ಪ್ರತೀ ವರ್ಷ ಅಡಿಕೆ ಸಸಿ-ಮರದ ಸುಳಿ ಭಾಗವನ್ನು ಗಮನಿಸುತ್ತಾ ಇರಿ. ಕೆಲವು ವರ್ಷಗಳ ಹಿಂದೆ ತೆಂಗಿಗೆ ಮತ್ತು ತಾಳೆಗೆ ಮಾತ್ರವೇ ಬಾಧಿಸುತ್ತಿದ್ದ ಕೆಂಪು ಮೂತಿ ಹುಳ ಈಗ ಅಡಿಕೆಯ ಸುಳಿಗೂ ಬಾಧಿಸಲು ಪಾರಂಭವಾಗಿದೆ. ಅಡಿಕೆ ಮರದ ಸುಳಿ ಕೊಳೆಯುವಿಕೆ - ಮರ ಸಾಯುವಿಕೆಯಿಂದ ಬಾರೀ ಹಾನಿಯಾದ ಬೆನ್ನಲ್ಲೇ ಈ ಸಮಸ್ಯೆಯೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಕಡೆ ಕಂಡು ಬರಲಾರಂಭಿಸಿದೆ. ಬಾಡಿದಂತೆ ಕಂಡರೆ ಅಥವಾ ಕಾಂಡದಲ್ಲಿ ಸುಳಿಭಾಗದಿಂದ ಪ್ರಾರಂಭಗೊಂಡು ರಸ ಇಳಿದಂತೆ ಕಂಡರೆ, ಸುಳಿ ಭಾಗ ಸ್ವಲ್ಪ ಹರಿದಂತೆ ಕಂಡರೆ ಮರ ಏರಿ ಸುಳಿ ಭಾಗವನ್ನು ಒಮ್ಮೆ ಪರಿಶೀಲಿಸಿರಿ. ಸುಳಿಯಲ್ಲಿ ಏನೋ ಆಗಿದೆ ಎಂಬುದು ಈ ಮೇಲಿನ ಲಕ್ಷಣಗಳು ಹೇಳುತ್ತವೆ.

Screenshot 2026-08-17 11.11.10 AM.png

ಸಾಮಾನ್ಯವಾಗಿ ಕೆಂಪು ಮೂತಿ ಹುಳ ೩೦ ಅಡಿಗಿಂತ ಎತ್ತರದ ಅಡಿಕೆ ಮರಗಳಿಗೆ ತೊಂದರೆ ಮಾಡಲಾರದು. ಕಾರಣ ಅಷ್ಟು ಎತ್ತರಕ್ಕೆ ಈ ದುಂಬಿಗೆ ಹಾರಲು ಕಷ್ಟ. ಸುಮಾರು ೨ ವರ್ಷದ ನಂತರದ ಶಿರ ಮೂಡಿದ ಸಸಿಗಳಿಗೆ ಬಾಧಿಸುತ್ತದೆ. ಕೆಂಪು ಮೂತಿ ಹೆಣ್ಣು ದುಂಬಿ ಎಳೆ ಭಾಗವಾದ ಸುಳಿಯಲ್ಲಿ ಹೋಗಿ ಆ ಭಾಗವನ್ನು ಕೊರೆದು ತೂತು ಮಾಡಿ ಅಲ್ಲಿ ಮೊಟ್ಟೆ ಇಡುತ್ತದೆ. ಸಾಮಾನ್ಯವಾಗಿ ಒಂದೇ ದುಂಬಿ ಮೊಟ್ಟೆ ಇಡುವುದು. ಒಮ್ಮೆ ಮೊಟ್ಟೆ ಇಡುವಾಗ ಸುಮಾರು ೩೦೦ ಮೊಟ್ಟೆಗಳನ್ನೂ ಇಡಬಹುದು. ಮೊಟ್ಟೆ ಸುಮಾರು ಬಿಳಿ ಜೋಳದ (ಅರಳು ಜೋಳ) ಕಾಳಿನಷ್ಟು ಇರುತ್ತದೆ. ೪-೫ ದಿನಗಳಲ್ಲಿ ಮೊಟ್ಟೆ ಮರಿಯಾಗುತ್ತದೆ. ಆ ಮರಿಗಳಿಗೆ ಮರದ ಎಳೆ ಭಾಗವೇ ಆಹಾರ. ಎಳೆ ಭಾಗವನ್ನು ತನ್ನ ಹರಿತವಾದ ಬಾಯಿಯಿಂದ ಕೊರೆಯುತ್ತಾ ಎಳೆ ಭಾಗದ ರಸ ಹೀರಿ ನಾರನ್ನು ಬಿಡುತ್ತದೆ. ಇದು ಸುಮಾರು ೩೬-೭೮ ದಿನಗಳ ತನಕ ಇರುತ್ತದೆ. ಆ ನಂತರ ತಾನೇ ವಿಸರ್ಜಿಸಿದ ನಾರಿನಲ್ಲೇ ಮತ್ತೆ ಪ್ಯೂಪೇ ಹಂತಕ್ಕೆ ಹೋಗಿ ೧೦-೧೫ ದಿನಗಳಲ್ಲಿ ದುಂಬಿಯಾಗುತ್ತದೆ.

