ಮಾರ್ಚ್ ಮೊದಲ ವಾರದಲ್ಲಿ ಹದಿಹರೆಯದ ಹುಡುಗನೊಬ್ಬ, ತನ್ನ ತಂದೆಯ ಎಕ್ಸ್ ಯುವಿ ವಾಹನ ಜಿಲಾಯಿಸಿ ಯುವಕನ ಸಾವಿಗೆ ಕಾರಣನಾಗಿದ್ದ. ೧೭ ವರ್ಷದ ಆ ಹುಡುಗ ನಡು ಊರಿನಲ್ಲಿ ಪ್ರತಿ ಗಂಟೆಗೆ ೧೬೦ ಕಿ.ಮೀ. ವೇಗದಲ್ಲಿ ಸಾಗುತ್ತಿದ್ದ. ಅವನ ಸಹೋದರಿ, ರೀಲ್ ಮಾಡುತ್ತಿದ್ದಳು. ಒಂದೇ ಕ್ಷಣದ ಎಚ್ಚರ ತಪ್ಪಿದ್ದೇ ದುರ್ಘಟನೆ ಸಂಭವಿಸಿ ಹೋಗಿತ್ತು. ಅಮ್ಮನ ಜೀವನಾಧಾರವಾಗಿದ್ದ ೨೪ರ ಜೀವವೊಂದು ರಕ್ತದ ಮಡುವಿನಲ್ಲಿ ಜೀವನದ ಕೊನೆ ಉಸಿರೆಳೆಯಿತು.
ಇದೇ ತಿಂಗಳ ಎರಡನೆಯ ವಾರದಲ್ಲಿ ಬೆಂಗಳೂರಿನ ಏಳು ಜನ ಯುವಕರು ಇಂಥದ್ದೇ ವೇಗ ಮತ್ತು ನಿರ್ಲಕ್ಷ್ಯದ ವಾಹನ ಚಾಲನೆಯಿಂದ ಮೃತ್ಯುವಿನ ಮನೆಗೆ ಹೋದರು. ಇವರೆಲ್ಲರಿಗೂ ವೇಗ ಮತ್ತು ಅವರ ಮೋಜು ಮಸ್ತಿಯೇ ಉದ್ದೇಶವಾಗಿತ್ತು. ಯಾವುದೇ ಅನಿವಾರ್ಯ ಕಾರಣಗಳಿಲ್ಲದೇ ಇದ್ದರೂ ವೇಗಕ್ಕಾಗಿ ಹಾತೊರೆಯುವ ಜೋಷಿನ ಮಕ್ಕಳು ಪ್ರಾಣ ಕಳೆದುಕೊಂಡಿದ್ದು ತಮ್ಮ ಮತ್ತು ಪಾಲಕರ ಬೇಜವಾಬ್ದಾರಿಯಿಂದಾಗಿ,
ಈ ಎರಡೂ ಮಕ್ಕಳಿಗೂ ವಾಹನ ಚಾಲನಾ ಪರವಾನಗಿ ಇರಲಿಲ್ಲ. ದೆಹಲಿಯ ಹುಡುಗನಂತೂ ಪರೀಕ್ಷೆಯ ಕಾರಣದಿಂದಾಗಿ ಜಾಮೀನು ಪಡೆದು ಆಚೆ ಬಂದಿದ್ದೂ ಆಗಿದೆ. ಮಕ್ಕಳ ಕೈಗೆ ವಾಹನ ಕೊಡುವಾಗ ಪಾಲಕರಿಗೆ ಸಾವಿನ ಸವಾರಿಗೆ ಕಳುಹಿಸುತ್ತಿದ್ದೇವೆಂಬ ದೂರದೊಂದು ಯೋಚನೆಯೂ ಇರುವುದಿಲ್ಲ. ಅದು ಓಡಾಟದ ಸ್ವಾತಂತ್ರ್ಯಕ್ಕಾಗಿ ಸುಗಮ ಸಂಚಾರಕ್ಕಾಗಿ ಎಂದೇ ತಿಳಿದಿರುತ್ತಾರೆ. ಮಕ್ಕಳ ನಿರ್ಲಕ್ಷ್ಯ, ವೇಗವೆಂಬ ಅತ್ಯುತ್ಸಾಹ, ತಮ್ಮದಲ್ಲದ ಗಾಡಿಯಲ್ಲಿ ಮನರಂಜನೆಗಾಗಿ ಅಪರಾತ್ರಿಗಳಲ್ಲಿ ಸಂಚರಿಸುವುದು ಇದ್ಯಾವುದೂ ಬಹುತೇಕ ಪೋಷಕರ ಗಮನಕ್ಕೆ ಬಂದಿರುವುದಿಲ್ಲ. ಅವಘಡಗಳು ಸಂಭವಿಸಿದಾಗ ಪಾಲಕರೂ ಆಘಾತದಲ್ಲಿರುತ್ತಾರೆ. ಇದು ನಮಗೆ ಗೊತ್ತಿರಲಿಲ್ಲ ಎಂಬ ಉತ್ತರ ಹೇಳಬೇಕಾದಾಗ ಸಣ್ಣದೊಂದು ಅವಮಾನವೂ ಜೊತೆಯಾಗಿರುತ್ತದೆ. ಮಕ್ಕಳ ಈ ಚಟುವಟಿಕೆಗಳು ಗೊತ್ತಿರಲಿಲ್ಲವಲ್ಲ, ಮಗನೇ ಅಪರಿಚಿತನಾಗಿ, ಅನುಮಾನದ ದೃಷ್ಟಿಯಿಂದ ನೋಡುವಂತಾಗುತ್ತದೆ.
