿ ಕಟ್ಟಗಳು ಜೂಜಿನ ಸ್ವರೂಪವನ್ನು ಪಡೆದುಕೊಂಡು ನಿಷೇಧದ ತೂಗುಗತ್ತಿಯಲ್ಲಿದೆ. ನಾಟಿ ಕೋಳಿಯೇ ಆಗಲಿ, ಬ್ರಾಯ್ಲರ್ ಕೋಳಿಯೇ ಆಗಲಿ ಹಿತ ಮಿತವಾಗಿ ತಿನ್ನುವುದು ಅತೀ ಮುಖ್ಯ. ಇದರಿಂದ ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