Screenshot 2026-08-17 11.13.16 AM.png

ಈ ದುಂಬಿ ವಾತಾವರಣದಲ್ಲಿ ಎಲ್ಲಾ ಕಡೆ ಇರುತ್ತದೆ. ಇದಕ್ಕೆ ಕೊಳೆತ ವಸ್ತುಗಳು ಆಕರ್ಷಣೆ. ಬಾಳೆ ಹಣ್ಣು, ತೆಂಗಿನ ಮರದ ಎಳೆ ಗರಿ, ಕುರುವಾಯಿ ಕೀಟ ರಸ ಹೀರಿ ಹೊರ ಹಾಕಿದ ತ್ಯಾಜ್ಯ, ಮುಂತಾದ ಕೊಳೆತಿನಿಸುಗಳು ಇರುವಲ್ಲಿ ಇದು ಹುಡುಕಿಕೊಂಡು ಬರುತ್ತದೆ. ತಾಳೆ ಜಾತಿಯ ಮರಗಳಾದ ತೆಂಗು, ಭೈನೆ (ಈಂದು) ತಾಳೆ, ಎಣ್ಣೆ ತಾಳೆ ಮರಗಳು ಸತ್ತು ಹೋಗಿದ್ದರೆ (ಸಿಡಿಲು ಇತ್ಯಾದಿಗಳಿಂದ) ಅದನ್ನು ತಕ್ಷಣ ವಿಲೇವಾರೀ ಮಾಡದೇ ಅಲ್ಲೇ ಉಳಿಸಿದ್ದರೆ ಅದರ ಕೊಳೆತ ವಾಸನೆಗೆ ಈ ದುಂಬಿಗಳು ಹುಡುಕಿಕೊಂಡು ಬರುತ್ತವೆ. ಅಡಿಕೆ ಮರಗಳ ಸುಳಿ ಭಾಗ ಕೊಳೆಯುವಂತಿದ್ದರೆ (ಸುಳಿಕೊಳೆ ರೋಗ) ಆ ಭಾಗದ ಕೊಳೆತ ವಾಸನೆಗೂ ದುಂಬಿ ಬರುತ್ತದೆ. ಹೀಗೆ ಬಂದ ಪ್ರೌಢ ದುಂಬಿ ಮೊಟ್ಟೆ ಇಟ್ಟು ಮರಿ ಮಾಡಲು ಈ ಅವಕಾಶವನ್ನು ಬಳಸಿಕೊಳ್ಳುತ್ತವೆ.