ಬೆಂಗಳೂರಿನಲ್ಲಿಯೇ ಫೆಬ್ರುವರಿ ತಿಂಗಳ ಹೊತ್ತಿಗೆ ಅಪ್ರಾಪ್ತ ವಯಸ್ಸಿನ ಯುವಜನತೆ ವಾಹನ ಚಾಲನೆಯಲ್ಲಿ ತೊಡಗಿಸಿಕೊಂಡಿರುವ ೬೬ ಪ್ರಕರಣಗಳು ದಾಖಲಾಗಿವೆ ಎಂದು ಅಂಕಿ ಅಂಶಗಳು ಹೇಳುತ್ತವೆ. ೨೦೨೩-೨೪ರ ಸಾಲಿನಲ್ಲಿ ಸುಮಾರು ೧೧,೮೯೦ ಇಂಥ ಪ್ರಕರಣಗಳು ದೇಶದಾದ್ಯಂತ ದಾಖಲಾಗಿದ್ದವು. ಈ ಪ್ರಕರಣಗಳ ಎಫ್ ಐ ಆರ್ ದಾಖಲಿಸುವಾಗ ಪೋಷಕರನ್ನೂ ಆರೋಪಿಗಳಾಗಿಸಲಾಗುತ್ತದೆ. ಈ ಮೂಲಕವಾದರೂ ಜಾಗೃತಿ ಮೂಡಲಿ ಎಂದು ಪ್ರಯತ್ನಿಸಲಾಗುತ್ತಿದೆ ಎಂದು ನಗರದ ಪೊಲೀಸ್ ಇಲಾಖೆ ಸ್ಪಷ್ಟ ಪಡಿಸಿದೆ. ಆದರೆ ಯಾವ ಬಗೆಯ ಆತಂಕಗಳೂ ಶಿಸ್ತು ಮೂಡಿಸದಿದ್ದರೆ ಹೊಂಗನಸಿನ ಯುವಕರು ತಮ್ಮ ಶೋಕಿಗಾಗಿ, ವೇಗಕ್ಕಾಗಿ ಬೆಲೆ ತೆರುತ್ತ ಹೋಗುತ್ತಾರೆ. ಈ ಎಲ್ಲ ಪ್ರಕರಣಗಳಲ್ಲಿಯೂ ಕೇವಲ ವಾಹನ ಚಾಲನಾ ಪರವಾನಗಿ ಇಲ್ಲದೇ ಇರುವುದಷ್ಟೇ ಅಲ್ಲ, ವೀಲಿಂಗ್ ಮಾಡುವುದೂ ಸೇರಿದೆ. ಕರ್ನಾಟಕದಲ್ಲಿಯೂ ಬಹುತೇಕ ಯುವಜನತೆ ವೀಲಿಂಗ್ ಮಾಡುವುದರಲ್ಲಿ ನಿಸ್ಸಿಮರು ಎಂಬ ಹೆಮ್ಮೆ ತಮ್ಮದಾಗಿಸಿಕೊಂಡಿದ್ದಾರೆ. ರಾತ್ರಿ ನಿರ್ಜನ ರಸ್ತೆಯಲ್ಲಿ ಒಂದೇ ದ್ವಿಚಕ್ರ ವಾಹನದಲ್ಲಿ ಇಬ್ಬರು, ಮೂವರು ಸೇರಿ ಒಂದೇ ಗಾಡಿಯ ಮೇಲೆ ಓಡಾಡುತ್ತ, ಇದ್ದಕ್ಕಿದ್ದಂತೆ ಹಿಂಭಾರ ಮಾಡಿ, ಮುಂದಿನ ಚಕ್ರವನ್ನು ಗಾಳಿಯಲ್ಲೆ ವಾಹನ ಚಲಾಯಿಸುತ್ತಾರೆ. ಯಾರು ಎಷ್ಟು ದೂರ ಹೋದರು ಎಂಬುದು. ಅದೆಷ್ಟು, ಆ್ಯಕ್ಸೆಲ್ನ ಕಿವಿ ಹಿಂಡಿದರು ಎಂಬುದೆಲ್ಲವೂ ಅವರ ಸಾಹಸಗಳಲ್ಲಿ ನಮೂದಾಗುತ್ತವೆ. ಇಲ್ಲಿಯೂ ಡಿ ಎಲ್ ಇದ್ದರೂ ತುಸು ಅಜಾಗರೂಕತೆ ಜನರ ಪ್ರಾಣ ತಿನ್ನ ಬಲ್ಲದು. ಹೆತ್ತವರು ಮಕ್ಕಳಿಗೆ ಅನುಕೂಲವಾಗಲಿ ಎಂದು ಬೈಕು, ಗಾಡಿಗಳನ್ನು ಕೊಡಿಸುತ್ತಾರೆ. ವಾಹನಗಳೇ ಸಾವುಗಳಾಗಲಿ ಎಂದಲ್ಲ, ಗಾಡಿ ಕೊಡಿಸುವಾಗ ಹೇಳುವ ಎಚ್ಚರಿಕೆಯ ಮಾತುಗಳೆಲ್ಲವೂ ಕೇವಲ ಮಾತುಗಳಾಗಿಯೇ ಗಾಳಿಯಲ್ಲಿ ಹಾರಬಾರದಲ್ಲ! ಅದು ಅವರೊಳಗಿನ ಎಚ್ಚರಿಕೆಯಾಗಿಸಬೇಕಾಗಿದೆ.