ನಿರ್ವಹಣೆ: ತೆಂಗಿನ ಮರಕ್ಕೆ ಬಾಧಿಸಿದಾಗ ಅದು ಸುಳಿ ಮೂಡುವ ಭಾಗದವರೆಗೆ ತಲುಪಿದ್ದರೆ ಮರ ಸಾಯುವುದೇ ಜಾಸ್ತಿ. ಪ್ರಾರಂಭದ ಹಂತದಲ್ಲಿ ಸುಳಿ ಬುಡಕ್ಕೆ ಬಾಧಿಸಿದ್ದನ್ನು ಗುರುತಿಸಿ ನಿರ್ವಹಣೆ ಮಾಡಿದರೆ ಬದುಕಿಸಲು ಸಾಧ್ಯ. ಅಡಿಕೆಯಲ್ಲಿ ಸುಳಿ ಭಾಗ ತೆಂಗಿನಂತೆ ಆದರೂ ಸಹ ಮೊಳಕೆ (ಬಡ್) ಮೂಲಕ್ಕೆ ತಲುಪಲು ಸೋಗೆಗಳ ಅವರಣ ಇರುತ್ತದೆ. ಆದ ಕಾರಣ ಸುಳಿಯ ಮೂಲಕವೇ ಕೆಳಕ್ಕೆ ಇಳಿಯಬೇಕು. ಆದಾಗ್ಯೂ ಗುರುತಿಸುವಿಕೆ ತಡವಾದರೆ ಮರ ಸಾಯುತ್ತದೆ. ಸುಳಿ ಭಾಗದ ಕೊಳೆತ ಎಲ್ಲಾ ಭಾಗಗಳನ್ನೂ ತೆಗೆದು ಸ್ವಚ್ಚ ಮಾಡಬೇಕು. ಅದನ್ನು ಸಂಗ್ರಹಿಸಿ ಸುಡಬೇಕು. ಇದರಲ್ಲಿ ಮರಿಹುಳು, ಮೊಟ್ಟೆಗಳು ಇರುತ್ತವೆ. ಆ ಭಾಗವನ್ನು ಪೂರ್ತಿ ಸ್ವಚ್ಚ ಮಾಡಿ ಅಲ್ಲಿಗೆ ಶಿಲೀಂದ್ರ ನಾಶಕ (ಬಾವಿಸ್ಟಿನ್ ಅಥವಾ ರಿಡೋಮಿಲ್) ಪೇಸ್ಟ್ ಹಚ್ಚಿ. ಜೊತೆಗೆ ಸೋಗೆಯ ಹಾಳೆ ಮರಕ್ಕೆ ತಾಗಿದ ಭಾಗದ ಎಡೆ ಮತ್ತು ಗಾಯ ಮಾಡಿ ತೆಗೆದ ಭಾಗಕ್ಕೆ ಕ್ಲೋರೋಫೆರಿಪೋಸ್ ಕೀಟನಾಶಕವನ್ನು ಸುರಿಯಿರಿ. ಒಂದು ಲೀಟರ್ ಪ್ಲಾಸ್ಟಿಕ್ ಬಾಟಲಿಯ ಮುಚ್ಚಲಕ್ಕೆ ತೂತು ಮಾಡಿ ಅದರಲ್ಲಿ ೫ ಮಿಲೀ ಕ್ಲೋರೋಫೆರಿಫೋಸ್ ಕೀಟನಾಶಕ ಸೇರಿಸಿ ಅದಕ್ಕೆ ೧ ಲೀ ನೀರು ಸೇರಿಸಿ ಮುಚ್ಚಳ ಮುಚ್ಚಿ ಒತ್ತಿದಾಗ ಎಲ್ಲಾ ಭಾಗಗಳಿಗೂ ಕೀಟನಾಶಕ ಬೀಳಿಸಬಹುದು. ಕೊನೆಗೆ ಬಾಟಲಿಯನ್ನು ಕವುಚಿ ಇಟ್ಟು ಬಿಂದು ಬಿಂದುವಾಗಿ ಕೀಟನಾಶಕ ಬೀಳುವಂತೆ ಇಟ್ಟು ಕಟ್ಟಿದರೆ ಸುಮಾರು ೧೫-೨೦ ದಿನಗಳಲ್ಲಿ ಹೊಸ ಸುಳಿ ಮೂಡುವ ಸಾಧ್ಯತೆ ಇದೆ.

ಕಳೆದೆರಡು ವರ್ಷಗಳಿಂದ ಅಡಿಕೆ ಮರಗಳಿಗೆ ಕೆಂಪು ಮೂತಿ ಹುಳ ಹೆಚ್ಚೆಚ್ಚು ಬರಲು ಪ್ರಾರಂಭವಾಗಿದೆ. ಗುರುತಿಸಿ ಉಪಚಾರ ಮಾಡದೆ ಹಾಗೇ ಬಿಟ್ಟರೆ, ಅದರ ಸಂಖ್ಯೆ ಹೆಚ್ಚಾಗಿ ಹೆಚ್ಚು ಹೆಚ್ಚು ಮರಗಳಿಗೆ ಬಾಧಿಸಿದರೂ ಅಚ್ಚರಿ ಇಲ್ಲ. ಆದ ಕಾರಣ ಜಾಗರೂಕರಾಗಿರಿ.

ಅತಿಯಾದ ಸಾರಜನಕ ಕೊಡುವುದರಿಂದ ಈ ಕೀಟ ಆ ಮರವನ್ನು ಅರಸಿ ಬರುತ್ತದೆ ಎಂಬುದನ್ನು ಗಮನಿಸಿರಿ. ಅಡಿಕೆ ಮರಗಳ ಬುಡಕ್ಕೆ ಥಿಮೇಟ್ ಹಾಕಿ ಕೆಲವರು ಬೇರು ಹುಳ. ಸುಳಿ ತಿಗಣೆ ನಿಯಂತ್ರಣ ಮಾಡುತ್ತಾರೆ. ಈ ವಿಧಾನದಲ್ಲಿ ಸುಮಾರು ೪೦-೫೦ ದಿನಗಳ ಕಾಲ ಕೆಂಪು ಮೂತಿ ಹುಳ ಇದ್ದರೂ ಸಾಯಬಹುದು. ಆದರೆ ಅಡಿಕೆ ಹಾಳೆ ಹಸಿ ಸೋಗೆಯನ್ನು ಹಸುಗಳಿಗೆ ಮೇವಾಗಿ ಬಳಸುವುದಿದ್ದರೆ ಥಿಮೇಟ್ ಅಂಶ ಸೋಗೆಯಲ್ಲಿ ಉಳಿದಿರುತ್ತದೆ ಎಂಬುದು ಗಮನದಲ್ಲಿ ಇರಲಿ.

ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