ಮಕ್ಕಳು ಏನು ಮಾಡಿದರೂ ಗೆದ್ದು ಬರುತ್ತಾರೆ ಎಂಬ ಅತಿಯಾದ ವಿಶ್ವಾಸ ಅವರನ್ನು ಕಳೆದುಕೊಳ್ಳುವಲ್ಲಿ ಮೊದಲ ಹೆಜ್ಜೆಯಾಗಿರುತ್ತದೆ. ಗಾಡಿಗಳನ್ನು ಕೊಡುವುದು, ಸಾಯಲೂ ಅಲ್ಲ, ಸಾಯಿಸಲೂ ಅಲ್ಲ. ವೇಗವಾಗಿ, ಅಡ್ಡಾದಿಡ್ಡಿ ಗಾಡಿ ಓಡಿಸುವುದು. ವೀಲಿಂಗ್ ಮಾಡುವುದು, ಅವುಗಳ ಚಿತ್ರಣ ಮಾಡಿಕೊಂಡು ತಮ್ಮ ಗುಂಪುಗಳಲ್ಲಿ ಹಂಚಿಕೊಂಡು ಶಭಾಶ್ ಗಿರಿ ಗಿಟ್ಟಿಸಿಕೊಳ್ಳುವುದೆಲ್ಲವೂ ಮೆಚ್ಚುಗೆಯ ಸಾಧನಗಳಾಗಬೇಕಾಗಿಲ್ಲ. ಇವೆಲ್ಲವೂ ಶಿಕ್ಷೆಗೆ ಅರ್ಹವಾಗಿರುವವು. ಶಿಕ್ಷಾರ್ಹ ಅಪರಾಧವೆಂದು ಹೇಳಬೇಕಾಗಿರುವುದು ಹೆತ್ತವರು ಮಾತ್ರವಲ್ಲ. ಗಾಡಿ ಓಡಿಸುವ ಪ್ರತಿ ಮನಸಿನಲ್ಲಿಯೂ ಕಾನೂನಿನ ಭಯ ಮೂಡಬೇಕು. ಹೀಗಾಗುವುದು ಜಾಗೃತಿಯಿಂದ ಮಾತ್ರ ಸಾಧ್ಯ.
ಪರೀಕ್ಷೆಯ ಕಾರಣದಿಂದ ಜಾಮೀನು ಪಡೆದಿರುವ ದೆಹಲಿಯ ಯುವಕನ ಉದಾಹರಣೆಯು ಎಲ್ಲದಕ್ಕೂ ಪರಿಹಾರವಿದೆ ಎಂಬಂತೆ ಆಗಬಾರದು. ಗಾಡಿ ಕೊಡಿಸುವುದು ಒಂದು ಬಗೆಯ ಸ್ವಾತಂತ್ರ್ಯ ನೀಡುತ್ತದೆ. ಆದರೆ ಪ್ರತಿ ಸ್ವಾತಂತ್ರ್ಯವೂ ದೊಡ್ಡದೊಂದು ಹೊಣೆಗಾರಿಕೆಯೊಂದಿಗೆ ಬರುತ್ತದೆ ಎನ್ನುವುದೂ ನೆನಪಿನಲ್ಲಿರಬೇಕು.
-ರಶ್ಮಿ ಎಸ್
(ಸಂಗ್ರಹ: ‘ಸುಧಾ’ ವಾರ ಪತ್ರಿಕೆಯ ಸಂಪಾದಕೀಯದಿಂದ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!